ADVERTISEMENT

ವರ್ಗಾವಣೆಯ ಮುನ್ನ ಹೀಗಿರಲಿ ಮಕ್ಕಳ ತಯಾರಿ

ರೇಷ್ಮಾ ಶೆಟ್ಟಿ
Published 10 ಮೇ 2019, 19:31 IST
Last Updated 10 ಮೇ 2019, 19:31 IST
   

ರಮೇಶ್ ಹಾಗೂ ಸುಧಾ ದಂಪತಿ ಸರ್ಕಾರಿ ಉದ್ಯೋಗಿಗಳು. ಅವರಿಗೆ ಇಬ್ಬರು ಮಕ್ಕಳು. ಕೈ ತುಂಬಾ ಸಂಬಳ, ಸ್ವಂತ ಮನೆ ಹೊಂದಿರುವ ಈ ದಂಪತಿಯದ್ದು ಸುಖ ಸಂಸಾರ. ಆದರೆ ಇತ್ತೀಚೆಗೆ ಸುಧಾಗೆ ಮೈಸೂರಿನಿಂದ ಮಂಗಳೂರಿಗೆ ವರ್ಗಾವಣೆಯಾಗಿತ್ತು. ಕೆಲಸ ಬಿಡುವ ಹಾಗೂ ಇಲ್ಲ, ಗಂಡ–ಹೆಂಡತಿ ಮಕ್ಕಳು ಜೊತೆಯಾಗಿ ಇರುವ ಹಾಗೂ ಇಲ್ಲ. ಕೆಲಸದ ಅನಿವಾರ್ಯತೆ ಇರುವ ಕಾರಣದಿಂದ ಸುಧಾ ಮಕ್ಕಳ ಜೊತೆ ಮಂಗಳೂರಿಗೆ ಹೋಗುವುದಾಗಿ ನಿರ್ಧರಿಸಿಬಿಟ್ಟಳು. ದಂಪತಿಗಳು ಕೆಲ ವರ್ಷ ತಾನೇ ಮತ್ತೆ ಮೈಸೂರಿಗೆ ವರ್ಗಾವಣೆ ತೆಗೆದುಕೊಂಡರೆ ಆಯ್ತು ಎಂದು ಸಮಾಧಾನದಿಂದಿದ್ದರು. ಆದರೆ ಸಮಸ್ಯೆ ಕಾಣಿಸಿಕೊಂಡಿದ್ದು ಮಕ್ಕಳಲ್ಲಿ. ಇಬ್ಬರೂ ಮಕ್ಕಳು ವರ್ಗಾವಣೆಯ ನಂತರ ಡಲ್ ಆಗಿದ್ದರು. ಅವರಲ್ಲಿ ಎಲ್ಲವನ್ನು ಕಳೆದುಕೊಳ್ಳುತ್ತಿರುವ ಭಾವ ಕಾಣುತ್ತಿತ್ತು. ಹೌದು, ತಂದೆ-ತಾಯಿಗಳ ವರ್ಗಾವಣೆಯ ವಿಷಯ ಬಂದಾಗ ಅದರ ಪರಿಣಾಮ ಮೊದಲು ತಾಕುವುದು ಮಕ್ಕಳ ಮೇಲೆ. ಹುಟ್ಟಿದಾಗಿನಿಂದಲೋ ಬುದ್ಧಿ ಬಂದಾಗಿನಿಂದಲೋ ಒಂದೇ ಜಾಗದಲ್ಲಿ ಇರುವ ಅವರಿಗೆ ಅದೇ ನಮ್ಮೂರು, ಅಕ್ಕಪಕ್ಕದವರೇ ನಮ್ಮ ಬಂಧುಗಳು ಎಂಬ ಭಾವ ಆವರಿಸಿರುತ್ತದೆ. ಆ ಊರು, ಶಾಲೆ, ಸ್ನೇಹಿತರು, ಅಧ್ಯಾಪಕರು, ಸಹಪಾಠಿಗಳನ್ನು ಬಿಟ್ಟು ಬೇರೆ ಊರಿಗೆ ಹೋಗುವಾಗ ಸಹಜವಾಗಿ ಅವರಲ್ಲಿ ಭಯ, ಆತಂಕದ ಜೊತೆ ನೋವು ಮಡುಗಟ್ಟಿರುತ್ತದೆ. ಅವರ ದುಃಖ, ಗೊಂದಲವನ್ನು ಕಂಡಾಗ ಪೋಷಕರಲ್ಲೂ ಆತಂಕದ ಛಾಯೆ ಆವರಿಸುವುದು ಸಹಜ. ಆದರೆ ಅಂತಹ ಪರಿಸ್ಥಿತಿಯಲ್ಲಿ ಪೋಷಕರು ಹೊರಡುವ ಮೊದಲೇ ಮಕ್ಕಳನ್ನು ಮಾನಸಿಕವಾಗಿ ಒಂದಷ್ಟು ಗಟ್ಟಿಗೊಳಿಸಿದರೆ ವರ್ಗಾವಣೆಯ ಭಯವನ್ನು ಮಕ್ಕಳಿಂದ ದೂರಮಾಡಬಹುದು.

ಮೊದಲೇ ಯೋಜನೆ ರೂಪಿಸಿ: ವರ್ಗಾವಣೆಯ ವಿಷಯ ನಿಮಗೆ ತಿಳಿದ ದಿನದಿಂದಲೇ ಮಕ್ಕಳನ್ನು ಅಣಿಗೊಳಿಸಿ. ನೀವು ವರ್ಗವಾಗಿ ಹೋಗುವ ಊರಿನ ಬಗ್ಗೆ ತಿಳಿಸಿ. ಯಾವುದೂ ನಿಮ್ಮ ಕೈಯಲ್ಲಿ ಇಲ್ಲ, ವೃತ್ತಿಜೀವನದಲ್ಲಿ ಇದೆಲ್ಲವೂ ಸಾಮಾನ್ಯ ಎಂಬುದನ್ನು ಅವರಿಗೆ ಅರ್ಥವಾಗುವ ರೀತಿ ಬಿಡಿಸಿ ಹೇಳಿ. ಎಲ್ಲಾ ರೀತಿಯ ಪರಿಸ್ಥಿತಿಗೂ ಹೊಂದಿಕೊಳ್ಳಬೇಕು ಎಂದು ಅರಿವು ಮೂಡಿಸಿ. ಹೊಸ ಊರಿನಲ್ಲಿ ನೀವು ವಾಸಿಸುವ ಪ್ರದೇಶ ಹಾಗೂಮನೆಯ ಬಗ್ಗೆ ಮಕ್ಕಳ ಜೊತೆ ಮುಕ್ತವಾಗಿ ಮಾತನಾಡಿ.

ಮೊದಲು ಮಕ್ಕಳ ಕೊಠಡಿ ಸೆಟ್ ಮಾಡಿ: ಹೊಸ ಊರಿನ ಹೊಸ ಮನೆಯಲ್ಲೂ ಮಕ್ಕಳ ಕೋಣೆಯನ್ನು ಅವರ ಇಷ್ಟದಂತೆ ಅಲಂಕಾರ ಮಾಡಿಕೊಳ್ಳಲು ಬಿಡಿ. ಹಳೆಯ ಮನೆಯಲ್ಲಿ ಅವರು ಇಷ್ಟಪಡುವ, ಪ್ರೀತಿಸುವ ವಸ್ತುಗಳನ್ನು ತಮ್ಮೊಂದಿಗೆ ಕೊಂಡ್ಯೊಯಲು ಅವಕಾಶ ನೀಡಿ. ಅದು ಬೆಕ್ಕು, ನಾಯಿ, ಗಿಳಿ ಅಥವಾ ಗೊಂಬೆಗಳೇ ಆಗಿರಬಹುದು. ಇದರಿಂದ ಮಕ್ಕಳಿಗೆ ಮನಸ್ಸಿಗೆ ಬೇಸರವಾಗುವುದನ್ನು ತಪ್ಪಿಸಬಹುದು. ಜೊತೆಗೆ ತಮ್ಮದೇ ಹಿಂದಿನ ಮನೆಯಿದು ಎಂಬ ಭಾವನೆಯೂ ಬರುತ್ತದೆ.

ADVERTISEMENT

ಮಕ್ಕಳು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಸಮಾಧಾನದಿಂದ ಉತ್ತರಿಸಿ: ಹೊಸ ಊರು, ಹೊಸ ಶಾಲೆ, ಹೊಸ ಅಧ್ಯಾಪಕರು ಎಂದಾಗಮಕ್ಕಳ ಮನದಲ್ಲಿ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅವರು ಅದೆಲ್ಲವೂ ನೆನಪಾದಾಗೆಲ್ಲ ನಿಮ್ಮ ಬಳಿ ಪ್ರಶ್ನೆಗಳನ್ನು ಕೇಳಬಹುದು. ಆಗ ಅವರನ್ನು ಗದರಿಸಿ ‘ಹೋಗ್ತಿಯಲ್ಲಾ, ನೀನೆ ಎಲ್ಲಾ ನೋಡ್ತಿಯಾ. ಈಗಲೇ ಯಾಕೆ ಅದನ್ನೆಲ್ಲಾ ಕೇಳ್ತಿದಿಯಾ’ ಎಂದು ಬೈಯುವ ಬದಲು ಅವರ ಮನಸ್ಸಿಗೆ ಸಮಾಧಾನ ಎನ್ನಿಸುವ ರೀತಿ ಉತ್ತರಗಳನ್ನು ಹೇಳಿ.

ದೈನಂದಿನ ಕ್ರಮವನ್ನು ಅನುಸರಿಸಿ: ಹೊಸ ಜಾಗಕ್ಕೆ ಹೋದಾಗ ಹಿಂದಿನ ಜೀವನಕ್ರಮವನ್ನು ಬದಲಿಸಬೇಡಿ. ಆ ಊರಿನಲ್ಲಿ ಹೇಗೆ ಇರುತ್ತಿದ್ದರೋ ಹಾಗೇ ಇರಲು ಬಿಡಿ. ಆಗ ಮಕ್ಕಳಲ್ಲಿ ನಾವು ಹೊಸ ಜಾಗಕ್ಕೆ ಬಂದರೂ ನಮ್ಮ ಜೀವನ ಬದಲಾಗಿಲ್ಲ ಎಂಬ ಭಾವನೆ ಮೂಡುತ್ತದೆ. ಜೊತೆಗೆ ಅವರ ಆತಂಕವೂ ಕಡಿಮೆಯಾಗುತ್ತದೆ.

ಹೊಸ ಊರು, ಶಾಲೆಗೆ ಮೊದಲೇ ಭೇಟಿ ಮಾಡಿಸಿ: ನೀವು ಹೊಸ ಊರಿಗೆ ಶಿಫ್ಟ್ ಆಗುವ ಮೊದಲೇ ಮಕ್ಕಳನ್ನು ಆ ಊರಿಗೆ ಕರೆದೊಯ್ದು ಅಲ್ಲಿನ ಪರಿಸರ, ಮನೆಯ ಸುತ್ತಲಿನ ವಾತಾವರಣ, ಶಾಲೆ ಪರಿಸರವನ್ನು ತೋರಿಸಿ. ಸಾಧ್ಯವಾದರೆ ಅಧ್ಯಾಪಕರನ್ನು ಭೇಟಿ ಮಾಡಿಸಿ ಮಾತನಾಡಿಸಿ. ಇದರಿಂದ ಒಮ್ಮೆಲೆ ಅವರು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುವುದನ್ನು ತಪ್ಪಿಸಬಹುದು.

ಹಳೆಯ ಸ್ನೇಹಿತರ ಜೊತೆ ಸಂಪರ್ಕ ಇರುವಂತೆ ನೋಡಿಕೊಳ್ಳಿ: ತಂದೆ-ತಾಯಿಗಳಿಗೆ ವರ್ಗಾವಣೆಯಾಗಿ ಹೊಸ ಜಾಗಕ್ಕೆ ಹೋಗುತ್ತೇವೆ ಎಂದಾಗಮಕ್ಕಳಲ್ಲಿ ಮೊದಲು ಕಾಡುವ ನೋವು ಎಂದರೆ ತಮ್ಮ ಮನೆ ಹಾಗೂ ಆತ್ಮೀಯ ಗೆಳೆಯರು ದೂರವಾಗುವುದು. ಹೊಸ ಸ್ನೇಹಿತರನ್ನು ಸಂಪಾದಿಸಬೇಕು ಎಂದಾಗ ಅವರಲ್ಲಿ ಭಯ ಹುಟ್ಟುವುದು ಸಾಮಾನ್ಯ. ಹೀಗಾಗಿ ಹೊಸ ಸ್ನೇಹಿತರನ್ನು ಸಂಪಾದಿಸಲು ಅವಕಾಶ ಮಾಡಿಕೊಡುವ ಜೊತೆ ಜೊತೆಗೆ ಹಳೆಯ ಸ್ನೇಹಿತರ ಜೊತೆ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಿ.ವಾರಕೊಮ್ಮೆ ಫೋನ್‌ನಲ್ಲಿ ಮಾತನಾಡುವಂತೆ, ಪತ್ರ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಅವರೊಂದಿಗೆ ಸಂಪರ್ಕದಿಂದಿರುವಂತೆ ಮಾಡಿ. ‘ಗುಡ್‌ ಬೈ’ ಪಾರ್ಟಿ ಆಯೋಜಿಸಿ ಸ್ನಾಪ್ ಬುಕ್‌ನಲ್ಲಿ ನೆನಪುಗಳನ್ನು ಹಂಚಿಕೊಳ್ಳಲು ಸಹಾಯ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.