ADVERTISEMENT

ಪಿಯು ಫಲಿತಾಂಶ : ಕೊನೆ ಸ್ಥಾನಕ್ಕೆ ಕುಸಿದ ಕೋಟೆನಾಡು

ಶೇ 51.43 ವಿದ್ಯಾರ್ಥಿ ಉತ್ತೀರ್ಣ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 15:13 IST
Last Updated 15 ಏಪ್ರಿಲ್ 2019, 15:13 IST

ಚಿತ್ರದುರ್ಗ: ದ್ವಿತೀಯ ಪಿಯು ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿಯೇ ಕೊನೆಯ ಸ್ಥಾನಕ್ಕೆ ಕುಸಿದಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಶೇ 51.43ರಷ್ಟು ಮಾತ್ರ ಉತ್ತೀರ್ಣರಾಗಿದ್ದಾರೆ.

2018ರಲ್ಲಿ ಶೇ 56ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 27ನೇ ಸ್ಥಾನ ಪಡೆದಿತ್ತು. ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 32ನೇ ಸ್ಥಾನ ಪಡೆದಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ತೀವ್ರ ಮುಜುಗರಕ್ಕೆ ಈಡಾಗಿದೆ.

ಜಿಲ್ಲೆಯ 20 ಕೇಂದ್ರಗಳಲ್ಲಿ ಮಾರ್ಚ್‌ 3ರಿಂದ 18ರವರೆಗೆ ಪರೀಕ್ಷೆ ನಡೆದಿತ್ತು. ಪುನಾವರ್ತಿತ ಅಭ್ಯರ್ಥಿಗಳು ಸೇರಿ ಒಟ್ಟು 15,546 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 7,250 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 47ರಷ್ಟು ಫಲಿತಾಂಶ ಪಡೆದಿದ್ದ ಜಿಲ್ಲೆ 2016ರಲ್ಲಿ 30 ಹಾಗೂ 2017ರಲ್ಲಿ 25ನೇ ಸ್ಥಾನ ಪಡೆದಿತ್ತು.

ADVERTISEMENT

37 ಸರ್ಕಾರಿ, 3 ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿ ಒಟ್ಟು 124 ಪದವಿ ಪೂರ್ವ ಕಾಲೇಜುಗಳಿವೆ. ಇದರಲ್ಲಿ 45 ಅನುದಾನಿತ, 36 ಅನುದಾನ ರಹಿತ ಕಾಲೇಜುಗಳಿವೆ. 12,848 ವಿದ್ಯಾರ್ಥಿಗಳು ಈ ಕಾಲೇಜುಗಳಲ್ಲಿ ಶಿಕ್ಷಣ ಪಡೆದಿದ್ದಾರೆ. ಇದರಲ್ಲಿ 6,607 (ಶೇ 51) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2,356 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 553 (ಶೇ 23) ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದಾರೆ.

ಬಾಲಕಿಯರೇ ಮೇಲುಗೈ:ಪ್ರತಿಬಾರಿಯಂತೆ ಈವರ್ಷವೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. 8,240 ಬಾಲಕಿಯರಲ್ಲಿ 4,244 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 7,306 ಬಾಲಕರ ಪೈಕಿ 3,006 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ನಗರ ಪ್ರದೇಶದ 10,023 ವಿದ್ಯಾರ್ಥಿಗಳಲ್ಲಿ 4,581 (ಶೇ 45) ಹಾಗೂ ಗ್ರಾಮೀಣ ಪ್ರದೇಶದ 5,523 ವಿದ್ಯಾರ್ಥಿಗಳಲ್ಲಿ 2,669 (ಶೇ 48) ಮಂದಿ ಉತ್ತೀರ್ಣರಾಗಿದ್ದಾರೆ. ನಗರಕ್ಕಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿದೆ.

ಕಲಾ ವಿಭಾಗದಲ್ಲೇ ಕಡಿಮೆ:ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿಗೆ ಹೋಲಿಕೆ ಮಾಡಿದರೆ ಕಲಾ ವಿಭಾಗದ ವಿದ್ಯಾರ್ಥಿಗಳೇ ಕಡಿಮೆ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದ 5,982 ವಿದ್ಯಾರ್ಥಿಗಳಲ್ಲಿ 2,317 (ಶೇ 38), ವಾಣಿಜ್ಯ ವಿಭಾಗದ 4,735ರಲ್ಲಿ 2,493 (ಶೇ 52) ಹಾಗೂ ವಿಜ್ಞಾನ ವಿಭಾಗದ 4,829ರಲ್ಲಿ 2,440 (ಶೇ 50) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇಂಗ್ಲಿಷ್‌ ಮಾಧ್ಯಮದ 6,260 ವಿದ್ಯಾರ್ಥಿಗಳಲ್ಲಿ 3,303 (ಶೇ 52) ಹಾಗೂ ಕನ್ನಡ ಮಾಧ್ಯಮದ 9,286ವಿದ್ಯಾರ್ಥಿಗಳಲ್ಲಿ 3,947 (ಶೇ42) ಮಂದಿ ಪಾಸಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಅತಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ಕಳವಳಕ್ಕೆ ಎಡೆಮಾಡಿಕೊಟ್ಟಿದೆ.

ನಕಲು ಮಾಡಿದ ಆರೋಪದಡಿ 3 ವಿದ್ಯಾರ್ಥಿಗಳು ಡಿಬಾರ್‌ ಆಗಿದ್ದು, 9 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ಫಲ ನೀಡದ ಪ್ರಯತ್ನ:2018ರ ಶೈಕ್ಷಣಿಕ ವರ್ಷದಲ್ಲಿ ಕುಸಿದ ಫಲಿತಾಂಶವನ್ನು ಸುಧಾರಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಯತ್ನಿಸಿತ್ತು. ಆದರೆ, ಈ ಪ್ರಯತ್ನ ಫಲ ನೀಡಲಿಲ್ಲ ಎಂಬುದು ಫಲಿತಾಂಶದಿಂದ ಸಾಬೀತಾಗಿದೆ.

ಫಲಿತಾಂಶ ಸುಧಾರಣೆಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾಗಿದ್ದ ಎಸ್‌.ಬಿ.ವಸ್ತ್ರಮಠ ನೇತೃತ್ವದಲ್ಲಿ ಜಿಲ್ಲಾಡಳಿತ ಕಾರ್ಯಕ್ರಮ ರೂಪಿಸಿತ್ತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಪಿಯು ಉಪನ್ಯಾಸಕರಿಗೆ ತರಬೇತಿ ಕಾರ್ಯಾಗಾರ ನಡೆಸಲಾಗಿತ್ತು. ಉಪನ್ಯಾಸಕರಿಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗಿತ್ತು.

ಪೂರ್ಣಗೊಳ್ಳದ ಪಠ್ಯ:ಪಿಯು ಪಠ್ಯವನ್ನು ಬಹುತೇಕ ಕಾಲೇಜುಗಳಲ್ಲಿ ಪೂರ್ಣಗೊಳಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದು ಫಲಿತಾಂಶ ಕುಸಿತಕ್ಕೆ ಎಡೆಮಾಡಿಕೊಟ್ಟಿದೆ ಎಂಬುದು ವಿದ್ಯಾರ್ಥಿಗಳ ಆರೋಪ.

ಮಾರ್ಚ್‌ನಲ್ಲಿ ಪರೀಕ್ಷೆ ಎದುರಾಗಿದ್ದರಿಂದ ಫೆಬ್ರುವರಿಯಲ್ಲಿ ಪಠ್ಯ ಪೂರ್ಣಗೊಳಿಸಬೇಕಿತ್ತು. ಆದರೆ, ಬಹುತೇಕ ಕಾಲೇಜುಗಳು ಗುರಿ ಸಾಧನೆಯಲ್ಲಿ ಹಿಂದೆ ಬಿದ್ದಿದ್ದವು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲಿಸಿ, ಪ್ರೇರೇಪಿಸಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.