ಹಣ
ಲಸಿಕೆಗೆ ವಿ.ವಿ. ನೆರವು
ಲಖನೌ : ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಇಲ್ಲಿನ ರಾಜಭವನದಲ್ಲಿ ಇತ್ತೀಚೆಗೆ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲ್ಲೋಮ ವೈರಸ್) ಲಸಿಕೆಯನ್ನು ಉಚಿತವಾಗಿ ನೀಡಲಾಯಿತು.
ಹದಿಹರೆಯದ ಹೆಣ್ಣುಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಪಾರು ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
‘ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಬಡ ಕುಟುಂಬಗಳಿಗೆ ಎಚ್‌ಪಿವಿ ಲಸಿಕೆ ಕೊಡಿಸುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ, ವಿಶ್ವವಿದ್ಯಾಲಯಗಳ ನೆರವಿನೊಂದಿಗೆ ರಾಜಭವನವು ವಿಶೇಷ ಯೋಜನೆ ಹಮ್ಮಿಕೊಂಡಿದೆ. 50 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಈಗಾಗಲೇ ಉಚಿತವಾಗಿ ಲಸಿಕೆ ನೀಡಲಾಗಿದೆ’ ಎಂದು ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ 80 ಮಕ್ಕಳನ್ನು ಶಾಲೆಗೆ ಸೇರಿಸಿ ಕೌಶಲ ತರಬೇತಿ ನೀಡುವ ಮೂಲಕ, ಅವರನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಸಹ ರಾಜಭವನ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಅವಮಾನಕರ ಶಿಕ್ಷೆ ಸ್ವಯಂಪ್ರೇರಿತ ತನಿಖೆ
ಚಂಡೀಗಡ: ಹೋಂವರ್ಕ್ ಮಾಡದ 5ನೇ ತರಗತಿಯ ಬಾಲಕಿಗೆ ಶಾಲೆಯೊಂದು ಅವಮಾನಕರವಾದ ರೀತಿಯಲ್ಲಿ ಶಿಕ್ಷೆ ನೀಡಿದೆ ಎನ್ನಲಾದ ಪ್ರಕರಣದ ಸ್ವಯಂಪ್ರೇರಿತ ತನಿಖೆಗೆ ಹರಿಯಾಣದ ಮಾನವ ಹಕ್ಕುಗಳ ಆಯೋಗ ಮುಂದಾಗಿದೆ.
ಸೋನಿಪತ್ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಕೃತ್ಯ ನಡೆದಿದೆ. 11 ವರ್ಷದ ಬಾಲಕಿಗೆ ಬಸ್ಕಿ ಹೊಡೆಯುವ, ತರಗತಿ ಕೋಣೆ ಮತ್ತು ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಶಿಕ್ಷೆ ನೀಡಲಾಗಿದೆ. ಅಷ್ಟೇ ಅಲ್ಲದೆ, ಯುಕೆಜಿ ಮಕ್ಕಳಿಂದ ಆಕೆಗೆ ‘ಶೇಮ್ ಶೇಮ್’ ಎಂದು ಕೂಗಿಸಲಾಗಿದೆ. ಇನ್ನು ಮುಂದೆ ಹೋಂವರ್ಕ್ ಮಾಡದೇ ಬಂದರೆ ಅವಳ ತಲೆ ಬೋಳಿಸುವುದಾಗಿ ಮುಖ್ಯೋಪಾಧ್ಯಾಯರು ಬೆದರಿಕೆಯನ್ನು ಸಹ ಒಡ್ಡಿದ್ದಾರೆ. ಇದರಿಂದ ಮಾನಸಿಕ ಆಘಾತಕ್ಕೆ ಒಳಗಾಗಿರುವ ಬಾಲಕಿ ಶಾಲೆಗೆ ಗೈರುಹಾಜರಾಗಿದ್ದಾಳೆ ಮತ್ತು ಆಕೆಗೆ ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಶಾಲೆಯು ಕಲಿಕೆ, ಪ್ರೋತ್ಸಾಹ ಮತ್ತು ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಿ ಇರಬೇಕೇ ವಿನಾ ಹೆದರಿಕೆ, ಅವಮಾನ ಅಥವಾ ಆಘಾತಕ್ಕೆ ಕಾರಣವಾಗುವಂತಹ ಶಿಕ್ಷೆ ನೀಡುವ ಸ್ಥಳವಾಗಿರಬಾರದು ಎಂದು ಆಯೋಗದ ಮುಖ್ಯಸ್ಥ, ನ್ಯಾಯಮೂರ್ತಿ ಲಲಿತ್ ಬಾತ್ರಾ ಮತ್ತು ಸದಸ್ಯರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.