ADVERTISEMENT

ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಆಸಕ್ತಿ ಇಲ್ಲ

ದಾವಣಗೆರೆ ಕ್ಷೇತ್ರದ ಗೊಂದಲಕ್ಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 20:16 IST
Last Updated 2 ಏಪ್ರಿಲ್ 2019, 20:16 IST
ಎಚ್‌.ಎಸ್‌.ಶಿವಶಂಕರ್‌
ಎಚ್‌.ಎಸ್‌.ಶಿವಶಂಕರ್‌   

ದಾವಣಗೆರೆ: ಅಭ್ಯರ್ಥಿ ಆಯ್ಕೆ ಗೊಂದಲ ನಿವಾರಿಸದಿರುವ ಕಾಂಗ್ರೆಸ್‌ ನಾಯಕರಿಗೆ ದಾವಣಗೆರೆ ಯಲ್ಲಿ ಚುನಾವಣೆ ನಡೆಸಲು ಮನಸ್ಸಿಲ್ಲವೇ’ ಎಂದು ಜೆಡಿಎಸ್‌ ಮುಖಂಡ ಎಚ್‌.ಎಸ್‌. ಶಿವಶಂಕರ ಪ್ರಶ್ನಿಸಿದರು.

ಕಾಂಗ್ರೆಸ್‌ನ ನಿಲುವನ್ನು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ ಅವರು, ‘ರಾಜ್ಯದ 27 ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಆದರೆ, ದಾವಣಗೆರೆಯಲ್ಲಿ ಮಾತ್ರ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಇದು ಕಾಂಗ್ರೆಸ್‌ಗೆ ಆಸಕ್ತಿ ಇಲ್ಲ ಎಂಬುದನ್ನು ಬಿಂಬಿಸುತ್ತದೆ. ಜೆಡಿಎಸ್‌ ಮುಖಂಡರು ಆರೋಪಿಸಿದಂತೆ ಇವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆಯೇ ಎಂಬ ಸಂದೇಹ ಮೂಡುತ್ತಿದೆ’ ಎಂದರು.

‘ಒಂದು ತಿಂಗಳ ಹಿಂದೆಯೇ ನಾನು ಸ್ಪರ್ಧಿಸುತ್ತೇನೆ; ಜೆಡಿಎಸ್‌ಗೆ ಟಿಕೆಟ್‌ ಬಿಟ್ಟುಕೊಡಿ ಎಂದು ಮನವಿ ಮಾಡಿದ್ದೆ. ಆದರೆ, ಕಾಂಗ್ರೆಸ್‌ಗೇ ಟಿಕೆಟ್‌ ಬೇಕು ಎಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದರು. ಇದು ಲಿಂಗಾಯತ ಕ್ಷೇತ್ರ. ಇಲ್ಲಿ ಶಾಮನೂರು ಶಿವಶಂಕರಪ್ಪ ಅಥವಾ ಎಸ್‌.ಎಸ್‌. ಮಲ್ಲಿಕಾರ್ಜುನ ಸ್ಪರ್ಧಿಸಿದರೆ ಮಾತ್ರ ಗೆಲ್ಲುವ ಸಾಧ್ಯತೆ ಇದೆ. ಅದನ್ನು ಬಿಟ್ಟು ಬೇರೆ ಯಾರಿಗೆ ಟಿಕೆಟ್‌ ನೀಡಿದರೂ ಚುನಾವಣೆ ಹೆಸರಿಗೆ ಮಾತ್ರ ಎಂಬಂತಾಗಲಿದೆ. ಮಲ್ಲಿಕಾರ್ಜುನ ಸ್ಪರ್ಧಿಸದಿದ್ದರೆ ಕಾಂಗ್ರೆಸ್‌ ಪಕ್ಷ ಜಿಲ್ಲೆಯಲ್ಲಿ ಅವಸಾನದ ಅಂಚಿಗೆ ಹೋಗಲಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.