ADVERTISEMENT

ಉದ್ಯೋಗ ಗಳಿಕೆಯ ಸುವರ್ಣಾವಕಾಶ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 20:30 IST
Last Updated 11 ಡಿಸೆಂಬರ್ 2022, 20:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘ಕ್ಯಾಂಪಸ್‌‘ನಲ್ಲಿ ಸೆಲೆಕ್ಷನ್‌ ಆಗಿ, ಕೆಲಸ ಸಿಕ್ಕಿಬಿಟ್ಟರೆ.. ಅಲ್ಲಿಗೆ ಲೈಫ್ ಸೆಟ್ಲಾದಂತೆ...‘ – ವೃತ್ತಿಪರ ಶಿಕ್ಷಣದ ಕಲಿಕೆಯ ಅಂತಿಮ ವರ್ಷದಲ್ಲಿರುವ ಬಹುತೇಕ ವಿದ್ಯಾರ್ಥಿಗಳ ಮಾತು ಇದು. ಕೋರ್ಸ್‌ ಮುಗಿಸುತ್ತಿರುವ ವಿದ್ಯಾರ್ಥಿಗಳ ದೃಷ್ಟಿಯೆಲ್ಲ ಕ್ಯಾಂಪಸ್‌ ಸೆಲೆಕ್ಷನ್‌ನತ್ತಲೇ ನೆಟ್ಟಿರುತ್ತದೆ.

ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವಂತಹ ಕಂಪನಿಗಳು, ಕೌಶಲಯುಕ್ತ ಉದ್ಯೋಗಿಗಳಿಗಾಗಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಹುಡುಕಾಟ ನಡೆಸುತ್ತವೆ. ಇಂಥ ಕಂಪನಿಗಳು ಕಲಿಕಾ ತಾಣಕ್ಕೆ ಹೋಗಿ ಉದ್ಯೋಗಿಗಳನ್ನು ಆಯ್ಕೆ ಮಾಡುವ ವಿಧಾನವೇ ‘ಕ್ಯಾಂಪಸ್‌ ಇಂಟರ್‌ವ್ಯೂ‘ ಅರ್ಥಾತ್‌ ಕ್ಯಾಂಪಸ್‌ ಸಂದರ್ಶನ. ಇದನ್ನು ’ಕ್ಯಾಂಪಸ್ ಪ್ಲೇಸ್‌ಮೆಂಟ್‘ ಎಂದೂ ಕರೆಯುತ್ತಾರೆ.

ಪದವಿಗಳ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳನ್ನು ಕಂಪನಿಗಳು ಸಂದರ್ಶಿಸುತ್ತವೆ. ಮಾತ್ರವಲ್ಲ, ಕೌಶಲ ಆಧಾರಿತ ಪರೀಕ್ಷೆ ನಡೆಸಿ ತಮ್ಮ ಕಂಪನಿಯ ಕೆಲಸದ ಆಫರ್ ನೀಡುತ್ತವೆ. ಉದ್ಯೋಗಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳು ಕೋರ್ಸ್‌ ಮುಗಿದ ಕೂಡಲೇ ಕಂಪನಿಯ ಕೆಲಸಕ್ಕೆ ಹಾಜರಾಗಿ ಅಲ್ಲಿಯೇ ಮುಂದುವರಿಯುತ್ತಾ, ಕಂಪನಿಯ ನೌಕರರಾಗಿ ಬದಲಾಗುತ್ತಾರೆ. ಸಂಬಳದ ರೂಪದಲ್ಲಿ ಹಣ ಸಿಗುತ್ತದೆ. ವೃತಿ ಜೀವನದ ಒಂದೊಂದೇ ಹಂತ ಮೇಲೇರುತ್ತಾರೆ.

ADVERTISEMENT

ಕ್ಯಾಂಪಸ್‌ಗೆ ಬರುವ ಕಂಪನಿ, ತಾನು ಯಾವೆಲ್ಲ ಉತ್ಪನ್ನ ತಯಾರಿಸುತ್ತದೆ? ಯಾವ ವಿಷಯ ಕಲಿತವರು ತನಗೆ ಬೇಕು? ಕೆಲಸ ಮಾಡುವ ವಿಧಾನ, ಅಲ್ಲಿನ ಉದ್ಯೋಗದ ಶೈಲಿ, ಮಾರುಕಟ್ಟೆಯಲ್ಲಿ ತನಗಿರುವ ಶೇರುಗಳು, ಒಟ್ಟು ಬಂಡವಾಳ ಇತ್ಯಾದಿ ವಿಷಯಗಳ ಕುರಿತು ‘ಪ್ರಿ ಪ್ಲೇಸ್‌ಮೆಂಟ್ ಪ್ರೆಸೆಂಟೇಶನ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿರುತ್ತದೆ.

ಪೂರ್ವಭಾವಿ ಸ್ಕ್ರೀನಿಂಗ್ ಪರೀಕ್ಷೆ

ತನ್ನ ಕೆಲಸಗಳಿಗೆ ಬೇಕಾಗುವ ವಿದ್ಯಾರ್ಥಿಗಳ ವಿದ್ಯಾರ್ಹತೆ, ಪಡೆದಿರಬೇಕಾದ ಅಂಕಗಳು, ಕಲಿತಿರಬೇಕಾದ ವಿಷಯ, ಪ್ರಾಥಮಿಕ ಪರಿಣತಿಯ ಕುರಿತು ತಮ್ಮದೇ ಮಾನದಂಡ ಬಳಸುವ ಕಂಪನಿಗಳು ‘ಸ್ಕ್ರೀನಿಂಗ್‌’ (ಪೂರ್ವ ಭಾವಿ ಆಯ್ಕೆ) ಮೂಲಕ ಆರ್ಹರನ್ನು ಗುರುತಿಸಿರುತ್ತವೆ. ಅವರಿಗೆ ಮುಂದಿನ ಹಂತದ ಚಟುವಟಿಕೆಗಳಿಗೆ ತಯಾರಾಗಿರುವಂತೆ ನಿರ್ದೇಶನ ನೀಡುತ್ತವೆ. ಪ್ರತಿ ಉದ್ಯಮ, ಸಂಸ್ಥೆ, ಕಂಪನಿಗಳಲ್ಲಿ ಹಲವು ಬಗೆಯ ಉದ್ಯೋಗಾವಕಾಶಗಳಿರುತ್ತವೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ, ಕಲಿತ ವಿಷಯ, ಗ್ರೇಡ್‌ಗಳು ಕಂಪನಿಯ ಬೇಡಿಕೆಗಳಿಗೆ ಹೊಂದುತ್ತವೆಯೇ ಎಂಬುದನ್ನರಿತು ಕ್ಯಾಂಪಸ್ ಸಂದರ್ಶನಕ್ಕೆ ತಯಾರಾಗಬೇಕು.

ಸಾಮರ್ಥ್ಯ ಪರೀಕ್ಷೆ (Aptitude Test)

ಕಂಪನಿಯ ಪ್ರಾಥಮಿಕ ಅಗತ್ಯಗಳಿಗೆ ತಕ್ಕಂತೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಸಾಮರ್ಥ್ಯ ಪರೀಕ್ಷೆ ನಡೆಯುತ್ತದೆ. ಇದು ಅಭ್ಯರ್ಥಿ ಬಯಸುವ ಕೆಲಸಕ್ಕೆ ಅನುಗುಣವಾದ ವಿಷಯಗಳನ್ನು ಆಧರಿಸಿರುತ್ತದೆ. ಮಾರ್ಕೆಟಿಂಗ್, ಕ್ವಾಲಿಟಿ ಕಂಟ್ರೋಲ್, ಟೆಸ್ಟಿಂಗ್, ಪ್ಲಾನಿಂಗ್‌... ಹೀಗೆ ವಿವಿಧ ಜವಾಬ್ದಾರಿಗೆ ಸರಿಯಾದ ಸಾಮರ್ಥ್ಯ ಪರೀಕ್ಷೆ ನಡೆಯುತ್ತದೆ.

ಪತ್ರಿಕೋದ್ಯಮ, ಮ್ಯಾನೇಜ್‌ಮೆಂಟ್, ಹೆಲ್ತ್‌ಕೇರ್‌, ಫಾರ್ಮಾಕಾಲಜಿ, ಮಾಹಿತಿ ತಂತ್ರಜ್ಞಾನ, ಹೋಟೆಲ್ ಉದ್ಯಮಗಳಿಗೆ ಅದರದೇ ಆದ ಆಪ್ಟಿಟ್ಯೂಡ್ ಟೆಸ್ಟ್‌ಗಳಿರುತ್ತವೆ.

ಕೋಡಿಂಗ್, ಗಣಿತ ಕೌಶಲ, ಸಮಸ್ಯೆ ಬಿಡಿಸುವ ಜ್ಞಾನ, ಸಂಹವನ ಕೌಶಲ ಪರೀಕ್ಷಿಸುವ ‘ವ್ಹೀ ಬಾಕ್ಸ್ ಗ್ರ್ಯಾಜುಯೇಟ್ ಎಂಪ್ಲಾಯಬಲಿಟಿ ಟೆಸ್ಟ್’ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಮಾಣಿತ ಆಪ್ಟಿಟ್ಯೂಡ್ ಟೆಸ್ಟ್ ಎನ್ನಿಸಿದೆ.

ಪ್ರೋಗ್ರಾಮರ್ ಆ್ಯಪ್ಟಿಟ್ಯೂಟ್ ಟೆಸ್ಟ್ , ಇ - ಲಿಟ್ಮಸ್, ಆ್ಯಮ್‌ಕ್ಯಾಟ್ ,ಕೊ ಕ್ಯೂಬ್ಸ್ ನಂತಹ ಅನೇಕ ಸಾಮರ್ಥ್ಯ ಪರೀಕ್ಷೆಗಳಿವೆ. ಇಲ್ಲಿ ಪಡೆದ ಅಂಕಗಳನ್ನು ಭಾರತದ ಸುಮಾರು 800 ಪ್ರಸಿದ್ಧ ಕಂಪನಿಗಳು ಪರಿಗಣಿಸುತ್ತವೆ.

ಗುಂಪು ಚರ್ಚೆ

ಬಹುತೇಕ ಸಂಸ್ಥೆಗಳು ಅಭ್ಯರ್ಥಿಯಲ್ಲಿ ನಾಯಕತ್ವ ಗುಣ, ನಿರ್ಧಾರತೆಗೆದುಕೊಳ್ಳುವ ಕ್ಷಮತೆ, ತಂಡದಲ್ಲೊಬ್ಬನಾಗಿ ದುಡಿಯುವ ಮನೋಭಾವ, ವಿಷಯ ಗ್ರಹಣ, ಸಾರ್ವಜನಿಕ ಮಾತುಗಾರಿಕೆ, ಆತ್ಮವಿಶ್ವಾಸದ ಮಟ್ಟ ಪರೀಕ್ಷಿಸಲು ವಿಷಯವೊಂದನ್ನು ನೀಡಿ ಗುಂಪು ಚರ್ಚೆ ಏರ್ಪಡಿಸುತ್ತವೆ. ಚರ್ಚೆಯ ವಿಷಯಗಳು ಸಮಕಾಲೀನ ಜಗತ್ತಿಗೆ ಸಂಬಂಧಿಸಿರುತ್ತವೆ ಅಥವಾ ಅವರ ಸಂಸ್ಥೆಗೆ ಸಂಬಂಧಿಸಿದ ನಿರ್ದಿಷ್ಟ ವಿಷಯವೂ ಆಗಿರುತ್ತದೆ. ಚರ್ಚೆ ಯಲ್ಲಿ ಅಭ್ಯರ್ಥಿಯ ಮಾತಿನ ಶೈಲಿ, ಭಾಷೆಯ ಮೇಲಿನ ಹಿಡಿತ, ಪದ ಭಂಡಾರ, ಧ್ವನಿಯ ಏರಿಳಿತ ಮತ್ತು ವಿಷಯ ಪ್ರಸ್ತುತ ಪಡಿಸುವ ಚಾಕಚಕ್ಯತೆಯನ್ನು ಇಲ್ಲಿ ಪ್ರಮುಖವಾಗಿ ಗಮನಿಸಲಾಗುತ್ತದೆ.

(ಲೇಖಕರು: ಪ್ರಾಚಾರ್ಯರು, ವಿಡಿಯಾ ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜು, ಬೆಂಗಳೂರು.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.