ADVERTISEMENT

ನಾಳೆಯಿಂದ ದ್ವಿತೀಯ ಪಿಯು ಪರೀಕ್ಷೆ: 1,100 ವಿದ್ಯಾರ್ಥಿಗಳಿಗೆ ಶೌಚಾಲಯ ಇಲ್ಲ!

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:48 IST
Last Updated 2 ಮಾರ್ಚ್ 2020, 19:48 IST
ಕೊಪ್ಪಳ ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ 3 ವರ್ಷಗಳ ಹಿಂದೆ ನಿರ್ಮಾಣವಾಗಿಯೂ ಬಳಕೆಗೆ ಬಾರದ ಶೌಚಾಲಯ
ಕೊಪ್ಪಳ ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ 3 ವರ್ಷಗಳ ಹಿಂದೆ ನಿರ್ಮಾಣವಾಗಿಯೂ ಬಳಕೆಗೆ ಬಾರದ ಶೌಚಾಲಯ   

ಬೆಂಗಳೂರು: ಬುಧವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಸಜ್ಜಾಗುತ್ತಿದ್ದಾರೆ. ಆದರೆ ಕೆಲವೊಂದು ಕಡೆ ಪರೀಕ್ಷಾ ಕೇಂದ್ರಗಳಲ್ಲಿ ಶೌಚಾಲಯವೇ ಇಲ್ಲ ಎಂದು ಪೋಷಕರಿಂದ ದೂರುಗಳು ಬಂದಿವೆ.

ಕೊಪ್ಪಳ ನಗರದ ಅಶೋಕ ವೃತ್ತದ ಬಳಿ ಇರುವ ಸರ್ಕಾರಿಬಾಲಕರ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರವಾಗಿದ್ದು, 9 ಕಾಲೇಜುಗಳ 1,100ರಷ್ಟು ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಆದರೆ ಇವರಿಗೆ ಶೌಚಾಲಯವೇ ಇಲ್ಲ!

ಈ ಕಾಲೇಜು ಕಟ್ಟಡವನ್ನು 1939ರಲ್ಲಿ ನಿರ್ಮಿಸಲಾಗಿದ್ದು ನೆಪ ಮಾತ್ರಕ್ಕೆ ಶೌಚಾಲಯ ಇತ್ತು. ಆದರೆ, ನೀರಿನ ಸೌಲಭ್ಯ ಇಲ್ಲದ ಕಾರಣ ಶೌಚಾಲಯ ಬಳಸುವವರೇ ಇರಲಿಲ್ಲ. 2016–17ರಲ್ಲಿ ನಬಾರ್ಡ್‌ ಯೋಜನೆಯಡಿ ಶೌಚಾಲಯ ನಿರ್ಮಾಣವಾಗಿದ್ದರೂ, ನೀರಿನ ಸಂಪರ್ಕ ಇನ್ನೂ ನೀಡಿಲ್ಲ. ಹೀಗಾಗಿ ಅದರ ಉದ್ಘಾಟನೆಯೇ ಆಗಿಲ್ಲ.

ADVERTISEMENT

ಪ್ರತಿ ವರ್ಷ ಇಲ್ಲಿ ಇದೇ ಪರಿಸ್ಥಿತಿ ಇದ್ದು, ಕಳೆದ ವರ್ಷವೂ ಶೌಚಾಲಯ ಇಲ್ಲದ ಬಗ್ಗೆ ಗಮನ ಸೆಳೆಯಲಾಗಿತ್ತು. ಆದರೆ ಪರಿಸ್ಥಿತಿ ಸುಧಾರಿಸಿಲ್ಲ. ಈ ಬಾರಿ ಸಹ ಬಾಲಕಿಯರು ಊರಿನ ಯಾವುದಾದರೂ ಮನೆಗೆ ಹೋಗಿ ದೇಹಬಾಧೆ ತೀರಿಸಿಕೊಳ್ಳಬೇಕು, ಬಾಲಕರು ಎಂದಿನಂತೆಯೇ ಕಾಂಪೌಂಡ್‌ ಹಿಂಬದಿಗೆ ತೆರಳಬೇಕು.

‘ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ, ಏನೂ ಪ್ರಯೋಜನ ಆಗಿಲ್ಲ. ಕಾಲೇಜಿನಲ್ಲಿ ಶುಚಿತ್ವವೇ ಇಲ್ಲ. ವಿದ್ಯುತ್‌ ಸಂಪರ್ಕ ಸಹ ಇಲ್ಲ. ಹೀಗಾಗಿ ಕತ್ತಲೆ ಕೊಠಡಿಯಲ್ಲೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದೆ’ ಎಂದು ಪೋಷಕರು ಅಳಲು ತೋಡಿಕೊಂಡರು.

ಸಂಚಾರಿ ಶೌಚಾಲಯ ಸಾಧ್ಯ
ಸಂಚಾರಿ ಶೌಚಾಲಯಗಳ ಬಳಕೆ ಇದೀಗ ಸಾಮಾನ್ಯವಾಗಿದ್ದು,ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಿಗೆ ಇಂತಹ ಶೌಚಾಲಯಗಳನ್ನು ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಪೋಷಕರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.