ADVERTISEMENT

ಕೇಂದ್ರೀಯ ವಿ.ವಿ.ಯಲ್ಲಿ ಮತ್ತೆ ಮೂರು ಹೊಸ ಕೋರ್ಸ್‌

ಮೇ 25–26ರಂದು ರಾಜ್ಯದ 8 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 12:55 IST
Last Updated 30 ಮಾರ್ಚ್ 2019, 12:55 IST
ಮಹೇಶ್ವರಯ್ಯ
ಮಹೇಶ್ವರಯ್ಯ   

ಹುಬ್ಬಳ್ಳಿ: ಕಲಬುರ್ಗಿ ಜಿಲ್ಲೆ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿಯುಕೆ) ಈ ವರ್ಷದಿಂದ ಮತ್ತೆ ಮೂರು ಹೊಸ ಸ್ನಾತೋತ್ತರ ಕೋರ್ಸ್‌ಗಳನ್ನು ಆರಂಭಿಸಿದೆ. ಈ ಕೋರ್ಸ್‌ಗಳು ಸೇರಿದಂತೆ ಈಗಾಗಲೇ ವಿ.ವಿ.ಯಲ್ಲಿ ಇರುವ 23 ವಿವಿಧ ವಿಭಾಗಗಳಿಗೆ ಪ್ರವೇಶ ಪ್ರಕ್ರಿಯೆ ಅರಂಭವಾಗಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ವಿ.ವಿ. ಕುಲಪತಿ ಡಾ.ಎಚ್‌.ಎಂ. ಮಹೇಶ್ವರಯ್ಯ, ‘2010ರಲ್ಲಿ ಆರಂಭವಾದ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ 1800ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಪ್ರತಿವರ್ಷ 22 ರಾಜ್ಯಗಳ 750 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹುದಾಗಿದೆ. ಹೈದರಾಬಾದ್‌–ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಶೇ 8ರಷ್ಟು ಮೀಸಲಾತಿ ಹೊರತುಪಡಿಸಿ ದೇಶದ ಯಾವ ರಾಜ್ಯದಿಂದ ಬೇಕಾದರೂ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡಬಹುದು’ ಎಂದರು.

‘ಕೇಂದ್ರೀಯ ವಿಶ್ವವಿದ್ಯಾಲಯ ಆಗಿದ್ದರಿಂದ ರಾಜ್ಯದ ವಿ.ವಿ.ಗಳಿಗಿಂತ ಅತಿ ಹೆಚ್ಚು ಅನುದಾನ ನಮಗೆ ಬರುತ್ತದೆ. ಈಗಾಗಲೇ ₹ 550 ಕೋಟಿ ಖರ್ಚು ಮಾಡಿ ಭವ್ಯ ಕ್ಯಾಂಪಸ್‌ ನಿರ್ಮಿಸಲಾಗಿದೆ. ಸುಸಜ್ಜಿತ ವಿದ್ಯಾರ್ಥಿ–ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಿದ್ದು, ವಿಶಾಲವಾದ ಗ್ರಂಥಾಲಯ, ಉಚಿತ ವೈ–ಫೈ ಸಂಪರ್ಕವಿದೆ. ಬಿ.ಟೆಕ್‌ ಕೋರ್ಸ್‌ ಬೋಧಿಸಲು ಹೈದರಾಬಾದ್‌ ಐಐಟಿಯ ಪ್ರಾಧ್ಯಾಪಕರು ನಮ್ಮ ವಿಶ್ವವಿದ್ಯಾಲಯಕ್ಕೆ ಬರುತ್ತಾರೆ’ ಎಂದು ಹೇಳಿದರು.

ADVERTISEMENT

ಪ್ರವೇಶ ಪ್ರಕ್ರಿಯೆ ಮಾರ್ಚ್‌ 13ರಿಂದ ಆರಂಭವಾಗಿದ್ದು, ಏಪ್ರಿಲ್‌ 13ರವರೆಗೂ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮೇ 10ರಂದು ಪ್ರವೇಶ ಪರೀಕ್ಷೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ರಾಜ್ಯದ ಕಲಬುರ್ಗಿ, ಬೀದರ್‌, ಯಾದಗಿರಿ, ಹುಬ್ಬಳ್ಳಿ, ಬೆಂಗಳೂರು, ತುಮಕೂರು, ಮಂಗಳೂರು, ರಾಯಚೂರು, ದಾವಣಗೆರೆ, ಮೈಸೂರು, ಕೊಪ್ಪಳ, ಬಳ್ಳಾರಿ ಹಾಗೂ ಬೆಳಗಾವಿ ಸೇರಿದಂತೆ ದೇಶದ 120 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.

ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ದೈಹಿಕ ಶಿಕ್ಷಣ ಹಾಗೂ ಹೋಟೆಲ್ ಮ್ಯಾನೇಜ್‌ಮೆಂಟ್‌ ಅಂಡ್‌ ಟೂರಿಸಂ ಕೋರ್ಸ್‌ಗಳನ್ನು ಪ್ರಸಕ್ತ ವರ್ಷದಿಂದ ಆರಂಭಿಸಲಾಗಿದೆ ಎಂದರು.

ಮಾಹಿತಿಗೆ www.cuk.ac.in ವೆಬ್‌ಸೈಟ್‌ ಸಂಪರ್ಕಿಸಬಹುದು.

ಪರೀಕ್ಷಾ ನಿಯಂತ್ರಕ ಬಿ.ಆರ್‌.ಕೆರೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.