ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ: ಅವಸರದ ಜಾರಿ ಸರಿಯಲ್ಲ

ಪ್ರಜಾವಾಣಿ ವಿಶೇಷ
Published 19 ಆಗಸ್ಟ್ 2021, 21:45 IST
Last Updated 19 ಆಗಸ್ಟ್ 2021, 21:45 IST
   

‘ರಾಷ್ಟ್ರೀಯ ಶಿಕ್ಷಣ ನೀತಿ: ಕನ್ನಡಕ್ಕೆ ಕುತ್ತು ತರಲಿದೆಯೇ?’ ಕುರಿತು ‘ಪ್ರಜಾವಾಣಿ’ ಗುರುವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಾಯಕರ ನಡುವೆ ಬಿರುಸಿನ ವಾಗ್ಯುದ್ಧ ನಡೆಯಿತು. ಎನ್‌ಇಪಿ ಜಾರಿಯಿಂದ ಶಿಕ್ಷಣವು ಪೂರ್ಣ ಖಾಸಗೀಕರಣದತ್ತ ಜಾರುವ ಸಂಭವವಿದೆ. ಇದರಿಂದ ಕನ್ನಡಕ್ಕೆ ಕುತ್ತು ಬರಲೂಬಹುದು. ಸಂಪನ್ಮೂಲದ ಬೆಂಬಲವಿಲ್ಲದೆ ಸರ್ಕಾರ ಅವಸರದಲ್ಲಿ ಹೊಸ ನೀತಿ ಜಾರಿಗೆ ತರುವುದು ಸರಿಯಲ್ಲ ಎಂದು ಬಹುಮತದ ಅಭಿಪ್ರಾಯ ವ್ಯಕ್ತವಾಯಿತು.

ಖಾಸಗೀಕರಣ, ಕೇಸರೀಕರಣದ ಅಪಾಯ

ಎನ್‌ಇಪಿ ಕನ್ನಡಕ್ಕೆ ಕುತ್ತು ತರುತ್ತದೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಮಾತೃಭಾಷೆಯನ್ನು ಶಿಕ್ಷಣದ ಮಾಧ್ಯಮವನ್ನಾಗಿಸಿದರೆ ಮಾತ್ರ ಎನ್‌ಇಪಿ ವಾಸ್ತವ ಪ್ರಪಂಚಕ್ಕೆ ಬರುತ್ತದೆ. ಅಲ್ಲದೆ ಕೇಂದ್ರ, ರಾಜ್ಯ ಪಠ್ಯಕ್ರಮಗಳು ಏಕರೂಪವಾದಾಗ ತಾರತಮ್ಯ ನಿವಾರಣೆಯಾಗುತ್ತದೆ. ಬಹುಶಿಸ್ತೀಯ ವ್ಯವಸ್ಥೆ ಜಾರಿಯ ಬಗ್ಗೆ ಈ ನೀತಿ ಹೇಳುತ್ತದೆ. ಆದರೆ, ಇದರ ಅಳವಡಿಕೆಗೆ ಪೂರಕ ವ್ಯವಸ್ಥೆ ರಾಜ್ಯದಲ್ಲಿದೆಯಾ? ಅಂತಿಮವಾಗಿ ಸರ್ಕಾರ ತನ್ನ ಬಳಿ ಹಣವಿಲ್ಲ ಎಂದು ಖಾಸಗಿಯವರ ಸಹಭಾಗಿತ್ವ ಬಯಸುತ್ತದೆ. ಕೇಂದ್ರ ಸರ್ಕಾರ ಇತಿಹಾಸ ಮರು ಸಂಶೋಧನಾ ಮಂಡಳಿಯನ್ನು ರಚಿಸಿದೆ. ಇದರಿಂದ ಇತಿಹಾಸ ಪಠ್ಯ ರಾಷ್ಟ್ರೀಕರಣವಾಗುವ ಆತಂಕವಿದೆ. ಹಾಗಾಗಿ ಖಾಸಗೀಕರಣದ ಜತೆಗೆ ಕೇಸರೀಕರಣದ ಅಪಾಯವೂ ಇದೆ.

– ವೈ.ಎಸ್‌.ವಿ.ದತ್ತ,ಹಿರಿಯ ಮುಖಂಡ, ಜೆಡಿಎಸ್‌

*******

ಭಯ, ಆತಂಕ ಬೇಡ

ADVERTISEMENT

ಕನ್ನಡವೂ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಎನ್‌ಇಪಿ ಪೂರಕವಾಗಿದೆ. ಶಿಕ್ಷಕರ ನೇಮಕ, ಮೂಲ ಸೌಕರ್ಯ ಕಲ್ಪಿಸುವುದಕ್ಕೆ ಇದು ಆದ್ಯತೆ ನೀಡುತ್ತದೆ. ಇಡೀ ದೇಶಕ್ಕೆ ಮಾದರಿ ಶಿಕ್ಷಣ ವ್ಯವಸ್ಥೆ ಜಾರಿಯಾಗುತ್ತದೆ. ಇತರ ದುಂದು ವೆಚ್ಚಗಳನ್ನು ಕಡಿತ ಮಾಡಿ, ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಒತ್ತು ನೀಡುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಆಶಾವಾದಿಗಳಾಗಿರಬೇಕು. ಎನ್‌ಇಪಿ ಸಂಬಂಧ ಯಾವುದೇ ಆತಂಕ, ಭಯ, ಅಂಜಿಕೆ ಬೇಡ.

–ಅನ್ವರ್‌ ಮಾಣಿಪ್ಪಾಡಿ,ಸಹ ವಕ್ತಾರ, ಬಿಜೆಪಿ ರಾಜ್ಯ ಘಟಕ

*******

ಕಾರ್ಪೊರೇಟೈಸೇಷನ್‌ ವಾಸನೆಯಿದೆ

ಎನ್‌ಇಪಿಯಲ್ಲಿ ‘ಕಾರ್ಪೊರೇಟೈಸೇಷನ್‌’ ವಾಸನೆ ಇದೆ. ಇದು ಗ್ರಾಮೀಣ, ವಲಸಿಗ ಮತ್ತು ಬಡ ಮಕ್ಕಳನ್ನು ಗಮನದಲ್ಲಿಟ್ಟುಕೊಂಡಿಲ್ಲ. ದೇಶದ ಶಾಸಕಾಂಗ ವ್ಯವಸ್ಥೆಯಲ್ಲಿ ಚರ್ಚೆಯೇ ಆಗದ ಎನ್‌ಇಪಿ ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕ. ಅದರ ಅವಸರದ ಜಾರಿ ಸರಿಯಲ್ಲ.

ಎನ್‌ಇಪಿ ಮೂಲಕ ಜಾರಿಯಾಗಲಿರುವ ಕಾರ್ಪೊರೇಟ್‌ ಶಿಕ್ಷಣ ವ್ಯವಸ್ಥೆಯು ತಾರತಮ್ಯವನ್ನು ಹೆಚ್ಚಿಸುವುದರ ಜತೆಗೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕೇಂದ್ರೀಕೃತ ವ್ಯವಸ್ಥೆಯನ್ನು ತರುವ ಅಪಾಯವಿದೆ. ಇದು ದೇಶಕ್ಕೆ ಒಳಿತಲ್ಲ.

–ಪ್ರೊ.ಕೆ.ಇ.ರಾಧಾಕೃಷ್ಣ,ಮಾಜಿ ಉಪಾಧ್ಯಕ್ಷ, ಕೆಪಿಸಿಸಿ

*******

ಸುಪ್ರಿಂಕೋರ್ಟ್‌ ತೀರ್ಪಿಗೂ ಎನ್‌ಇಪಿಗೂ ತಾಳಮೇಳವಿಲ್ಲ

ಐದು ಅಥವಾ ಎಂಟನೇ ತರಗತಿವರೆಗೆ ಶಿಕ್ಷಣದ ಮಾಧ್ಯಮ ಮನೆ/ಪ್ರಾದೇಶಿಕ/ಮಾತೃ/ಸ್ಥಳೀಯ ಭಾಷೆ ಆಗಿರಬೇಕು ಎಂದು ಎನ್‌ಇಪಿ ಹೇಳುತ್ತದೆ. ಆದರೆ ಕನ್ನಡವನ್ನು ಕಲಿಕಾ ಭಾಷೆಯನ್ನಾಗಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಈ ಹಿಂದೆ ಸುಪ್ರೀಂಕೋರ್ಟ್‌ ರದ್ದುಗೊಳಿಸಿ, ಭಾಷಾ ಮಾಧ್ಯಮದ ಆಯ್ಕೆಯ ವಿಷಯವು ಮಕ್ಕಳು, ಪೋಷಕರಿಗೆ ಸೇರಿದ್ದು ಎಂದು ಹೇಳಿದೆ. ಅಂದರೆ ಸುಪ್ರಿಂಕೋರ್ಟ್‌ ತೀರ್ಪಿಗೂ ಎನ್‌ಇಪಿಗೂ ತಾಳಮೇಳ ಇಲ್ಲದಂತಾಗಿದೆ. ಹೀಗಿರುವಾಗ ಅದರ ಅನುಷ್ಠಾನ ಹೇಗೆ ಸಾಧ್ಯ. ಎನ್‌ಇಪಿ ಅನುಷ್ಠಾನಕ್ಕೆ ಶಿಕ್ಷಣ ಕ್ಷೇತ್ರಕ್ಕೆ ಜಿಡಿಪಿಯ ಶೇ 6ರಷ್ಟು ಅನುದಾನ ಅಗತ್ಯವಿದೆ. ಪ್ರಸ್ತುತ ಶಿಕ್ಷಣಕ್ಕೆ ಜಿಡಿಪಿ ಶೇ 2.8ರಷ್ಟನ್ನು ವಿನಿಯೋಗಿಸಲಾಗುತ್ತಿದೆ. ಅದು ಶೇ 6ಕ್ಕೆ ಏರುವುದು ಯಾವಾಗ? ಕೊನೆಗೆ ಸರ್ಕಾರ ಖಾಸಗಿ ಸಹಭಾಗಿತ್ವದತ್ತ ಮುಖ ಮಾಡುತ್ತದೆ.

–ಪುರುಷೋತ್ತಮ ಬಿಳಿಮಲೆ,ನಿವೃತ್ತ ಪ್ರಾಧ್ಯಾಪಕ, ಜೆಎನ್‌ಯು, ದೆಹಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.