ADVERTISEMENT

UPSC ಟಾಪರ್ಸ್‌ ಟಿಪ್ಸ್‌: ಕನಸು, ಗುರಿ ದೊಡ್ಡದಾಗಿರಲಿ; ಕಠಿಣ ಪ್ರಯತ್ನ ಜೊತೆಗಿರಲಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 19:30 IST
Last Updated 20 ಜುಲೈ 2022, 19:30 IST
ಎಂ.ಅರುಣಾ
ಎಂ.ಅರುಣಾ   

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ತಡಕಲೂರು ಗ್ರಾಮದ ರೈತ ಕುಟುಂಬದ ಎಂ.ಅರುಣಾ ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ 308ನೇ ರ‍್ಯಾಂಕ್ ಪಡೆದಿದ್ದಾರೆ. ಸತತ ಆರು ಪ್ರಯತ್ನಗಳ ನಂತರ ನಾಗರಿಕ ಸೇವಾ ಆಯೋಗ ಸೇರುವ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಈ ಪರೀಕ್ಷೆಗಾಗಿ ನಡೆಸಿದ ಅಧ್ಯಯನ, ಸಿದ್ಧತೆ ಕುರಿತು ‘ಸ್ಪರ್ಧಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

l→ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸುಗಳಿಸಿದ್ದೀರಿ. ನಿಮ್ಮ ಮುಂದಿನ ಹೆಜ್ಜೆ?

ನಮ್ಮ ತಂದೆ ರೈತರು. ಕೃಷಿಗಾಗಿ ಮಾಡಿದ ಸಾಲ ತೀರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡರು. ರೈತರ ಆತ್ಮಹತ್ಯೆ ತಡೆಯಬೇಕು ಎನ್ನುವ ಗುರಿಯಿದೆ. ಅದೇ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ನಮ್ಮೂರಿನ ಜನರಿಗೆ ಸಹಾಯ ಮಾಡಲು ಆಗುವುದಿಲ್ಲ ಎಂದು ಎಂಜಿನಿಯರಿಂಗ್ ಉದ್ಯೋಗ ಬಿಟ್ಟು, ಯುಪಿಎಸ್‌ಸಿಗೆ ಅಧ್ಯಯನ ಮಾಡುತ್ತಿದ್ದೆ. ಈಗ ಜನ ಸೇವೆಯ ಅವಕಾಶ ದೊರೆತಿದೆ. ಇದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತೇನೆ.

ADVERTISEMENT

l→ಯುಪಿಎಸ್‌ಸಿ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳನ್ನು ಎಷ್ಟನೇ ಪ್ರಯತ್ನದಲ್ಲಿ ಪೂರ್ಣಗೊಳಿಸಿದ್ದೀರಿ?

ಸತತ 6 ಬಾರಿ ಪರೀಕ್ಷೆ ಬರೆದಿದ್ದೇನೆ. ನಾಲ್ಕು ಬಾರಿ ಸಂದರ್ಶನಕ್ಕೆ ಹಾಜರಾಗಿದ್ದೆ. ಕೊನೆಯ ಪ್ರಯತ್ನದಲ್ಲಿ ಗುರಿ ಮುಟ್ಟಲು ಸಾಧ್ಯವಾಯಿತು. ಈ ಬಾರಿ ಕೋವಿಡ್‌ ಮಧ್ಯೆ ಪರೀಕ್ಷಾ ಕೇಂದ್ರಕ್ಕೆ ತೆರಳಿ, ಪ್ರತ್ಯೇಕ ಕೊಠಡಿಯಲ್ಲಿ ಕೂತು ಪರೀಕ್ಷೆ ಬರೆದಿದ್ದೇನೆ. ಇನ್ನು ಯುಪಿಎಸ್‌ಸಿ ಉತ್ತೀರ್ಣರಾಗುವುದು ಕನಸಾಗಿ ಉಳಿಯುತ್ತದೆ ಅಂದುಕೊಂಡಿದ್ದೆ. ಸತತ ಪ್ರಯತ್ನ ನನ್ನ ಕೈ ಬಿಡಲಿಲ್ಲ.

l→ಹಿಂದಿನ ಪ್ರಯತ್ನಗಳು ಫಲಿಸದಿರಲು ಕಾರಣವೇನು? ಆ ನ್ಯೂನತೆಗಳನ್ನು ಈ ಪ್ರಯತ್ನದಲ್ಲಿ ಹೇಗೆ ಸರಿಪಡಿಸಿಕೊಂಡಿರಿ?

ಆರೋಗ್ಯ ಸಮಸ್ಯೆಯಿಂದ ಪರೀಕ್ಷೆಯ ಚೆನ್ನಾಗಿ ಬರೆಯಲು ಆಗಿಲ್ಲ. ಉಳಿದಂತೆ ಅಭ್ಯಾಸ ಮಾಡಿಕೊಳ್ಳುವಲ್ಲಿ ಪ್ರತಿ ಸಾರಿ ಎಡವುತ್ತಿದ್ದೆ. ಸಂಪೂರ್ಣವಾಗಿ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಆಗುತ್ತಿರಲಿಲ್ಲ. ಈ ಬಾರಿ ಪ್ರತಿ ದಿನ ಅಣಕು ಪರೀಕ್ಷೆ ಬರೆಯುತ್ತಿದ್ದೆ. ವಿಷಯಗಳನ್ನು ಮತ್ತಷ್ಟು ಆಳವಾಗಿ ಓದಲು ಶುರು ಮಾಡಿದೆ.‌ ಇದು ನೆರವಾಯಿತು.

l→ನೀವು ಬಳಸುತ್ತಿದ್ದ ಅಧ್ಯಯನ ಪರಿಕರಗಳ ಬಗ್ಗೆ ತಿಳಿಸಿ.

6 ರಿಂದ 12ನೇ ತರಗತಿಯವರೆಗಿನ ಎಲ್ಲ ಪಠ್ಯಪುಸ್ತಕಗಳನ್ನು ಓದುತ್ತಿದ್ದೆ. ಈ ಪಠ್ಯಗಳಿಂದ ಭೂಗೋಳಶಾಸ್ತ್ರ, ಇತಿಹಾಸ ಸೇರಿದಂತೆ ಹಲವು ವಿಷಯಗಳು ತಿಳಿಯಿತು. ಒಂದು ವಿಷಯಕ್ಕೆ ಒಂದೇ ಪುಸ್ತಕ ಓದಿದರೆ ಉತ್ತಮ. ಹಲವು ಪುಸ್ತಕಗಳನ್ನು ಓದಿದರೆ ಗೊಂದಲ ಹೆಚ್ಚಾಗುತ್ತದೆ. ಪ್ರಸ್ತುತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಲು ದಿನಪತ್ರಿಕೆಗಳು ಸಹಾಯಕವಾದವು. ಸಂದರ್ಶನಕ್ಕೆ ತಯಾರಿ ನಡೆಸುವ ಸಮಯದಲ್ಲಿ ಪತ್ರಿಕೆಗಳನ್ನು ಹೆಚ್ಚಾಗಿ ಓದಿದೆ.

l→ಈ ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚುವರಿ ಕೋಚಿಂಗ್‌ ಅಗತ್ಯವಿದೆಯೇ ? ನೀವು ಕೋಚಿಂಗ್‌ಗೆ ಹೋಗಿ‌ದ್ದಿರಾ? ಯಾವ ರೀತಿ ಕೋಚಿಂಗ್ ನೆರವಾಗುತ್ತದೆ?

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎದುರಾಗುವ ಎಲ್ಲ ವಿಷಯಗಳ ಬಗ್ಗೆ ಯಾರೂ ಚೆನ್ನಾಗಿ ತಿಳಿದುಕೊಂಡಿರುವುದಿಲ್ಲ. ಕೆಲವರಿಗೆ ಸಂವಿಧಾನ, ಅರ್ಥಶಾಸ್ತ್ರ ಕಷ್ಟವಾಗುತ್ತದೆ. ಅವರು ತಮಗೆ ಕಷ್ಟವಾಗುವ ವಿಷಯಗಳಿಗೆ ಸಂಬಂಧಿಸಿದಂತೆ ಕೋಚಿಂಗ್‌ ಸೆಂಟರ್‌ಗಳ ಸಹಾಯ ಪಡೆಯಬಹುದು. ಅಲ್ಲಿನ ಮಾರ್ಗದರ್ಶನ ಅವರಿಗೆ ನೆರವಾಗುತ್ತದೆ.

l→ಎಷ್ಟು ಸಮಯದಿಂದ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೀರಿ? ಸಿದ್ಧತೆಗೆ ಸಮಯ ಹೊಂದಾಣಿಕೆ ಹೇಗೆ ಮಾಡಿಕೊಂಡಿರಿ?

2014ರಿಂದ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೆ. 2018ರಲ್ಲಿ ಕೋಚಿಂಗ್‌ ಸೆಂಟರ್‌ನಲ್ಲಿ ಮೆಂಟರ್‌ ಆಗಿ ಕೆಲಸಕ್ಕೆ ಸೇರಿಕೊಂಡಾಗ ಅಧ್ಯಯನ ಮಾಡಲು ಇಂತಿಷ್ಟು ಸಮಯ ಎಂದು ಮೀಸಲಿಡುತ್ತಿದ್ದೆ. ಕೆಲಸ ಮುಗಿದ ನಂತರ ಕನಿಷ್ಠ 6 ಗಂಟೆ ಓದುತ್ತಿದ್ದೆ. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವವರು ಪ್ರತಿನಿತ್ಯ ಓದಬೇಕು. ಪರೀಕ್ಷೆಯ ಹತ್ತಿರದಲ್ಲಿ ಕನಿಷ್ಠ 9ರಿಂದ 10 ಗಂಟೆಗಳ ಕಾಲ ಅಧ್ಯಯನಕ್ಕೆ ಸಮಯ ಮೀಸಲಿಡಬೇಕು.

l→ಮುಂದೆ ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ನಿಮ್ಮ ಸಲಹೆ?

ಯಾವುದೇ ಕಾರಣಕ್ಕೂ ನಂಬಿಕೆ ಕಳೆದುಕೊಳ್ಳಬಾರದು. ದೊಡ್ಡ ಮಟ್ಟದ ಕನಸು ಇಟ್ಟುಕೊಂಡು ಮುಂದೆ ಸಾಗಿದರೆ, ಉಳಿದ ಎಲ್ಲ ಕಷ್ಟ, ಸೋಲು ತುಂಬಾ ಚಿಕ್ಕವು ಅನ್ನಿಸುತ್ತವೆ. ಕನಸು ಸಾಕಾರ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುನ್ನಡೆದರೆ ಯಾವುದೂ ಅಸಾಧ್ಯವಲ್ಲ. ಕೌಟುಂಬಿಕವಾಗಿ, ಭಾವನಾತ್ಮಕವಾಗಿ, ಆರ್ಥಿಕವಾಗಿ ಸದೃಢರಾಗಿರಬೇಕು. ಕಷ್ಟಗಳಿಗೆ ಹಿಂಜರಿಯಬಾರದು.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.