ADVERTISEMENT

ವಂಶಪಾರಂಪರ್ಯ ರಾಜಕಾರಣ ನಿರಾಕರಿಸಿದ್ದ ಶಂಕರಯ್ಯ

ಜಾತಿ ನೋಡಿ ಮತ ಹಾಕದ ಮೈಸೂರಿನ ಅಂದಿನ ಮತದಾರ

ಕೆ.ಎಸ್.ಗಿರೀಶ್
Published 3 ಮೇ 2019, 17:57 IST
Last Updated 3 ಮೇ 2019, 17:57 IST
ಎಂ.ಶಂಕರಯ್ಯ
ಎಂ.ಶಂಕರಯ್ಯ   

ಮೈಸೂರು: ಲೋಕಸಭಾ ಚುನಾವಣೆ ಇತಿಹಾಸವನ್ನು ಕೆದಕಿದರೆ ಹಲವು ಕುತೂಹಲಕರ ಸಂಗತಿಗಳು ತೆರೆದುಕೊಳ್ಳುತ್ತವೆ. 1957 ಮತ್ತು 1962ರ ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಗಳು ಇಂದಿನ ರಾಜಕಾರಣಕ್ಕೆ ಆದರ್ಶಗಳಾಗಿವೆ.

ಈ ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಎಂ.ಶಂಕರಯ್ಯ ಅವರು ಮೂರನೇ ಬಾರಿಗೆ ಸ್ಪರ್ಧಿಸಲು ನಿರಾಕರಿಸಿದ್ದರು. ಆರೋಗ್ಯ ಸರಿಯಾಗಿ ಸ್ಪಂದಿಸುತ್ತಿಲ್ಲ. ಅನಾರೋಗ್ಯ ಇಟ್ಟುಕೊಂಡು ಜನರ ಸೇವೆ ಮಾಡಲಾಗದು. ಅದೊಂದು ವಿಧದ ಆತ್ಮವಂಚನೆಯಾಗುತ್ತದೆ ಎಂದು ಹೇಳಿ ಮನೆ ಬಾಗಿಲಿಗೆ ಬಂದ ಟಿಕೆಟ್‌ ಹಿಂದಿರುಗಿಸಿದ್ದರು.

ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಸೇರಿದಂತೆ ಹಲವು ನಾಯಕರು ಹಾಗೂ ರಾಷ್ಟ್ರಮಟ್ಟದ ನಾಯಕರು ಸ್ಪರ್ಧಿಸಲು ಒತ್ತಡ ಹೇರಿದ್ದರು. ಸತತ 3ನೇ ಬಾರಿಗೆ ಗೆಲುವು ಸಾಧಿಸುವ ಅವಕಾಶವೂ ಇತ್ತು. ಆದರೆ, ಒಮ್ಮೆ ಹೃದಯಾಘಾತವಾಗಿದ್ದಕ್ಕೆ ಮತ್ತೆ ಸ್ಪರ್ಧಿಸಲು ಹಿಂದೇಟು ಹಾಕಿದ್ದರು.

ADVERTISEMENT

ಕುಟುಂಬದಿಂದ ಯಾರನ್ನಾದರೂ ಕಣಕ್ಕಿಳಿಸುವಂತೆ ನಾಯಕರು ಬೇಡಿಕೆ ಇಟ್ಟಾಗ ‘ವಂಶಪಾರಂಪರ್ಯ ರಾಜಕಾರಣ ಬೇಡವೇ ಬೇಡ’ ಎಂದು ಸಾರಸಗಟಾಗಿ ನಿರಾಕರಿಸಿದ್ದರು. ರಾಜಕಾರಣಕ್ಕೆ ಆರೋಗ್ಯಪೂರ್ಣವಾಗಿರುವವರು ಬರಬೇಕು, ಒಂದೇ ಕುಟುಂಬದವರು ಬರಬಾರದು ಎಂದು ವಾದ ಮಂಡಿಸಿದರು. ಅದರಂತೆ ನಡೆದುಕೊಂಡು, ಕುಟುಂಬದವರು, ಸಂಬಂಧಿಗಳು ರಾಜಕಾರಣದತ್ತ ಸುಳಿಯಲು ಬಿಟ್ಟಿಲ್ಲ. ಸತತ ಎರಡು ಬಾರಿ ಸಂಸದರಾಗಿದ್ದರೂ ವಾಸವಿದ್ದದ್ದು ಹೆಂಚಿನ ಮನೆಯಲ್ಲೇ. ಸರಳ, ಮಾದರಿ ಜೀವನ ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದರು.

ಎಂ.ಶಂಕರಯ್ಯ ಅವರು ಅಧಿಕಾರಿಗಳೊಂದಿಗೆ ಹೆಜ್ಜೆ ಹಾಕುತ್ತಿರುವುದು. (ಬಲತುದಿಯಲ್ಲಿರವವರು ಶಂಕರಯ್ಯ)

ಜಾತಿ ನೋಡದ ಮತದಾರರು

2ನೇ ಲೋಕಸಭಾ ಚುನಾವಣೆಯಲ್ಲಿ ಶಂಕರಯ್ಯ ಅವರ ಗೆಲುವು ಇಂದಿಗೂ ಆದರ್ಶವಾಗಿದೆ. ಇವರ ವಿರುದ್ಧ ಸ್ಪರ್ಧಿಸಿದ್ದ ಗುರುಪಾದಸ್ವಾಮಿ ಲಿಂಗಾಯತ ಸಮುದಾಯದವರು. ಶಂಕರಯ್ಯ ದೇವಾಂಗ ಸಮುದಾಯದವರು. ಮೊದಲ ಚುನಾವಣೆಯಲ್ಲಿ ಗುರುಪಾದಸ್ವಾಮಿ ಆ ಕಾಲದ ಘಟಾನುಘಟಿ ಎನಿಸಿದ್ದ ಎಚ್.ಸಿ. ದಾಸಪ್ಪ ಅವರನ್ನು ಸೋಲಿಸಿ ಹೆಸರು ಗಳಿಸಿದ್ದರು. ಆ ಕಾಲದ ತರುಣ ಸಂಸದ ಎಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು.

ಇಂತಹವರ ವಿರುದ್ಧ ಗೆಲುವು ಕಷ್ಟ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ಕಾಲದ ಪ್ರಬುದ್ಧ ಮತದಾರರು ಜಾತಿಯನ್ನು ಪರಿಗಣಿಸದೇ ವ್ಯಕ್ತಿ, ವ್ಯಕ್ತಿತ್ವ ಪರಿಗಣಿಸಿ ಮತ ಹಾಕಿದ್ದು ವಿಶೇಷ. ಇಂದಿನ ರಾಜಕಾರಣಕ್ಕೆ ಹೋಲಿಸಿದರೆ ಮಾದರಿಯಾಗಿ ಕಾಣುತ್ತದೆ.

ಜಪ್ತಿ ಮಾಡಿದರೂ ದಂಡ ಕಟ್ಟದ ಶಂಕರಯ್ಯ

ಶಂಕರಯ್ಯ ಅವರು ಬ್ರಿಟಿಷರ ವಿರುದ್ಧ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕೆ ಆಗಿನ ನ್ಯಾಯಾಲಯ ದಂಡ ಹಾಕಿತ್ತು. ಆದರೆ, ದಂಡ ಪಾವತಿಸಲು ನಿರಾಕರಿಸಿದರು. ಮೈಸೂರಿನ ಇರ್ವಿನ್ ರಸ್ತೆಯಲ್ಲಿದ್ದ ಮನೆಯನ್ನು ಜಪ್ತಿ ಮಾಡಲು ಬಂದಾಗ ದಂಡ ಪಾವತಿಸುವ ಅವಕಾಶ ನೀಡಿದರು. ಆಗಲೂ ನಿರಾಕರಿಸುವ ಮೂಲಕ ಗಟ್ಟಿಯಾಗಿ ನಿಂತರು.

* ಅನಾರೋಗ್ಯದಿಂದ ಟಿಕೆಟ್ ಬೇಡ ಎಂದರು. ಆರೋಗ್ಯ ಸರಿ ಇದ್ದರಷ್ಟೇ ಜನಸೇವೆಗೆ ಬರಬೇಕು ಎಂದು ಹೇಳಿದ್ದರು. ಅಪ್ಪ ತತ್ವ, ಆದರ್ಶಕ್ಕಾಗಿ ಬದುಕಿದ್ದ ರಾಜಕಾರಣಿ

-ಉಮಾ, ಶಂಕರಯ್ಯ ಪುತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.