ADVERTISEMENT

ಹಾಡು, ಕುಣಿತಕ್ಕೆ ನಲಿವ ಟೆಂಟ್‌ಶಾಲೆಯ ಮಕ್ಕಳು

ಕಲಿಕೆಯಿಂದ ವಂಚಿತರಾಗದ ವಿವಿಧ ಆನೆಶಿಬಿರಗಳ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 10:38 IST
Last Updated 19 ಸೆಪ್ಟೆಂಬರ್ 2019, 10:38 IST
ಅರಮನೆ ಆವರಣದಲ್ಲಿರುವ ಟೆಂಟ್‌ ಶಾಲೆಯಲ್ಲಿ ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗೆ ಹಾಡು ಕಲಿಸಿದ ವೀಣಾಶ್ರೀ, ನಾಗೇಂದ್ರರಾವ್
ಅರಮನೆ ಆವರಣದಲ್ಲಿರುವ ಟೆಂಟ್‌ ಶಾಲೆಯಲ್ಲಿ ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗೆ ಹಾಡು ಕಲಿಸಿದ ವೀಣಾಶ್ರೀ, ನಾಗೇಂದ್ರರಾವ್   

ಮೈಸೂರು: ‘ಕೋಲು ಮಾತಾಡತಾವೆಬೆಳ್ಳಿಯ ಗೆಜ್ಜೆ ಮಾತಾಡತಾವೆ...’

ನಗರದ ಅರಮನೆ ಆವರಣದಲ್ಲಿರುವ ಟೆಂಟ್ ಶಾಲೆಯಿಂದ ನಿತ್ಯ ಹೊಮ್ಮುವ ಹಾಡಿದು. ಇದರೊಂದಿಗೆ ‘ಚಿನ್ನರಿ ಚಿನ್ನರಿ ಚಿನ್ನಾರಿ, ನನ್ನ ಮುದ್ದು ಬಂಗಾರಿ’ ಮೊದಲಾದ ಹಾಡುಗಳನ್ನು ಮಕ್ಕಳು ಒಕ್ಕೊರಲಿನಿಂದ ಹಾಡುವ ಹಾಡಿಗೆ ಹತ್ತಿರದಲ್ಲಿಯೇ ಮೇಯುತ್ತಿದ್ದ ಗಜಪಡೆಯೂ ತಲೆದೂಗುತ್ತಿತ್ತು.

ಆನೆಗಳ ಮಾವುತರು ಹಾಗೂ ಕಾವಾಡಿಗಳ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಟೆಂಟ್‌ ಶಾಲೆ ಶುರುವಾಗಿದ್ದು, 1ರಿಂದ 8ನೇ ತರಗತಿಯ 28 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ದುಬಾರೆ, ಬಳ್ಳೆ, ತಿತಿಮತಿ ಆನೆಶಿಬಿರಗಳಿಂದ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.

ADVERTISEMENT

ಇವರಿಗೆ ಕುವೆಂಪುನಗರದ ಕುವೆಂಪು ಪ್ರೌಢಶಾಲೆಯ ನಾಟಕ ಹಾಗೂ ಸಂಗೀತ ಶಿಕ್ಷಕ ನಾಗೇಂದ್ರಕುಮಾರ್‌ ಹಾಡು ಹೇಳಿಕೊಡುತ್ತಿದ್ದಾರೆ. ನಿತ್ಯ ಬೆಳಿಗ್ಗೆ ಪ್ರಾರ್ಥನೆಗೀತೆ, ರಾಷ್ಟ್ರಗೀತೆ, ಜಾನಪದ ಗೀತೆಗಳನ್ನು ಕಲಿಯುವ ಮಕ್ಕಳು ಚೆಂದಾಗಿ ಹಾಡುತ್ತಿದ್ದಾರೆ. ಇದರೊಂದಿಗೆ ದಕ್ಷಿಣ ವಲಯ ಬಿಆರ್‌ಸಿ ವೀಣಾಶ್ರೀ ಅವರು ನೃತ್ಯ ಹೇಳಿಕೊಡುತ್ತಿದ್ದಾರೆ.

ಹೀಗೆ ಬೆಳಿಗ್ಗೆ ಹಾಡು, ನೃತ್ಯ ಕಲಿಯುವ ಚಿಣ್ಣರು, ತಮಗಿಷ್ಟವಾದ ಚಿತ್ರಗಳನ್ನೂ ಬಿಡಿಸುತ್ತಾರೆ. ಹಾಗೆ ಅವರು ಬಿಡಿಸಿದ ಚಿತ್ರಗಳನ್ನು ಶಾಲೆಯಲ್ಲಿ ತೂಗು ಹಾಕಲಾಗಿದೆ. ಇದರೊಂದಿಗೆ ಅವರು ವಾಸವಾಗಿರುವ ಆನೆಶಿಬಿರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕಲಿಯುವ ಪಠ್ಯವನ್ನೂ ಕಲಿಯುತ್ತಿದ್ದಾರೆ. ಕನ್ನಡ ವರ್ಣಮಾಲೆಯಿಂದ ಹಿಡಿದು ಗಣಿತಾಕ್ಷರ, ಕನ್ನಡದ ಪ್ರಾದೇಶಿಕ ಭಾಷಾ ಪ್ರಭೇದಗಳನ್ನೂ ಅರಿಯುತ್ತಿದ್ದಾರೆ.

‘ಅವರೊಂದಿಗೆ ಕಾಲ ಕಳೆಯಲು, ಜನ್ಮದಿನ ಆಚರಿಸಲು ಗಣ್ಯರು ನಿತ್ಯ ಬರುತ್ತಾರೆ. ಹೀಗೆ ಅವರಿಗೆ ಕಾಡಿನ ಹಾಗೂ ನಾಡಿನ ಒಡನಾಟ ಸಿಕ್ಕ ಹಾಗೂ ಆಗುತ್ತದೆ. ಹೀಗಾಗಿ ಅವರಿಗೆ ‘ಮೋಹಿನಿ ಭಸ್ಮಾಸುರ’ ನಾಟಕದ ‘ನೋಡೋಣ ವನಸಿರಿ ನೋಡೋಣ, ಹಾಡೋಣ ನಾವು ಹಾಡೋಣ’ ಎನ್ನುವ ಹಾಡನ್ನೂ ಕಲಿಸಿರುವೆ’ ಎನ್ನುತ್ತಾರೆ ಶಿಕ್ಷಕ ನಾಗೇಂದ್ರಕುಮಾರ್.

ಟೆಂಟ್ ಗ್ರಂಥಾಲಯ: ಟೆಂಟ್‌ಶಾಲೆಯ ಪಕ್ಕದಲ್ಲಿಯೇ ಟೆಂಟ್‌ ಗ್ರಂಥಾಲಯವಿದೆ. ನಗರ ಕೇಂದ್ರ ಗ್ರಂಥಾಲಯ ಆರಂಭಿಸಿರುವ ಈ ಗ್ರಂಥಾಲಯದಲ್ಲಿ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳೊಂದಿಗೆ ರಾಮಾಯಣ, ಮಹಾಭಾರತದ ಕಥೆ ಪುಸ್ತಕ, ಮಹಾತ್ಮ ಗಾಂಧಿ, ಬುದ್ಧ ಮೊದಲಾದವರ ಕುರಿತ ಪುಸ್ತಕಗಳೂ ಇವೆ.

‘ನಿತ್ಯ ಕಾವಾಡಿ ಹಾಗೂ ಮಾವುತರು, ಅವರ ಮಕ್ಕಳು ಭೇಟಿ ನೀಡಿ ಓದುತ್ತಾರೆ. ನಿಧಾನವಾಗಿ ಅವರಲ್ಲಿ ಓದುವ ಅಭಿರುಚಿ ಹೆಚ್ಚುತ್ತಿದೆ’ ಎನ್ನುತ್ತಾರೆ ಗ್ರಂಥಾಲಯ ಇಲಾಖೆ ಸಹವರ್ತಿ ಶಿವಲಿಂಗ.

**
ಆನೆಶಿಬಿರಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಕಾವಾಡಿ ಹಾಗೂ ಮಾವುತರ ಮಕ್ಕಳು ಓದುವುದರಿಂದ ಇಲ್ಲಿನ ಟೆಂಟ್‌ಶಾಲೆಯಲ್ಲಿ ಕಲಿಕೆ ಮುಂದುವರೆಸುತ್ತಾರೆ. ಇದರಿಂದ ಅವರಿಗೆ ಶಾಲೆ ತಪ್ಪಿದ ಹಾಗಾಗುವುದಿಲ್ಲ.
–ವೀಣಾಶ್ರೀ, ಬಿಆರ್‌ಸಿ, ದಕ್ಷಿಣ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.