ADVERTISEMENT

ಪ್ರಕಾಶ್ ರಾಜ್ ಬೆಂಬಲಿರು, ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 3 ಮೇ 2019, 14:19 IST
Last Updated 3 ಮೇ 2019, 14:19 IST

ಬೆಂಗಳೂರು: ಬೆಂಗಳೂರು ಕೇಂದ್ರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್‌ ಶುಕ್ರವಾರ ನಾಮಪತ್ರ ಸಲ್ಲಿಸಿ ಹೊರಡುವ ವೇಳೆ ಅವರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘೋಷಣೆಗಳ ಸಂಘರ್ಷ ನಡೆಯಿತು.

ಬಿಬಿಎಂಪಿ ಕಚೇರಿಯಿಂದ ಹೊರ ಬಂದಾಗ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ನಾಮಪತ್ರ ಸಲ್ಲಿಸಲು ಬೆಂಬಲಿಗರೊಂದಿಗೆ ಒಳ ಹೋಗುತ್ತಿದ್ದರು. ಎರಡು ಗುಂಪುಗಳು ಎದುರಾದಾಗ ಬಿಜೆಪಿ ಕಾರ್ಯಕರ್ತರು ‘ಮೋದಿ, ಮೋದಿ’ ಎಂದು ಕೂಗಿದರು. ಇದಕ್ಕೆ ಪ್ರತಿಯಾಗಿ ಪ್ರಕಾಶ್ ರೈ ಬೆಂಬಲಿಗರು ‘ಭೇದಿ ಭೇದಿ’ ಎಂದು ಕೂಗಿ ‘ಎಲ್ಲಿ ₹15 ಲಕ್ಷ’ ಎಂದು ತಿರುಗೇಟು ನೀಡಿದರು. ಪೊಲೀಸರು ಎರಡು ಕಡೆಯವರನ್ನು ಸಮಾಧಾನಪಡಿಸಿ ಕಳುಹಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, ‘ಬಿಜೆಪಿಯವರು ಸಾವಿನ ಮನೆಯಲ್ಲೂ ಮೋದಿ, ಮೋದಿ ಎಂದು ಕೂಗುತ್ತಾರೆ. ಅದಕ್ಕೆ ಅರ್ಥವಿಲ್ಲ. ಕಾಂಗ್ರೆಸ್‌ ಕೂಡ ಜಾತಿವಾದಿ ಪಕ್ಷ. ನಾನೂ ಯಾರ ಪ್ರತಿಸ್ಪರ್ಧಿಯೂ ಅಲ್ಲ’ ಎಂದರು.

ADVERTISEMENT

ನಾಮಪತ್ರ ಸಲ್ಲಿಸಲು ಹೊರಡುವ ಮುನ್ನ ಪ್ರಕಾಶ್ ರಾಜ್, ಹಲಸೂರಿನಲ್ಲಿ ಇರುವ ಗಣೇಶ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದರು. ಕಾಟನ್ ಪೇಟೆಯಲ್ಲಿನ ತವಕ್ಕಲ್ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಸೇಂಟ್ ಪ್ಯಾಟ್ರಿಕ್ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಿನ ಕ್ರೈಸ್ತ ಗುರುಗಳ ಆಶೀರ್ವಾದ ಪಡೆದರು. ನಂತರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಸಿದರು.

ಪಿ.ಸಿ. ಮೋಹನ್ ಮೆರವಣಿಗೆ

ಪಿ.ಸಿ. ಮೋಹನ್ ಅವರು ಬನಪ್ಪ ಪಾರ್ಕ್ ಸಮೀಪದ ವಿನಾಯಕ ಶಾಲೆ ಬಳಿಯಿಂದ ತಮ್ಮ ಬೆಂಬಲಿಗರೊಂದಿಗೆ ಹೊರಟು ಹಲಸೂರು, ಮೈಸೂರು ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಜಯಘೋಷ ಮೊಳಗಿಸಿದರು. ಬಳಿಕ ಬಿಬಿಎಂಪಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.