ADVERTISEMENT

ವಿಜ್ಞಾನ ಸಂವಹನ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2018, 19:30 IST
Last Updated 24 ಸೆಪ್ಟೆಂಬರ್ 2018, 19:30 IST
ಡಾ. ವೈ.ಸಿ. ಕಮಲ
ಡಾ. ವೈ.ಸಿ. ಕಮಲ   

ವಿದ್ಯಾರ್ಥಿಗಳು ಮತ್ತು ಜನ ಸಮುದಾಯದಲ್ಲಿ ವಿಜ್ಞಾನ ಸಂಸ್ಕೃತಿ, ವೈಜ್ಞಾನಿಕ ಮನೋಭಾವವನ್ನು ಜಾಗೃತಿಗೊಳಿಸಲೆಂದು ಜಯನಗರದ ನ್ಯಾಷನಲ್‌ ಕಾಲೇಜಿನಲ್ಲಿ ಎರಡು ದಿನಗಳ ‘ಸೈಕಂ’ (ಸೈನ್ಸ್‌+ಕಮ್ಯುನಿಕೇಷನ್‌) ಕಾರ್ಯಾಗಾರ ಆಯೋಜನೆಗೊಂಡಿದೆ. ಇದು ವಿಜ್ಞಾನ ಸಂವಹನದ ಹೊಸ ಆಯಾಮಗಳ ಕುರಿತ ಕಾರ್ಯಾಗಾರ.

ದೇಶದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ವಿಜ್ಞಾನದ ಮಹತ್ವವನ್ನು ಸಾರುವ ಅಗತ್ಯ ಮನಗಂಡು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ನ್ಯಾಷನಲ್‌ ಕಾಲೇಜಿನ ಬಿ.ವಿ. ಜಗದೀಶ್‌ ವಿಜ್ಞಾನ ಕೇಂದ್ರ ಹಾಗೂ ಉದಯಭಾನು ಉನ್ನತ ಅಧ್ಯಯನ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನಾಂಗ ಜಂಟಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿವೆ.

ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿಜ್ಞಾನ ಆಸಕ್ತ ಪತ್ರಕರ್ತರನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯೋಜಿಸಿರುವ ಈ ಕಾರ್ಯಾಗಾರ ಇದೇ 27ರಿಂದ ಆರಂಭವಾಗಲಿದೆ. ವಿಜ್ಞಾನದ ಸಂವಹನ ಹಾಗೂ ವಿಜ್ಞಾನ ಕುರಿತ ವರದಿ, ಲೇಖನಗಳ ಬರವಣಿಗೆಯ ಕೌಶಲ ವೃದ್ಧಿಸಲು ಕಾರ್ಯಾಗಾರ ವಿಶೇಷ ಒತ್ತು ನೀಡಲಿದೆ. ಅಲ್ಲದೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿ ಯಾವ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುತ್ತವೆ ಎಂಬುದರ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗುತ್ತದೆ.

ADVERTISEMENT

ವಿಜ್ಞಾನದಿಂದ ಅಭಿವೃದ್ಧಿ

‘ಸಮಾಜಕ್ಕೆ ವಿಜ್ಞಾನ ಬೇಕೇಬೇಕು. ವಿಜ್ಞಾನದಿಂದ ಸಮಾಜ ಮತ್ತು ದೇಶದ ಅಭಿವೃದ್ಧಿ ಸಾಧ್ಯ. ಸಾಮಾಜಿಕ, ಆರ್ಥಿಕ ಬೆಳವಣಿಗೆಯು ವಿಜ್ಞಾನದ ಬೆಳವಣಿಗೆ
ಯೊಂದಿಗೆ ತಳಕು ಹಾಕಿಕೊಂಡಿರುತ್ತದೆ. ಹಾಗಾಗಿ ವಿಜ್ಞಾನವನ್ನು ಬಲಪಡಿಸಬೇಕು. ಅದಕ್ಕಾಗಿ ವಿಜ್ಞಾನ ಕಲಿಕೆಗೆ ಮತ್ತು ಅದರ ಸಂವಹನಕ್ಕೆ ವಿಶೇಷ ಕಾಳಜಿ ನೀಡಬೇಕು’ ಎಂದು ಪ್ರತಿಪಾದಿಸುತ್ತಾರೆ ಉದಯಭಾನು ಉನ್ನತ ಅಧ್ಯಯನ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನಾಂಗದ ಡೀನ್‌ ಡಾ. ವೈ.ಸಿ.ಕಮಲ.

‘ಖಗೋಳದಲ್ಲಿ ಸಾಕಷ್ಟು ಕೌತುಕಗಳು ನಡೆಯುತ್ತಿರುತ್ತವೆ. ಆದರೆ ಮೌಢ್ಯದಿಂದಾಗಿ ಹಲವರು ಗ್ರಹಣ ಎಂದರೆ ಹೆದರುತ್ತಾರೆ. ಈ ಮೌಢ್ಯದಿಂದ ಅವರನ್ನು ಹೊರತಂದು, ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಅದಕ್ಕೆ ಅವರಲ್ಲಿ ಜಾಗೃತಿ ಮೂಡಿಸಬೇಕು. ಈ ಕಾರ್ಯ ಸಾಧನೆಗೆ ವಿಜ್ಞಾನದ ಸಂವಹನಕ್ಕೆ ಹೊಸ ಆಯಾಮಗಳನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ’ ಎನ್ನುತ್ತಾರೆ ಅವರು.

ಅಮೆರಿಕ, ಬ್ರಿಟನ್‌, ಫ್ರಾನ್ಸ್‌ ರಾಷ್ಟ್ರಗಳು ವಿಜ್ಞಾನ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿವೆ. ಅಲ್ಲಿ ಪ್ರತಿ 10 ಲಕ್ಷ ಜನರಿಗೆ ಅಂದಾಜು 4 ಸಾವಿರ ಸಂಶೋಧಕರಿದ್ದಾರೆ. ಆದರೆ ಭಾರತದಲ್ಲಿ ಈ ಪ್ರಮಾಣ ಕೇವಲ ಸಾವಿರ ಇದೆ. ಇದನ್ನು ಹೆಚ್ಚಿಸಬೇಕು. ಹಾಗಾಗಿ ವಿದ್ಯಾರ್ಥಿಗಳನ್ನು ವಿಜ್ಞಾನ ಮತ್ತು ಸಂಶೋಧನೆಯತ್ತ ಸೆಳೆಯಲು ಮತ್ತು ಆಸಕ್ತಿ ಮೂಡಿಸಲು ಈ ಪ್ರಯತ್ನ ಎಂದು ಅವರು ವಿವರಿಸುತ್ತಾರೆ.

ಕಾರ್ಯಾಗಾರದ ಎರಡೂ ದಿನವೂ ವಿಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆ ಆಧಾರಿತ ಸಂವಾದ ನಡೆಯಲಿದೆ. ವಿಜ್ಞಾನ ಹಾಡು, ವಿಜ್ಞಾನ ನಾಟಕ ಮತ್ತಿತರ ಚಟುವಟಿಕೆಗಳೂ ಇರಲಿವೆ. ಕೊನೆಯ ದಿನ ವಿಜ್ಞಾನಕ್ಕೆ ಸಂಬಂಧಿಸಿದಂತೆ ರಸಪ್ರಶ್ನಯೂ ನಡೆಯಲಿದ್ದು, ಹೆಚ್ಚು ಅಂಕಗಳಿಸುವ 10 ವಿದ್ಯಾರ್ಥಿಗಳಿಗೆ ಆಕರ್ಷಕ ನಗದು ಬಹುಮಾನವೂ ಸಿಗಲಿವೆ. ಕಾರ್ಯಾಗಾರಕ್ಕೆ 150 ಜನರಿಗೆ ಮಾತ್ರ ಪ್ರವೇಶ.

ಮಾಹಿತಿಗೆ: 9590923452/ 7619412721

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.