ADVERTISEMENT

‘ಎಚ್‌ಡಿಕೆ, ಡಿಕೆ ಕುಂಟೆತ್ತುಗಳು’

ನಾಲ್ಕು ಕ್ಷೇತ್ರಗಳಿಗೆ ಹೆಚ್ಚಿನ ಭದ್ರತೆ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 18:57 IST
Last Updated 4 ಏಪ್ರಿಲ್ 2019, 18:57 IST

ಬೆಂಗಳೂರು: ‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜೋಡೆತ್ತುಗಳಲ್ಲ. ಕುಂಟೆತ್ತುಗಳು’ ಎಂದು ಬಿಜೆಪಿ ಶಾಸಕ ಆರ್‌.ಅಶೋಕ್‌ ಲೇವಡಿ ಮಾಡಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂಡ್ಯದಲ್ಲಿ ಪ್ರಚಾರ ನಡೆಸುತ್ತಿರುವ ನಟರನ್ನು ಕಳ್ಳೆತ್ತು ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಉತ್ತರ ಕೊರಿಯಾ ಮಾದರಿಯ ಸರ್ವಾಧಿಕಾರಿ ಧೋರಣೆ ನಮ್ಮಲ್ಲಿ ನಡೆಯುವುದಿಲ್ಲ’ ಎಂದರು.

‘ರಾಜ್ಯದಲ್ಲಿ 200ಕ್ಕೂ‌ ಹೆಚ್ಚು ಜಾತಿಗಳಿವೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿರುವವರು ಜಾತಿ ಹೆಸರಿನಲ್ಲಿ ಮತ ಕೇಳಬಾರದು. ಮಂಡ್ಯ
ದಲ್ಲಿ ಜಾತಿ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ನಾಯ್ಡು, ಕಮ್ಮ ಸಮುದಾಯಕ್ಕೆ ಜೆಡಿಎಸ್‌ ಮುಖಂಡರು ಅವಮಾನ ಮಾಡುತ್ತಿದ್ದಾರೆ. ಒಕ್ಕಲಿಗರ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರ. ಜೆಡಿಎಸ್‌ ಪಕ್ಷವನ್ನು ಜಾತಿಯ ಪಕ್ಷ ಎಂದು ಕರೆಯಬಹುದು’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಮಂಡ್ಯ, ಹಾಸನ, ತುಮಕೂರು, ಬೆಂಗಳೂರು‌ ಗ್ರಾಮಾಂತರ ಕ್ಷೇತ್ರಗಳಲ್ಲಿ‌ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮುಖಂಡರು ಹಣ, ಉಡುಗೊರೆಗಳನ್ನು ಹಂಚುತ್ತಿದ್ದಾರೆ. ಈ ಮೂಲಕ ಗೆಲ್ಲಲು ಕುತಂತ್ರ ನಡೆಸಿದ್ದಾರೆ. ಈ ಕ್ಷೇತ್ರಗಳಿಗೆ ಹೆಚ್ಚಿನ‌ ಭದ್ರತೆ ನೀಡಬೇಕು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ’ ಎಂದರು.

ಬಿಜೆಪಿ ವಕ್ತಾರ ಗೋ.ಮಧುಸೂದನ್‌, ‘ಹಾಸನ ಜಿಲ್ಲೆಯಲ್ಲಿ ಹೇಮಾವತಿ ಬಲದಂಡೆಯ ಕಾಮಗಾರಿ ನಡೆಸುವ ಮುನ್ನವೇ ₹1,344 ಕೋಟಿ ಬಿಲ್‌ ಪಾವತಿಯಾಗಿದೆ. ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸದೆ ಗುತ್ತಿಗೆದಾರರಿಗೆ ಹಣ ನೀಡಿದ್ದಾರೆ ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.