ADVERTISEMENT

ಡಿ.ಫಾರ್ಮಾ ಕೋರ್ಸ್‌: ಉದ್ಯೋಗಾವಕಾಶ ಇದೆಯೇ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ಹರೀಶ್ ಶೆಟ್ಟಿ ಬಂಡ್ಸಾಲೆ
Published 6 ನವೆಂಬರ್ 2019, 4:30 IST
Last Updated 6 ನವೆಂಬರ್ 2019, 4:30 IST
   

ನಾನು ದ್ವಿತೀಯ ಪಿಯುಸಿ (ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಜೀವವಿಜ್ಞಾನ) ಓದುತ್ತಿದ್ದೇನೆ. ಪಿಯುಸಿ ಮುಗಿದ ಮೇಲೆ ಡಿ. ಫಾರ್ಮಾ ಮಾಡಬೇಕು ಎಂಬ ಆಸೆ ಇದೆ. ಇದರ ಕುರಿತು ನನಗೆ ಮಾಹಿತಿ ನೀಡಿ. ಸರ್ಕಾರಿ ಸೀಟ್‌ ಗಳಿಸಲು ಯಾವ ಪರೀಕ್ಷೆಗಳಿವೆ. ಡಿ. ಫಾರ್ಮಾ ಮುಗಿಸಿದ ಮೇಲೆ ಯಾವ ಯಾವ ಉದ್ಯೋಗಗಳನ್ನು ಪಡೆಯಬಹುದು.
-ವಿಶ್ವನಾಥ್‌ ಲೋನಿ, ಊರು ಬೇಡ

ಉತ್ತರ:ವಿಶ್ವನಾಥ್, ನೀವು ಫಾರ್ಮಾಕಾಲಜಿ ಅಥವಾ ಔಷಧಶಾಸ್ತ್ರದಲ್ಲಿ ಓದು ಮುಂದುವರಿಸುವುದಾದರೆ ಡಿ. ಫಾರ್ಮಾ ಮತ್ತು ಬಿ. ಫಾರ್ಮಾ ಎರಡು ಕೋರ್ಸ್‌ಗಳಿದ್ದು, ಅದರಲ್ಲಿ ನಿಮ್ಮ ನಿರ್ಧಾರದ ಪ್ರಕಾರ ಯಾವುದು ಹೆಚ್ಚು ಸೂಕ್ತ ಎಂದು ತಿಳಿದು ಆಯ್ಕೆ ಮಾಡಿಕೊಳ್ಳಿ. ಅದಾದ ನಂತರ ಎಂ. ಫಾರ್ಮಾ ಎಂಬ ಸ್ನಾತಕೋತ್ತರ, ಫಾರ್ಮಾ ಡಿ. ಎಂಬ ಡಾಕ್ಟರೇಟ್ ಡಿಗ್ರಿಯನ್ನು ಕಲಿಯುವ ಅವಕಾಶವಿರುತ್ತದೆ.

ಡಿ. ಫಾರ್ಮಾ ಮತ್ತು ಫಾರ್ಮಾ ಡಿ.ಯ ನಡುವೆ ಗೊಂದಲ ಮಾಡಿಕೊಳ್ಳಬೇಡಿ. ಡಿ. ಫಾರ್ಮಾವು ಡಿಪ್ಲೋಮಾ ಕೋರ್ಸ್, ಬಿ. ಫಾರ್ಮಾವು ಪದವಿ ಶಿಕ್ಷಣ, ಎಂ. ಫಾರ್ಮಾ ಸ್ನಾತಕೋತ್ತರ ಶಿಕ್ಷಣ ಮತ್ತು ಫಾರ್ಮಾ ಡಿ. ಡಾಕ್ಟರೇಟ್ ಕೋರ್ಸ್ ಆಗಿದೆ.

ADVERTISEMENT

ಡಿ. ಫಾರ್ಮಾ ಕೋರ್ಸ್‌ 2 ವರ್ಷದ ಅವಧಿಯ ಕೋರ್ಸ್ ಆಗಿದ್ದು, ನಂತರ ನೀವು ಖಾಸಗಿ ಅಥವಾ ಸರ್ಕಾರಿ ಔಷಧಾಲಯಗಳಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ನಿರ್ವಹಿಸಬಹುದು. ಬಿ. ಫಾರ್ಮಾ 4 ವರ್ಷದ ಪದವಿ ಕೋರ್ಸ್ ಆಗಿದ್ದು ನಿಮಗೆ ಪದವಿ ಬೇಕು ಮತ್ತು ಮುಂದೆ ಸ್ನಾತಕೋತ್ತರ ಪದವಿ ಎಂ. ಫಾರ್ಮಾ ಮಾಡುವಿರಾದರೆ, ಸಂಶೋಧನೆ, ಬೋಧನೆ ಇತ್ಯಾದಿ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಚಿಸುವುದಾದರೆ ಮಾಡಬಹುದು. ನಿಮ್ಮ ಗುರಿ ಮತ್ತು ಆಸಕ್ತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳಿ.

ಸರ್ಕಾರಿ ಕಾಲೇಜುಗಳ ಪ್ರವೇಶಾತಿ ಅಥವಾ ಖಾಸಗಿ ಶಾಲೆಗಳಲ್ಲಿ ಸರ್ಕಾರಿ ಸೀಟ್‌ನ ಕುರಿತಾದ ಮಾಹಿತಿಗೆ ಕರ್ನಾಟಕ ಸರ್ಕಾರದ ಔಷಧ ನಿಯಂತ್ರಣ ಇಲಾಖೆಯ ಪರೀಕ್ಷಾ ಪ್ರಾಧಿಕಾರ ಮಂಡಳಿ (ಡಿಫಾರ್ಮಸಿ) ಯ ವೆಬ್‌ಸೈಟ್‌ www.beadpharmacy.org ಪರಿಶೀಲಿಸಿ. ಇದೇ ವೆಬ್‌ಸೈಟ್‌ನಲ್ಲಿ ಡಿ. ಫಾರ್ಮಾ ಪ್ರವೇಶಾತಿಗೆ ಪ್ರತಿವರ್ಷ ಆನ್‌ಲೈನ್‌ ಅರ್ಜಿ ಕರೆಯುಲಾಗುತ್ತದೆ. ಇಲ್ಲಿ ಯಾವುದೇ ಪ್ರವೇಶಾತಿ ಪರೀಕ್ಷೆ ಇರುವುದಿಲ್ಲ, ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಕೌನ್ಸೆಲಿಂಗ್ ಮಾಡಿ ಸರ್ಕಾರಿ ಸೀಟ್‌ಗಳನ್ನು ಹಂಚಲಾಗುತ್ತದೆ. ಹಾಗಾಗಿ ಸರ್ಕಾರಿ ಸೀಟ್‌ ದೊರಕಿಸಿಕೊಳ್ಳಲು ನಿಮ್ಮ ಪಿಯುಸಿ ಶಿಕ್ಷಣದಲ್ಲಿ ಉತ್ತಮ ಅಂಕಗಳನ್ನು ಗಳಿಸುವುದು ಮುಖ್ಯವಾಗಿರುತ್ತದೆ.

ಬಿ. ಫಾರ್ಮಾ ಕೋರ್ಸ್‌ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವು ಕೆ.ಸಿ.ಇ.ಟಿ. ಪರೀಕ್ಷೆಯ ಮುಖಾಂತರ ಆಯ್ಕೆ ನಡೆಸುತ್ತದೆ. ಅದೇ ರೀತಿ, ಸ್ನಾತಕೋತ್ತರ ಕೋರ್ಸ್‌ ಮತ್ತು ಫಾರ್ಮಾ ಡಿ. ಶಿಕ್ಷಣಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆ ಮತ್ತು ಪ್ರವೇಶಾತಿ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಜಿ.ಎ.ಪಿ.ಟಿ. ಪರೀಕ್ಷೆಯನ್ನು ಎನ್.ಟಿ.ಎ. ಸಂಸ್ಥೆ ನೋಡಿಕೊಳ್ಳುತ್ತದೆ.

ಉದ್ಯೋಗಾವಕಾಶಗಳ ಬಗ್ಗೆ ಹೇಳುವುದಾದರೆ, ನಿಮ್ಮ ಡಿಪ್ಲೋಮಾ ಕೋರ್ಸ್‌ನ ನಂತರ ಕರ್ನಾಟಕ ರಾಜ್ಯ ಫಾರ್ಮಸಿ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಕೊಂಡ ನಂತರ ಖಾಸಗಿ ಅಥವಾ ಸರ್ಕಾರಿ ಔಷಧಾಲಯಗಳಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ನಿರ್ವಹಿಸಬಹುದು.

ಬಿ. ಫಾರ್ಮಾ ಓದಿದ ನಂತರ ಔಷಧಿ ತಯಾರಿಸುವ ಬೇರೆ ಬೇರೆ ಖಾಸಗಿ ಕಂಪನಿಗಳ ತಯಾರಿಕ ಘಟಕಗಳಲ್ಲಿ, ಕೆಮಿಸ್ಟ್ ಆಗಿ ಕೆಲಸ ನಿರ್ವಹಿಸಬಹುದು. ಹಾಗೇ, ಕ್ವಾಲಿಟಿ ಕಂಟ್ರೋಲ್ (ಗುಣಮಟ್ಟ ನಿರ್ವಹಣೆ), ಸೇಲ್ಸ್ ಇತ್ಯಾದಿ ವಿಭಾಗಗಳಲ್ಲೂ ಕೂಡ ಕೆಲಸ ಮಾಡಬಹುದು. ಇನ್ನೂ ಮುಂದುವರಿದು ಎಂ. ಫಾರ್ಮಾ ಮಾಡಿಕೊಂಡರೆ ಶಿಕ್ಷಣ, ಸಂಶೋಧನೆ, ಫಾರ್ಮಕೋ ವಿಜಿಲೆನ್ಸ್ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. ನಿಮ್ಮದೇ ಸ್ವಂತ ಔಷಧಿ ಮಾರಾಟ ಅಂಗಡಿಯನ್ನು ತೆರೆಯಬಹುದು ಅಥವಾ ಔಷಧಿ ತಯಾರಿ ಕ್ಷೇತ್ರದಲ್ಲಿ ಸ್ವಂತ ಉದ್ಯಮ ನಡೆಸಬಹುದು.

**
ನಾನು 9ನೇ ತರಗತಿಯಲ್ಲಿ ಓದುತ್ತಿದ್ದೇನೆ. ನನಗೆ ಏರೋನಾಟಿಕಲ್ ಎಂಜಿನಿಯರಿಂಗ್ ಮಾಡುವಾಸೆ. ಇದರ ಬಗ್ಗೆ ನನಗೆ ಮಾಹಿತಿ ನೀಡಿ. ಜೊತೆಗೆ ನಾನು ಯಾವ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ತಿಳಿಸಿ.
–ವೈಷ್ಣವಿ ಜಿ. ಎಸ್‌., ಊರು ಬೇಡ

ಉತ್ತರ: ವೈಷ್ಣವಿ, ಏರೋನಾಟಿಕಲ್ ಎಂಜಿನಿಯರ್‌ ಭಾರತೀಯರಿಗೆ ಹೊಸ ಜ್ಞಾನ ಮತ್ತು ಉದ್ಯೋಗ ಕ್ಷೇತ್ರವಾಗಿದ್ದು ಈಗಷ್ಟೇ ನಿಧಾನವಾಗಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ವಿಮಾನ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಯಂತ್ರ ಮತ್ತು ಉಪಕರಣಗಳನ್ನು ತಯಾರಿಸುವ, ಅಭಿವೃದ್ಧಿಗೊಳಿಸುವ ಮತ್ತು ನಿರ್ವಹಣೆ ಮಾಡುವ ಕ್ಷೇತ್ರದಲ್ಲಿ ಏರೋನಾಟಿಕಲ್ ಎಂಜಿನಿಯರ್‌ಗಳು ಕೆಲಸ ಮಾಡುತ್ತಾರೆ.

ನೀವು ಹತ್ತನೇ ತರಗತಿಯ ನಂತರ ಪಿಯುಸಿ ಶಿಕ್ಷಣದಲ್ಲಿ ಭೌತವಿಜ್ಞಾನ, ರಸಾಯನವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಕಡ್ಡಾಯವಾಗಿ ಓದಬೇಕು. ಅದಾದನಂತರ ಜೆ.ಇ.ಇ. ಪರೀಕ್ಷೆ ಮುಖಾಂತರ ಏರೋನಾಟಿಕಲ್ ಎಂಜಿನಿಯರ್‌ ಪದವಿಯನ್ನು (ಬಿ.ಟೆಕ್./ಬಿ.ಇ. ಇನ್ ಏರೋನಾಟಿಕಲ್ ಎಂಜಿನಿಯರಿಂಗ್‌) ಆಯ್ದುಕೊಂಡು ಓದಬೇಕು. ಇಂದಿನಿಂದಲೇ ನಿಮ್ಮ ಭೌತಶಾಸ್ತ್ರದ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಿ. ಜೊತೆಗೆ ವಿಜ್ಞಾನದ ಇತರ ವಿಷಯಗಳಿಗೂ ಕೂಡ.

ವಿವಿಧ ಐಐಟಿಗಳು, ದೆಹಲಿ ಇನ್ಸ್‌ಟಿಟ್ಯೂಟ್‌ ಆಫ್ ಏರೋನಾಟಿಕಲ್ ಸೈನ್ಸ್‌, ಇಂಡಿಯನ್ ಇನ್ಸ್‌ಟಿಟ್ಯೂಟ್‌ ಆಫ್ ಏರೋನಾಟಿಕಲ್ ಎಂಜಿನಿಯರಿಂಗ್, ಡೆಹ್ರಾಡೂನ್ ಇತ್ಯಾದಿ ಸಂಸ್ಥೆಗಳು ದೇಶದ ಪ್ರತಿಷ್ಠಿತ ಏರೋನಾಟಿಕಲ್ ಎಂಜಿನಿಯರಿಂಗ್‌ ಶಿಕ್ಷಣ ನೀಡುವ ಸಂಸ್ಥೆಗಳಾಗಿದೆ.

ಸರ್ಕಾರಿ ಮತ್ತು ವಿವಿಧ ಖಾಸಗಿ ವಿಮಾನಯಾನ ಸಂಸ್ಥೆಗಳು, ವಿಮಾನ ತಯಾರಿಕ ಸಂಸ್ಥೆಗಳು, ರಕ್ಷಣಾ ಸೇವೆಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ತಯಾರಿ ಮಾಡುವ, ಅಭಿವೃದ್ದಿ ಪಡಿಸುವ ಹಾಗೂ ಸಂಶೋಧನೆ ನಡೆಸುವ ಸಂಸ್ಥೆಗಳು, ರಕ್ಷಣೆ ಮತ್ತು ವಿಮಾನಯಾನಕ್ಕೆ ಬಿಡಿಭಾಗಗಳನ್ನು ತಯಾರಿಸುವ ವಿವಿಧ ಖಾಸಗಿ ಕಂಪನಿಗಳು ಇತ್ಯಾದಿಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಇಸ್ರೊ, ಡಿಆರ್‌ಡಿಓ, ಎಚ್‌ಎಎಲ್ ಇತ್ಯಾದಿ ಸರ್ಕಾರಿ ಸಂಸ್ಥೆಗಳು, ಟಾಟಾ, ಮಹೇಂದ್ರ, ತನೇಜಗಳಂತಹ ಖಾಸಗಿ ಕಂಪನಿಗಳು ಮುಖ್ಯವಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತವೆ. ಅದಲ್ಲದೆ ಈ ಕ್ಷೇತ್ರಕ್ಕೆ ಬಿಡಿ ಭಾಗಗಳನ್ನು ಒದಗಿಸುವ ಗೋದ್ರೆಜ್ / ಡಾಯ್ಸ್ ಏರೋಸ್ಪೇಸ್, ಎಲ್&ಟಿ, ಮೆರ್ಲಿನ್ ಹಾಕ್ ಇತ್ಯಾದಿ ಕಂಪನಿಗಳಲ್ಲೂ ಉದ್ಯೋಗಾವಕಾಶಗಳಿರುತ್ತವೆ. ಅದಲ್ಲದೆ ಏರ್‌ಬಸ್, ಕ್ಯಾಸಿಡಿಯನ್, ಜಿಇ ಮತ್ತು ಬೋಯಿಂಗ್‌ಗಳಂತಹ ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇಂತಹ ಕಂಪನಿಗಳಲ್ಲೂ ಉದ್ಯೋಗಾವಕಾಶಗಳಿರುತ್ತವೆ.

ಬೇರೆ ಕ್ಷೇತ್ರಗಳಿಗೆ ಹೋಲಿಸಿದಾಗ ಏರೋನಾಟಿಕಲ್ ಅಥವಾ ಏರೋಸ್ಪೇಸ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಕಡಿಮೆ ಇದೆ. ಕಾರಣ ಈ ಕ್ಷೇತ್ರದಲ್ಲಿ ಹೆ‍ಚ್ಚು ಬಂಡವಾಳದ ಅಗತ್ಯವಿರುವುದರಿಂದ ಮತ್ತು ಇತರ ಕಾರಣಗಳಿಂದ ಕೆಲಸ ಮಾಡುವ ಸಂಸ್ಥೆಗಳ ಸಂಖ್ಯೆ ಬಹಳ ಕಡಿಮೆ. ಆದರೂ ಕೂಡ ಇತ್ತೀಚೆಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಿರುವುದರಿಂದ ಮುಂದೆ ಹೆಚ್ಚು ಉದ್ಯೋಗಾವಕಾಶಗಳು ತೆರೆದುಕೊಳ್ಳಬಹುದೆಂಬ ಆಶಾಭಾವವಿದೆ.

ಏರೋನಾಟಿಕಲ್ ‌ಎಂಜಿನಿಯರ್‌ಗಳಾಗಲುಬಹಳ ಶ್ರದ್ಧೆ ಮತ್ತು ಬದ್ಧತೆಯಿಂದ ಕೆಲಸ ಮಾಡುವ ಗುಣ, ತಾಂತ್ರಿಕ ಆಪ್ಟಿಟ್ಯೂಡ್, ಉತ್ತಮ ದೈಹಿಕ ಕ್ಷಮತೆ, ವೇಗವಾಗಿ ಮತ್ತು ಹೆಚ್ಚು ನಿಖರತೆಯಿಂದ ಕೆಲಸ ಮಾಡುವ ಕೌಶಲಗಳನ್ನು ಹೊಂದಿರಬೇಕು. ಆ ಹಿನ್ನಲೆಯಲ್ಲಿ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ, ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.