ADVERTISEMENT

ಮೆಡಿಕಲ್, ಡೆಂಟಲ್; ಆಫ್ಶನ್ ಎಂಟ್ರಿ ಹೇಗೆ?

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 6:45 IST
Last Updated 10 ಜುಲೈ 2018, 6:45 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಇಚ್ಛೆ ನಮೂದಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಜುಲೈ 10ರಂದು ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ. ಆದ್ದರಿಂದ, 2018-19ನೇ ಸಾಲಿನ ಸರ್ಕಾರಿ, ಖಾಸಗಿ, ಎನ್‌ಆರ್‌ಐ ಮತ್ತು ಇತರ ಕೋಟಾದ ಮೆಡಿಕಲ್ ಮತ್ತು ಡೆಂಟಲ್ ಕೋರ್ಸ್‌ಗಳಪ್ರವೇಶಾತಿ ಬಯಸಿ, ನೀಟ್ ಪ್ರವೇಶ ಪರೀಕ್ಷೆ ಬರೆದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿ, ದಾಖಲಾತಿ ಪರಿಶೀಲನೆ ಮುಗಿಸಿ, ವೆರಿಫಿಕೇಶನ್ ಸ್ಲಿಪ್ ಪಡೆದಿರುವ ಎಲ್ಲ ವಿದ್ಯಾರ್ಥಿಗಳು ಮೊದಲ ಸುತ್ತಿನ ಕೊನೆಯ ದಿನಾಂಕದೊಳಗೆ ಇಚ್ಛೆ ನಮೂದಿಸಬೇಕಾಗಿದೆ.

ಕಳೆದ ಸಂಚಿಕೆಯಲ್ಲಿ ತಿಳಿಸಿರುವಂತೆ ಇಚ್ಛೆ ನಮೂದಿಸುವಾಗ, ಪ್ರವೇಶ ಬಯಸುವ ಕೋರ್ಸ್ ಮತ್ತು ಆ ಕೋರ್ಸ್‌ನ ವಾರ್ಷಿಕ ಶುಲ್ಕವನ್ನು ಪರಿಗಣಿಸಿ ಆದ್ಯತಾ ಪಟ್ಟಿಯೊಂದನ್ನು (ಆದ್ಯತಾ ಸಂಖ್ಯೆಗಳನ್ನು ನಮೂದಿಸಿ) ಸಿದ್ಧಪಡಿಸಬೇಕು. ಮೊದಲಿನ ಇಚ್ಛೆಗೆ ಶೇ 100ರಷ್ಟು ಆದ್ಯತೆಯೆಂದು ಪರಿಗಣಿಸಿದರೆ, ನಂತರದ ಆದ್ಯತೆಗಳು ಇಳಿಕೆ (ಅವರೋಹಣ) ಕ್ರಮದಲ್ಲಿರಬೇಕು. ಆ ಬಳಿಕ ಇಚ್ಛೆ ನಮೂದಿಸಲು ಆರಂಭಿಸಬೇಕು.

ಮೊದಲ ಸುತ್ತಿನಲ್ಲಿ ಲಭ್ಯವಿದ್ದ ಯಾವುದೇ ಕೋರ್ಸ್‌ಗಳಿಗೆ ಇಚ್ಛೆ ನಮೂದಿಸದ ಅಭ್ಯರ್ಥಿಗಳು, ಎರಡನೇ ಸುತ್ತಿನಲ್ಲಿ ಆ ಕೋರ್ಸ್‌ಗಳಿಗೆ ಇಚ್ಛೆ ನಮೂದಿಸುವಂತಿಲ್ಲ. ಎರಡನೇ ಸುತ್ತಿನಲ್ಲಿ ಹೊಸದಾಗಿ ಸೇರ್ಪಡೆಯಾದ ಕೋರ್ಸ್‌ಗಳಿಗೆ ಮಾತ್ರ ಇಚ್ಛೆಗಳನ್ನು ನಮೂದಿಸಬಹುದಾಗಿದೆ. ಆದ್ದರಿಂದ ಇಚ್ಛೆಗಳನ್ನು ನಮೂದಿಸುವಾಗ ಅತ್ಯಂತ ಜಾಗರೂಕರಾಗಿರಬೇಕು.

ADVERTISEMENT

ಪ್ರವೇಶ ಬಯಸುವ ಮತ್ತು ಲಭ್ಯವಿರುವ ಎಲ್ಲ ಕಾಲೇಜು/ಕೋರ್ಸ್‌ಗಳಿಗೆ (ಶುಲ್ಕವನ್ನು ನೋಡಿಕೊಂಡು) ಇಚ್ಛೆಗಳನ್ನು ನಮೂದಿಸುವುದು ಜಾಣತನ. ಇಚ್ಛೆಗಳನ್ನು ನಮೂದಿಸಲು ಎಷ್ಟು ಬಾರಿ ಬೇಕಾದರೂ ಲಾಗ್‍ಇನ್ ಆಗಬಹುದು. ಆದರೆ, ಪ್ರತಿ ಬಾರಿ ಲಾಗ್‍ ಔಟ್ ಆಗಲು ಮರೆಯಬಾರದು. ಕೊನೆಯ ದಿನಾಂಕ,ಸಮಯದ ವರೆಗೆ ತಿದ್ದುಪಡಿಗಳನ್ನೂ ಮಾಡಬಹುದು. ಕೊನೆಯ ದಿನಾಂಕದ ಒಳಗಡೆ ಹೊಸ ಕಾಲೇಜು, ಕೋರ್ಸ್‌ಗಳು ಸೇರ್ಪಡೆಯಾದರೆ, ಆ ಕೋರ್ಸ್‌ಗಳಿಗೂ ಇಚ್ಛೆಗಳನ್ನು ನಮೂದಿಸಿ, ಆದ್ಯತಾ ಸಂಖ್ಯೆಗಳಲ್ಲಿ ತಿದ್ದುಪಡಿಗಳನ್ನು ಮಾಡಬಹುದು.

ಸೀಟ್ ಮ್ಯಾಟ್ರಿಕ್ಸ್: ನೀಟ್ ಪ್ರವೇಶ ಪರೀಕ್ಷೆ ವಿಭಾಗದ ಎಲ್ಲ ಚಟುವಟಿಕೆಗಳ ವಿವರಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್‍ನ ‘ಯುಜಿ ನೀಟ್ 2018’ ಲಿಂಕ್‍ನಲ್ಲೇ ಪ್ರಕಟವಾಗುತ್ತಿದ್ದು, ಇಚ್ಛೆ ನಮೂದಿಸಲು ಅದೇ ಲಿಂಕ್‍ನ ನೋಟಿಫಿಕೇಶನ್ ಪುಟವನ್ನು ತೆರೆಯಬೇಕಾಗಿದೆ. ಮೆಡಿಕಲ್ ಮತ್ತು ಡೆಂಟಲ್ ಕೋರ್ಸ್‌ಗಳ ಸೀಟ್ ಮ್ಯಾಟ್ರಿಕ್ಸ್ ಪ್ರಕಟಗೊಂಡಿದ್ದು, ಸರ್ಕಾರಿ ಕೋಟಾ, ಹೈದರಾಬಾದ್ ಕರ್ನಾಟಕ ಕೋಟಾ, ವಿಶೇಷ ಸರ್ಕಾರಿ ಕೋಟಾ, ಖಾಸಗಿ,ಮ್ಯಾನೇಜ್‍ಮೆಂಟ್ ಕೋಟಾ, ಎನ್‌ಆರ್‌ಐ ಕೋಟಾ ಮತ್ತು ಇತರ ಕೋಟಾಗಳಲ್ಲಿ ಲಭ್ಯವಿರುವ ಸೀಟುಗಳು ಹಾಗೂ ಎಲ್ಲ ವಿಭಾಗಗಳಲ್ಲಿ ಲಭ್ಯವಿರುವ ವಿವಿಧ ಪ್ರವರ್ಗಗಳ ಮೀಸಲಾತಿ ಸೀಟುಗಳ ವಿವರಗಳನ್ನು ನೀಡಲಾಗಿದೆ.

ಕಟ್ ಆಫ್ ರ‍್ಯಾಂಕ್ (ಕೊನೆಯ ಕನಿಷ್ಠ ರ‍್ಯಾಂಕ್)2017-18ನೇ ವರ್ಷದ ಮತ್ತು ಅದರ ಹಿಂದಿನ ವರ್ಷಗಳ ಎಲ್ಲಾ ಡಿಸಿಪ್ಲಿನ್‍ಗಳಿಗೆ ಸಂಬಂಧಿಸಿದ ಕಾಲೇಜುವಾರು, ಕೋರ್ಸುವಾರು ಮತ್ತು ಪ್ರವರ್ಗವಾರು ಕಟ್‍ಆಫ್ ರ‍್ಯಾಂಕ್‌ಗಳನ್ನು ಪ್ರಾಧಿಕಾರದ ವೆಬ್‍ಸೈಟ್‍ನ ಮುಖಪುಟದಲ್ಲಿರುವ ಕಟ್‍ಆಫ್ ರ‍್ಯಾಂಕ್ ಲಿಂಕ್‍ನ್ನು ಕ್ಲಿಕ್ಕಿಸಿ ಪಡೆಯಬಹುದಾಗಿದೆ. ಮೆಡಿಕಲ್ ಮತ್ತು ಡೆಂಟಲ್ ಕೋರ್ಸ್‌ಗಳ ಎಲ್ಲ ವಿಭಾಗಗಳ ಪ್ರತ್ಯೇಕ ಕಟ್‍ಆಫ್ ರ‍್ಯಾಂಕ್‌ ವಿವರಗಳು ‘ಯುಜಿ ನೀಟ್ 2018’ ಲಿಂಕ್‍ ತೆರೆದಾಗ ಕಾಣಿಸುವ ‘ಯುಜಿ ಆರ್ಚಿವ್’ ಪುಟದಲ್ಲಿವೆ.

ಸೂಚನೆ: ಸೀಟ್ ಮ್ಯಾಟ್ರಿಕ್ಸ್ ಮತ್ತು ಕಟ್‍ಆಫ್ ರ‍್ಯಾಂಕ್‌ಗಳನ್ನು ವಿದ್ಯಾರ್ಥಿಗಳು, ಪಾಲಕರ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಅದರ ಇಚ್ಛೆಗಳನ್ನು ನಮೂದಿಸುವ ಆದ್ಯತೆಗಳಿಗೆ ಮಾನದಂಡವನ್ನಾಗಿ ಪರಿಗಣಿಸಬಾರದು. ಸೀಟು ಸಿಗುವ ಸಾಧ್ಯತೆಗಳು ಕಡಿಮೆಯಿದ್ದರೂ ಯಾವುದೇ ಕಾಲೇಜು/ಕೋರ್ಸ್‌ಗೆ ಇಚ್ಛೆ ನಮೂದಿಸುವುದರಿಂದ ಯಾವುದೇ ಸಮಸ್ಯೆಯಾಗದು. (ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.