ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಲ್‌ಎಲ್‌ಬಿ ಓದಲು ಕಾಲೇಜು ಕಡ್ಡಾಯವೇ?

ವಿ.ಪ್ರದೀಪ್ ಕುಮಾರ್
Published 30 ಜನವರಿ 2022, 19:30 IST
Last Updated 30 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

1. ನಾನು ಬಿಕಾಂ ಮುಗಿಸಿ ಉದ್ಯೋಗ ಮಾಡುತ್ತಿದ್ದೇನೆ. ನನಗೆ ಎಲ್‌ಎಲ್‌ಬಿಯಲ್ಲಿ ಆಸಕ್ತಿ ಇದೆ. ಆದರೆ ಮೂರು ವರ್ಷ ಕಾಲೇಜಿಗೆ ಹೋಗುವುದು ಸಾಧ್ಯವಿಲ್ಲ. ನನಗೆ ಆರ್ಥಿಕ ಸಮಸ್ಯೆ ಇರುವ ಕಾರಣಕ್ಕೆ ಓದಿನೊಂದಿಗೆ ಕೆಲಸ ಮಾಡುವುದು ಅನಿವಾರ್ಯವಾಗಿದೆ. ನಿಮ್ಮ ಸಲಹೆ ನೀಡಿ.

ಪೂರ್ವಿಕ್, ಚಿಕ್ಕಮಗಳೂರು.

ನಿಮಗೆ ವಕೀಲಿ ವೃತ್ತಿಯನ್ನು ಮಾಡುವ ಆಸಕ್ತಿಯಿದ್ದರೆ, ಮೂರು ವರ್ಷದ ಪೂರ್ಣಾವಧಿ ಎಲ್‌ಎಲ್‌ಬಿ ಕೋರ್ಸ್ ಅನ್ನು ಮಾಡಬೇಕು. ಸಂಜೆ ಕಾಲೇಜು/ದೂರ ಶಿಕ್ಷಣದ ಎಲ್‌ಎಲ್‌ಬಿ ಕೋರ್ಸ್‌ಗಳಿಗೆ ಬಾರ್ ಕೌನ್ಸಿಲ್ ಮಾನ್ಯತೆ ಇರುವುದಿಲ್ಲ. ಹೆಚ್ಚಿನ ತಜ್ಞತೆಗಾಗಿ, ಎಲ್‌ಎಲ್‌ಬಿ ಕೋರ್ಸ್ ನಂತರ ಎರಡು ವರ್ಷದ ಎಲ್‌ಎಲ್‌ಎಮ್ ಕೋರ್ಸ್ ಮಾಡಬಹುದು.

ADVERTISEMENT

2. ನಾನು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ. ಸಿಎ ಮಾಡಬೇಕು ಎಂದುಕೊಂಡಿದ್ದೇನೆ. ಮಾಡುವ ವಿಧಾನ ಮತ್ತು ಮಾಹಿತಿ ತಿಳಿಸಿ. ಸಿಎ ಕಲಿಯಲು ಎಷ್ಟು ಹಣ ಬೇಕಾಗುತ್ತದೆ? ಸಾಲ ತೆಗೆದುಕೊಳ್ಳಬಹುದೇ?

ಚಂದ್ರಶೇಖರ ಐಗಳಿಮಠ, ವಿಜಯಪುರ

ಬಿಕಾಂ ಪರೀಕ್ಷೆಯಲ್ಲಿ ಶೇ 55 ಗಳಿಸಿದಲ್ಲಿ ಸಿಎ ಇಂಟರ್‌ಮೀಡಿಯೆಟ್ ಕೋರ್ಸಿಗೆ ನೇರವಾಗಿ ನೋಂದಾಯಿಸಿಕೊಂಡು, 3 ವರ್ಷದ ಆರ್ಟಿಕಲ್ ಟ್ರೈನಿಂಗ್‌ಗೆ ಸೇರಬೇಕು. ಇಂಟರ್‌ಮೀಡಿಯೆಟ್ ಪಾಸಾದ ನಂತರ ಫೈನಲ್ ಪರೀಕ್ಷೆಯಲ್ಲಿ ಪಾಸಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ, ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಒಟ್ಟಾರೆ, ಸಿಎ ಕೋರ್ಸ್ ಮಾಡಲು ಕನಿಷ್ಟ 3-4 ವರ್ಷ ಬೇಕಾಗುತ್ತದೆ. ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಆರ್ಟಿಕಲ್ ಟ್ರೈನಿಂಗ್ ಅನ್ನು ಪ್ರತಿಷ್ಠಿತ ಆಡಿಟರ್ ಸಂಸ್ಥೆಗಳಲ್ಲಿ ಮಾಡುವುದು ಕಲಿಕೆಯ ದೃಷ್ಟಿಯಿಂದ ಸೂಕ್ತ. ಟ್ರೈನಿಂಗ್ ಅವಧಿಯಲ್ಲಿ ತರಬೇತಿ ಭತ್ಯ ಸಿಗುತ್ತದೆ. ಹಾಗಾಗಿ, ಸಿಎ ಕೋರ್ಸ್ ಮಾಡಲು ಹೆಚ್ಚಿನ ಹಣದ ಅವಶ್ಯಕತೆ ಇರುವುದಿಲ್ಲ.

ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಹಲವು ವರ್ಷಗಳ ಅನುಭವದ ನಂತರ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡಬಹುದು. ಹೆಚ್ಚಿನ ವಿವರಗಳಿಗೆ ಗಮನಿಸಿ: https://icai.org/

3. ನಾನು ದ್ವಿತೀಯ ಪಿಯುಸಿ ಓದುತ್ತಿದ್ದು, ಎಥಿಕಲ್ ಹ್ಯಾಕರ್ ಆಗಬೇಕೆಂದು ತುಂಬಾ ಆಸೆ ಇದೆ. ಅದಕ್ಕಾಗಿ ಯಾವ ಕೋರ್ಸ್ ಮಾಡಬೇಕು? ಈ ಕ್ಷೇತ್ರದ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.

ರಂಗನಾಥ್, ಮೈಸೂರು.

ಸಂಸ್ಥೆಗಳ ಡಿಜಿಟಲ್ ಸುರಕ್ಷತೆಯನ್ನು ಸಮಗ್ರವಾಗಿ ಪರಿಶೀಲಿಸಿ, ಹಾರ್ಡ್‌ವೇರ್‌, ಸಾಫ್ಟ್‌ವೇರ್‌ ಮತ್ತು ನೆಟ್‌ವರ್ಕ್‌ಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ಸಂಸ್ಥೆಗಳ ಕಂಪ್ಯೂಟರ್ ವ್ಯವಸ್ಥೆಗಳನ್ನು ಆಂತರಿಕ/ಬಾಹ್ಯಲೋಕದ ಆಕ್ರಮಣಗಳಿಂದ ರಕ್ಷಿಸುವುದು, ಎಥಿಕಲ್ ಹ್ಯಾಕಿಂಗ್‌ನ ಮೂಲ ಉದ್ದೇಶ. ಪಿಯುಸಿ ನಂತರ ನೇರವಾಗಿ ಎಥಿಕಲ್ ಹ್ಯಾಕಿಂಗ್ ಕೋರ್ಸ್ ಮಾಡಬಹುದು. ಆದರೆ, ಹೆಚ್ಚಿನ ತಜ್ಞತೆಗಾಗಿ, ಕಂಪ್ಯೂಟರ್ ಸಂಬಂಧಿತ ಎಂಜಿನಿಯರಿಂಗ್ ಕೋರ್ಸ್ ನಂತರ ಎಥಿಕಲ್ ಹ್ಯಾಕಿಂಗ್ ಕೋರ್ಸ್ ಮಾಡುವುದು ಸೂಕ್ತ. ಕೋರ್ಸ್ ನಂತರ, ಖಾಸಗಿ ಕ್ಷೇತ್ರದ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು, ಎಥಿಕಲ್ ಹ್ಯಾಕಿಂಗ್ ಸಂಸ್ಥೆಗಳು, ಸಾಮಾಜಿಕ ಮಾಧ್ಯಮ, ಬ್ಯಾಂಕಿಂಗ್, ಇನ್ಸ್ಶೂರೆನ್ಸ್ ಮತ್ತು ಇನ್ವೆಸ್ಟ್‌ಮೆಂಟ್‌ ಸಂಸ್ಥೆಗಳು, ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳು, ಸೂಕ್ಷ್ಮ ವಲಯದ ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳೂ ಸೇರಿದಂತೆ ವಿಪುಲವಾದ ಉದ್ಯೋಗಾವಕಾಶಗಳಿವೆ. ಕಂಪ್ಯೂಟರ್ ವ್ಯವಸ್ಥೆಗಳ ಕಾರ್ಯಾಚರಣೆ ಮತ್ತು ಭದ್ರತೆಗಳ ಕುರಿತು ಜ್ಞಾನ ಮತ್ತು ಕೌಶಲಗಳನ್ನು ಗಳಿಸಿ, ಬೇಡಿಕೆಯಲ್ಲಿರುವ ಈ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬಹುದು.

4. ಸರ್, ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೇಗೆ ಓದಬೇಕು ಎಂದು ತಿಳಿಸಿ?

ಊರು, ಹೆಸರು ತಿಳಿಸಿಲ್ಲ.

ಪರಿಣಾಮಕಾರಿ ಓದುವಿಕೆ ಕುರಿತು ಕಳೆದ ವರ್ಷದ ಆಗಸ್ಟ್ 23 ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ.
https://www.youtube.com/watch?v=3PzmKRaJHmk

5. ನಾನು ಇತ್ತೀಚೆಗಷ್ಟೇ ಬಿಎ ಮುಗಿಸಿದ್ದು, ಯಾವ ವಿಷಯದಲ್ಲಿ ಸ್ನಾತಕೋತ್ತರ ಕೋರ್ಸ್ ಮಾಡುವ ಬಗ್ಗೆ ಗೊಂದಲವಿದ್ದು ಮಾರ್ಗದರ್ಶನದ ಅಗತ್ಯವಿದೆ. ನಾನೂ ಸಹ ಮಾರ್ಗದರ್ಶಕ ಆಗಬೇಕು ಎಂದರೆ ಅರ್ಹತೆ ಏನಿರಬೇಕು?

ವಿನಯ್, ಊರು ತಿಳಿಸಿಲ್ಲ.

ನಿಮ್ಮ ವೃತ್ತಿ ಯೋಜನೆಗೆ ಅನುಗುಣವಾಗಿ ಸ್ನಾತಕೋತ್ತರ ಕೋರ್ಸ್ ಅನ್ನು ಯಾವ ವಿಷಯದಲ್ಲಿ ಮಾಡಬೇಕು ಎಂದು ನಿರ್ಧರಿಸಬೇಕು. ವೃತ್ತಿ ಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ.
https://www.youtube.com/watch?v=oyUMPrEKPPU ಮಾರ್ಗದರ್ಶಕರಾಗಬೇಕಾದರೆ, ಪದವಿಯ ನಂತರ ನಿಮಗೆ ಆಸಕ್ತಿಯಿರುವ ವಿಷಯದಲ್ಲಿ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್ ಮಾಡಬೇಕು. ಹಾಗೂ, ಸಂಬಂಧಿತ ವಿಷಯದಲ್ಲಿ (ಶಿಕ್ಷಣ, ವೃತ್ತಿ, ಉದ್ಯಮ ಇತ್ಯಾದಿ) ಪರಿಣತಿ ಮತ್ತು ಅನುಭವವಿರಬೇಕು. ಜೊತೆಗೆ, ಸಂವೇದನಾಶೀಲತೆ, ಅನುಭೂತಿ, ತಾಳ್ಮೆ, ಸಂವಹನ, ಮುಂದಾಲೋಚನೆ ಇತ್ಯಾದಿ ಕೌಶಲಗಳಿರಬೇಕು.

6. ನಾನು ಪ್ರಥಮ ಪಿಯುಸಿ ಮಾಡುತ್ತಿದ್ದೇನೆ. ಬಿಎಸ್‌ಸಿ (ಕೃಷಿ) ಮಾಡುವುದಕ್ಕೆ ಸಿಇಟಿ ಪರೀಕ್ಷೆ ಬರೆಯಬೇಕೇ?

ಮಲ್ಲಿಕಾರ್ಜುನ, ಊರು ತಿಳಿಸಿಲ್ಲ.

ಬಿಎಸ್‌ಸಿ(ಕೃಷಿ) ಮಾಡಲು ಪಿಯುಸಿ (ಪಿಸಿಎಂಬಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿಇಟಿ ಪರೀಕ್ಷೆಯನ್ನು ಬರೆಯಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://cetonline.karnataka.gov.in/kea/

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.