ADVERTISEMENT

ಲಲಿತ ಕಲೆ ಕಲಿಕೆ: ಆಸಕ್ತಿ ಮುಖ್ಯ

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ಹರೀಶ್ ಶೆಟ್ಟಿ ಬಂಡ್ಸಾಲೆ
Published 25 ಜೂನ್ 2019, 19:30 IST
Last Updated 25 ಜೂನ್ 2019, 19:30 IST
   

ಕ್ರೀಡೆ, ಸಂಗೀತ, ಕಲೆ, ನಟನೆಯಂತಹ ಕ್ಷೇತ್ರಗಳಲ್ಲಿ ನಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದುಕೊಳ್ಳುವುದು ತಪ್ಪೇ? ಇಂತಹ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಕ್ಕಾಗಿ ಏನು ಓದುಬೇಕು ಮತ್ತು ಹೇಗೆ ಮುಂದುವರಿಯಬೇಕು ಎಂದು ಮಾರ್ಗದರ್ಶನ ನೀಡಿ.

ನಿಧಿ ಎಸ್‌., ಬೆಂಗಳೂರು

ಕ್ರೀಡೆ, ಸಂಗೀತ, ಕಲೆ, ನಟನೆಯಂತಹ ಕ್ಷೇತ್ರಗಳಲ್ಲಿ ನಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದುಕೊಳ್ಳುವುದು ಖಂಡಿತ ತಪ್ಪಲ್ಲ. ಡಾಕ್ಟರ್, ಎಂಜಿನಿಯರ್, ಶಿಕ್ಷಕ ಹಾಗೂ ಇನ್ನಿತರ ವೃತ್ತಿ ಇರುವಂತೆ ಇದು ಕೂಡ ಒಂದು ವೃತ್ತಿಯಾಗಿದೆ. ಕ್ರೀಡೆ, ಸಂಗೀತ, ನಟನೆ, ಚಿತ್ರಕಲೆ, ಯೋಗ, ವ್ಯಾಯಾಮ, ನೃತ್ಯ ಇತ್ಯಾದಿ. ಆದರೆ ಇವುಗಳನ್ನು ವೃತ್ತಿಯಾಗಿ ಆಯ್ಕೆ ಮಾಡುವ ಕೆಲವು ವಿಚಾರಗಳನ್ನು ಸ್ಪಷ್ಟವಾಗಿ ತಿಳಿಯಬೇಕಿದೆ.

ADVERTISEMENT

ಎಲ್ಲಕ್ಕಿಂತ ಬಹಳ ಮುಖ್ಯವಾಗಿ ಈ ವೃತ್ತಿಗಳ ಬಗ್ಗೆ ನಮಗಿರುವುದು ಕೇವಲ ಕ್ರೇಜ್ ಅಥವಾ ನಿಜವಾದ ಆಸಕ್ತಿಯೇ ಎಂದು ತಿಳಿಯಬೇಕು. ಕೆಲವೊಮ್ಮೆ ಈ ವೃತ್ತಿಗಳು ನೋಡಲು ಚೆನ್ನಾಗಿದ್ದು ಆಕರ್ಷಕವಾಗಿರುತ್ತವೆ. ಆದರೆ ಇದರಲ್ಲಿ ಬದುಕು ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಹೀಗಾಗಿ ಇದರ ಬಗ್ಗೆ ನಿಜವಾಗಿಯೂ ದೃಢವಾದ ನಿಲುವು ಇದ್ದರೆ ಮಾತ್ರ ಆಯ್ದುಕೊಳ್ಳಬೇಕು.

ಬೇರೆ ವೃತ್ತಿಗಳ ಹಾಗೆ ಇದು ಆಯಕಟ್ಟಿನ ಅಥವಾ ಸುರಕ್ಷಿತ ಜಾಗವಲ್ಲ. ಅನೇಕ ಏಳುಬೀಳುಗಳನ್ನು ಕಾಣಬೇಕಾಗುತ್ತದೆ. ನಮ್ಮ ಸ್ವಂತ ಪ್ರತಿಭೆ ಮತ್ತು ಪರಿಶ್ರಮದ ಮೇಲೆ ನಿಲ್ಲಬೇಕಾಗುತ್ತದೆ. ವೃತ್ತಿಯ ಶುರುವಿನಲ್ಲಿ ನೀವು ಉತ್ತಮ ಆದಾಯ ಗಳಿಸುವುದು ಬಹಳ ಕಷ್ಟ. ಈ ವೃತ್ತಿಗಳಲ್ಲಿ ಆದಾಯಕ್ಕಿಂತ ಸಂತೃಪ್ತಿ ಮತ್ತು ಸಂತೋಷವೇ ಮುಖ್ಯವಾಗುತ್ತದೆ. ಆದಾಯ ಮುಂದೆ ಬಂದರೂ ಬರಬಹುದು. ಆದರೆ ಉತ್ತಮ ಆದಾಯ ಕೊಡುತ್ತದೆ ಎಂಬ ಖಾತರಿ ಇಲ್ಲ. ಅಂತಹ ಸಂದರ್ಭದಲ್ಲಿ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಹೇಗಿದೆ, ನೀವು ಸಂಪಾದಿಸುವುದು ನಿಮ್ಮ ಕುಟುಂಬಕ್ಕೆ ಎಷ್ಟು ಮುಖ್ಯ ಎನ್ನುವುದನ್ನು ಪರಿಗಣಿಸಬೇಕಾಗುತ್ತದೆ. ಒಂದು ವೇಳೆ ನೀವು ಬಡ ಅಥವಾ ಕೆಳ ಮಧ್ಯಮ ಕುಟುಂಬದಿಂದ ಬಂದಿದ್ದರೆ ಇಂತಹ ವೃತ್ತಿಗಳನ್ನು ಮುಖ್ಯ ವೃತ್ತಿಗಳಿಗಿಂತ ಹವ್ಯಾಸವಾಗಿ ರೂಢಿಸಿಕೊಂಡು, ನಿಮ್ಮ ಕಾಲ ಮೇಲೆ ನೀವು ನಿಂತ ನಂತರ ಅದನ್ನು ಕ್ರಮೇಣ ಮುಖ್ಯ ವೃತ್ತಿಯಾಗಿಸಿಕೊಳ್ಳಬಹುದು.

ಈ ವೃತ್ತಿಗಳಲ್ಲಿ ಸೂಕ್ತ ತರಬೇತಿ ಪಡೆಯುವುದು ಮುಖ್ಯವಾಗುತ್ತದೆ. ಹೀಗಾಗಿ ನಿಮಗೆ ಲಭ್ಯವಿರುವ ಅವಕಾಶಗಳಲ್ಲಿ ಬಹಳ ದಕ್ಷವಾಗಿ ತರಬೇತಿ ನೀಡುವವರನ್ನು ಆಯ್ದುಕೊಳ್ಳಬೇಕು. ಅಷ್ಟು ಮಾತ್ರವಲ್ಲದೆ ನೀವು ಕೂಡ ಬಹಳ ಗಂಭೀರತೆಯಿಂದ, ಕಟ್ಟುನಿಟ್ಟಾಗಿ ತರಬೇತಿ ಪಡೆಯಲು ತಯಾರಿದ್ದು, ತಯಾರಿ ನಡೆಸಬೇಕು. ಇತ್ತೀಚಿನ ದಿನಗಳಲ್ಲಿ ಈ ತರಹದ ಕ್ಷೇತ್ರಗಳಿಗೆ ಬರುವ ಜನರ ಸಂಖ್ಯೆ ಹೆಚ್ಚಿದ್ದು, ಅವಕಾಶಗಳು ಕೂಡ ಹೆಚ್ಚಿವೆ. ಆದರೆ ಸ್ಪರ್ಧೆ ಕಠಿಣವಾಗಿರುತ್ತದೆ. ನೀವು ಪರಿಶ್ರಮ ಪಡಬೇಕಾದ್ದು ಬಹಳ ಮುಖ್ಯ.

ತಯಾರಿ ನಡೆಸುವಾಗ ನೀವು ಗಮನಿಸಬೇಕಾದ ಅಂಶ ಏನೆಂದರೆ, ಆ ಕ್ಷೇತ್ರಗಳಿಗೆ ನೇರ ಸಿದ್ಧತೆ ಮತ್ತು ಪರೋಕ್ಷ ಸಿದ್ಧತೆ. ನೇರ ಸಿದ್ಧತೆ ಎಂದರೆ-ಕ್ರಿಕೆಟ್ ಆಟಗಾರನಾಗಲು ಕ್ರಿಕೆಟ್ ಕೋಚಿಂಗ್ ಪಡೆಯುವುದು, ಹಾಡುಗಾರಿಕೆ ಮಾಡಲು ಶಾಸ್ತ್ರೀಯ ಸಂಗೀತ ತರಬೇತಿ ಪಡೆಯುವುದು ಇತ್ಯಾದಿ.

ಪರೋಕ್ಷ ಸಿದ್ಧತೆ ಅಂದರೆ ಈ ವೃತ್ತಿಗಳನ್ನು ನಡೆಸಲು ದೈಹಿಕ ಮತ್ತು ಮಾನಸಿಕ ಕ್ಷಮತೆ ಬೇಕು. ಅದಕ್ಕಾಗಿ ಇತರ ವ್ಯಾಯಾಮ, ಯೋಗ, ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು.

ಚಿಕ್ಕಂದಿನಲ್ಲಿ ನಿಮಗೆ ಲಭ್ಯ ಇರುವ ಕಡೆ ತರಬೇತಿ ಪಡೆದ ನಂತರ ಮುಂದೆ ಸೂಕ್ತ ಸ್ಥಳ ಮತ್ತು ವಿದ್ಯಾಲಯಗಳಿಂದ ತರಬೇತಿ ಪಡೆಯುವುದು ಮುಖ್ಯ. ಹೀಗಾಗಿ ಸಂಗೀತ, ನಾಟಕ, ಚಿತ್ರಕಲೆಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಉತ್ತಮ ವಿದ್ಯಾಲಯಗಳಿಂದ ಪಡೆಯುವುದು ಸಹಕಾರಿಯಾಗುತ್ತದೆ. ಚಿತ್ರಕಲಾ ಕ್ಷೇತ್ರದಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್‌, ಮಾಸ್ಟರ್ ಆಫ್ ಫೈನ್ ಆರ್ಟ್ಸ್‌, ನೃತ್ಯ ಕ್ಷೇತ್ರದಲ್ಲಿ ಭರತನಾಟ್ಯದಲ್ಲಿ ಪದವಿ, ಸಂಗೀತದಲ್ಲೂ ಕೂಡ ಪದವಿ ಮತ್ತು ಸ್ನಾತಕೋತ್ತರ ಪದವಿಗಳು, ರಂಗಭೂಮಿ ಕ್ಷೇತ್ರದಲ್ಲಿ ಮೈಸೂರಿನ ರಂಗಾಯಣ, ಹೆಗ್ಗೋಡಿನ (ಶಿವಮೊಗ್ಗ) ನೀನಾಸಂ, ಬೆಂಗಳೂರಿನ ಸ್ಕೂಲ್ ಆಫ್ ಡ್ರಾಮಾ, ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಇತ್ಯಾದಿ ಸಂಸ್ಥೆಗಳಲ್ಲಿ ತರಬೇತಿ ಮತ್ತು ಶಿಕ್ಷಣ, ಸಿನಿಮಾ ಕ್ಷೇತ್ರದಲ್ಲಿ ಅನೇಕ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗಳಲ್ಲಿ ನಟನೆ, ಛಾಯಾಗ್ರಹಣ, ಎಡಿಟಿಂಗ್ (ಸಂಕಲನ), ನಿರ್ದೇಶನ ಇತ್ಯಾದಿ ವಿಭಾಗಗಳಲ್ಲಿ ತರಬೇತಿ ಮತ್ತು ಶಿಕ್ಷಣ ಪಡೆಯಬಹುದು. ತರಬೇತಿ ಮತ್ತು ಶಿಕ್ಷಣದ ಜೊತೆಗೆ ಆ ಕ್ಷೇತ್ರದ ಪರಿಣತರ ಮತ್ತು ಖ್ಯಾತನಾಮರ ಜೊತೆ ಸಹಾಯಕರಾಗಿ ಕೆಲಸ ಮಾಡಿದಾಗ ಇನ್ನಷ್ಟು ನೈಜ ಅನುಭವಗಳು ದೊರಕಿ ಮುಂದುವರಿಯಲು ಸಹಾಯವಾಗುತ್ತದೆ.

ಇದೇನು ಅಸಾಧ್ಯ ಎನಿಸುವಂತಹ ಕ್ಷೇತ್ರವೇನಲ್ಲ. ನಿಮ್ಮ ದೃಢ ನಿರ್ಧಾರ, ಅದಕ್ಕೆ ತಕ್ಕುದಾದ ತರಬೇತಿ, ತಯಾರಿ, ಪರಿಶ್ರಮ, ಮನೆಯವರ ನೆರವು ಇದ್ದರೆ ಖಂಡಿತ ನೆರವೇರುತ್ತದೆ. ಇದ್ಯಾವುದೂ ಇಲ್ಲದೆ, ಸತತ ಪರಿಶ್ರಮದಿಂದಲೇ ಮೇಲೆ ಬಂದವರು ಇದ್ದಾರೆ. ಈಗಿನ ಕಾಲದಲ್ಲಿ ಇಂತಹುದನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿ ಬದುಕಲು ಯಥೇಚ್ಛ ಅವಕಾಶ ಇದೆ. ನೇರವಾಗಿ ಈ ವೃತ್ತಿಯಿಂದಲೂ ಬದುಕಲು ಕಷ್ಟವಾದಾಗ ಇದಕ್ಕೆ ಹೊಂದಿಕೊಂಡಿರುವ ಕ್ರೀಡಾ ಪತ್ರಿಕೋದ್ಯಮ, ಕ್ರೀಡಾ ಸಾಮಗ್ರಿಯ ವ್ಯವಹಾರ, ಕ್ರೀಡೆ, ನಾಟಕ, ಸಂಗೀತ ತರಬೇತಿ ಇತ್ಯಾದಿ ನಡೆಸಿಯೂ ಕೂಡ ಬದುಕಲು ಹೇರಳ ಅವಕಾಶ ಇದೆ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.