ADVERTISEMENT

ಹೋರಾಟದ ಹಾದಿಯಲ್ಲಿ ಮೂಡಿದ ವಸಂತಗೀತೆ

ಕೋಡಿಬೆಟ್ಟು ರಾಜಲಕ್ಷ್ಮಿ
Published 18 ಡಿಸೆಂಬರ್ 2018, 19:32 IST
Last Updated 18 ಡಿಸೆಂಬರ್ 2018, 19:32 IST
ಬೆಸೆಂಟ್ 
ಬೆಸೆಂಟ್    

ಥಿಯೋಸೋಫಿಕಲ್ ಸೊಸೈಟಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಅನಿಬೆಸೆಂಟ್ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆರಂಭಿಸಿದ ಬೆಸೆಂಟ್ ಶಿಕ್ಷಣ ಸಂಸ್ಥೆ ನೂರು ವರ್ಷ ಪೂರೈಸಿದ ಸಂಭ್ರಮದಲ್ಲಿದೆ.

ಮಧ್ಯಮ ವರ್ಗದವರು, ಬಡವರು ಶಿಕ್ಷಣ ವಂಚಿತರಾಗಬಾರದು ಎಂಬ ಉದ್ದೇಶದಿಂದ ಬೆಸೆಂಟ್ ರಾಷ್ಟ್ರೀಯ ಬಾಲಿಕಾ ಪಾಠಶಾಲೆ ಆರಂಭವಾಯಿತು. ಬಳಿಕ ಅದು ಬೆಸೆಂಟ್ ನ್ಯಾಷನಲ್ ಗರ್ಲ್ಸ್ ಹೈಸ್ಕೂಲ್ ಎಂಬ ಹೆಸರಿನಲ್ಲಿ ಪ್ರೌಢಶಾಲೆಯಾಗಿ ರೂಪುಗೊಂಡಿತು.

1944ರಲ್ಲಿ ಬೆಸೆಂಟ್ ಮಹಿಳಾ ಪ್ರೌಢಶಾಲೆಯಲ್ಲಿ ಓದಿ ಎಸ್ಸೆಸ್ಸೆಲ್ಸಿ ಪರೀಕ್ಷೆ (ಅಂದಿನ ಸಿಕ್ಸ್ತ್ ಫಾರಂ) ಬರೆದ ಮೊದಲ ತಂಡದಲ್ಲಿ ಹಿರಿಯ ಲೇಖಕಿ ಲಲಿತಾ ರೈ ಕೂಡ ಒಬ್ಬರು. ಹೈಸ್ಕೂಲ್ ಓದಿದ ನೆನಪುಗಳನ್ನು ಅವರು ಈ ಇಳಿವಯಸ್ಸಿನಲ್ಲಿಯೂ ಉತ್ಸಾಹದಿಂದ ಹೇಳುತ್ತಾರೆ:

ADVERTISEMENT

‘ನಾವು ಮೊದಲ ಬ್ಯಾಚ್‍ನಲ್ಲಿ ಒಂಬತ್ತು ಮಂದಿ ಹುಡುಗಿಯರಿದ್ದೆವು. - ನಾನು, ಲಲಿತಾ ಬಿ., ಸುಂದರಿ, ಜಲಜ, ಸುಂದರಿ ಕೆ., ಸೀತಾರತ್ನ, ಶಾಂತ, ಅಹಲ್ಯ ಮತ್ತು ಸ್ಟೆಲ್ಲ ತರಗತಿಯಲ್ಲಿ ಇದ್ದೆವು. ಎಂಟು ಮಂದಿ ಪರೀಕ್ಷೆ ಬರೆದಿದ್ದು ನೆನಪು. ಪ್ರಾಥಮಿಕ ಶಾಲೆಗೆ ಅನಿಬೆಸೆಂಟ್ ಅವರು 1918ರ ನವೆಂಬರ್‌ನಲ್ಲಿ ಶಿಲಾನ್ಯಾಸ ಮಾಡಿ, ಮುಂದಿನ ಜೂನ್‍ನಲ್ಲಿ ತರಗತಿ ಶುರುವಾಗಿತ್ತು. ಕಮಲಾದೇವಿ ಚಟ್ಟೋಪಾಧ್ಯಾಯರ ತಾಯಿ ಗಿರಿಜಾಬಾಯಿ ಅವರ ಮನೆಯಲ್ಲಿ ಮೊದಲ ವರ್ಷಗಳಲ್ಲಿ ತರಗತಿಗಳು ಶುರುವಾಗಿದ್ದವು. ನಾನು ಹುಟ್ಟಿದ್ದೇ 1928ರಲ್ಲಿ. ಅಂದರೆ ಬೆಸೆಂಟ್ ಶಾಲೆಯಲ್ಲಿ ಬಹುಕಾಲ 5ನೇ ತರಗತಿಯವರೆಗೆ ಮಾತ್ರ ಕಲಿಯುವ ಅವಕಾಶವಿತ್ತು’ ಎಂದು ನೆನಪುಗಳನ್ನು ಕೆದಕುತ್ತಾರೆ.

ಸಾಹಿತ್ಯಕ್ಷೇತ್ರದಲ್ಲಿ ಕೆಲಸ ಮಾಡಿರುವ ಲಲಿತಾ ರೈ ಅವರು ತುಳು ಮತ್ತು ಕನ್ನಡದಲ್ಲಿಹಲವು ಕಥೆ–ಕಾದಂಬರಿಗಳನ್ನು ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಇಳಿವಯಸ್ಸಿನಲ್ಲಿ ಅಧ್ಯಾತ್ಮದತ್ತ ಹೊರಳಿದವರು. ಅಂದಿನ ಸಮಾಜದಲ್ಲಿ ಇದ್ದ ಅನೇಕ ಸಮಾಜಮುಖಿ ವ್ಯಕ್ತಿಗಳ ಆಶಯಗಳನ್ನು ಅವರು ಗ್ರಹಿಸಬಲ್ಲವರು. ಶಾಲೆಯೊಂದು ರೂಪುಪಡೆದ ಬಗೆಯನ್ನು ವಿವರಿಸುವಾಗ ಅದರ ಹಿಂದೆ ಶ್ರಮಿಸಿದ ಅನೇಕರ ಹೆಸರುಗಳು ಅವರ ಮಾತುಗಳಲ್ಲಿ ಹಾದುಹೋಗುತ್ತವೆ:

‘ಮಹಿಳೆಯರಿಗೆ ಶಿಕ್ಷಣ ಸಂಸ್ಥೆಯ ಅಗತ್ಯವಿದೆ ಎನ್ನುವುದನ್ನು ಮನಗಂಡ ಅಂದಿನ ಹಿರಿಯರ ಪೈಕಿ ಹೆಚ್ಚಿನವರು ಥಿಯೋಸೊಫಿಕಲ್ ಸೊಸೈಟಿಯ ಸದಸ್ಯರು. ಅನಿಬೆಸೆಂಟ್ ಮೊದಲ ಬಾರಿಗೆ ಮಂಗಳೂರಿಗೆ ಬಂದಾಗಲೇ ಈ ಸೊಸೈಟಿ ಆರಂಭವಾಗಿತ್ತು. ಸುಧಾರಣೆ, ಸ್ವದೇಶೀ ಚಿಂತನೆ, ತತ್ವಜ್ಞಾನದ ಚರ್ಚೆಗೆ ಈ ಸೊಸೈಟಿಯ ಒಂದು ಕೇಂದ್ರವಾಗಿತ್ತು. ಕುದ್ಮುಲ್ ರಂಗರಾವ್, ಕಾರ್ನಾಡ್ ಸದಾಶಿವರಾವ್, ಬೆನಗಲ್ ಸಂಜೀವ ರಾವ್, ಏಕಾಂಬರರಾಯರು ಸೇರಿದಂತೆ ಅನೇಕರು ಈ ಸುಧಾರಣವಾದೀ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಅನಿಬೆಸೆಂಟ್ ಅವರು ಎರಡನೇ ಬಾರಿಗೆ ಮಂಗಳೂರಿಗೆ ಬಂದಾಗ ಶಾಲೆಗೆ ಶಿಲಾನ್ಯಾಸ ಮಾಡುವುದು ಸಾಧ್ಯವಾಯಿತು.

‘ನಾನು ಶಾಲೆಗೆ ಹೋಗುತ್ತಿದ್ದಾಗ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಅರ್ಚಕರ ಪತ್ನಿ ರಾಧಾ ಶಾಂತಿ ಎಂಬವರು ಪಾಠ ಮಾಡುತ್ತಿದ್ದರು. ಬಹಳ ಅಕ್ಕರೆಯಿಂದ ಪಾಠ ಮಾಡುತ್ತಿದ್ದ ಅವರು ನನ್ನ ನೆಚ್ಚಿನ ಶಿಕ್ಷಕಿಯಾಗಿದ್ದರು. ಹಿಂದೆ ಆರೋಗ್ಯಸಚಿವರಾಗಿದ್ದ ಡಾ. ಎ.ಬಿ. ಶೆಟ್ಟಿ ಅವರ ಮಗಳು ಸುಶೀಲಾ ಚೌಟ ಅವರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾಗಿ ಶಿಸ್ತಿನಿಂದ ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದರು. ಅವರೆಲ್ಲ ಈಗಿಲ್ಲ. ಆದರೆ ಅವರು ಕಲಿಸಿದ ಮಾತುಗಳು ನನ್ನಲ್ಲಿ ಅಚ್ಚಳಿಯದೇ ಉಳಿದಿವೆ’.

‘ಕೈತೋಟ ಮಾಡುವುದರಲ್ಲಿ ತುಂಬ ಉತ್ಸಾಹ ಹೊಂದಿದ್ದ ವಸಂತಿ ಟೀಚರ್, ಮನೋರಮಾ ಬಾಯಿ ಈಗಲೂ ಇದ್ದಾರೆ. ಇಳಿವಯಸ್ಸಿನಲ್ಲಿಯೂ ಅವರಲ್ಲಿ ಶಾಲೆಯ ನನೆಪುಗಳು ಅಳಿದಿಲ್ಲ – ಎನ್ನುತ್ತ ಲಲಿತಾ ರೈ ಶಾಲೆಯ ಸಭಾಂಗಣದ ಕಥೆ ಹೇಳುವುದು ಹೀಗೆ:

‘ನಮ್ಮ ಬೆಸೆಂಟ್ ಶಾಲೆಯಲ್ಲಿ ಒಂದು ಸುಂದರ ಗೋಪುರವಿದ್ದ ಸಭಾಂಗಣವಿತ್ತು. ಅಲ್ಲಿ ಮದುವೆಗೂ ಅವಕಾಶ ಕಲ್ಪಿಸುತ್ತಿದ್ದರು. ಇದೇ ಸಭಾಂಗಣದಲ್ಲಿ ಜಾತಿ ಮೀರಿದ ಕ್ರಾಂತಿಯ ಅನೇಕ ಮದುವೆಗಳು ನಡೆದಿದ್ದವು. ಕ್ರಾಂತಿ ಮತ್ತು ಸಮಾಜಪರಿವರ್ತನೆಯ ಮಾತುಗಳು ಬದುಕಿನಲ್ಲಿ ಹೇಗೆ ಅನುಷ್ಠಾನಕ್ಕೆ ಬರುತ್ತವೆ ಎಂಬುದಕ್ಕೆ ಈ ಮದುವೆಗಳೇ ಸಾಕ್ಷಿ.’

ಶಾಲೆಯ ಬೆಳವಣಿಗೆಯಲ್ಲಿ ಸ್ಥಳೀಯ ಮುಖಂಡರು, ದೂರದೂರಿನ ಮುಖಂಡರೂ ಮುತುವರ್ಜಿ ವಹಿಸುತ್ತಿದ್ದರು. ಸಾಹಿತಿ ಶಿವರಾಮ ಕಾರಂತರು ಬೆಸೆಂಟ್ ಶಾಲೆಗೆ ಆಗಾಗ ಭೇಟಿ ನೀಡುತ್ತಿದ್ದರು.

‘ಶಾಲೆಯಲ್ಲಿ ಗೀತನಾಟಕ, ಶಾಡೋಪ್ಲೇ, ಯಕ್ಷಗಾನ, ಹಾಡು ಕುಣಿತ – ಹೀಗೆ ಎಲ್ಲವನ್ನೂ ಹೇಳಿಕೊಡುತ್ತಿದ್ದರು. ಶಾಲೆಯಲ್ಲಿ ಹಾಡುವಾಗ ಪದೇ ಪದೇ ತಿದ್ದುತ್ತಿದ್ದರು. ಭಾವಕ್ಕೆ ಸರಿಯಾದ ರಾಗ ಇರಬೇಕು’ – ಅದು ಅವರ ಕಡಕ್ ಆಜ್ಞೆ’.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಮೊದಲ ಬ್ಯಾಚ್ ಎಂಬ ಹೆಗ್ಗಳಿಕೆ ಲಲಿತಾ ರೈ ಅವರ ತರಗತಿಯ ವಿದ್ಯಾರ್ಥಿನಿಯರಿಗೆ ಇದ್ದರೂ ಆ ವರ್ಷ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿಲ್ಲ. ಅದು ಸ್ವಾತಂತ್ರ್ಯ ಹೋರಾಟದ ಗುಂಗು ತೀವ್ರವಾಗಿ ವ್ಯಾಪಿಸಿದ್ದ ಕಾಲ. ಹೋರಾಟದ ಕಥೆಗಳನ್ನು ಕೇಳಿದ ಹುಡುಗಿಯರಿಗೆ ತಾವೂ ಈ ಹೋರಾಟವನ್ನು ಬೆಂಬಲಿಸಬೇಕು ಎಂದು ಅನ್ನಿಸದೇ ಇರುವುದೇ ? ಹಾಗಾಗಿ ಕ್ವಿಟ್ ಇಂಡಿಯಾ ಚಳವಳಿಯ ಅಂಗವಾಗಿ ಹುಡುಗಿಯರೆಲ್ಲ ಬೆಸೆಂಟ್ ಶಾಲೆಯಿಂದ ಹೊರಬಂದು ರಸ್ತೆಯಲ್ಲಿ ಕುಳಿತು ಮುಷ್ಕರವನ್ನು ಬೆಂಬಲಿಸಿ ಜೈಕಾರ ಹಾಕಿಯೇಬಿಟ್ಟರು.

‘ಮನೆಯವರ, ಬಂಧುಗಳ, ನೆರೆಹೊರೆಯವರ ಟೀಕೆಯನ್ನು ಎದುರಿಸಿಯೇ ಹೆಣ್ಣುಮಕ್ಕಳನ್ನು ಹೆತ್ತವರು ಶಾಲೆಗೆ ಕಳುಹಿಸಿದ್ದರಲ್ಲವೇ? ಇನ್ನು ಮಕ್ಕಳೆಲ್ಲ ರಸ್ತೆಯಲ್ಲಿ ಮುಷ್ಕರ ಕುಳಿತ ಸುದ್ದಿ ಕೇಳಿದರೆ ಅವರೆಲ್ಲ ಸುಮ್ಮನಿರುತ್ತಾರೆಯೇ! ಎಲ್ಲೆಡೆಯಿಂದ ಟೀಕೆಯ ಸುರಿಮಳೆಯೇ ಬಂತು. ಶಾಲೆಯಲ್ಲಿಯೂ ಶಿಕ್ಷಕ ವರ್ಗಕ್ಕೆ ಭಾರೀ ಕೋಪ ಬಂದು ಬೀಳ್ಕೊಡುಗೆ ಸಮಾರಂಭ ಮಾಡುವ ಗೋಜಿಗೇ ಹೋಗಲಿಲ್ಲ.

‘ಹಾಗಂತ ಬೇಜಾರಿಲ್ಲ. ಎಲ್ಲ ಶಿಕ್ಷಕರೂ ನಮ್ಮನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಹಾಡು, ನಾಟಕ, ಸಾಹಿತ್ಯ ಎನ್ನುತ್ತ ಪ್ರತಿದಿನವೂ ಉತ್ಸವದಂತೆಯೇ ತರಗತಿಗಳು ನಡೆಯುತ್ತಿದ್ದವು. ಬರೇ ಮನೆಯೊಳಗೇ ಇದ್ದಿದ್ದರೆ ಎಷ್ಟೊಂದು ಜ್ಞಾನ ವಂಚಿತರಾಗುತ್ತಿದ್ದೆವು ಎಂದೆಲ್ಲ ನನಗೆ ಆಗಾಗ ಅನಿಸುತ್ತಿದೆ’ ಎನ್ನುತ್ತಾರೆ ಲಲಿತಾ ರೈ.

‘ಬೆಸೆಂಟ್ ಪ್ರೌಢಶಾಲೆಗೆ ಮಾರ್ಗರೆಟ್ ಕಸಿನ್ಸ್ ಅವರೇ ಪ್ರಾಂಶುಪಾಲರಾದರು. ರಾಷ್ಟ್ರಕವಿ ಕುವೆಂಪು ಅವರಿಗೆ ಕನ್ನಡದಲ್ಲಿಯೇ ಬರೆಯುವಂತೆ ಸಲಹೆ ಮಾಡಿದ ಐರಿಷ್ ಕವಿಕಸಿನ್ಸ್ ಅವರ ಪತ್ನಿಯೇ ಮಾರ್ಗರೆಟ್’ ಎಂದು ಬೆಸೆಂಟ್‍ನ ಹಿರಿಯ ವಿದ್ಯಾರ್ಥಿನಿಯೂ ಆದ ಹಿರಿಯ ಲೇಖಕಿ ಡಾ. ಚಂದ್ರಕಲಾ ನಂದಾವರ ನೆನಪಿಸಿಕೊಳ್ಳುತ್ತಾರೆ.

ಶಿವರಾಮ ಕಾರಂತರು ಮತ್ತು ಸ್ವಾತಂತ್ರ್ಯ ಹೋರಾಟಗಾರ ಪಿ.ಕೆ. ನಾರಾಯಣ ಅವರ ವಿಶಾಲವಾದ ಸಂಪರ್ಕದಿಂದಾಗಿ ಸಾಹಿತ್ಯ ಮತ್ತು ಹೋರಾಟದ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ದಿಗ್ಗಜರೆಲ್ಲ ಬೆಸೆಂಟ್ ಸಂಸ್ಥೆಗೆ ಬಂದು ತಮ್ಮ ಅನುಭವ ಧಾರೆಯನ್ನು ಹರಿಸುತ್ತಿದ್ದರು.

ರವೀಂದ್ರನಾಥ ಠಾಗೋರ್, ಜಿ. ಪಿ. ರಾಜರತ್ನಂ, ಸಿದ್ಧವನಹಳ್ಳಿ ಕೃಷ್ಣ ಶರ್ಮ,ನಿಟ್ಟೂರು ಶ್ರೀನಿವಾಸ ರಾವ್ – ಹೀಗೆ ದೊಡ್ಡವರ ಮಾತುಗಳನ್ನು ಕೇಳುವುದು ಬೆಸೆಂಟ್‍ನ ವಿದ್ಯಾರ್ಥಿಸಮೂಹಕ್ಕೆ ಸಾಧ್ಯವಾಯಿತು. ಹಾಗೆ ಬಂದವರು ಯಾರೂ ರಾಜಕೀಯ ವಿಚಾರಗಳನ್ನು ಮಾತನಾಡುತ್ತಿರಲಿಲ್ಲ. ಗಾಂಧೀಜಿಯ ಸಮಾಜಮುಖಿ ಚಿಂತನೆ, ಜಾತಿಯನ್ನು ಮೀರುವ ಅಗತ್ಯ, ಅಶ್ಪೃಶ್ಯತೆಯನ್ನು ಅಳಿಸುವುದು ಹೇಗೆ ಎಂಬೆಲ್ಲ ವಿಚಾರಗಳನ್ನು ಮಕ್ಕಳಿಗೆ ಹೇಳುತ್ತಿದ್ದರು ಎಂದು ಹಿರಿಯ ವಿದ್ಯಾರ್ಥಿನಿಯರ ಮಾತುಗಳನ್ನು ಉಲ್ಲೇಖಿಸಿ ಡಾ. ಚಂದ್ರಕಲಾ ವಿವರಿಸುತ್ತಾರೆ.

ಈಗ ಬೆಸೆಂಟ್ ಶಿಕ್ಷಣ ಸಂಸ್ಥೆಯು ಸ್ನಾತಕೋತ್ತರ ಶಿಕ್ಷಣ ನೀಡುವವರೆಗೆ ಬೆಳೆದಿದೆ; ಸಂಧ್ಯಾಕಾಲೇಜು ಇದೆ. ಸಾವಿರಾರು ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡುತ್ತ ಹೊಸ ಕೋರ್ಸುಗಳು, ಹೊಸ ರೀತಿಯ ಪಾಠಪ್ರವಚನದ ಕ್ರಮಗಳಿಗೆ ತೆರೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.