ADVERTISEMENT

ವಿಜಯಪುರ: ಕೈಬೀಸಿ ಕರೆಯುವ ‘ನಮ್ಮೂರ ಶಾಲೆ’

ಮಹಾಂತೇಶ ವೀ.ನೂಲಿನವರ
Published 12 ಜುಲೈ 2019, 19:30 IST
Last Updated 12 ಜುಲೈ 2019, 19:30 IST
ನಾಲತವಾಡ ಹೋಬಳಿಯ ಲೊಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಬೋಧನೆಯಲ್ಲಿ ತೊಡಗಿರುವುದು
ನಾಲತವಾಡ ಹೋಬಳಿಯ ಲೊಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಬೋಧನೆಯಲ್ಲಿ ತೊಡಗಿರುವುದು   

ನಾಲತವಾಡ: ಸುಸಜ್ಜಿತ ಕಟ್ಟಡ, ವಿಶಾಲವಾದ ಉದ್ಯಾನ, ಸುತ್ತಲೂ ಔಷಧಿ ಸಸ್ಯಗಳು, ಆಟದ ಮೈದಾನ, ಗ್ರಂಥಾಲಯ, ಶೌಚಾಲಯ ಸೌಲಭ್ಯ.. ಹೀಗೆ, ಎಲ್ಲ ಮೂಲ ಸೌಲಭ್ಯಗಳನ್ನೂ ಹೊಂದಿರುವ ಲೊಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯುು ನಾಲತವಾಡ ಹೋಬಳಿಯಲ್ಲೇ ಮಾದರಿ ಶಾಲೆಯಾಗಿದೆ.

ಶಾಲೆ ಆವರಣಕ್ಕೆ ಕಾಲಿಡುತ್ತಿದ್ದಂತೆ ತೆಂಗು, ತೇಗ, ಹೊನ್ನೆ, ಹೊಂಗೆ, ನೇರಳೆ, ಅಶೋಕ ಮರಗಳು ಕೈಬೀಸಿ ಕರೆದಂತೆ ಭಾಸವಾಗುತ್ತದೆ. ನೂರಕ್ಕೂ ಹೆಚ್ಚು ಮರಗಳು ಶಾಲೆಯನ್ನು ಸುತ್ತುವರಿದಿದ್ದು, ವನದೊಳಗೊಂದು ಶಾಲೆ ಎಂಬಂತಿದೆ.

ನಿಂಬೆ, ದೊಡ್ಡಪತ್ರೆ, ತುಳಸಿ, ಕರಿಬೇವು, ದಾಸವಾಳ, ಗುಲಾಬಿ, ಆಕಾಶಮಲ್ಲಿಗೆ ಮತ್ತು ಹೂವಿನ ಗಿಡಗಳು ಶಾಲಾ ಆವರಣವನ್ನು ಹಸಿರಾಗಿಸಿವೆ. ತಂಪಾಗಿಸಿವೆ. ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪರಿಶ್ರಮದಿಂದ ಈ ಸುಂದರ ವಾತಾವರಣ ನಿರ್ಮಾಣವಾಗಲು ಸಾಧ್ಯವಾಗಿದೆ.

ADVERTISEMENT

ಈ ಶಾಲೆ ಅಂದಾಜು ಒಂದು ಎಕರೆ ವಿಸ್ತೀರ್ಣದಲ್ಲಿದೆ. ವಿದ್ಯಾರ್ಥಿಗಳು ವಿಷಾಲವಾದ ಮೈದಾನದಲ್ಲಿ ಕ್ರೀಡಾಭ್ಯಾಸ ನಡೆಸುತ್ತಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಆಶ್ರಯದಲ್ಲಿ ಈಚೆಗೆ ಜರುಗಿದ ವಲಯ ಮಟ್ಟದ ಭಾಷಾ ಮೇಳದಲ್ಲಿ ಹಿಂದಿ, ಇಂಗ್ಲಿಷ್, ಕನ್ನಡ ಭಾಷೆಯಲ್ಲಿ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಮಕ್ಕಳು ಮೇಳದಲ್ಲಿ ತಮ್ಮ ಭಾಷಾ ಪ್ರೌಢಿಮೆ ಮೆರೆದಿದ್ದು, ಅರಳು ಹುರಿದಂತೆ ಮೂರೂ ಭಾಷೆಗಳಲ್ಲಿ ಮಾತನಾಡಿರುವುದುಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಶಂಸೆಗೆ; ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರತ್ಯೇಕ ಶೌಚಾಲಯ, ಬಿಸಿಯೂಟ ತಯಾರಿಕೆಗೆ ಅಡುಗೆ ಮನೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಇಲ್ಲಿರುವ ಗ್ರಂಥಾಲಯವು ಮಕ್ಕಳ ವಿಶೇಷ ಅಧ್ಯಯನಕ್ಕೆ ಅನುಕೂಲಕರವಾಗಿದೆ. ಜತೆಗೆ ಪ್ರಯೋಗಾಲಯ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಅವಶ್ಯಕತೆ ಇದೆ ಎನ್ನುತ್ತಾರೆ ಎಸ್‌ಡಿಎಂಸಿಯವರು.

ಇಲ್ಲಿ ಸುಮಾರು 200 ಮಕ್ಕಳು ಓದುತ್ತಿದ್ದಾರೆ. ಶಾಲೆಯ ಪ್ರತಿಭಾವಂತ ಮಕ್ಕಳು ಹಾಗೂ ಶಿಕ್ಷಕರು ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

‘ಈ ಶಾಲೆಯಲ್ಲಿ ಓದಲು ತುಂಬ ಸಂತಸವಾಗುತ್ತದೆ. ಖುಷಿಯಿಂದಲೇ ಶಾಲೆಯಲ್ಲಿ ಕಲಿಯುತ್ತಿದ್ದೇವೆ’ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.