ADVERTISEMENT

ಮಹಾಸಂಪರ್ಕ ಅಭಿಯಾನಕ್ಕೆ ಚಾಲನೆ:ಬಿಜೆಪಿ, ಆರ್‌ಎಸ್‌ಎಸ್‌ ಕಾರ್ಯಕರ್ತರ ಜಂಟಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 9:09 IST
Last Updated 14 ಏಪ್ರಿಲ್ 2019, 9:09 IST
ಕಾರ್ಯಕ್ರಮದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ಗೌರವ ಸಲ್ಲಿಸಿದರು–ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ಗೌರವ ಸಲ್ಲಿಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಬಿಜೆಪಿ ಮಹಾ ಸಂಪರ್ಕ ಅಭಿಯಾನಕ್ಕೆ ಭಾನುವಾರ ಇಲ್ಲಿನ ಮುನ್ಸಿಪಲ್‌ ಮೈದಾನದಲ್ಲಿ ಚಾಲನೆ ನೀಡಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌.ಎಸ್‌.ಎಸ್‌.) ಜಿಲ್ಲಾ ಕಾರ್ಯವಾಹ ಕೇಶವಜೀ ಅವರು ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಉದ್ಘಾಟಿಸಿ, ‘ಪ್ರಧಾನಿ ನರೇಂದ್ರ ಮೋದಿಯವರುಅಂಬೇಡ್ಕರ್‌ ಅವರು ಹುಟ್ಟಿದ ಜನ್ಮಸ್ಥಳ, ಅವರು ವಾಸವಾಗಿದ್ದ ಮನೆ, ಲಂಡನ್‌ನಲ್ಲಿ ಓದುವಾಗ ತಂಗಿದ್ದ ಮನೆ, ನಾಗಪುರದಲ್ಲಿ ಅವರು ದೀಕ್ಷಾ ಪಡೆದ ಸ್ಥಳ ಹಾಗೂ ನಿರ್ವಾಣ ಸ್ಥಳಗಳನ್ನು ಪಂಚ ಪವಿತ್ರ ಸ್ಥಳಗಳಾಗಿ ಅಭಿವೃದ್ಧಿ ಪಡಿಸಿದ್ದಾರೆ’ ಎಂದು ಹೇಳಿದರು.

‘ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಿ, ಸಮ ಸಮಾಜವನ್ನು ನಿರ್ಮಿಸಲು ಮೇಲ್ಜಾತಿಯವರು ಶ್ರಮಿಸಬೇಕು. ಕತ್ತಲಿಂದ ಬೆಳಕಿನ ಕಡೆಗೆ ಸಾಗಿದವರು ಡಾ.ಬಿ.ಆರ್‌. ಅಂಬೇಡ್ಕರ್‌. ಸಮಾಜದ ಕಷ್ಟ ನಷ್ಟಗಳನ್ನೆಲ್ಲ ಒಬ್ಬರೇ ನುಂಗಿ, ಇಡೀ ಜಗತ್ತಿಗೆ ಬೆಳಕು ಕೊಟ್ಟ ಮಹಾನ್‌ ಚೇತನ. ನಾವೆಲ್ಲರೂ ಅವರ ದಾರಿಯಲ್ಲಿ ಸಾಗಬೇಕಿದೆ’ ಎಂದು ತಿಳಿಸಿದರು.

ADVERTISEMENT

ನಗರಸಭೆಯ 35 ವಾರ್ಡ್‌ಗಳ 175 ಬೂತ್‌ಗಳಲ್ಲಿ ಆರ್‌.ಎಸ್‌.ಎಸ್‌. ಹಾಗೂ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಕರಪತ್ರಗಳನ್ನು ಕೊಟ್ಟು ಜಂಟಿಯಾಗಿ ಪಕ್ಷದ ಪರ ಪ್ರಚಾರ ಕೈಗೊಂಡರು.

ಕಾರ್ಯಕ್ರಮಕ್ಕೂ ಮುನ್ನ ಎಲ್ಲ ಕಾರ್ಯಕರ್ತರಿಗೆ ಯೋಗ, ವ್ಯಾಯಾಮ ಹೇಳಿಕೊಡಲಾಯಿತು. ಸಂಘದ ಸೇವಾ ಪ್ರಮುಖ ಶ್ರೀನಿವಾಸಜೀ, ಗ್ರಾಮ ಸೇವಾ ಪ್ರಾಂತ ಪ್ರಮುಖ ರಾಜಶೇಖರಜೀ,ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತಾ, ಮಂಡಲ ಅಧ್ಯಕ್ಷ ಅನಂತ ಪದ್ಮನಾಭ ಸ್ವಾಮಿ, ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಗುದ್ಲಿ ಪರಶುರಾಮ, ಮುಖಂಡರಾದ ಸಾಲಿ ಸಿದ್ದಯ್ಯ ಸ್ವಾಮಿ, ಎಚ್‌.ಆರ್‌.ಗವಿಯಪ್ಪ, ಅಂಜಿನಪ್ಪ, ಕವಿರಾಜ ಅರಸ್‌, ಸಂಗಪ್ಪ, ರಾಘವೇಂದ್ರ, ಕಾಸೆಟ್ಟಿ ಉಮಾಪತಿ, ರಾಮಚಂದ್ರಗೌಡ, ಬಿಸಾಟಿ ಸತ್ಯನಾರಾಯಣ,ಅಶೋಕ ಜೀರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.