ADVERTISEMENT

ಚಿತ್ರದುರ್ಗ: ಶಿಕ್ಷಣ ಇಲಾಖೆ ವೈಫಲ್ಯಕ್ಕೆ ಕಳಪೆ ಫಲಿತಾಂಶ

ಪೂರ್ಣಗೊಳ್ಳದ ಪಠ್ಯಕ್ರಮ * ಉಪನ್ಯಾಸಕರ ಕರ್ತವ್ಯ ಲೋಪ * ಪೋಷಕರಲ್ಲಿ ಕಾಡುತ್ತಿರುವ ಆತಂಕ

ಕೆ.ಎಸ್.ಪ್ರಣವಕುಮಾರ್
Published 16 ಏಪ್ರಿಲ್ 2019, 20:00 IST
Last Updated 16 ಏಪ್ರಿಲ್ 2019, 20:00 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಹಿಂದುಳಿದ ಜಿಲ್ಲೆಗಳ ಪಟ್ಟಿಗೆ ಸೇರಿರುವ ಚಿತ್ರದುರ್ಗ, ಪದವಿ ಪೂರ್ವ ಶಿಕ್ಷಣ ಇಲಾಖೆ ವೈಫಲ್ಯದಿಂದಾಗಿ ಈ ಬಾರಿಯ ದ್ವಿತೀಯ ಪಿಯು ಫಲಿತಾಂಶದಲ್ಲೂ ಕಳಪೆ ಸಾಧನೆ ಮಾಡುವ ಮೂಲಕ ಶೈಕ್ಷಣಿಕವಾಗಿಯೂ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಸ್ಥಾನ ಪಡೆದುಕೊಂಡಿದೆ.

ಶೈಕ್ಷಣಿಕವಾಗಿ ಮುಂದುವರೆದ ಜಿಲ್ಲೆಗಳಿಗೆ ಪೈಪೋಟಿ ನೀಡುವಲ್ಲಿ ಅನೇಕ ವರ್ಷಗಳಿಂದಲೂ ಇಲಾಖೆಗೆ ಸಾಧ್ಯವಾಗುತ್ತಲೇ ಇಲ್ಲ. ಸ್ಥಾನ ಏರಿಕೆ ಆಗುವ ಬದಲು ಹಂತ ಹಂತವಾಗಿ ಇಳಿಕೆಯಾಗುತ್ತಲೇ ಇದೆ.

ಈ ಫಲಿತಾಂಶ ಗಮನಿಸಿರುವ ಪೋಷಕರು ಗಾಬರಿಗೊಂಡಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವುದು ಹೇಗೆ ಎಂಬ ಆತಂಕ ಅನೇಕರನ್ನು ಕಾಡತೊಡಗಿದೆ. ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಜಿಲ್ಲೆಯಲ್ಲಿ ಮಕ್ಕಳ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸ ಮುಂದುವರೆಸಬೇಕೋ ಬೇಡವೋ ಎಂಬ ಗೊಂದಲವೂ ಮನೆ ಮಾಡಿದೆ.

ADVERTISEMENT

ಉಪನ್ಯಾಸಕರು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವ ಕಾರಣ ಜಿಲ್ಲೆಯ ಬಹುತೇಕ ಕಾಲೇಜುಗಳಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ಈ ಮೂರು ವಿಭಾಗಗಳ ಪಠ್ಯಕ್ರಮವನ್ನು ಶೇ 100ಕ್ಕೆ ನೂರು ಪೂರ್ಣಗೊಳಿಸಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಸರ್ಕಾರಿ ಕಾಲೇಜುಗಳ ಅನೇಕ ಉಪನ್ಯಾಸಕರು ಇಂದಿಗೂ ಆಧುನಿಕ ಬೋಧನಾ ಶೈಲಿ ಅಳವಡಿಸಿಕೊಂಡಿಲ್ಲ. ವಿದ್ಯಾರ್ಥಿಗಳ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಕಡಿಮೆ ಅಂಕಗಳಿಸುವ ವಿದ್ಯಾರ್ಥಿಗಳ ಬಗ್ಗೆ ನಿಗಾವಹಿಸಿಲ್ಲ. ಓದಿನಲ್ಲಿ ಹಿಂದೆ ಉಳಿದವರನ್ನು ಉತ್ತೀರ್ಣ, ದ್ವಿತೀಯ ಶ್ರೇಣಿಯತ್ತ ಕೊಂಡೊಯ್ಯಲು ಪ್ರಯತ್ನಿಸಿಲ್ಲ ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಾಯಂ ಉಪನ್ಯಾಸಕರ ಕೊರತೆ, ಬೋಧನೆ ಮೂಲಕ ನಿರೀಕ್ಷಿತ ಗುರಿ ತಲುಪಲು ಅತಿಥಿ ಉಪನ್ಯಾಸಕರು ವಿಫಲರಾಗಿದ್ದಾರೆ. ವಾರದಲ್ಲಿ ನಿಗದಿಪಡಿಸಿದ ತರಗತಿಗಳ ಪೈಕಿ ಕೆಲವೊಂದನ್ನು ತೆಗೆದುಕೊಂಡಿಲ್ಲ. ಶೇ 25ಕ್ಕಿಂತ ಅಧಿಕ ಗೈರಾಗುವ ವಿದ್ಯಾರ್ಥಿಗಳು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆಗಿಂದಾಗ್ಗೆ ಗಮನಿಸಿದ ಕೆಲ ಪೋಷಕರು ಸೇರಿ ಅನೇಕ ರೀತಿಯ ವೈಫಲ್ಯಗಳು ಫಲಿತಾಂಶ ಹಿನ್ನಡೆಗೆ ಕಾರಣವಾಗಿವೆ.

ದೇಶದಾದ್ಯಂತ ಎನ್‌ಸಿಆರ್‌ಟಿ ಪಠ್ಯಕ್ರಮ ಜಾರಿಯಾದ ನಂತರ ಹೆಚ್ಚಿನ ಪಠ್ಯ ಅಳವಡಿಸಲಾಗಿದೆ. ಅಲ್ಲದೆ, ಉಪನ್ಯಾಸಕರಿಗೆ ಸೂಕ್ತ ರೀತಿಯಲ್ಲಿ ಇಲಾಖೆ ತರಬೇತಿ ನೀಡುತ್ತಿಲ್ಲ. ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಲು ಸರ್ಕಾರ ಮುಂದಾಗುತ್ತಿಲ್ಲ. ನಿಯೋಜನೆ ಮೇಲೆ ಅನೇಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಎರಡೂ ಕಡೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಕೆಲ ಪ್ರಾಂಶುಪಾಲರದ್ದು ಇದೇ ಸಮಸ್ಯೆ. ಶೈಕ್ಷಣಿಕ ವರ್ಷದೊಳಗೆ ಪಠ್ಯ ಪೂರ್ಣಗೊಳಿಸುವುದು ದೊಡ್ಡ ಸವಾಲಾಗಿದೆ. ಈ ಪ್ರಮುಖ ಅಂಶಗಳು ಕೊನೆ ಸ್ಥಾನಕ್ಕೆ ಇಳಿಯಲು ಕಾರಣ ಎಂಬುದು ಕೆಲ ಉಪನ್ಯಾಸಕರ ಅಭಿಪ್ರಾಯ.

ಮೂಲ ಸೌಲಭ್ಯ ಕೊರತೆ: ಅನೇಕ ಸರ್ಕಾರಿ ಕಾಲೇಜುಗಳಲ್ಲಿ ಕೊಠಡಿಗಳ ಸಮಸ್ಯೆ ತಲೆದೋರಿದ್ದು, 100 ವಿದ್ಯಾರ್ಥಿಗಳು ಕುಳಿತುಕೊಂಡಾಗ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಬೋಧಿಸಲು ಸಾಧ್ಯ ಆಗುವುದಿಲ್ಲ. ಅಲ್ಲದೆ, ವಿಜ್ಞಾನ ವಿದ್ಯಾರ್ಥಿಗಳು ವಿವಿಧೆಡೆ ಪ್ರಯೋಗಾಲಯಗಳ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಇನ್ನೂ ಕೆಲ ಉಪನ್ಯಾಸಕರು ಮಾಹಿತಿ ನೀಡಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಸರ್ಕಾರಿ ಕಾಲೇಜು ಒಂದರಲ್ಲಿ 900 ವಿದ್ಯಾರ್ಥಿಗಳಿದ್ದರೂ ವಾಣಿಜ್ಯ ವಿಭಾಗಕ್ಕೆ ಒಬ್ಬರು ಕಾಯಂ ಉಪನ್ಯಾಸಕರಿಲ್ಲ. ಖಾಸಗಿ ಕಾಲೇಜುಗಳಂತೆ ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಪರೀಕ್ಷೆ, ವಿದ್ಯಾರ್ಥಿಗಳ ಬಗ್ಗೆ ನಿಗಾ, ವಿಶೇಷ ತರಬೇತಿ ಸೇರಿ ಇತರೆ ಕಾರ್ಯಕ್ರಮ ಸರ್ಕಾರಿ ಕಾಲೇಜುಗಳಲ್ಲಿ ಅನುಷ್ಠಾನ ಆಗುತ್ತಿಲ್ಲ. ಮೂಲಸೌಕರ್ಯ ಕೊರತೆಯೇ ಬಹುಮುಖ್ಯ ಕಾರಣವಾಗಿದೆ.

ಪಾಳಿ ಪದ್ಧತಿಯಲ್ಲಿ ಬೆಳಿಗ್ಗೆ ಏಳೂವರೆಯಿಂದ ಹನ್ನೊಂದುವರೆವರೆಗೆ ನಡೆಯುತ್ತಿರುವ ಕಾಲೇಜುಗಳಲ್ಲಿ ತರಗತಿ ಪೂರ್ಣಗೊಳಿಸಿ ಉತ್ತಮ ಫಲಿತಾಂಶ ನೀಡಲು ಎಂದಿಗೂ ಸಾಧ್ಯವಿಲ್ಲ. ಪ್ರತ್ಯೇಕ ಕಾಲೇಜು, ವಿದ್ಯಾರ್ಥಿಗಳಿಗೆ ಅನುಗುಣವಾಗಿ ಕೊಠಡಿ, ನಿರ್ಲಕ್ಷ ತೋರುವ ಉಪನ್ಯಾಸಕರ ವಿರುದ್ಧ ಶಿಸ್ತು ಕ್ರಮ, ಆಗಿಂದಾಗ್ಗೆ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ, ಉಪನ್ಯಾಸಕರಿಗೂ ತರಬೇತಿ ಕೈಗೊಂಡು ಕಡ್ಡಾಯವಾಗಿ ಹಾಜರಾಗಲು ಸೂಚಿಸಿದಾಗ ಮಾತ್ರ ಫಲಿತಾಂಶದಲ್ಲಿ ಸುಧಾರಣೆ ತರಲು ಸಾಧ್ಯವಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಉಪನ್ಯಾಸಕರು ಅವರ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಬೇಕು. ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸುವ ಚಾಕಚಕ್ಯತೆಯೊಂದಿಗೆ ಕಾರ್ಯ ನಿರ್ವಹಿಸಬೇಕು. ನಿಗದಿತ ತರಗತಿಗೆ ಹಾಜರಾಗಿ ಪಠ್ಯ ಪೂರ್ಣಗೊಳಿಸಿದರೆ ಹಂತ ಹಂತವಾಗಿ ಜಿಲ್ಲೆಯ ಸ್ಥಾನ ಪಲ್ಲಟಗೊಳಿಸಲು ಸಾಧ್ಯವಿದೆ ಎಂದು ಕೆಲ ಪೋಷಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.