ADVERTISEMENT

ಹತ್ತನೇ ತರಗತಿ ನಂತರ ಅಲ್ಪಾವಧಿ ಕೋರ್ಸ್‌ಗಳು

ರೇಷ್ಮಾ ಶೆಟ್ಟಿ
Published 21 ಮೇ 2019, 19:31 IST
Last Updated 21 ಮೇ 2019, 19:31 IST
   

ಎಸ್‌.ಎಸ್‌.ಎಲ್‌.ಸಿ. ಅಥವಾ ಹತ್ತನೇ ತರಗತಿಯನ್ನು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎನ್ನುತ್ತಾರೆ. ಆದರೆ ಅನೇಕ ವಿದ್ಯಾರ್ಥಿಗಳು ಓದಿನಲ್ಲಿ ಹಿಂದುಳಿದ ಕಾರಣದಿಂದಲೋ, ಹೆಚ್ಚಿಗೆ ಓದಲು ಆಸಕ್ತಿ ಇಲ್ಲದ ಕಾರಣಕ್ಕೋ, ವೈಯಕ್ತಿಕ ಕಾರಣಗಳಿಂದಲೋ ಓದನ್ನು ನಿಲ್ಲಿಸಿ ಬಿಡುತ್ತಾರೆ. ಆದರೆ ಹತ್ತನೇ ತರಗತಿಗೆ ಓದು ನಿಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಅವರ ಭವಿಷ್ಯ ಅಲ್ಲಿಗೆ ಮುಗಿಯಿತು ಎಂದಲ್ಲ. ಆ ನಂತರವೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕೆಲವೊಂದು ಅಲ್ಪಾವಧಿಯ ಕೋರ್ಸ್‌ಗಳಿವೆ. ಈ ಕೋರ್ಸ್ ಮಾಡುವ ಮೂಲಕ 10ನೇ ತರಗತಿ ಓದಿದ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಅಂತಹ ಕೆಲವು ಕೋರ್ಸ್‌ಗಳ ಕುರಿತ ವಿವರ ಇಲ್ಲಿದೆ.

ಫೋಟೊಗ್ರಫಿ: ಫೋಟೊಗ್ರಫಿಯ ಬೇಸಿಕ್ ತಿಳಿದುಕೊಳ್ಳಲು ಪದವಿಯೇ ಬೇಕು ಎಂದೇನೂ ಇಲ್ಲ. ಅನೇಕ ಕಾಲೇಜುಗಳು 10ನೇ ತರಗತಿ ನಂತರ ಡಿಪ್ಲೋಮ ಹಾಗೂ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಮಾಡಲು ಅವಕಾಶ ನೀಡುತ್ತವೆ. ಫೋಟೊಗ್ರಫಿಯ ಬೇಸಿಕ್‌ ಕಲಿಯುವ ಮೂಲಕ ತಮ್ಮದೇ ಆದ ಸ್ಟುಡಿಯೊ ತೆರೆಯಬಹುದು. ಫ್ಯಾಷನ್ ಫೋಟೊಗ್ರಫಿ, ವೈಲ್ಡ್‌ ಲೈಫ್ ಫೋಟೊಗ್ರಫಿ ಮುಂತಾದವನ್ನು ಮಾಡಬಹುದು.

ಮಲ್ಟಿಮೀಡಿಯಾ: ತಂತ್ರಜ್ಞಾನದ ಹೆಜ್ಜೆ ಬೆಳೆಯುತ್ತಲೇ ಇದೆ. ಪ್ರತಿದಿನ ಒಂದಲ್ಲ ಒಂದು ಕ್ಷೇತ್ರದಲ್ಲಿ ತಂತ್ರಜ್ಞಾನದ ಬೆಳವಣಿಗೆಯ ಪರಿಯನ್ನು ನೋಡಬಹುದು, ಅದರಲ್ಲಿ ಮಲ್ಟಿಮೀಡಿಯಾ ಕೂಡ ಒಂದು. ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಈ ಕೋರ್ಸ್ ಮಾಡಬಹುದು. ಇದು ಜ್ಞಾನರ್ಜನೆಯ ಜೊತೆಗೆ ಸಂಪಾದನೆಗೂ ದಾರಿ ಮಾಡಿಕೊಡುತ್ತದೆ.

ADVERTISEMENT

ಮೇಕಪ್ ಆರ್ಟಿಸ್ಟ್‌: ಮೇಕಪ್ ಆರ್ಟಿಸ್ಟ್ ಆಗಲು ಯಾವುದೇ ಪದವಿಯ ಅಗತ್ಯವಿಲ್ಲ. ಆದರೆ ಇದರಲ್ಲಿ ಕಲಿಕೆ ಮುಖ್ಯ. ಜೊತೆಗೆ ಇದರಲ್ಲಿ ಪಳಗಬೇಕು ಎಂದರೆ ಮೇಕಪ್‌ನಲ್ಲಿ ಭಿನ್ನ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಒಮ್ಮೆ ಮೇಕಪ್‌ನ ಕೌಶಲಗಳನ್ನು ಅರಿತುಕೊಂಡರೆ ಈ ಕ್ಷೇತ್ರದಲ್ಲಿ ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದು. ಸಿನಿಮಾ, ರಂಗಭೂಮಿ ಕ್ಷೇತ್ರದಲ್ಲಿ ಮೇಕಪ್‌ ಆರ್ಟಿಸ್ಟ್‌ಗಳಿಗೆ ಬೇಡಿಕೆ ಹೆಚ್ಚು.

ಫ್ಯಾಷನ್ ಡಿಸೈನಿಂಗ್‌: ಈ ಕೋರ್ಸ್‌ಗೂ ಯಾವುದೇ ಪದವಿ ಹಾಗೂ ಓದಿನ ಅಗತ್ಯವಿಲ್ಲ. ಆದರೆ ಇದಕ್ಕೆ ಪ್ರತಿಭೆ ಹಾಗೂ ಕ್ರಿಯಾಶೀಲ ಮನೋಭಾವ ತುಂಬಾ ಮುಖ್ಯ. ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಲು ಮೊದಲು ನೀವು ನಿಮ್ಮಲ್ಲಿರುವ ಕೌಶಲವನ್ನು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದು ಮುಖ್ಯವಾಗುತ್ತದೆ. ನೀವು ನಿಮ್ಮದೇ ಆದ ಹೊಸ ಹೊಸ ಡಿಸೈನ್‌ಗಳನ್ನು ರಚಿಸುತ್ತಾ ಒಮ್ಮೆ ಅನುಭವಿ ಎನ್ನಿಸಿಕೊಂಡರೆ ಮತ್ತೆ ನಿಮ್ಮನ್ನು ಹಿಡಿಯುವವರೇ ಇಲ್ಲ.

ಸಾಮಾಜಿಕ ಸೇವೆ: ಅನೇಕ ಇನ್‌ಸ್ಟಿಟ್ಯೂಷನ್‌ ಸಾಮಾಜಿಕ ಸೇವೆಗಾಗಿ ಅಲ್ಪಾವಧಿಯ ಕೋರ್ಸ್‌ಗಳನ್ನು ಪರಿಚಯಿಸಿವೆ. ಇವುಗಳು ಯುವಕರಲ್ಲಿ ಸಾಮಾಜಿಕ ಮನೋಭಾವವನ್ನು ವೃದ್ಧಿಸುತ್ತವೆ. ಸರಿಯಾದ ಕ್ರಮದಲ್ಲಿ ಸಾಮಾಜಿಕ ಸೇವೆ ಮಾಡುವ ವಿಧಾನವನ್ನು ಕಲಿಸುತ್ತವೆ. ಆ ಮೂಲಕ ಎನ್‌ಜಿಒಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು.

ಇವುಗಳು ಹತ್ತನೇ ತರಗತಿಯ ನಂತರ ಮಾಡಬಹುದಾದ ಕೆಲವು ಕೋರ್ಸ್‌ಗಳು. ಆದರೆ 10ನೇ ತರಗತಿಯ ನಂತರ ಓದನ್ನು ನಿಲ್ಲಿಸುವುದು ಒಳ್ಳೆಯದಲ್ಲ. ಅನಿವಾರ್ಯ ಕಾರಣಗಳಿದ್ದು ಓದನ್ನು ನಿಲ್ಲಿಸಿದ್ದರೆ ಈ ಮೇಲಿನ ಕೋರ್ಸ್‌ ಮಾಡಿಕೊಂಡು ಉದ್ಯೋಗ ಗಿಟ್ಟಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.