ಚಂದದ ಕೈಬರಹವಿದ್ದರೆ ಪರೀಕ್ಷೆಯಲ್ಲಿ ಒಂದೆರಡು ಅಂಕ ಹೆಚ್ಚಿಗೆ ಸಿಗುವುದು ಸುಲಭವಾಗುತ್ತದೆ. ಕೈಬರಹ ಹೇಗಿರಬೇಕು ಎಂಬುದಕ್ಕೆ ಇಲ್ಲಿವೆ ಹಲವು ಸಲಹೆಗಳು
ಆಲಿಸುವುದು, ಓದುವುದು, ಬರೆಯುವುದು, ಮೌಖಿಕ ಅಭಿವ್ಯಕ್ತಿ, ಈ ನಾಲ್ಕು ಹಂತಗಳು ಕಲಿಕಾ ಪ್ರಕ್ರಿಯೆಯ ಮುಖ್ಯ ಆಯಾಮಗಳಾಗಿರುತ್ತವೆ. ಈ ನಾಲ್ಕರಲ್ಲಿ ಮಗು ತೋರುವ ಆಸಕ್ತಿ ಮತ್ತು ಪ್ರತಿಕ್ರಿಯೆಗಳನ್ನಾಧರಿಸಿ, ಆ ಮಗುವಿನ ಕಲಿಕೆಯ ಕುರಿತು ನಿಖರವಾದ ಅಭಿಪ್ರಾಯವನ್ನು ಹೇಳಬಹುದಾಗಿದೆ. ಈ ನಾಲ್ಕು ಆಯಾಮಗಳು ಪರಸ್ಪರ ಪೂರಕವಾಗಿದ್ದು, ಇವುಗಳನ್ನು ಗಮನಿಸುತ್ತಾ ಪಾಠ ಮಾಡುವುದು ಶಿಕ್ಷಕರ ಹೊಣೆಗಾರಿಕೆಯೂ ಆಗಿರುತ್ತದೆ.
ಬರವಣಿಗೆ ಒಂದು ಮುಖ್ಯವಾದ ಮನೋ ಶಾರೀರಿಕ ಕಲಿಕಾ ಚಟುವಟಿಕೆಯಾಗಿರುತ್ತದೆ. ಮೌಲ್ಯಮಾಪನದಲ್ಲಿ ಲಿಖಿತ ಮತ್ತು ಮೌಖಿಕ, ಪ್ರಾಯೋಗಿಕ ಚಟುವಟಿಕೆ ಗಳಿರುತ್ತವೆ. ವರ್ಷವಿಡೀ ಕಲಿತ ಅಥವಾ ಸಂಗ್ರಹಿಸಿದ ವಿಷಯ ಜ್ಞಾನವನ್ನು ಲಿಖಿತ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಬರೆದು ತೋರಬೇಕಾಗುತ್ತದೆ. ಲಿಖಿತ ಪರೀಕ್ಷೆ ಮೌಲ್ಯಮಾಪನದ ಅತ್ಯಂತ ಮುಖ್ಯವಾದ ಶೈಕ್ಷಣಿಕ ಚಟುವಟಿಕೆ ಆಗಿರುತ್ತದೆ. ವಿದ್ಯಾರ್ಥಿ ಬರೆದದ್ದು ಮೌಲ್ಯಮಾಪಕರಿಗೆ ಸುಲಭವಾಗಿ ಓದಲು ಬರುವಂತಿರಬೇಕು. ಹಾಗಾಗಿ ಕೈಬರಹದ ಕುರಿತು ಕೆಲ ಅಂಶಗಳನ್ನು ನಮ್ಮ ವಿದ್ಯಾರ್ಥಿಗಳು ಮನನ ಮಾಡಿಕೊಳ್ಳುವುದು ಅತಿ ಮುಖ್ಯವಾಗಿರುತ್ತದೆ.
ಅಕ್ಷರಗಳು ದುಂಡಾಗಿರಬೇಕು. ಸರಳವಾಗಿ ಓದಲು ಬರುವಂತಿರಬೇಕು. ಅಕ್ಷರಗಳ ಗಾತ್ರ, ಆಕಾರಗಳು ಸಮರ್ಪಕವಾಗಿರಬೇಕು. ಅಕ್ಷರ ಬರೆಯುವಲ್ಲಿ ಮೂರು ಅಂಶಗಳನ್ನು ಗಮನಿಸಬೇಕು. ಆರಂಭ, ಮುಂದುವರಿಕೆ ಮತ್ತು ಮುಕ್ತಾಯ. ಇವೇ ಆ ಮೂರು ಅಂಶಗಳು. ಪ್ರತಿಯೊಂದು ಅಕ್ಷರವನ್ನು ಸಮರ್ಪಕವಾಗಿ ಬರೆಯಲು ಆರಂಭಿಸಬೇಕು. ಬರೆಯುತ್ತ ಮುಂದುವರಿಯಬೇಕು ಬರೆದು ಮುಗಿಸಬೇಕು. ಕೆಲವು ವಿದ್ಯಾರ್ಥಿಗಳು ಕೆಲ ಅಕ್ಷರಗಳನ್ನು ಬರೆಯುವಾಗ ತಿರುಪಾಗಿ ಬರೆಯುತ್ತಾರೆ ಅದು ಸರಿಯಲ್ಲ.
ಎರಡು ಶಬ್ದಗಳ ನಡುವೆ ಸರಿಯಾದ ಅಂತರವಿರಬೇಕು. ಪೂರ್ಣವಿರಾಮ, ಅಲ್ಪವಿರಾಮ, ಉದ್ಗಾರವಾಚಕ, ಪ್ರಶ್ನಾರ್ಥಕ, ಅವತರಿಣಿಕೆ ಇತ್ಯಾದಿ ಚಿಹ್ನೆಗಳನ್ನು ಸರಿಯಾಗಿ ಬಳಸಬೇಕು. ಆಗ ಮೌಲ್ಯಮಾಪಕರಿಗೆ ಬರೆದದ್ದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಎಲ್ಲೆಂದರಲ್ಲಿ ಚಿಹ್ನೆಗಳನ್ನು ಬಳಸಿದರೆ ಅಥವಾ ಚಿಹ್ನೆಗಳನ್ನು ಸಮರ್ಪಕವಾಗಿ ಬಳಸದೇ ಇದ್ದರೆ ಬರೆದದ್ದು ಮೌಲ್ಯಮಾಪಕರಿಗೆ ಅರ್ಥವಾಗುವುದಿಲ್ಲ. ಹಾಗೆ ಮಾಡಬಾರದು.
ಈ ಹಿಂದೆ ಒಂದು ಲೇಖನವನ್ನು ಕೊಟ್ಟು, ಅದರಲ್ಲಿ ವಿರಾಮ ಚಿಹ್ನೆಗಳನ್ನು ಬಳಸಿರಿ ಎಂಬುದಾಗಿ ಐದು ಅಂಕಗಳ ಪ್ರಶ್ನೆಯನ್ನೇ ಕೊಡಲಾಗುತ್ತಿತ್ತು. ಬರೆದ ವಾಕ್ಯ ಯಾರದೋ ಒಬ್ಬರ ಹೇಳಿಕೆಯಾಗಿದ್ದರೆ ಆ ವಾಕ್ಯವನ್ನು ಚಿಹ್ನೆಗಳಿಂದ ಗುರುತಿಸಬೇಕು. ವಿರುದ್ಧಾರ್ಥ, ವ್ಯಂಗ್ಯ ಅಥವಾ ವಿಡಂಬನೆಯನ್ನು ವ್ಯಕ್ತಪಡಿಸುವುದಾದರೆ ಅಂಥ ವಾಕ್ಯಗಳನ್ನು ಆವರಣಗಳಲ್ಲಿ ಬರೆಯಬೇಕು.
ಬರಹದಲ್ಲಿ ಅಂಕಿ ಅಂಶಗಳನ್ನು ಅಥವಾ ಅರ್ಥವತ್ತಾದ ವಿಶೇಷ ವಾಕ್ಯವನ್ನು ತಳರೇಖೆ (underline) ಹಾಕಬೇಕು. ಈಗ ಗಿಳಿ ಹಸಿರಿನ ತೆಳು ವರ್ಣದ ಮಾರ್ಕರ್ ಪೆನ್‌ಗಳು ದೊರೆಯುತ್ತವೆ. ಅವುಗಳಿಂದ ಅಂಥ ಅಂಶಗಳನ್ನು ಎತ್ತಿ ತೋರಿಸಬಹುದು.
ಕೆಲವು ಸಲ ವಿದ್ಯಾರ್ಥಿಗಳಿಗೆ ತಾವು ಬರೆದದ್ದು ತಪ್ಪಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ಅಂಥ ಸಂದರ್ಭದಲ್ಲಿ ತಪ್ಪಾದ ಶಬ್ದ ಮತ್ತು ವಾಕ್ಯಗಳನ್ನು ಒಂದೇ ಒಂದು ಗೆರೆ ಎಳೆಯುವುದರ ಮೂಲಕ ರದ್ದುಪಡಿಸಬೇಕು. ಆದರೆ, ಕೆಲವರು ತಾವು ತಪ್ಪಾಗಿ ಬರೆದದ್ದು ಓದುಗರಿಗೆ ಗೊತ್ತಾಗಬಾರದು ಎಂಬ ಉದ್ದೇಶದಿಂದ ತಪ್ಪು ಶಬ್ದ ಅಥವಾ ವಾಕ್ಯಗಳ ಮೇಲೆ ಪುನಃ ಪುನಃ ಗೆರೆ ಎಳೆಯುವರು. ಹೀಗೆ ಮಾಡಬೇಡಿ.
ಶಿಸ್ತು, ಸ್ವಚ್ಛತೆ, ಸೌಂದರ್ಯ ಈ ಮೂರು ಬರವಣಿಗೆಯ ಅಂದವನ್ನು ಹೆಚ್ಚಿಸುತ್ತವೆ. ಸುಂದರವಾದ ಬರವಣಿಗೆಯನ್ನು ಕಂಡ ಮೌಲ್ಯಮಾಪಕರು ಸಂತೋಷಭರಿತರಾಗುವರು. ಆಗ ಎರಡು ಅಂಕಗಳು ಹೆಚ್ಚು ಬರುವ ಸಾಧ್ಯತೆಯೂ ಇರುತ್ತದೆ. ಈ ಹಿಂದೆ ಸುಂದರವಾದ ಬರಹಕ್ಕೆ ಐದು ಅಂಕಗಳನ್ನು ಮೀಸಲಿಡುವ ಪದ್ಧತಿಯೂ ಇತ್ತು. ಉತ್ತರ ಬರೆಯುವಲ್ಲಿ ಅಗತ್ಯವಾದ ಶೀರ್ಷಿಕೆ, ಉಪಶೀರ್ಷಿಕೆಗಳನ್ನು ಸ್ಪಷ್ಟವಾಗಿ ಬರೆಯಬೇಕು. ಒಂದು ಪ್ರಶ್ನೆಗೆ ಉತ್ತರವನ್ನು ಬರೆದಾದ ಮೇಲೆ ಕೆಳಗೆ ಒಂದು ಗೆರೆ ಎಳೆಯುವುದೂ ಒಳ್ಳೆಯ ಪರಿಪಾಠ ವಾಗಿರುತ್ತದೆ.
ನಿಬಂಧರೂಪದ ಉತ್ತರ ಬರೆಯುವುದಿದ್ದಲ್ಲಿ ವಿಷಯಾನುಸಾರ (paragraphs) ಕಂಡಿಕೆಗಳನ್ನು ಮಾಡಬೇಕು. ಹಾಗೆ ಮಾಡುವುದರಿಂದ ಮೌಲ್ಯಮಾಪಕರಿಗೆ ಬರೆದ ವಿಷಯ ಹಂತ ಹಂತವಾಗಿ ಸ್ಪಷ್ಟವಾಗಿ ತಿಳಿಯುತ್ತದೆ.
ಪುಟದ ಎಡಭಾಗದಲ್ಲಿ ಎರಡು ಅಂಗುಲದ ಮಾರ್ಜಿನ್ ಬಿಟ್ಟು ಬರೆಯಬೇಕು. ಕೆಲವು ಸಲ ಮಾರ್ಜಿನ್ ಗೆರೆ ಹಾಕಿದ ಉತ್ತರ ಪತ್ರಿಕೆಗಳೂ ಕೊಡಲಾಗುತ್ತವೆ. ಈ ಹಿಂದೆ ಉತ್ತರ ಪತ್ರಿಕೆಯ ಪುಟದ ಕಾಲು ಭಾಗವನ್ನು ಮಾರ್ಜಿನ್ ಬಿಡುವ ಪದ್ಧತಿ ಇತ್ತು.
ಕೂಡಕ್ಷರಗಳನ್ನು ಬರೆಯುವುದಕ್ಕಿಂತ (joint letters) ಅಕ್ಷರಗಳನ್ನು, ಶಬ್ದಗಳನ್ನು ಬಿಡಿಸಿ ಬರೆಯುವುದೇ ಲೇಸು. ಹಾಗೆ ಬರೆದದ್ದು ಮುತ್ತಿನ ಹಾರದಂತೆ ಮುದ್ದಾಗಿ ಕಾಣುತ್ತದೆ.
ಚಂದದ ಕೈಬರಹ ನಿಮ್ಮದಾಗಬೇಕಾದರೆ, ನಿತ್ಯ ಒಂದು ಪುಟ ಬರೆಯುವ ರೂಢಿಯನ್ನು ಇಟ್ಟುಕೊಳ್ಳಬೇಕು. ಬರವಣಿಗೆ ಚಟವಾದರೆ ಪರೀಕ್ಷೆ ಬರೆಯುವುದು ಸರಾಗವಾಗುತ್ತದೆ. ಕೇವಲ ಓದಿ, ಮಾಹಿತಿ ಸಂಗ್ರಹಿಸಿದರೆ ಸಾಲದು. ಸಂಗ್ರಹಿಸಿದ ಮಾಹಿತಿಯನ್ನು ಇತಿಮಿತಿಯಲ್ಲಿ ದುಂಡಗೆ ಬರೆದು ತೋರುವುದು ಪರೀಕ್ಷಾ ದೃಷ್ಟಿಯಿಂದ ಅತ್ಯಂತ ಮಹತ್ವದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.