
ಮಗ 7ನೇ ತರಗತಿಯಲ್ಲಿದ್ದಾನೆ. ಅವನಿಗೆ ಶಾಲಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬರುವುದಿಲ್ಲ. ಕತೆ ಪುಸ್ತಕಗಳನ್ನು ಏಕಾಗ್ರತೆಯಿಂದ ಓದುತ್ತಾನಾದರೂ ಪಠ್ಯಪುಸ್ತಕ ಹಿಡಿದು ಕೂತರೆ ಚಂಚಲನಾಗುತ್ತಾನೆ (ಪಾಠ ಓದಬೇಕೆಂಬ ಕಾರಣಕ್ಕೆ ಕತೆ ಪುಸ್ತಕ ಹಿಡಿಯುವನೆಂಬ ಅನುಮಾನವೂ ಒಮ್ಮೊಮ್ಮೆ ಮೂಡುತ್ತದೆ). ಶಿಕ್ಷಕಿಯರು ಅವನಲ್ಲಿ ಸುಧಾರಿಸುವ ಸಾಮರ್ಥ್ಯವಿದೆ ಅನ್ನುತ್ತಿರುತ್ತಾರೆ. ಕಡಿಮೆ ಅಂಕಗಳೆಂದು ನಾನು ನಿಂದಿಸುವುದಿಲ್ಲ ಅಥವಾ ಒತ್ತಡ ಹೇರುವುದಿಲ್ಲ. ಸಕಾರಾತ್ಮಕವಾಗಿ ಉತ್ತೇಜಿಸುತ್ತಿರುತ್ತೇನೆ. ಓದಿನ ಮಹತ್ವದ ಕುರಿತಾದ ಕತೆ, ಆದರ್ಶಪುರುಷರ ಉದಾಹರಣೆಗಳನ್ನು ಹೇಳುತ್ತಿರುತ್ತೇನೆ. ಆದರೂ ಬದಲಾವಣೆ ಕಾಣುತ್ತಿಲ್ಲ. ಉಳಿದ ವಿಷಯಗಳಲ್ಲಿ ಚುರುಕಾಗಿದ್ದಾನೆ. ಬ್ಯಾಡ್ಮಿಂಟನ್, ಕೊಳಲಿನ ತರಗತಿಗಳಿಗೆ ಹೋಗುತ್ತಿದ್ದಾನೆ. ಈಗಿನ ಸ್ಪರ್ಧಾತ್ಮಕ ಜಗತ್ತಿನ ಶಿಕ್ಷಣ ಪದ್ಧತಿಯಲ್ಲಿ ಅಂಕಗಳೇ ಮಾನದಂಡ ಆಗಿರುವುದರಿಂದ ಅವನ ಆಲಸ್ಯ ಹಾಗೂ ಚಂಚಲತೆಯನ್ನು ಹೋಗಲಾಡಿಸಿ ಏಕಾಗ್ರತೆಯಿಂದ ಓದುವಂತೆ ಮಾಡಲು ನಾನೇನು ಮಾಡಬಹುದು?
– ಶ್ರೀರಂಜನಿ, ಬೆಂಗಳೂರು
ಉ: ನಿಮ್ಮ ಮಗನ ಅನಾಸಕ್ತಿಯ ಬಗ್ಗೆ ನೀವು ಅವನನ್ನು ಬೈಯದೇ ಅವಮಾನಿಸದೇ, ಶಿಕ್ಷಿಸದೇ ಇರುವುದು ನಿಜಕ್ಕೂ ಒಳ್ಳೆಯ ಸಂಗತಿ. ನಮ್ಮ ಮಕ್ಕಳು ಹೇಗಿದ್ದರೂ ನಮ್ಮ ಮಕ್ಕಳು. ನಮಗಾಗಿ ನಾವು ಅವರನ್ನು ಕರೆತಂದಿರುವಾಗ, ಅವರನ್ನು ಸಹಿಸಿಕೊಳ್ಳುವುದು ಹಾಗೂ ಅವರ ವ್ಯಕ್ತಿತ್ವದ ವಿಶೇಷಗಳನ್ನು ಗಮನಿಸಿ, ಅದನ್ನು ಪ್ರೊತ್ಸಾಹಿಸುವುದು ಪಾಲಕರ ಕರ್ತವ್ಯ. ಅದರ ಬಗ್ಗೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಇನ್ನು, ಅವನ ಆಸಕ್ತಿಯ ಕ್ಷೇತ್ರಗಳಲ್ಲಿ ಅವನ ಸಾಧನೆ ಹೇಗಿದೆ? ಅವನಿಗೆ ಅದರಲ್ಲಿ ಮುಂದುವರಿಯುವ ಆಸಕ್ತಿ ಇದೆಯೇ? ನಿಮಗೂ ಅವನ ಕಲಿಕೆಯ ಬಗ್ಗೆ ಸಮಾಧಾನ ಇದೆಯೇ? ಇನ್ನೇನನ್ನಾದರೂ ಕಲಿಯುವ ಬಗ್ಗೆ ಆಸಕ್ತಿ ತೋರುತ್ತಿದ್ದಾನೆಯೇ?
ಶಾಲಾಪಠ್ಯದಲ್ಲಿ ಅವನಿಗೆ ಆಸಕ್ತಿ ಕಡಿಮೆಯಾಗುವುದಕ್ಕೆ ಅನೇಕ ಕಾರಣಗಳಿರಬಹುದು. ಶಾಲೆಯ ಪಠ್ಯಕ್ರಮ, ಕಲಿಸುವ ವಿಧಾನ ಅವನಿಗೆ ಇಷ್ಟವಾಗದೇ ಇರಬಹುದು, ವಿಷಯ ಅರ್ಥವಾಗಿಲ್ಲದೇ ಇರಬಹುದು, ಪಠ್ಯಕ್ಕೆ ಸಂಬಂಧಿಸಿದ ಕೆಲಸಗಳ ಭಾರ ಹೆಚ್ಚಾಗಿರಬಹುದು. ಗೊಂದಲವಾಗಿರಬಹುದು. ಅವನಿಗೆ ಗೆಳೆಯರಿಂದಾಗಲೀ ಇತರರಿಂದಾಗಲೀ ಅವಮಾನ ಆಗಿರಬಹುದು. ಶಿಕ್ಷಕರು, ಪಾಲಕರು ಶಿಕ್ಷಿಸಿರಬಹುದು. ಸೋಷಿಯಲ್ ಮೀಡಿಯಾ, ಡಿಜಿಟಲ್ ಆಟ, ರೀಲ್ಸ್‌ಗಳ ಕಡೆಗೆ ಹೆಚ್ಚು ಆಸಕ್ತನಾಗಿರಬಹುದು. ಕೆಲವರಿಗೆ ಎಳವೆಯಲ್ಲಿಯೇ ಬದುಕಿನ ಬಗ್ಗೆ ಗಾಂಭೀರ್ಯ ಬರುತ್ತದೆ. ಇನ್ನು ಕೆಲವರಿಗೆ ವಯಸ್ಸಾದರೂ ಬರುವುದಿಲ್ಲ. ಇದು ಹೀಗೆಯೇ ಅಂತೇನೂ ಹೇಳಲಿಕ್ಕಾಗುವುದಿಲ್ಲ. ಇಲ್ಲಿ ಯಾರೂ ಯಾರಂತೆಯೂ ಇಲ್ಲ. ಎಲ್ಲರೂ ಭಿನ್ನವಾಗಿ, ವಿಶೇಷವಾಗಿ ಇದ್ದಾರೆ. ಅವರವರ ಬದುಕನ್ನು ಅವರವರದ್ದೇ ರೀತಿಯಲ್ಲಿ ಬದುಕಲಿಕ್ಕೆ ಹುಟ್ಟಿದ್ದಾರೆ.
ಇರಲಿ, ಮಗನಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ನೀವಾಗಲೀ ಅವನಾಗಲೀ ಚಿಂತಿತರಾಗಬೇಕಾಗಿಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಪ್ರತಿಭೆ ಇರುತ್ತದೆ. ಸಚಿನ್ ತೆಂಡೂಲ್ಕರ್ ಅದ್ಭುತ ಕ್ರಿಕೆಟ್ ಆಟಗಾರನಾಗಿ ಜಗತ್ರಪಸಿದ್ಧರಾಗಿದ್ದಾರೆ. ಅದೇ ಆತ ವೈದ್ಯನಾಗಿಯೋ ನಟನಾಗಿಯೋ ಇನ್ನೇನಾಗಿಯೋ ಪ್ರಸಿದ್ಧರಾಗುವ ಸಾಧ್ಯತೆ ಇರಲಿಲ್ಲವೇನೊ. ಹಾಗೆಯೇ ಲತಾ ಮಂಗೇಶ್ಕರ್, ಅಮಿತಾಭ್ ಬಚ್ಚನ್, ರಜನಿಕಾಂತ್, ಅಬ್ದುಲ್ ಕಲಾಂ, ಸಿ.ಎನ್.ಆರ್. ರಾವ್, ರೊನಾಲ್ಡೊ, ಸ್ಟೀವ್ ಜಾಬ್ಸ್, ಜಾಕಿರ್ ಹುಸೇನ್, ವಾಜಪೇಯಿ, ಯಶ್, ಪಿ.ವಿ.ಸಿಂಧು… ಹೀಗೆಯೇ ತಕ್ಷಣಕ್ಕೆ ನೆನಪಾಗುವ ಯಾವುದೇ ಪ್ರಖ್ಯಾತರ ಉದಾಹರಣೆಯನ್ನು ತೆಗೆದುಕೊಂಡರೂ, ಅವರು ಏನಾಗಿ ಪ್ರಸಿದ್ಧರಾಗಿದ್ದಾರೋ ಆಯಾ ಕ್ಷೇತ್ರದಲ್ಲಿ ಅವರು ಅಪರಿಮಿತವಾದದ್ದನ್ನು ಸಾಧಿಸಿದ್ದಾರೆ. ಅವರಲ್ಲಿ ಬಹುತೇಕರ ಶೈಕ್ಷಣಿಕ ಅಂಕಪಟ್ಟಿ ಆಕರ್ಷಕವಾಗಿ ಇಲ್ಲದೇ ಇರಬಹುದು. ಆದರೇನಂತೆ ತಮ್ಮ ಜೀವನವನ್ನು ಅದ್ಭುತವಾಗಿ ನಿರ್ಮಿಸಿಕೊಂಡಿದ್ದಾರೆ. ಶಾಲಾ ಪರೀಕ್ಷೆಯ ಅಂಕಗಳು ಮಾತ್ರ ಒಬ್ಬ ವ್ಯಕ್ತಿಯ ಬದುಕಿನ ಯಶಸ್ಸನ್ನು ನಿರ್ಧರಿಸುವುದಿಲ್ಲ. ಅದರ ಹೊರತಾಗಿಯೂ ಬದುಕು ಬಹಳ ವಿಶಾಲವಾಗಿದೆ. ಸೊಗಸಾಗಿದೆ.
ಹಾಗೆಯೇ, ನಿಮ್ಮ ಮಗನಲ್ಲಿರುವ ವಿಶೇಷ ಪ್ರತಿಭೆಯನ್ನು ಪತ್ತೆ ಮಾಡಿ. ಅವನ ಆಸಕ್ತಿಯನ್ನು ಗಮನಿಸಿ. ಅದನ್ನು ಮನಃಪೂರ್ತಿ ಪ್ರೋತ್ಸಾಹಿಸಿ. ಮಕ್ಕಳು ಹೇಗಿದ್ದಾರೋ ಹಾಗೆಯೇ ಪ್ರೀತಿಸಿ. ಅವರನ್ನು ನಿಮ್ಮ ಇಚ್ಛೆಯಂತೆ ಬದಲಾಯಿಸಲು ಪ್ರಯತ್ನಿಸಬೇಡಿ. ಅಂಥ ನಿಮ್ಮ ಪ್ರಯತ್ನದಿಂದ ಇಬ್ಬರಿಗೂ ಕಷ್ಟ, ನಷ್ಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.