ADVERTISEMENT

ಬೇಡವಾದದ್ದನ್ನು ಮನಸ್ಸಿನಿಂದ ಹೊರ ಹಾಕಿ: ಜಯಪ್ರಕಾಶ ನಾಗತಿಹಳ್ಳಿ ಕಿವಿಮಾತು

ಶರಣಬಸಪ್ಪ ಎಸ್‌.ಗಡೇದ
Published 2 ಫೆಬ್ರುವರಿ 2019, 19:45 IST
Last Updated 2 ಫೆಬ್ರುವರಿ 2019, 19:45 IST
ಜಯಪ್ರಕಾಶ ನಾಗತಿಹಳ್ಳಿ
ಜಯಪ್ರಕಾಶ ನಾಗತಿಹಳ್ಳಿ   

ಬಸವನಬಾಗೇವಾಡಿ:ಎಸ್‌ಎಸ್ಎಲ್‌ಸಿ, ಪಿಯುಸಿ ಪರೀಕ್ಷೆ ಸಮೀಪಿಸುತ್ತಿವೆ. ಈ ಹೊತ್ತಿನಲ್ಲಿ ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಿ, ವಿಶ್ವಾಸ ಮೂಡಿಸುವ ಯತ್ನ ಎಲ್ಲೆಡೆ ಆರಂಭವಾಗಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ವಿಜಯಪುರದ ಚಾಣಕ್ಯ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಈಚೆಗೆ ಪಟ್ಟಣದಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು.

ಮಕ್ಕಳಲ್ಲಿ ಭರವಸೆ ತುಂಬಲಿಕ್ಕಾಗಿಯೇ ಈ ಉಪನ್ಯಾಸ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿತ್ವ ವಿಕಸನ ತರಬೇತುದಾರ ಜಯಪ್ರಕಾಶ ನಾಗತಿಹಳ್ಳಿ, ತಮ್ಮ ವೃತ್ತಿಯ ಬಗ್ಗೆ, ಪರೀಕ್ಷೆಗಳ ಬಗ್ಗೆ ‘ಪ್ರಜಾವಾಣಿ’ ಜತೆ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.

ADVERTISEMENT

* ಪರೀಕ್ಷಾ ಭಯ ಹೇಗೆ ಹೋಗಲಾಡಿಸಬೇಕು ?

ಮಕ್ಕಳಲ್ಲಿ ಪರೀಕ್ಷೆ ಎಂಬ ಭಯ ಹುಟ್ಟಿಸದೆ, ಅದೊಂದು ಹಬ್ಬ ಎಂಬ ಭಾವನೆ ಮೂಡಿಸಬೇಕು. ಹಬ್ಬದ ಆಚರಣೆಗೆ ಸಂಭ್ರಮದಿಂದ ತೆರಳುವ ರೀತಿ, ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹೋಗುವಂಥ ಮನೋಭೂಮಿಕೆ ಸಿದ್ಧಗೊಳಿಸಬೇಕು. ಭಯ, ಆತಂಕ ಬಿಟ್ಟು ನಿರಾಳರನ್ನಾಗಿಸಬೇಕು.

* ಹೇಗೆ ತಯಾರಿ ನಡೆಸಬೇಕು ?

ಮೂರು ಹಂತಗಳಿವೆ. ಪರೀಕ್ಷೆ ದಿನಗಳ ಮುಂಚೆ ಅವರ ಓದುವಿಕೆ, ಬರವಣಿಗೆ ನಿಯಮಿತವಾಗಿರಬೇಕು. ದೊಡ್ಡ ಸಂಗತಿಗಳನ್ನು ಪುಟ್ಟದಾಗಿ ಸಾರ ಸಂಗ್ರಹ, ಟಿಪ್ಪಣಿ ಬರೆದು ಅದನ್ನು ಓದಿ ಮನನ ಮಾಡಿಕೊಳ್ಳಬೇಕು. ಗುಂಪು ಓದು ಚರ್ಚೆಗಳ ಮೂಲಕ ಬಲಪಡಿಸಿಕೊಳ್ಳಬೇಕು.

ಪರೀಕ್ಷೆ ದಿನಗಳಂದು ವ್ಯಕ್ತಿತ್ವ, ಆರೋಗ್ಯ ಕಾಪಾಡಿಕೊಳ್ಳಬೇಕು. ಯಾವುದೇ ಆತಂಕಕ್ಕೊಳಗಾಗಬಾರದು. ಪರೀಕ್ಷೆ ಮುಗಿದ ಮೇಲೆ ಎಷ್ಟೇ ಅಂಕ ಬರಲಿ, ಅದಕ್ಕೆ ಒತ್ತು ನೀಡಬಾರದು. ಪರೀಕ್ಷೆ, ಪಾಸು, ಫೇಲು ಅಂಕಗಳೇ ಬದುಕಲ್ಲ.

* ಶಿಕ್ಷಕ ವೃತ್ತಿ ಬಗ್ಗೆ ನಿಮ್ಮ ಅಭಿಪ್ರಾಯ

ನಂಬರ್‌ ಒನ್‌ ವೃತ್ತಿ. ನೋಬಲ್‌ ಪ್ರೊಫೆಷನ್. ಇದರಲ್ಲಿ ಸಿಗುವಷ್ಟು ತೃಪ್ತಿ ಮತ್ತೊಂದರಲ್ಲಿ ಸಿಗಲ್ಲ.

* ನಿಮ್ಮ ತರಬೇತಿಗೆ ಪ್ರೇರಣೆ ಏನು ?

ಎರಡೂವರೆ ದಶಕದಲ್ಲಿ 3.5 ಲಕ್ಷ ಜನರಿಗೆ ವ್ಯಕ್ತಿತ್ವ ವಿಕಸನದ ಮಾರ್ಗದರ್ಶನ ನೀಡಿರುವೆ. ಜೇಸಿಸ್ ಸಂಸ್ಥೆಯ ತರಬೇತಿ ನೋಡಿ ಪ್ರೇರಿತನಾದೆ. ನಾನೂ ಏಕೆ ತರಬೇತುದಾರನಾಗಬಾರದೆಂದು ಪ್ರಯತ್ನಿಸಿದೆ. ತರಬೇತಿ ಪಡೆದೆ. ಅಂತರರಾಷ್ಟ್ರೀಯ ಮಟ್ಟದ ತರಬೇತುದಾರನಾದೆ.

ನನ್ನ ಮಾತು, ಭಾಷಣ ಕೇಳಿ ಬದಲಾದೆವು, ಬದುಕಿದೆವು ಅಂತ ಹೆಚ್ಚಿನ ಜನ ಹೇಳಿದ್ರು. ಅದಕ್ಕೆ ನನ್ನ ಬದುಕಿನ ಉದ್ದೇಶವನ್ನೇ ಇದನ್ನು ಮಾಡಿಕೊಂಡೆ.

* ಶಿಕ್ಷಣದಲ್ಲಿ ಬದಲಾವಣೆ, ಪ್ರಯೋಗಶೀಲತೆ ಬೇಕೆ ?

ಪ್ರಯೋಗಶೀಲತೆ, ಬದಲಾವಣೆ ಸದಾ ಒಳ್ಳೆಯದು. ಮಕ್ಕಳ ವಿಕಸನಕ್ಕೆ ಪೂರಕವಾದದ್ದು. ನಾನೂ ಆಗಾಗ್ಗೆ ಅಪ್‌ಡೇಟ್‌ ಆಗುವೆ.

* ಕೌನ್‌ ಬನೇಗಾ ವಿದ್ಯಾಪತಿ ಕುರಿತಂತೆ ?

ಕರ್ನಾಟಕ ಸುತ್ತಿರುವೆ. ಈ ಕಾರ್ಯಕ್ರಮ ಇಲ್ಲಿ ಮಾತ್ರ ನಡೆಯುತ್ತಿದೆ. ಇದು ಖುಷಿ ಕೊಟ್ಟಿತು. ಇಂಥ ಸ್ಪರ್ಧೆಗಳು ಎಲ್ಲೆಡೆ ವಿವಿಧ ಸ್ಪರ್ಧೆಗಳ ರೂಪದಲ್ಲಿ ನಡೆಯಬೇಕು. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸಲು ಇಂಥ ಚಟುವಟಿಕೆಗಳ ಅವಶ್ಯಕತೆಯಿದೆ.

* ವ್ಯಕ್ತಿತ್ವ ವಿಕಸನಕ್ಕೆ ಕುರಿತಂತೆ ?

ಬೇಡವಾದ ವಸ್ತುಗಳನ್ನು ಮನೆಯಿಂದ ಹೊರ ಹಾಕುವಂತೆ, ಬೇಡವಾದ ಸಂಗತಿಗಳನ್ನು ಮನಸ್ಸಿನಿಂದ ಹೊರ ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.