ADVERTISEMENT

ಸ್ಟೂಡೆಂಟ್‌ ಕಾರ್ನರ್‌: ಹೂಗುಚ್ಛದ ಬದಲಿಗೆ ನೋಟ್‌ಪುಸ್ತಕ ನೀಡುವ ಪದ್ಧತಿ ಜಾರಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 23:31 IST
Last Updated 21 ಸೆಪ್ಟೆಂಬರ್ 2025, 23:31 IST
   

ಹೂಗುಚ್ಛ ಬೇಡ

ಮುಂಬೈ: ಅಧಿಕೃತ ಕಾರ್ಯಕ್ರಮಗಳಲ್ಲಿ ಹೂಗುಚ್ಛದ ಬದಲಿಗೆ ನೋಟ್‌ಪುಸ್ತಕ ನೀಡುವ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲಾ ಪರಿಷತ್‌ನ ಸಿಇಒ ರವೀಂದ್ರ.

ಈ ವರ್ಷದ ಫೆಬ್ರುವರಿಯಲ್ಲಿ ಅವರು ಈ ಹುದ್ದೆಗೆ ವರ್ಗವಾಗಿ ಬಂದಾಗಿನಿಂದ ಈವರೆಗೆ 2,000 ನೋಟ್‌ಪುಸ್ತಕಗಳು ಸಂಗ್ರಹವಾಗಿದ್ದು, ಅವುಗಳನ್ನು ಬಡಮಕ್ಕಳಿಗೆ ವಿತರಿಸಲಾಗಿದೆ.

ಅಹೋರಾತ್ರಿ ಪಾದಯಾತ್ರೆ

ADVERTISEMENT

ಇಟಾನಗರ: ಬಹುಕಾಲದಿಂದ ಇರುವ ಶಿಕ್ಷಕರ ಕೊರತೆ ನೀಗಿಸುವಂತೆ ಆಗ್ರಹಿಸಿ, ಅರುಣಾಚಲ ಪ್ರದೇಶದ ಪಕ್ಕೆ ಕೆಸ್ಸಾಂಗ್‌ ಜಿಲ್ಲೆಯ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ಸುಮಾರು 90 ವಿದ್ಯಾರ್ಥಿನಿಯರು ಇತ್ತೀಚೆಗೆ 65 ಕಿ.ಮೀ ದೂರದವರೆಗೆ ಮೆರವಣಿಗೆ ನಡೆಸಿದರು.

ಹಗಲೂ ರಾತ್ರಿ ಪಾದಯಾತ್ರೆ ನಡೆಸಿ ಜಿಲ್ಲಾ ಕೇಂದ್ರಕ್ಕೆ ಬಂದು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅವರು ಹಿಡಿದಿದ್ದ ‘ಶಿಕ್ಷಕ ರಿಲ್ಲದ ಶಾಲೆಯು ಬರೀ ಕಟ್ಟಡದಂತೆ’ ಎಂಬ ಫಲಕಗಳು ಗಮನ ಸೆಳೆದವು. ಬಾಲಕಿಯರ ಈ ದಿಢೀರ್‌ ಪಾದಯಾತ್ರೆಯು ಪೋಷಕರು, ಅಧಿಕಾರಿಗಳು ಹಾಗೂ ಜನಸಾಮಾನ್ಯರಲ್ಲಿ ಅಚ್ಚರಿ ಹಾಗೂ ಆಘಾತ ಉಂಟು ಮಾಡಿತು. ತಕ್ಷಣವೇ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅಧಿಕಾರಿಗಳು, ವಾಹನದ ಮೂಲಕ ಮಕ್ಕಳನ್ನು ವಾಪಸ್‌ ಕಳುಹಿಸಿ
ಕೊಟ್ಟರು. ಸ್ವಯಂಸೇವಾ ಸಂಸ್ಥೆಯೊಂದು ಈ ಶಾಲೆಯನ್ನು ನಡೆಸುತ್ತಿದೆ.

ಲಕ್ಷಾಂತರ ಮಂದಿಗೆ ಪರೀಕ್ಷೆ

ಕೋಲ್ಕತ್ತ: ಪಶ್ಚಿಮ ಬಂಗಾಳದ 11 ಮತ್ತು 12ನೇ ತರಗತಿಯ ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿಗಾಗಿ ಇತ್ತೀಚೆಗೆ ನಡೆದ ಪರೀಕ್ಷೆಗೆ 2.20 ಲಕ್ಷ ಮಂದಿ ಹಾಜರಾಗಿದ್ದರು. ಇವರಲ್ಲಿ ಸಾವಿರಾರು ಮಂದಿ ನೆರೆಯ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಸೇರಿದವರು.

ಇದೇ ತಿಂಗಳ ಆರಂಭದಲ್ಲಿ 9 ಮತ್ತು 10ನೇ ತರಗತಿಯ ಶಿಕ್ಷಕರ ನೇಮಕಾತಿಗಾಗಿ ನಡೆದಿದ್ದ ಪರೀಕ್ಷೆಯನ್ನು ಸುಮಾರು 3 ಲಕ್ಷ ಮಂದಿ ಬರೆದಿದ್ದರು. 

2016ರ ನೇಮಕಾತಿ ಪ್ರಕ್ರಿಯೆ ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪಿತ್ತ ಬಳಿಕ, 26,000 ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಅವರ ಜಾಗಕ್ಕೆ ಈ ಹೊಸ ನೇಮಕಾತಿ ಪ್ರಕ್ರಿಯೆ ನಡೆದಿದೆ.

ಕಾಲು ಮುಟ್ಟದೆ ಹೊಡೆತ ತಿಂದರು

ಬಾರೀಪದಾ(ಒಡಿಶಾ): ತಮ್ಮ ಕಾಲು ಮುಟ್ಟಿ ನಮಸ್ಕರಿಸದ ವಿದ್ಯಾರ್ಥಿಗಳನ್ನು ಥಳಿಸಿದ ಮಯೂರ್‌ಭಂಜ್‌ ಜಿಲ್ಲೆಯ ಗ್ರಾಮವೊಂದರ ಸರ್ಕಾರಿ ಶಾಲೆಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.

ಬೆಳಗಿನ ಪ್ರಾರ್ಥನೆಯ ಬಳಿಕ ವಿದ್ಯಾರ್ಥಿಗಳು ಶಿಕ್ಷಕರ ಪಾದ ಮುಟ್ಟಿ ಗೌರವ ಸಲ್ಲಿಸುವುದು ಈ ಶಾಲೆಯಲ್ಲಿ ರೂಢಿಯಲ್ಲಿದೆ. ಆದರೆ ಅಂದು ಶಿಕ್ಷಕಿ ಸುಕಾಂತಿ ಕರ್‌ ಶಾಲೆಗೆ ತಡವಾಗಿ ಬಂದಿದ್ದು, ಅಷ್ಟರಲ್ಲಿ ಪ್ರಾರ್ಥನೆ ಮುಗಿದಿತ್ತು. ಹೀಗಾಗಿ, ಮಕ್ಕಳು ಅವರ ಕಾಲಿಗೆ ನಮಸ್ಕರಿಸಲಿಲ್ಲ. ಇದರಿಂದ ಸಿಟ್ಟಿಗೆದ್ದ ಶಿಕ್ಷಕಿ, 6, 7 ಮತ್ತು 8ನೇ ತರಗತಿಯ 31 ಮಕ್ಕಳಿಗೆ ಬಿದಿರುಕೋಲಿನಿಂದ ಹೊಡೆದಿದ್ದರು. ಇದರಿಂದ ಹಲವರ ಕೈಗಳು ಮತ್ತು ಬೆನ್ನಿನಲ್ಲಿ ಬರೆ ಬಂದಿತ್ತು. ಒಬ್ಬ ಬಾಲಕನ ಕೈಮೂಳೆ ಮುರಿದಿತ್ತು. ಪ್ರಜ್ಞಾಹೀನಳಾದ

ವಿದ್ಯಾರ್ಥಿನಿಯೊಬ್ಬಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಗಿ ಬಂದಿತ್ತು. ಶಾಲಾ ಆಡಳಿತ ಮಂಡಳಿ ನಡೆಸಿದ ತನಿಖೆಯಿಂದ ಈ ಸಂಗತಿಗಳು ಹೊರಬಂದಿದ್ದವು. ಶಾಲಾ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದನ್ನು ಒಡಿಶಾ ಸರ್ಕಾರ 2004ರಲ್ಲೇ ನಿಷೇಧಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.