ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಹೋಲಿಸಿದರೆಸಮಾಜ ವಿಜ್ಞಾನ ತುಂಬಾ ಸುಲಭವಾದ ವಿಷಯ ಎನ್ನುತ್ತಾರೆ. ಆದರೆ ಈ ವಿಷಯದಲ್ಲಿ ಹೆಚ್ಚು ಅಂಕಗಳಿಸುವುದು ತುಸು ಕಷ್ಟ. ವಿಷಯ ವ್ಯಾಪ್ತಿ ಮತ್ತು ಆಳ ಹೆಚ್ಚು ಇರುವುದರಿಂದ ಶ್ರಮವಹಿಸಿ ಅಧ್ಯಯನ ಮಾಡುವುದು ಅನಿವಾರ್ಯ. ಈಗ ಇರುವ ಸೀಮಿತ ಕಾಲಾವಧಿಯಲ್ಲಿ ಸಾಕಷ್ಟು ವಿಷಯವನ್ನು ಓದಿ ಮನನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಸಮಾಜ ವಿಜ್ಞಾನ ಪದವೀಧರ ಶಿಕ್ಷಕ ಹುದ್ದೆಗಾಗಿ ಪರೀಕ್ಷೆ ಬರೆಯುತ್ತಿರುವವರಿಗೆ ಪತ್ರಿಕೆ-2 ಬಹಳ ಪ್ರಮುಖವಾದದ್ದು. ಇದು 150 ಅಂಕಗಳ ಪತ್ರಿಕೆ. ಅಭ್ಯರ್ಥಿಗಳು ಶೇ 45 ಅಂಕಗಳಿಸುವುದು ಕಡ್ಡಾಯ. ಅಲ್ಲದೇ ಇಲ್ಲಿ ಗಳಿಸಿದ ಅಂಕಗಳನ್ನು ಮೆರಿಟ್‌ಗೆ ಪರಿಗಣಿಸಲಾಗುತ್ತದೆ. ಈ ಎಲ್ಲವನ್ನೂ ಗಮನದಲ್ಲಿಟ್ಟು ಪರೀಕ್ಷೆಗೆ ಹೀಗೆ ತಯಾರಾಗಬಹುದು;
ಪ್ರಶ್ನೆಗಳ ಸ್ವರೂಪ ತಿಳಿಯಿರಿ: ಸಮಾಜ ವಿಜ್ಞಾನ ವಿಷಯದಲ್ಲಿ ಪರೀಕ್ಷಾ ಸಿದ್ಧತೆಗೆ ತೊಡಗುವ ಮುನ್ನ ಪ್ರಶ್ನೆಪತ್ರಿಕೆ ಮತ್ತು ಪ್ರಶ್ನೆಗಳ ಸ್ವರೂಪ ತಿಳಿಯಬೇಕು. ಇದು ತಿಳಿಯದೇ ಅಧ್ಯಯನ ಮಾಡಿದರೆ ವ್ಯರ್ಥವಾಗುತ್ತದೆ. ಪತ್ರಿಕೆ-2 ಸಮಾಜ ವಿಜ್ಞಾನ ಪತ್ರಿಕೆಗೆ ಮೀಸಲಾಗಿರುವ 150 ಅಂಕಗಳಲ್ಲಿ, 50 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಹಾಗೂ 100 ಅಂಕಗಳಿಗೆ ವಿವರಾಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಬೇಕು. ಇದರಲ್ಲಿ 3 ಅಂಕದ 20 ಪ್ರಶ್ನೆಗಳಿರುತ್ತವೆ. ಈ ಪ್ರಶ್ನೆಗಳಿಗೆ 30 ಪದಗಳ ಮಿತಿಯಲ್ಲಿ ಉತ್ತರಿಸಬೇಕು. ಇನ್ನುಳಿದಂತೆ 4 ಅಂಕದ 10 ಪ್ರಶ್ನೆಗಳಿರುತ್ತವೆ. ಇವುಗಳಿಗೆ 40 ಪದಗಳ ಮಿತಿಯಲ್ಲಿ ಉತ್ತರಿಸಬೇಕು. ಜೊತೆಗೆ ಬೋಧನಾ ಪದ್ಧತಿಗೆ ಅನುಗುಣವಾಗಿ ಶೇ 8 ರಿಂದ 10 ಅಂಕಗಳ ಪ್ರಶ್ನೆಗಳಿರುತ್ತವೆ.
ಖಚಿತ ಉತ್ತರಗಳಿರಲಿ: ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಸೂತ್ರಗಳು, ತತ್ವಗಳು ಹಾಗೂ ಸಿದ್ಧಾಂತಗಳಿದ್ದು ಅವುಗಳ ಆಧಾರದ ಮೇಲೆ ಉತ್ತರದಲ್ಲಿ ನಿರ್ದಿಷ್ಟತೆ ಇರುತ್ತದೆ. ಅದರಂತೆ ಸಮಾಜ ವಿಜ್ಞಾನ ವಿಷಯದಲ್ಲೂ ಉತ್ತರಗಳಲ್ಲಿ ಖಚಿತತೆ, ನಿರ್ದಿಷ್ಟತೆ ಇರಬೇಕು. ಸೀಮಿತ ಪದಗಳ ಮಿತಿಯಲ್ಲಿ ಸ್ಪಷ್ಟ ಉತ್ತರ ಬರೆದರೆ ಮಾತ್ರ ಹೆಚ್ಚು ಅಂಕಗಳಿಸಲು ಸಾಧ್ಯವಾಗುತ್ತದೆ.
ಪ್ರತಿ ವಿಭಾಗವನ್ನೂ ಓದಿ: ಸಮಾಜ ವಿಜ್ಞಾನ ವ್ಯಾಪ್ತಿ ದೊಡ್ಡದಿದೆ. ಹಾಗಾಗಿ ಅದನ್ನು ವಿಭಾಗವಾರು ಅಧ್ಯಯನ ಮಾಡುವುದರಿಂದ, ಒಂದು ಸ್ಪಷ್ಟತೆ ಸಿಗುತ್ತದೆ. ಇಲಾಖೆ ನಿಗದಿಪಡಿಸಿದ ಪಠ್ಯಕ್ರಮವನ್ನು ಗಮನಿಸಿದರೆ ಯಾವ ಯಾವ ವಿಭಾಗಗಳಿವೆ ಎಂಬುದು ತಿಳಿಯುತ್ತದೆ.
ಇತಿಹಾಸದ ವಿಷಯದಲ್ಲಿ ಮೂಲದಿಂದ ಹಿಡಿದು ಪ್ರಸ್ತುತವಿರುವ ಆಧುನಿಕ ಇತಿಹಾಸದವರೆಗಿನ ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಇದರಲ್ಲಿ ಕಾಲಗಣನೆ ಮುಖ್ಯ. ಹಾಗಾಗಿ ನಿಖರ ಟೈಮ್‌ಲೈನ್ ತಯಾರಿಸಿಕೊಳ್ಳಿ. ಇಸವಿಗೆ ಅನುಗುಣವಾದ ಕಾಲಾನುಕ್ರಮಣಿಕೆ ಮತ್ತು ರಾಜರುಗಳ ವಂಶಾವಳಿ ಬಹಳ ಮುಖ್ಯ. ಇದಕ್ಕಾಗಿ ವಿಸ್ಕೃತ ಟಿಪ್ಪಣಿ ಅಗತ್ಯ.
ರಾಜ್ಯಶಾಸ್ತ್ರದಲ್ಲಿ ಭಾರತದ ಸಂವಿಧಾನ, ನಮ್ಮ ಸರ್ಕಾರಗಳು, ರಕ್ಷಣಾ ಪಡೆಗಳು, ದೇಶದ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಕುರಿತು ಅಧ್ಯಯನ ಮಾಡಿ. ನೆರೆಹೊರೆಯ ದೇಶಗಳು ಹಾಗೂ ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಭಾರತದ ಸಂಬಂಧ, ಮಾನವ ಸಂಪನ್ಮೂಲಗಳು, ಮಾನವ ಹಕ್ಕುಗಳು ಮುಂತಾದ ಪರಿಕಲ್ಪನೆಗಳ ಬಗ್ಗೆ ಟಿಪ್ಪಣಿ ಮಾಡಿಟ್ಟುಕೊಂಡರೆ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು. ವಿವಿಧ ಸಮುದಾಯಗಳು ಹಾಗೂ ಅವುಗಳ ಸಂಸ್ಕೃತಿ, ಸಾಮಾಜಿಕ ಬದಲಾವಣೆಗಳು, ಸಾಮೂಹಿಕ ನಡವಳಿಗಳು ಮತ್ತು ಪ್ರತಿಭಟನೆಗಳು, ಸಾಮಾಜಿಕ ಸಮಸ್ಯೆಗಳು ಮುಂತಾದ ವಿಷಯಗಳ ಕುರಿತು ಆಳವಾದ ಅಧ್ಯಯನ ಮಾಡಬೇಕಾಗುತ್ತದೆ.
ಭೂಗೋಳದ ಅಧ್ಯಯನ ಒಂದು ರೀತಿಯ ವಿಜ್ಞಾನ ಇದ್ದಂತೆ. ಇಲ್ಲಿ ನಿಖರತೆ ಇರುತ್ತದೆ. ಭೂಮಿಯ ಉಗಮ, ನಮ್ಮ ಸೌರವ್ಯೂಹ, ಭೂಖಂಡಗಳು, ಅವುಗಳ ಭೂಸ್ವರೂಪಗಳು, ಅಕ್ಷಾಂಶ ಮತ್ತು ರೇಖಾಂಶಗಳು, ಭಾರತದ ಭೌಗೋಳಿಕ ಲಕ್ಷಣಗಳು, ಭಾರತದ ನೆಲ, ಜಲ ಹಾಗೂ ಖನಿಜ ಸಂಪನ್ಮೂಲಗಳು ಮುಂತಾದ ಅಂಶಗಳ ಬಗ್ಗೆ ಸ್ಪಷ್ಟ, ನಿಖರ ಹಾಗೂ ಪ್ರಸ್ತುತ ಮಾಹಿತಿಯನ್ನು ಅಪ್‌ಡೇಟ್ ಮಾಡಿಕೊಳ್ಳಿ. ಭೂಗೋಳ ಅಧ್ಯಯನಕ್ಕೆ ಭೂಪಟ, ಗ್ಲೋಬ್ ಮತ್ತು ಅಟ್ಲಾಸ್‌ಗಳು ಹೆಚ್ಚು ಸಹಾಯಕ.
ಆರ್ಥಿಕತೆಯ ವಿಧಗಳು, ಅಭಿವೃದ್ದಿ ಮೇಲೆ ಅರ್ಥಶಾಸ್ತ್ರದ ಪ್ರಭಾವ, ರಾಷ್ಟ್ರೀಯ ಆದಾಯ ಮತ್ತು ತಲಾ ಆದಾಯ, ಕೃಷಿ ಸಂಕಷ್ಟಗಳು, ದೇಶದ ಆರ್ಥಿಕ ಯೋಜನೆಗಳು, ಸಾಧನೆಗಳು ಮತ್ತು ವೈಫಲ್ಯಗಳು, ಉದಾರಿಕರಣ, ಖಾಸಗೀಕರಣ ಮತ್ತು ಜಾಗತೀಕರಣ, ಹಣಕಾಸು ಸಂಸ್ಥೆಗಳ ಕಾರ್ಯಾಚರಣೆ ಮುಂತಾದ ಅರ್ಥಶಾಸ್ತ್ರೀಯ ಅಂಶಗಳ ಕುರಿತು ಮಾಹಿತಿ ಸಂಗ್ರಹಿಸಿಕೊಳ್ಳಬೇಕು.
ವ್ಯಾಪಾರ, ಮಾರುಕಟ್ಟೆ, ಕೈಗಾರಿಕೆ, ಹಣಕಾಸಿನ ನಿರ್ವಹಣೆ, ಬ್ಯಾಂಕಿಂಗ್ ವ್ಯವಹಾರಗಳು, ಉದ್ಯಮಶೀಲ ವ್ಯಾಪಾರದ ಜಾಗತೀಕರಣ ಮುಂತಾದ ಅಂಶಗಳನ್ನು ವ್ಯವಹಾರ ಅಧ್ಯಯನ ವಿಭಾಗದಲ್ಲಿ ಅಧ್ಯಯನಕ್ಕೆ ಒಳಪಡಿಸಿಕೊಳ್ಳಬೇಕು. ಪ್ರಚಲಿತ ವಿದ್ಯಮಾನಗಳು ಹಾಗೂ ಈಗಾಗಲೇ ತಿಳಿದಿರುವ ಮಾಹಿತಿಯನ್ನು ಅಪ್‌ಡೇಟ್ ಮಾಡಿಕೊಳ್ಳುವುದಕ್ಕಾಗಿ ಕಡ್ಡಾಯವಾಗಿ ದಿನಪತ್ರಿಕೆ ಓದಬೇಕು.
ಅಧ್ಯಯನಕ್ಕೆ ಪೂರಕವಾದ ಪುಸ್ತಕಗಳು
6 ರಿಂದ 10ನೇ ತರಗತಿ ಕರ್ನಾಟಕ ರಾಜ್ಯ ಪಠ್ಯ ಪುಸ್ತಕಗಳು,
11 ರಿಂದ 12 ನೇ ತರಗತಿ ಪಿ.ಯು.ಸಿ. ಪಠ್ಯ ಪುಸ್ತಕಗಳು.
6 ರಿಂದ10 ಎನ್.ಸಿ.ಇ.ಆರ್.ಟಿ. ಪಠ್ಯಪುಸ್ತಕಗಳು (ಆಂಗ್ಲ ಮಾಧ್ಯಮದಲ್ಲಿ ಮಾತ್ರ ಲಭ್ಯ)
ಇತಿಹಾಸ – ಸದಾಶಿವ ಮತ್ತು ಎಚ್.ಆರ್.ಕೆ.
ರಾಜ್ಯಶಾಸ್ತ್ರ –ಎಚ್.ಎಂ.ರಾಜಶೇಖರ್
ಭೂಗೋಳ-ಕೆ.ಎಂ.ಸುರೇಶ, ಮಲ್ಲಪ್ಪ
ಅರ್ಥಶಾಸ್ತ್ರ -ಎಚ್.ಆರ್.ಕೆ.
ವಿಡಿಯೋ ವೀಕ್ಷಿಸಿ
ಕೋವಿಡ್ ಹಿನ್ನಲೆಯಲ್ಲಿ ಕಳೆದ ವರ್ಷ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಶಿಕ್ಷಣ ಇಲಾಖೆ ‘ವಿದ್ಯಾಗಮ’ ಹೆಸರಿನಲ್ಲಿ ನಿರ್ಮಿಸಿದ ಸಂವೇದ ಪಾಠಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಉಪಯುಕ್ತವಾಗಿವೆ. ಅಲ್ಲದೇ ಡಿ.ಎಸ್.ಇ.ಆರ್.ಟಿ ಎಜ್ಯುಸ್ಯಾಟ್ ಪಾಠಗಳಿಗೆ ತಯಾರಿಸಿದ ವಿಡಿಯೊ ಪಾಠಗಳು ಸಹ ಪರೀಕ್ಷೆಗೆ ಪೂರಕವಾಗಿವೆ. ಈ ಪಾಠಗಳು ಕೆಳಗಿನ ಲಿಂಕ್‌ಗಳಲ್ಲಿ ಲಭ್ಯವಿವೆ.
https://www.youtube.com/channel/UCYXGup94ByD1Lb6woVs_oGA/videos
https://www.youtube.com/channel/UCrnoyJbZlapzdMaOvMT9ZqQ?view_as=subscriber
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.