ADVERTISEMENT

ಹಿರಿಯರ ಶ್ರಮದಿಂದ ಬಿಜೆಪಿಗೆ ಅಧಿಕಾರ: ಬಿ.ಎಸ್‌. ಯಡಿಯೂರಪ್ಪ

ಬಿಜೆಪಿ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 12:00 IST
Last Updated 7 ಏಪ್ರಿಲ್ 2019, 12:00 IST
ಶಿಕಾರಿಪುರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಉದ್ಘಾಟಿಸಿದರು. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಇದ್ದರು.
ಶಿಕಾರಿಪುರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಉದ್ಘಾಟಿಸಿದರು. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಇದ್ದರು.   

ಶಿಕಾರಿಪುರ: ಹಿರಿಯ ನಾಯಕರ ಶ್ರಮದಿಂದ ದೇಶದಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ನಾಯಕರ ಹೋರಾಟ ಹಾಗೂ ಸಂಘಟನೆಯ ಪ್ರತಿಫಲವಾಗಿ ಕೇಂದ್ರ ಹಾಗೂ ಹಲವು ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ. 5 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತ ನೀಡಿದ್ದಾರೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳು ಎಲ್ಲ ವರ್ಗದ ಜನರನ್ನು ತಲುಪಿವೆ. ದೇಶ ರಕ್ಷಣೆಗೆ ಮೋದಿ ಹೆಚ್ಚು ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.

ADVERTISEMENT

ಈ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ದೇಶದಲ್ಲಿ ಬಿಜೆಪಿ 300 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ. ರಾಜ್ಯದಲ್ಲಿ 22 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ತಾಲ್ಲೂಕಿನ ಎಲ್ಲಾ ಮತಗಟ್ಟೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಅಭ್ಯರ್ಥಿ ಬಿ.ವೈ. ರಾಘವೇಂದ್ರಗೆ ತಾಲ್ಲೂಕಿನಲ್ಲಿ 50 ಸಾವಿರ ಮತಗಳ ಅಂತರದಿಂದ ಗೆಲ್ಲಲು ಮುಖಂಡರು ಹಾಗೂ ಕಾರ್ಯಕರ್ತರು ಶ್ರಮ ಹಾಕಬೇಕು ಎಂದು ಸಲಹೆ ನೀಡಿದರು.

ಅಭ್ಯರ್ಥಿ ಬಿ.ವೈ. ರಾಘವೇಂದ್ರ, ‘ಮಾಜಿ ಮುಖ್ಯಮಂತ್ರಿಯಾದರೂ ಯಡಿಯೂರಪ್ಪ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್‌ ಮನೆಗೆ ತೆರಳಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವಂತೆ ಮನವಿ ಮಾಡಿದ ಪರಿಣಾಮ ಶಿಕಾರಿಪುರ, ಸೊರಬ ತಾಲ್ಲೂಕು ಸೇರಿ ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದೆ’ ಎಂದರು.

ಶಿಕಾರಿಪುರ, ಹಿರೇಕೆರೂರು, ಸೊರಬ ತಾಲ್ಲೂಕಿನ ಜನರಿಗೆ ಅನುಕೂಲವಾಗಿದ್ದ ಪಟ್ಟಣದ ಜಿಲ್ಲಾಸ್ಪತ್ರೆಯನ್ನು ರದ್ದು
ಮಾಡಲು ಮಧು ಬಂಗಾರಪ್ಪ ಕಾರಣರಾಗಿದ್ದಾರೆ. ತಾಲ್ಲೂಕಿನ ಜನರ ಮತ ಕೇಳುವ ನೈತಿಕ ಹಕ್ಕು ಅವರಿಗೆ ಇಲ್ಲ ಎಂದು ಟೀಕಿಸಿದರು.

ಶಾಸಕ ಹರತಾಳು ಹಾಲಪ್ಪ, ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ, ಮುಖಂಡರಾದ ಕೆ. ಶೇಖರಪ್ಪ, ಕೆ.ಎಸ್. ಗುರುಮೂರ್ತಿ, ಎಸ್‌.ಬಿ. ಮಠದ್‌, ಕೊಳಗಿ ರೇವಣಪ್ಪ, ಅಂಬಾರಗೊಪ್ಪ ಶೇಖರಪ್ಪ, ಕೆ. ಹಾಲಪ್ಪ, ಕವಲಿ ಸುಬ್ರಮಣ್ಯ, ಟಿ.ಎಸ್‌. ಮೋಹನ್‌, ಕಬಾಡಿ ರಾಜಪ್ಪ, ತೊಗರ್ಸಿ ಸಣ್ಣಹನುಮಂತಪ್ಪ, ಕೆ.ಜಿ. ವಸಂತಗೌಡ್ರು, ಎಂ.ಬಿ. ಚನ್ನವೀರಪ್ಪ, ನಿಂಬೆಗೊಂದಿ ಸಿದ್ದಲಿಂಗಪ್ಪ ಇದ್ದರು.

ಬಳಿಕ ನಡೆದ ಕಾರ್ಯಕರ್ತರ ಸಭೆಯಲ್ಲಿ ತಾಲ್ಲೂಕು ಗಂಗಾಮತಸ್ಥರ ಸಮಾಜದ ಅಧ್ಯಕ್ಷ ಕಪ್ಪನಹಳ್ಳಿ ಬಸವರಾಜಪ್ಪ ಸೇರಿ ಸಮಾಜದ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.