ADVERTISEMENT

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಮತ, ಎರಡು ಸರ್ಕಾರ!:ಬಿ.ಎಲ್.ಸಂತೋಷ್ ಸೂತ್ರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 16:56 IST
Last Updated 13 ಏಪ್ರಿಲ್ 2019, 16:56 IST
ಜಮಖಂಡಿಯಲ್ಲಿ ಶನಿವಾರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿದರು.
ಜಮಖಂಡಿಯಲ್ಲಿ ಶನಿವಾರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿದರು.   

ಬಾಗಲಕೋಟೆ: ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಮತ ಹಾಕಿದರೆ ಎರಡು ಸರ್ಕಾರ ಬರಲಿವೆ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

ಜಮಖಂಡಿಯಲ್ಲಿ ಶನಿವಾರ ಬಿಜೆಪಿ ಪ್ರಬುದ್ಧರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ ₹10 ರೂಪಾಯಿ ಹಾಕಿ ₹20 ಪಡೆಯುವ ಕಾಲ ಇದು. ಯಾವಾಗಲೂ ಮತ ಹಾಕಿದರೆ ಒಂದು ಸರ್ಕಾರ ಬರುತ್ತಿತ್ತು. ಒಂದು ಸೀರೆ ಕೊಂಡರೆ ಎರಡು ಉಚಿತ ಎಂಬಂತೆ ಈ ಬಾರಿ ಎರಡು ಸರ್ಕಾರ ಬರಲಿವೆ’ ಎಂದರು.

‘ಇದನ್ನು ನಾನೊಬ್ಬನೇ ಹೇಳುತ್ತಿಲ್ಲ. ಸ್ವತಃ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ಕೂಡ ಚಿಕ್ಕಬಳ್ಳಾಪುರದಲ್ಲಿ ಹೇಳಿದ್ದಾರೆ. ಬಿಜೆಪಿ 20ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ಈ ಸರ್ಕಾರ ಬೀಳಲಿದೆ ಎಂದು ಅಲವತ್ತುಕೊಂಡಿದ್ದಾರೆ’ ಎಂದು ಛೇಡಿಸಿದರು.

ADVERTISEMENT

‘ಬಡತನದ ಕಾರಣಕ್ಕೆ ಸೇನೆಗೆ ಸೇರುತ್ತಾರೆ ಎಂದುಸೈನಿಕರ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಹೇಗೂ ಅವರ ಮಗ ಮಂಡ್ಯದಲ್ಲಿ ಸೋಲುವುದಂತೂ ಖಚಿತ. ನಿಖಿಲ್ ಸಿನಿಮಾದಲ್ಲೂ ಯಶಸ್ವಿಯಾಗಿಲ್ಲ. ಹಾಗಾಗಿ ಚುನಾವಣೆ ಮುಗಿದ ನಂತರ ಮಗನಿಗಾಗಿ ಕುಮಾರಸ್ವಾಮಿ ಬೇರೆ ಯಾವುದಾದರೂ ಕೆಲಸ ಹುಡುಕಲೇಬೇಕು. ಅದರ ಬದಲಿಗೆ ಸೈನ್ಯಕ್ಕೆ ಸೇರಿಸಲಿ’ ಎಂದು ಸಲಹೆ ನೀಡಿದರು.

‘ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದ ಕುಮಾರಸ್ವಾಮಿ, ಸಿದ್ದರಾಮಯ್ಯ ಅಂತಹವರು ಸೈನಿಕರ ಬಗ್ಗೆ ಈ ರೀತಿ ಸಣ್ಣತನದಿಂದ ಮಾತಾಡುತ್ತಾರೆ. ಕೆಲವೊಮ್ಮೆ ಹತಾಶೆ, ಸೋಲು ಮನುಷ್ಯರ ಮನಸ್ಸಿನಲ್ಲಿನ ಅತ್ಯಂತ ಕೆಟ್ಟ ಪ್ರವೃತ್ತಿಯನ್ನು ಹೊರಗೆ ಹಾಕುತ್ತದೆ. ಕಾರ್ಗಿಲ್ ಯುದ್ಧದಲ್ಲಿ ಬಲಿಯಾದಂತಹ ಒಬ್ಬೊಬ್ಬ ಸೈನಿಕರ ಹೆಸರನ್ನು ನೆನಪಿಸಿಕೊಂಡರೆ ಇಂತಹ ಮಾತುಗಳು ಯಾವತ್ತೂ ಬರೊಲ್ಲ’ ಎಂದರು.

‘ಸರ್ಕಾರದ ದುಡ್ಡು ತಿಂದವರನ್ನು, ಅನ್ಯಾಯವಾಗಿ ಆಸ್ತಿ ಮಾಡಿದ ಒಬ್ಬೊಬ್ಬರನ್ನೇ ಕರೆದು ಬೀದಿಗೆ ನಿಲ್ಲಿಸುವುದಾಗಿ ಐದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಎಲ್ಲೋ ಮಾತಾಡುವ ಭರದಲ್ಲಿ ಅವರು ಹಾಗೆ ಜೋರಾಗಿ ಹೇಳಿದ್ದಾರೆ ಎಂದು ನಾವೆಲ್ಲಾಆಗ ಅಂದುಕೊಂಡಿದ್ದೆವು. ಆದರೆ ಈಗ ಆದಾಯ ತೆರಿಗೆ ಇಲಾಖೆ ಮೂಲಕ ಆ ಕೆಲಸ ನಡೆಯುತ್ತಿದೆ’ ಎಂದರು.

‘ಅಯ್ಯೋಪಾಪ ಎಂದುಕೊಂಡುಸಮಾಜದ ದುಡ್ಡು ತಿಂದವರನ್ನು ಹಾಗೆಯೇ ಬಿಡಬೇಕೇ’ ಎಂದು ನೆರೆದವನ್ನುಸಂತೋಷ್‌ ಪ್ರಶ್ನಿಸಿದಾಗ ಅದಕ್ಕೆ ಬೇಡ ಎಂಬ ಉತ್ತರ ಬಂದಿತು. ‘ಹಾಗಾದರೆ ಏಪ್ರಿಲ್‌ 23ರಂದು ನಿಮ್ಮ ಕ್ಷೇತ್ರದ ಮತದಾರರಿಗೆ ಈ ಸಂಗತಿ ಮನದಟ್ಟು ಮಾಡಿ ಕರೆತನ್ನಿ, ಬಿಜೆಪಿಗೆ ಮತ ಹಾಕಿಸಿ’ ಎಂದು ಸಲಹೆ ನೀಡಿದರು.

*
‘ಕಳೆದ ಐದು ವರ್ಷಗಳಲ್ಲಿ ಕಾಶ್ಮೀರದಿಂದ ಹೊರಗೆ ಒಂದೂ ಬಾಂಬ್‌ ಸ್ಫೋಟ ನಡೆದಿಲ್ಲ. ಕಾಶ್ಮೀರದಲ್ಲೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಿಗಿ ಆಡಳಿತದ ಕ್ರಮದಿಂದಾಗಿ ಇದು ಸಾಧ್ಯವಾಗಿದೆ.
-ಬಿ.ಎಲ್.ಸಂತೋಷ್, ಆರ್‌.ಎಸ್.ಎಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.