ADVERTISEMENT

ಚುನಾವಣಾ ಪ್ರಚಾರ ಸಭೆ: ಮೋದಿ ಭೇಟಿ ಏ.9ಕ್ಕೆ ಮುಂದೂಡಿಕೆ

ಚಿತ್ರದುರ್ಗ, ದಾವಣಗೆರೆ, ತುಮಕೂರು ಕ್ಷೇತ್ರ ವ್ಯಾಪ್ತಿಯ ಪ್ರಚಾರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 10:54 IST
Last Updated 5 ಏಪ್ರಿಲ್ 2019, 10:54 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿರುವ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ತುರ್ತು ಕಾರ್ಯ ನಿಮಿತ್ತ ಒಂದು ದಿನ ಮುಂದೂಡಲಾಗಿದ್ದು, ಏ.9ಕ್ಕೆ ನಿಗದಿಯಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌ ಮಾಹಿತಿ ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣಾ ಪ್ರಚಾರ ಸಭೆ ಏ.8ಕ್ಕೆ ನಿಗದಿಯಾಗಿತ್ತು. ಈ ವೇಳಾಪಟ್ಟಿ ಗುರುವಾರ ರಾತ್ರಿ ಮತ್ತೊಮ್ಮೆ ಪರಿಷ್ಕರಣೆಗೊಂಡಿದೆ. ಈ ಬದಲಾವಣೆಗೆ ನಿಖರ ಕಾರಣ ಗೊತ್ತಾಗಿಲ್ಲ’ ಎಂದು ಹೇಳಿದರು.

‘ಮಂಗಳವಾರ ಮಧ್ಯಾಹ್ನ 1ಕ್ಕೆ ಮೋದಿ ಅವರು ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಸುಮಾರು ಒಂದೂವರೆ ಗಂಟೆ ಸಭೆಯಲ್ಲಿ ಇದ್ದು, ಮೈಸೂರಿಗೆ ತೆರಳುತ್ತಾರೆ. ಅಲ್ಲಿ ಕಾರ್ಯಕ್ರಮ ಮುಗಿಸಿ ತಮಿಳುನಾಡಿನ ಕೊಯಮತ್ತೂರಿಗೆ ಪ್ರಯಾಣ ಬೆಳೆಸುತ್ತಾರೆ’ ಎಂದು ಹೇಳಿದರು.

ADVERTISEMENT

‘ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಪ್ರಚಾರಕ್ಕೆ ಈ ಸಭೆ ಆಯೋಜಿಸಲಾಗಿದೆ. ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಹಾಗೂ 14 ಶಾಸಕರು ಭಾಗವಹಿಸಲಿದ್ದಾರೆ. ಬೃಹತ್‌ ಕಾರ್ಯಕ್ರಮಕ್ಕೆ ವಿಜ್ಞಾನ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸುಮಾರು 50 ಸಾವಿರ ಆಸನದ ವ್ಯವಸ್ಥೆ ಮಾಡಲಾಗುತ್ತಿದ್ದು, ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ವಿವರಿಸಿದರು.

‘ಬಿಸಿಲು ಹೆಚ್ಚಾಗಿರುವುದರಿಂದ ಮೈದಾನಕ್ಕೆ ಪೂರ್ಣವಾಗಿ ಶಾಮಿಯಾನ ಹಾಕಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಐಜಿಪಿ ಸೌಮೇಂದು ಮುಖರ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೋದಿ ಅವರನ್ನು ಸಮೀಪದಿಂದ ಕಣ್ತುಂಬಿಕೊಳ್ಳಲು ಆಸಕ್ತಿ ಇರುವವರಿಗೆ ಪಕ್ಷ ಪಾಸ್‌ ವ್ಯವಸ್ಥೆ ಮಾಡಿದೆ’ ಎಂದರು.

‘ಮೈದಾನದಿಂದ ಒಂದು ಕಿ.ಮೀ ದೂರದಲ್ಲಿ ವಾಹನ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಶಿರಾ, ಹಿರಿಯೂರು ಭಾಗದಿಂದ ಬರುವವರಿಗೆ ಐಯುಡಿಪಿ ಬಡಾವಣೆ, ಮೊಳಕಾಲ್ಮುರು, ಚಳ್ಳಕೆರೆ, ಪಾವಗಡ ಮಾರ್ಗವಾಗಿ ಬರುವ ವಾಹನಗಳು ಪಾಲಿಟೆಕ್ನಿಕ್‌ ಕಾಲೇಜು ಮೈದಾನದಲ್ಲಿ ನಿಲುಗಡೆ ಮಾಡಬಹುದು. ದಾವಣಗೆರೆ, ಹೊಳಲ್ಕೆರೆ ಹಾಗೂ ಹೊಸದುರ್ಗ ಕಡೆಯಿಂದ ಬರುವ ವಾಹನಗಳಿಗೆ ತುರುವನೂರು ರಸ್ತೆ ಸಮೀಪದ ಮೈದಾನದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಅಗ್ನಿ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಪಾರ್ಕಿಂಗ್‌ ಸ್ಥಳ ಹಾಗೂ ಮೈದಾನ ಪರಿಶೀಲನೆ ಮಾಡಿದ್ದಾರೆ. ಅಗ್ನಿನಂದಕ ವಾಹನ ಸನ್ನದ್ಧ ಸ್ಥಿತಿಯಲ್ಲಿ ಇರುತ್ತದೆ. ಹುಲ್ಲು ಸೇರಿ ಒಣಗಿದ ವಸ್ತುಗಳನ್ನು ತೆರವುಗೊಳಿಸಲಾಗಿದೆ’ ಎಂದು ಹೇಳಿದರು.

ಪ್ರಕರಣ ಹಿಂಪಡೆಯಲು ಆಗ್ರಹ:ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮೇಲೆ ದಾಖಲು ಮಾಡಿದ ಪ್ರಕರಣವನ್ನು ಚುನಾವಣಾ ಅಧಿಕಾರಿಗಳು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಕೆ.ಎಸ್‌.ನವೀನ್‌ ಒತ್ತಾಯಿಸಿದರು.

‘ಗುರುಪೀಠದಲ್ಲಿ ಸ್ವಾಮೀಜಿ ರಾಜಕೀಯ ಸಭೆ ನಡೆಸಿಲ್ಲ. ತಪ್ಪು ಮಾಹಿತಿಯಿಂದ ಚುನಾವಣಾ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ’ ಎಂದು ಹೇಳಿದರು.

‘ಪ್ರಕರಣ ದಾಖಲು ಆಗಿರುವುದನ್ನು ಮುಂದಿಟ್ಟುಕೊಂಡು ಕೆಲವರು ಬಿಜೆಪಿ ಹಾಗೂ ಎ.ನಾರಾಯಣಸ್ವಾಮಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಸಮುದಾಯಗಳ ನಡುವೆ ಬಿರುಕು ಉಂಟು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಇಂಥ ಕೀಳುಮಟ್ಟದ ರಾಜಕೀಯವನ್ನು ಬಿಜೆಪಿ ಮಾಡುವುದಿಲ್ಲ’ ಎಂದರು.

ಶಾಸಕ ಎಂ.ಚಂದ್ರಪ್ಪ, ಬಿಜೆಪಿ ವಿಭಾಗೀಯ ಉಸ್ತುವಾರಿ ಜಿ.ಎಂ.ಸುರೇಶ್‌, ಲೋಕಸಭಾ ಕ್ಷೇತ್ರದ ಉಸ್ತುವಾರಿ ನರೇಂದ್ರನಾಥ್‌, ನಾಗರಾಜ ಬೇದ್ರೆ, ದಗ್ಗೆ ಶಿವಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.