ADVERTISEMENT

ಮೊದಲ ಕ್ರಶ್‌ನ ಮಧುರ ನೆನಪು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 19:45 IST
Last Updated 12 ಫೆಬ್ರುವರಿ 2019, 19:45 IST
ಚಿತ್ರ: ವಿಜಯಾ ಕುಮಾರಿ
ಚಿತ್ರ: ವಿಜಯಾ ಕುಮಾರಿ   

ಒಬ್ಬ ವ್ಯಕ್ತಿಯ ಜೀವನದಲ್ಲಿ ನಿಜವಾದ ಪ್ರೀತಿ ಎನ್ನುವುದು ಹುಟ್ಟಿಕೊಳ್ಳುವುದು ಒಮ್ಮೆ ಮಾತ್ರ ಎನ್ನುತ್ತಾರೆ ಹಿರಿಯರು. ಆದರೆ ಈ ಆಕರ್ಷಣೆ ಅಥವಾ ಕ್ರಶ್ ಎನ್ನುತ್ತಾರಲ್ಲ ಅದು ಎಷ್ಟು ಬಾರಿ ಬೇಕಾದರೂ ಆಗಬಹುದು. ಅದು ಶಾಲೆ, ಕಾಲೇಜು, ಬಸ್ಸು, ರಸ್ತೆ ಹೀಗೆ ಎಲ್ಲಿ ಬೇಕಾದರೂ ನಮಗೆ ಕ್ರಶ್ ಆಗಬಹುದು. ಅದರಲ್ಲೂ ಹುಡುಗರ ಕ್ರಶ್‌ಗಳಿಗಂತೂ ಲೆಕ್ಕವಿಲ್ಲ. ಪ್ರೀತಿ ಎನ್ನುವುದು ಜೀವನದುದ್ದಕ್ಕೂ ನಮ್ಮ ಜೊತೆ ಇದ್ದರೆ ಕ್ರಶ್ ಕೆಲ ದಿನಗಳ ಕಾಲ ನಮ್ಮನ್ನು ಕಾಡುತ್ತದೆ. ಅದರಲ್ಲೂ ಕಾಲೇಜು ಜೀವನದಲ್ಲಿ ನಮ್ಮಂತಹ ಯುವಕರ ಕ್ರಶ್‌ಗಳಿಗೆ ಲೆಕ್ಕವಿಲ್ಲ. ಸುಂದರವಾಗಿ ಕಾಣುವ ಪ್ರತಿ ಹುಡುಗಿಯ ಮೇಲೂ ಅಲ್ಲದೇ ಕೆಲವೊಮ್ಮೆ ಸುಂದರ ಲೆಕ್ಚರರ್‌ಗಳ ಮೇಲೂ ಕ್ರಶ್ ಆಗುವುದರಲ್ಲಿ ಆಶ್ಚರ್ಯವಿಲ್ಲ. ನನ್ನ ಕಾಲೇಜು ಜೀವನದಲ್ಲೂ ನನಗೂ ನನಗೆ ಕ್ರಶ್ ಆಗಿತ್ತು. ಅದಾಗಿದ್ದು ನನ್ನ ಸ್ನಾತಕೋತ್ತರ ಪದವಿಯ ವೇಳೆ.

ನಾನು ಸ್ನಾತಕೋತ್ತರ ಪದವಿಗೆಂದು ಕಲಬುರಗಿಯ ವಿಶ್ವವಿದ್ಯಾಲಯ ಸೇರಿದ್ದೆ. ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ಪದವಿ ಆರಂಭವಾದ ಕೆಲ ದಿನಗಳಲ್ಲೇ ನಮ್ಮ ವಿಶ್ವವಿದ್ಯಾಲಯದಲ್ಲಿ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ನಡೆದಿತ್ತು. ಆ ಕಾರ್ಯಕ್ರಮಕ್ಕೆ ಬೇರೆ ಬೇರೆ ಕಾಲೇಜುಗಳಿಂದ ಸ್ಪರ್ಧಿಸಲು ಅನೇಕ ವಿದ್ಯಾರ್ಥಿಗಳು ಬಂದಿದ್ದರು. ನಾನು ಕೈಯಲ್ಲೊಂದು ಕ್ಯಾಮೆರಾ ಹಿಡಿದು ಫೋಟೊ ತೆಗೆಯಲು ವೇದಿಕೆ ಬಳಿ ತೆರಳಿ ಫೋಟೊ ಕ್ಲಿಕ್ಕಿಸತೊಡಗಿದೆ. ವೇದಿಕೆಯಲ್ಲಿ ಒಂದರ ನಂತರ ಒಂದು ಕಾರ್ಯಕ್ರಮಗಳು ಸಾಗುತ್ತಿತ್ತು. ಒಮ್ಮೆ ‘ಮುಂದಿನ ಕಾರ್ಯಕ್ರಮ ಪ್ರಿಯಾ ಅವರಿಂದ ಭರತನಾಟ್ಯ‘ ಎಂದು ಮೈಕಿನಲ್ಲಿ ಹೇಳಿದ್ದರು. ಗೆಜ್ಜೆಯ ದನಿಯೊಂದಿಗೆ ಹಂಸ ನಡಿಗೆಯೊಂದಿಗೆ ವೇದಿಕೆ ಮೇಲೆ ಬಂದಳು ಪ್ರಿಯಾ.ಅವಳ ಗೆಜ್ಜೆಯ ನಾದಕ್ಕೆ ಇಡೀ ಸಭಾಂಗಣವೇ ಕೆಲವು ಕ್ಷಣ ಮೌನವಾಗಿತ್ತು. ಅವಳು ಒಂದೇ ಒಂದು ನೋಟಕ್ಕೆ ಅಲ್ಲಿದ್ದ ಎಲ್ಲರೂ ಅವಳನ್ನು ಗರ ಬಡಿದವರಂತೆ ಕಣ್ಣು ಪಿಳುಕಿಸದೆ ನೋಡುತ್ತಿದ್ದರು.ಅವಳ ಅಂದ ಚೆಂದ, ಮೈಮಾಟ, ವೈಯಾರ ಅಲ್ಲಿದ್ದವರನ್ನು ಆಕರ್ಷಿಸುತ್ತಿತ್ತು. ‌ಹೀಗಿದ್ದಾಗ ವೇದಿಕೆ ಸಮೀಪದಲ್ಲೇ ಫೋಟೊ ತೆಗೆಯುತ್ತಿದ್ದ ನನಗೆ ಅವಳು ಬಹಳ ಇಷ್ಟವಾಗಿದ್ದಳು. ಅವಳನ್ನೇ ನೋಡುತ್ತಿದ್ದ ನನಗೆ ನನ್ನೆದೆಯ ತಾಳ ಮೇಳ ತಪ್ಪಿತ್ತು.ಅವಳ ಮೇಲೆ ಕ್ರಶ್ ಆಗಿ, ಅವಳ ಗೆಜ್ಜೆಯ ನಾದಕ್ಕೆ ನನ್ನ ಹೃದಯದ ತಾಳ ತಪ್ಪಿತೆಂದೆನ್ನಿಸಿತ್ತು. ಅವಳ ನೀಳ ಕಣ್ಣು, ಮಗುವಿನಂತಹ ಮುಗುಳುನಗೆ, ನವಿಲು ನಾಚುವಂತಹ ನಾಟ್ಯ ಇವೆಲ್ಲವೂ ನನ್ನನ್ನು ತುಂಬಾನೇ ಕಾಡಿತ್ತು.

ಅವಳ ನೃತ್ಯ ಮುಗಿದ ನಂತರ ಅವಳನ್ನು ತುಂಬಾ ಹುಡುಕಾಡಿದ್ದೆ. ಆದರೆ ಅವಳು ನನ್ನ ಕಣ್ಣಿಗೆ ಮತ್ತೆ ಕಾಣಿಸಲಿಲ್ಲ. ನಂತರ ಯುವಜನೋತ್ಸವ ಆಯೋಜಕರ ಬಳಿ ಹೋಗಿ ವಿಚಾರಿಸಿದೆ. ಅಲ್ಲೂ ಫಲಿತಾಂಶ ಶೂನ್ಯ. ಅವಳನ್ನು ಭೇಟಿಯಾಗಿ ಮಾತಾಡಿಸಲು ಮುಂದಾಗಿದ್ದ ನನಗೆ ನಿರಾಸೆಯಾಗಿ ಏನೋ ಕಳೆದುಕೊಂಡಂತೆ ಭಾಸವಾಗಿತ್ತು.

ADVERTISEMENT

ಅಂದಿನ ಆ ಹುಡುಗಿಯ ಮೇಲಿನ ಕ್ರಶ್ ಇಂದಿಗೂ ಸವಿನೆನಪಾಗಿ ನನ್ನ‌ಲ್ಲಿ ಉಳಿದಿದೆ.ಒಂದು ದಿನ ಅವಳು ದೊಡ್ಡ ಭರತ ನಾಟ್ಯಗಾರ್ತಿಯಾಗಿ ಬೆಳೆದು ನನ್ನ ಕಣ್ಣಿಗೆ ಬೀಳಲಿ ಎಂಬ ಹುಚ್ಚು ಆಸೆ ಇಂದಿಗೂ ಮನದಲ್ಲಿದೆ...

ಮಲ್ಲಿಕಾರ್ಜುನ ಮೇತ್ರಿ ಹಿಂಚಗೇರಾ, ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.