ADVERTISEMENT

ಶಿಕ್ಷಣ | ವಿದೇಶಿ ಭಾಷೆ ಕಲಿಕೆ ಯಾಕೆ? ಪ್ರಯೋಜನಗಳೇನು?

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2024, 23:30 IST
Last Updated 8 ಡಿಸೆಂಬರ್ 2024, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   
ಮೋಜಿಗೆಂದು ಒಂದು ಭಾಷೆ ಕಲಿತರೂ ಅದರಿಂದಾಗುವ ಪ್ರಯೋಜನಗಳು ಹಲವಾರು. ವಿದೇಶಿ ಭಾಷೆಗಳ ಕಲಿಕೆ ವೃತ್ತಿಯಲ್ಲಿ ಹಲವು ಅವಕಾಶಗಳನ್ನು ಪಡೆಯಲು ನೆರವಾಗಬಲ್ಲದು.

ಭಾಷೆಯೊಂದನ್ನು ಸ್ಪಷ್ಟವಾಗಿ, ಸುಲಲಿತವಾಗಿ ಕಲಿತರೆ ಅವಕಾಶಗಳ ದಿಡ್ಡಿಬಾಗಿಲು ತೆರೆದಂತೆಯೇ ಸರಿ. ಯಾವುದೇ ವೃತ್ತಿಯಲ್ಲಿದ್ದರೂ, ಆಸ್ಥೆಯಿಂದ ವಿದೇಶಿ ಭಾಷೆಗಳನ್ನು ಕಲಿಯಲು ಸ್ವಲ್ಪ ಬಿಡುವು ಮಾಡಿಕೊಂಡರೆ ಹೊಸ ಅವಕಾಶಗಳನ್ನು ಪಡೆಯಬಹುದು.

ಒಂದು ಭಾಷೆಯನ್ನು ಮೋಜಿಗೆಂದು ಕಲಿತರೂ ಅದರಿಂದಾಗುವ ಪ್ರಯೋಜನಗಳು ಹಲವಾರು. ಅಂಥಹುದರಲ್ಲಿ ವಿದೇಶಿ ಭಾಷೆಯನ್ನು ಕಲಿಯುವ ಸಲುವಾಗಿ ನಿಷ್ಠೆಯಿಂದ ಕೆಲವು ಗಂಟೆಗಳನ್ನು ವಿನಿಯೋಗಿಸಿದರೆ ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಹಲವು ಲಾಭಗಳನ್ನು ಪಡೆಯಬಹುದು. 

ADVERTISEMENT

ಉದ್ದಿಮೆ, ಕಾನೂನು, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಮಾರ್ಕೆಟಿಂಗ್‌ ಹೀಗೆ ಯಾವುದೇ ಕ್ಷೇತ್ರಗಳಲ್ಲಿರುವವರೇ ಆಗಿದ್ದರೂ ವಿದೇಶಿ ಭಾಷೆಯೊಂದನ್ನು ಸ್ಪಷ್ಟವಾಗಿ ಕಲಿತಿದ್ದರೆ ಆ ದೇಶದಲ್ಲಿ ಹಲವು ರೀತಿಯ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅದರಲ್ಲಿಯೂ ಬೆಂಗಳೂರು, ಮುಂಬೈ, ಹೈದರಾಬಾದ್‌ನಂಥ ಮಹಾನಗರಗಳಲ್ಲಿ ಜರ್ಮನಿ, ಜಪಾನ್‌, ಡಚ್‌, ಫ್ರಾನ್ಸ್‌ ಸೇರಿದಂತೆ ವಿದೇಶಿ ಮೂಲದ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಾಗಿರುವುದರಿಂದ ಇಂಥ ಕಂಪನಿಗಳಲ್ಲಿ ಆಯಾ ದೇಶದ ಭಾಷೆ ಬಲ್ಲವರಿಗೆ ಆದ್ಯತೆ ಹೆಚ್ಚು. 

ವಿದೇಶಿ ಭಾಷೆಗಳನ್ನು ಕಲಿತರೆ ಆ ದೇಶದ ಸಂಸ್ಕೃತಿ, ಆಚರಣೆ ಹಾಗೂ ಮೌಲ್ಯಗಳ ಅರಿವು ಹೆಚ್ಚಾಗುತ್ತದೆ. ಇದರಿಂದ ಜಗತ್ತನ್ನು ನೋಡುವ ದೃಷ್ಟಿಕೋನವೂ ಬದಲಾಗುತ್ತದೆ.  ಕಾಗ್ನಿಟಿವ್‌ ಹಾಗೂ ನೆಟ್‌ವರ್ಕಿಂಗ್ ಕೌಶಲ ಹೆಚ್ಚುತ್ತದೆ. ವಿವಿಧ ಪ್ಲಾಟ್‌ಫಾರಂಗಳಲ್ಲಿ ಲಭ್ಯವಿರುವ ಅನ್ಯದೇಶಗಳ ಸಾಧಕರೊಂದಿಗೆ ಸಂಪರ್ಕ ಸಾಧಿಸಬಹುದು. ವಿದೇಶಕ್ಕಾಗಿ ಪ್ರವಾಸ ಹೋಗುವವರಿಗೆ ಒಂದಕ್ಕಿಂತ ಹೆಚ್ಚು ವಿದೇಶಿ ಭಾಷೆ ಗೊತ್ತಿದ್ದರೆ, ಪ್ರಯಾಣ ಸುಲಭವಾಗುತ್ತದೆ. 

ವಿದೇಶಿ ಭಾಷೆಗಳ ಕಲಿಕಾ ಕೋರ್ಸ್‌ಗೆ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿಯೇ ಬೆಂಗಳೂರು ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರವು  ವಾರಾಂತ್ಯದಲ್ಲಿ ವಿದೇಶಿ ಭಾಷೆಗಳನ್ನು ಕಲಿಸುವ ತರಗತಿಗಳನ್ನು  ನಡೆಸುತ್ತಿದೆ. ಅದಕ್ಕಾಗಿ ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಕೋರ್ಸ್‌ಗಳನ್ನು ರೂಪಿಸಿದೆ. 

ಯಾವೆಲ್ಲ ಭಾಷೆ ಕಲಿಯಬಹುದು?

ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್, ಜಪಾನಿ, ಕೊರಿಯನ್‌, ಚೈನೀನ್‌, ಇಟಾಲಿಯನ್‌, ಪೋರ್ಚುಗೀಸ್‌ ಭಾಷಾ ತರಗತಿಗಳು ನಡೆಯುತ್ತವೆ. 

ಕಲಿಕೆಯ ಹಂತಗಳು ಹೀಗಿರುತ್ತವೆ

ಸಾಮಾನ್ಯವಾಗಿ ಆಯಾ ಭಾಷೆಗೆ ಸಂಬಂಧಿಸಿದಂತೆ ಬೇಸಿಕ್‌ ಸರ್ಟಿಫಿಕೇಟ್‌ ಕೋರ್ಸ್‌ ಇರುತ್ತದೆ. ಇದು ಒಂದು ವರ್ಷದ ಕೋರ್ಸ್‌ ಆಗಿರುತ್ತದೆ. ಈ ಕೋರ್ಸ್‌ನಲ್ಲಿ ಎರಡು ಸೆಮಿಸ್ಟರ್‌ ಇರುತ್ತದೆ. A1 ಮತ್ತು A2 ಹಂತ ಎರಡನ್ನೂ ಒಳಗೊಂಡಿರುವ ಕೋರ್ಸ್‌ ಇದು. ಇದನ್ನು ಪೂರ್ಣಗೊಳಿಸಿದವರು ಯುಜಿ ಡಿಪ್ಲೊಮಾ ಕೋರ್ಸ್ ಮಾಡಬಹುದು. ಇದು B1 ಹಂತದ ಕೋರ್ಸಾಗಿದ್ದು, B1.1 ಮತ್ತು B1.2 ಹಂತಗಳು ಸೇರಿ ಬಿ1 ಆಗಿರುತ್ತದೆ. ಇದು ಎರಡನೆಯ ಹಂತ. 

ಇದಾದ ನಂತರ ಮೂರನೇ ಹಂತದಲ್ಲಿ ಪಿ.ಜಿ. ಡಿಪ್ಲೊಮಾ. B 2.1 ಮತ್ತು B 2.2 ಹಂತಗಳು ಇರುವ ಕೋರ್ಸ್‌ ಇದಾಗಿದ್ದು, ಇದು ಭಾಷೆಯ ಕಲಿಕೆಯಲ್ಲಿ ಅಡ್ವಾನ್ಸ್ಡ್‌ ಕೋರ್ಸ್‌ ಎಂದೇ ಹೇಳಬಹುದು. ಇದನ್ನು ಪೂರ್ಣಗೊಳಿಸಿದರೆ ಪದವಿಗೆ ಸಮನಾದಷ್ಟು ಭಾಷಾ ನೈಪುಣ್ಯವನ್ನು ಸಾಧಿಸಬಹುದು. 

ಕೇವಲ ಪಿಯುಸಿ ಓದಿದವರೂ A1  ರಿಂದ B.2.2 ಹಂತಗಳನ್ನು ಪೂರ್ಣಗೊಳಿಸಿದರೆ, ಅವರಿಗೆ ನೇರವಾಗಿ ಯಾವುದೇ ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಸೇರಬಹುದು.  ಇವೆಲ್ಲವೂ ವಾರಾಂತ್ಯದಲ್ಲಿ ಕಲಿಸಲಾಗುತ್ತದೆ. ಶನಿವಾರ ಮಧ್ಯಾಹ್ನ 2 ರಿಂದ 6 ಗಂಟೆ, ಭಾನುವಾರ 9ರಿಂದ 12ರ ಅವಧಿಯಲ್ಲಿ ಕಲಿಯುವ ಅವಕಾಶ ಇರುತ್ತದೆ. 

ಈ ಬಗ್ಗೆ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಜ್ಯೋತಿ ವೆಂಕಟೇಶ್‌ ಹೇಳುವುದಿಷ್ಟು; ಇದರ ಜತೆಗೆ ವಿದೇಶಿ ಭಾಷೆಗೆ ಸಂಬಂಧಿಸಿದಂತೆ ನಾಲ್ಕು ಪಿ.ಜಿ.ಡಿಪ್ಲೊಮಾ ಕೋರ್ಸ್‌ಗಳನ್ನು ಕಲಿಸಲಾಗುತ್ತದೆ. ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್‌, ಜಪಾನಿ. ಇದಕ್ಕೆ ಉತ್ತಮ ಬೇಡಿಕೆ ಇದೆ. ಕಲಿತ ವಿದ್ಯಾರ್ಥಿಗಳಿಗೆ ಕೆಲಸದ ಅವಕಾಶಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. 

ಕೋರ್ಸ್‌ ಕುರಿತ ಮಾಹಿತಿಗೆ
ದ್ವಿತೀಯ ಪಿ.ಯು ಅಥವಾ ಸಮಾನಂತರ ಶಿಕ್ಷಣ ಪಡೆದಿರಬೇಕು. ಉನ್ನತ ಶಿಕ್ಷಣ ಇಲಾಖೆಯ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್‌) ಅಡಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು. ಆಸಕ್ತರು 080-29572019/9353251761 ಅಥವಾ ವಿ.ವಿಯ ಜಾಲತಾಣ www.bcu.ac.in ಮಾಹಿತಿ ಪಡೆಯಬಹುದು.

ಕಲಿತವರಿಗೆ ಅವಕಾಶಗಳು ಹೇಗಿವೆ?

ಆಯಾ ದೇಶದಲ್ಲಿ ಭಾಷಾತಜ್ಞರಾಗಿ ಅಷ್ಟೆ ಅಲ್ಲದೇ ವಿವಿಧ ಭಾಷಾ ಅಧ್ಯಯನ ಕೇಂದ್ರಗಳಲ್ಲಿ ಶಿಕ್ಷಕರಾಗಿಯೂ ಕೆಲಸ ಮಾಡಬಹುದು. ವಿದ್ಯಾರ್ಥಿಗಳು ಪೂರಕವಾಗಿ ಈ ಕೋರ್ಸ್ ಮಾಡಿದರೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬಹುದು. ಬೇರೆ ಬೇರೆ ವೃತ್ತಿಯಲ್ಲಿರುವವರು ಈ ಕೋರ್ಸ್‌ ಮಾಡಿದರೆ, ಕಂಪನಿಯ ಪ್ರಾಜೆಕ್ಟ್‌ ಮೇಲೆ ಆಯಾ ದೇಶಗಳಲ್ಲಿ ಕೆಲಸ ಮಾಡುವಾಗ ನೆರವಿಗೆ ಬರುತ್ತದೆ. ಭಾಷೆ ಬರುತ್ತದೆ ಎನ್ನುವ ಕಾರಣಕ್ಕೆ ಆ ಪ್ರಾಜೆಕ್ಟ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ದಾರಿಯಾಗುತ್ತದೆ.

ಜಪಾನಿ ಭಾಷೆ ಕಲಿಕೆಗೆ ಹೆಚ್ಚಿದ ಬೇಡಿಕೆ
ಜಪಾನಿ ಭಾಷೆ ಕಲಿಕೆಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಿದೆ. ಅದರಲ್ಲಿಯೂ ಆರೋಗ್ಯಕ್ಷೇತ್ರಕ್ಕೆ ಸಂಬಂಧಪಟ್ಟ ವೃತ್ತಿಯಲ್ಲಿರುವವರು ಜಪಾನಿ ಭಾಷೆ ಕಲಿತರೆ ಅವರಿಗೆ ಜಪಾನ್‌ ದೇಶದಲ್ಲಿ ಉತ್ತಮ ಅವಕಾಶಗಳು ಲಭ್ಯವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಟಯೊಟೊ ಕಿರ್ಲೋಸ್ಕರ್‌ ಸಹಯೋಗದೊಂದಿಗೆ ‘ಜ್ಯಾಪನೀಸ್‌ ಫಾರ್ ಸ್ಕಿಲ್ಡ್‌ ವರ್ಕ್‌ಫೋರ್ಸ್‌’ ಎನ್ನುವ ಕೋರ್ಸ್‌ ಒಂದನ್ನು ರೂಪಿಸಲಾಗಿದ್ದು, ಸದ್ಯದಲ್ಲಿಯೇ ಚಾಲನೆ ಸಿಗಲಿದೆ.  ಯಾವುದೇ ವೃತ್ತಿಯಲ್ಲಿರುವವರು ಈ ಕೋರ್ಸ್‌ಗೆ ಸೇರಬಹುದು. ಒಂದು ವರ್ಷ ಅವಧಿಯ ಎರಡು ಸೆಮಿಸ್ಟರ್‌ ಇರುವ ಕೋರ್ಸ್‌ ಇದಾಗಿದ್ದು, ತರಬೇತಿಯ ಅವಧಿ 1000 ಗಂಟೆಗಳು. ಆದರೆ, ಇದು ವಾರಾಂತ್ಯದಲ್ಲಿ ಇರುವುದಿಲ್ಲ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಜಪಾನಿ ಭಾಷೆಯನ್ನು ಕಲಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.