ADVERTISEMENT

ಏನಿದು ಡೈಮಂಡ್‌ ಬೋರ್ಸ್‌?

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 23:30 IST
Last Updated 3 ಜನವರಿ 2024, 23:30 IST
<div class="paragraphs"><p>ಡೈಮಂಡ್‌ ಬೋರ್ಸ್‌</p></div>

ಡೈಮಂಡ್‌ ಬೋರ್ಸ್‌

   

ಗುಜರಾತ್‌ನ ಸೂರತ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಸೂರತ್ ಡೈಮಂಡ್ ಬೋರ್ಸ್ ಅನ್ನು (ಎಸ್.ಡಿ.ಬಿ) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಬೃಹತ್ ಸಂಕೀರ್ಣದಲ್ಲಿ 4,200 ವಜ್ರದ ವ್ಯಾಪಾರ ಕಚೇರಿಗಳಿವೆ. 

ವಜ್ರಗಳನ್ನು ಕತ್ತರಿಸುವ ಮತ್ತು ಪಾಲಿಶ್ ಮಾಡುವುದಕ್ಕೆ ಮುಂಬೈನ ಬಾಂದ್ರಾ ಕಾಂಪ್ಲೆಕ್ಸ್ (ಬಿಕೆಸಿ), ಸೂರತ್‌ನ ಮಹಿಧರ ಹೀರಾ ಬಜಾರ್ ಮತ್ತು ವರಚಾ ಹೀರಾ ಬಜಾರ್ ಹೆಸರುವಾಸಿಯಾಗಿದ್ದವು. ಆದರೆ, ಇಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ಭದ್ರತಾ ಕ್ರಮಗಳು ಇರಲಿಲ್ಲ. ಅಂತರರಾಷ್ಟ್ರೀಯ ಖರೀದಿದಾರರನ್ನು ಗಮನದಲ್ಲಿಟ್ಟುಕೊಂಡು ವಜ್ರದ ವ್ಯಾಪಾರದ ಈ ಪ್ರಮುಖ ಕೇಂದ್ರಗಳನ್ನು ಸೂರತ್‌ ಡೈಮಂಡ್ ಬೋರ್ಸ್ ಕಚೇರಿಗೆ ಸ್ಥಳಾಂತರಿಸಲಾಗಿದೆ.

ADVERTISEMENT

ವಜ್ರಗಳ ಮಹತ್ವ: ವಜ್ರವು ಅತ್ಯಂತ ಕಠಿಣ ಲೋಹ. ಚಿನ್ನಕ್ಕಿಂತಲೂ ಹೆಚ್ಚು ಬೆಲೆಬಾಳುತ್ತದೆ. ದಕ್ಷಿಣ ಆಫ್ರಿಕಾ ದೇಶವು  ವಜ್ರದ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಭಾರತವು ವಜ್ರ ವಿನ್ಯಾಸದಲ್ಲಿ ಜಗತ್ತಿನಲ್ಲಿಯೇ ಅಗ್ರಸ್ಥಾನದಲ್ಲಿದೆ.

ವಜ್ರಗಳನ್ನು ಆಭರಣಗಳಾಗಿ ಧರಿಸುವುದು ಸಾಮಾನ್ಯ. ಈ ಆಭರಣಗಳನ್ನು ಶ್ರೀಮಂತಿಕೆ ಹಾಗೂ ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಉತ್ಪಾದಿಸಲಾಗುವ ಮುಖ್ಯ ಹರಳುಗಲ್ಲುಗಳೆಂದರೆ  ವಜ್ರ, ರೂಬಿ, ಬ್ಲೂ ಸಫೈರ್ ಮತ್ತು ಎಮರಾಲ್ಡ್.

ಉಪಯೋಗಗಳು: ಹರಳುಗಲ್ಲುಗಳಲ್ಲಿ ವಜ್ರವು ಅತ್ಯಂತ ಅಮೂಲ್ಯವಾದುದು. ಇದರ ಆಕರ್ಷಣೆ, ಹೊಳಪು, ಪಾರದರ್ಶಕತೆ ಹಾಗೂ ಕಠಿಣತೆ ಮೊದಲಾದ ಲಕ್ಷಣಗಳು ಇದರ ವಿಶೇಷತೆಗೆ ಕಾರಣಗಳು.

ಹಸಿರು, ನೀಲಿ ಮತ್ತು ಕೆಂಪು ಬಣ್ಣದ ವಜ್ರಗಳು ಅಪರೂಪವಾಗಿದ್ದು , ಅಪಾರ ಮೌಲ್ಯವನ್ನು ಹೊಂದಿವೆ. ಇದು ಅತ್ಯಂತ ಕಠಿಣವಾಗಿರುವುದರಿಂದ ಕೈಗಾರಿಕೆಗಳಲ್ಲಿಯೂ ವಜ್ರದ ಬಳಕೆ ಹೆಚ್ಚು.

ಡ್ರಿಲ್ಲಿಂಗ್ ಗಣಿಗಾರಿಕೆಯಲ್ಲಿ ವಜ್ರವು ವ್ಯಾಪಕವಾಗಿ ಬಳಕೆಯಾಗುವುದು. ಕಲ್ಲು ಮತ್ತು ಗಾಜುಗಳನ್ನು ಕತ್ತರಿಸಲು ವಜ್ರಗಳನ್ನು ಬಳಸಲಾಗುವುದು.

ಮೂಲತಃ ವಜ್ರವು ಕ್ಷಾರೀಯ ಅಂತರಾಗ್ನಿ ಶಿಲೆಗಳಲ್ಲಿ ಕಂಡುಬರುವುದು. ಭೂಮೇಲ್ಮೈನಿಂದ ಸುಮಾರು 100 ಕಿಲೋಮೀಟರ್ ಆಳದಲ್ಲಿ ಶಿಲಾಪಾಕ ವಲಯದಲ್ಲಿ ವಜ್ರವು ನಿರ್ಮಿತವಾಗುವುದೆಂದು ತಿಳಿಯಲಾಗಿದೆ.

ದೇಶದಲ್ಲಿ ವಜ್ರದ ನಿಕ್ಷೇಪವನ್ನು ಹೊಂದಿರುವ ನಾಲ್ಕು ಮುಖ್ಯ ವಲಯಗಳಿವೆ. ಅವುಗಳೆಂದರೆ
ದಕ್ಷಿಣ ಭಾರತ: ಆಂಧ್ರಪ್ರದೇಶದ ಕಡಪ, ಅನಂತಪುರ, ಗುಂಟೂರು, ಕೃಷ್ಣ, ಮೆಹಬೂಬ್ ನಗರ ಮತ್ತು ಕರ್ನೂಲು ಜಿಲ್ಲೆಗಳು.

ಮಧ್ಯಭಾರತ : ಮಧ್ಯಪ್ರದೇಶದ ಪನ್ನಾ ವಲಯ.

ಪೂರ್ವ ಭಾರತ : ಮಹಾನದಿ ಗೋದಾವರಿ ನಡುವಿನ ಪ್ರದೇಶ. ಛತ್ತೀಸಗಢದ ರಾಯಪುರ ಜಿಲ್ಲೆಯ ಬೆರ್ಹದಿನ್ - ಕೋಡವಾಲಿ ಮತ್ತು ಬಸ್ತಾರ್ ಜಿಲ್ಲೆಯ ತೋಕಪಾಲ್ ಮತ್ತು ಧುಗಪಾಲ್ ಪ್ರದೇಶ.

ಮಧ್ಯಪ್ರದೇಶ : ಇದು ವಜ್ರದ ನಿಕ್ಷೇಪ ಹಾಗೂ ಉತ್ಪಾದನೆಯಲ್ಲಿ ದೇಶದ ಅತಿ ಮುಖ್ಯ ರಾಜ್ಯವಾಗಿದೆ. ಈ ರಾಜ್ಯದಲ್ಲಿ ವಜ್ರದ ನಿಕ್ಷೇಪವು ಕಿಂಬರ್ ಲೈಟ್ ಪೈಪ್ ಶಿಲೆಗಳು, ಕಂಗ್ಲೋ    ಮರೇಟ್ ಹಾಗೂ ಮರಳುಗಲ್ಲುಗಳಲ್ಲಿ ಕಂಡು ಬರುವುದು. ಪನ್ನಾ ಜಿಲ್ಲೆಯ ಮುಜ್ಜಾ ಮುಜಗಾಂ ಬಳಿ ಕಂಗ್ಲೋ   ಮರೇಟ್‌ನಲ್ಲಿ ಒಂದು ಸಣ್ಣ ಪದರಿನಂತೆ ವಜ್ರದ ನಿಕ್ಷೇಪವು ಕಂಡುಬರುವುದು. ಇಲ್ಲಿಯೇ ದೇಶದ ಏಕೈಕ ವಜ್ರದ ಗಣಿಯು ಕಾರ್ಯ ನಿರ್ವಹಿಸುತ್ತಿದೆ.

ಮಧ್ಯಪ್ರದೇಶವು ದೇಶದ ಶೇ 90ರಷ್ಟು ವಜ್ರ ನಿಕ್ಷೇಪವನ್ನು ಹೊಂದಿದೆ.

ಇತರ ಪ್ರದೇಶಗಳು: ಆಂಧ್ರಪ್ರದೇಶದ ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳು, ಒಡಿಶಾದ ಮಹಾನದಿ ಕಣಿವೆ ಹಾಗೂ ಛತ್ತೀಸಗಢ ವಜ್ರದ ನಿಕ್ಷೇಪವನ್ನು ಹೊಂದಿರುವ ಇತರ ಮುಖ್ಯ ಪ್ರದೇಶಗಳು.

ರೂಬಿ ಮತ್ತು ಸಫೈರ್: ರೂಬಿ ಹಾಗೂ ನೀಲಿ ಬಣ್ಣದ ಸಫೈರ್ ಹರಳುಗಲ್ಲುಗಳು ಪಾರದರ್ಶಕತೆ ಹಾಗೂ ಹೊಳಪಿಗೆ ಪ್ರಸಿದ್ಧಿಯಾಗಿದೆ. ರೂಬಿ ಸುಣ್ಣದ ಕಲ್ಲಿನ ಪದರು, ಮೆಕ್ಕಲು ಮಣ್ಣಿನ ಪದರುಗಳಲ್ಲಿಯೂ ಕಂಡುಬರುತ್ತವೆ.

ಕಾಶ್ಮೀರದ ಕಿಶ್ ವಾತ್ ಜಿಲ್ಲೆಯ ಪಾಡಾರ್ ಪ್ರದೇಶದಲ್ಲಿ ಸಫೈರ್ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.