ADVERTISEMENT

ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ ಫಲಿತಾಂಶ ಪ್ರಕಟ

ಪಿಟಿಐ
Published 13 ಜೂನ್ 2023, 15:46 IST
Last Updated 13 ಜೂನ್ 2023, 15:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ‘ನೀಟ್–2023’ರ ಫಲಿತಾಂಶ ಪ್ರಕಟವಾಗಿದ್ದು, ಮೊದಲ ರ‍್ಯಾಂಕ್‌ ಅನ್ನು ಇಬ್ಬರು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಅತ್ಯಧಿಕ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ತಮಿಳುನಾಡಿನ ಪ್ರಭಾಂಜನ್‌ ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್‌ ಚಕ್ರವರ್ತಿ ಶೇ 99.99ರಷ್ಟು ಅಂಕ ಗಳಿಸಿದ್ದು, ಪ್ರಥಮ ರ‍್ಯಾಂಕ್ ಹಂಚಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ ಪ್ರಕಟಿಸಿದೆ.

ಪರೀಕ್ಷೆಯನ್ನು ಒಟ್ಟು 20.38 ಲಕ್ಷ ಅಭ್ಯರ್ಥಿಗಳು ಬರೆದಿದ್ದು, ಈ ಪೈಕಿ 11.45 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ರಾಜ್ಯಗಳ ಪೈಕಿ ಉತ್ತರ ಪ್ರದೇಶದಿಂದ ಗರಿಷ್ಠ ಅಂದರೆ 1.39 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ADVERTISEMENT

ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (1.31 ಲಕ್ಷ), ರಾಜಸ್ಥಾನ (1 ಲಕ್ಷಕ್ಕೂ ಅಧಿಕ) ಇದೆ. ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ಹೆಚ್ಚಿನ ಜನಸಂಖ್ಯೆ ಇರುವ ರಾಜ್ಯಗಳಾಗಿದ್ದು, ಜನಸಂಖ್ಯೆ ಆಧಾರದಲ್ಲಿ ಮೊದಲ 10 ರಾಜ್ಯಗಳ ಪಟ್ಟಿಯಲ್ಲಿ ರಾಜಸ್ಥಾನ ಕೂಡಾ ಇದೆ.

ದೇಶದಾದ್ಯಂತ 499 ನಗರಗಳಲ್ಲಿನ 4,097 ಕೇಂದ್ರಗಳು ಹಾಗೂ ದೇಶದ ಹೊರಗಡೆ 14 ನಗರಗಳಲ್ಲಿ ಮೇ 7ರಂದು ಈ ವರ್ಷದ ನೀಟ್ –2023 ಪರೀಕ್ಷೆಯನ್ನು ಎನ್‌ಟಿಎ ನಡೆಸಿತ್ತು. ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು.

ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ರಾಷ್ಟ್ರಮಟ್ಟದ ರ‍್ಯಾಂಕಿಂಗ್ ಅನ್ನು ನೀಡಿದೆ. ರ‍್ಯಾಂಕ್‌ ಆಧರಿಸಿ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲು ಆಯಾ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಎಂಬಿಬಿಎಸ್‌, ಬಿಡಿಎಸ್ ಕೋರ್ಸ್‌ಗಳ ಸೀಟುಗಳಿಗೆ ಮೆರಿಟ್‌ ಪಟ್ಟಿ ಸಿದ್ಧಪಡಿಸಲಿವೆ ಎಂದು ಹೇಳಿದ್ದಾರೆ. 

ಅಭ್ಯರ್ಥಿಗಳು ತಮ್ಮ ರಾಜ್ಯಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವಾಗ, ಪ್ರವರ್ಗವನ್ನು ನಮೂದಿಸಬೇಕು. ರಾಜ್ಯದ ಕೌನ್ಸೆಲಿಂಗ್ ಅಧಿಕಾರಿಗಳು ಅದಕ್ಕನುಗುಣವಾಗಿ ಮೆರಿಟ್‌ ಪಟ್ಟಿ ತಯಾರಿಸುವರು. ಇದರಲ್ಲಿ ಎನ್‌ಟಿಎ ಪಾತ್ರವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಫಲಿತಾಂಶಕ್ಕಾಗಿ ಈ ಕೆಳಗಿನ ವೆಬ್‌ಸೈಟ್ ಕ್ಲಿಕ್ ಮಾಡಿರಿ...

neet.nta.nic.in

ntaresults.nic.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.