ADVERTISEMENT

ಆರೋಪಿಯ ರಕ್ಷಣೆಗೆ ನಿಂತ ಕಾಂಗ್ರೆಸ್‌: ಈಶ್ವರಪ್ಪ ಟೀಕೆ

ಹಿಂದುಳಿದ ವರ್ಗಗಳ ಬಿಜೆಪಿ ಕಾರ್ಯಕರ್ತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 13:02 IST
Last Updated 16 ಏಪ್ರಿಲ್ 2019, 13:02 IST
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಕೆ.ಎಸ್‌. ಈಶ್ವರಪ್ಪ ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಕೆ.ಎಸ್‌. ಈಶ್ವರಪ್ಪ ಉದ್ಘಾಟಿಸಿದರು   

ಹುಬ್ಬಳ್ಳಿ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡ ಕೊಲೆ ಪ್ರಕರಣದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಆದರೆ, ಕಾಂಗ್ರೆಸ್‌ ಆತನ ರಕ್ಷಣೆಗೆ ನಿಂತಿದೆ ಎಂದು ಬಿಜೆಪಿ ಶಾಸಕ ಕೆ.ಎಸ್‌. ಈಶ್ವರಪ್ಪ ಆರೋಪಿಸಿದರು.

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಪ್ರಚಾರ ನಡೆಸಲು ನಗರದಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ‘ವಿನಯ ಕುಲಕರ್ಣಿ ಮೇಲೆ ಗಂಭೀರ ಆರೋಪವಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಏನೂ ಕ್ರಮ ಕೈಗೊಂಡಿಲ್ಲ. ಅವರು ತಮ್ಮ ಕುಟುಂಬದವರನ್ನು ಗೆಲ್ಲಿಸಲು ಕಣ್ಣೀರು ಸುರಿಸುತ್ತಿದ್ದಾರೆ. ಚುನಾವಣೆ ಬಳಿಕ ಮತದಾರರೇ ಅವರ ಕುಟುಂಬದವರೆಲ್ಲರೂ ಸೇರಿ ಅಳುವಂತೆ ಮಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ ಕುರುಬರ ಪರ, ದೇವೇಗೌಡರು ಒಕ್ಕಲಿಗರ ಪರ, ಎಂ.ಬಿ. ಪಾಟೀಲರು ವೀರಶೈವ–ಲಿಂಗಾಯತ ಸಮಾಜವನ್ನು ಒಡೆದವರ ಪರ; ಹೀಗೆ ಒಬ್ಬೊಬ್ಬ ನಾಯಕರು ಒಂದೊಂದು ಸಮಾಜದ ಪರ ಇದ್ದಾರೆ. ಆದರೆ ನರೇಂದ್ರ ಮೋದಿ ಅವರು ದೇಶದ ಸಾರ್ವಭೌಮತೆಯ ಪರ. ಆದ್ದರಿಂದ ಜಾತಿ ನೋಡಿ ಮತ ಹಾಕುವ ಬದಲು ರಾಷ್ಟ್ರೀಯತೆಗೆ ಮಹತ್ವ ನೀಡಿ ಮತ ಹಾಕಿ’ ಎಂದರು.

ADVERTISEMENT

ಶಾಸಕ ಜಗದೀಶ ಶೆಟ್ಟರ್ ಮಾತನಾಡಿ ‘ಕಾಂಗ್ರೆಸ್‌ 70 ವರ್ಷಗಳಿಂದ ಹಿಂದುಳಿದ ವರ್ಗದವರ ಪರ ಮೊಸಳೆ ಕಣ್ಣೀರು ಸುರಿಸಿದೆ. ಅವರಿಗಾಗಿ ಏನೂ ಮಾಡಿಲ್ಲ. ಅಬ್ದುಲ್‌ ಕಲಾಂ, ರಾಮನಾಥ ಕೋವಿಂದ ಅವರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ’ ಎಂದರು.

‘ದೇವೇಗೌಡರು, ನಿಖಿಲ್‌ ಮತ್ತು ಪ್ರಜ್ವಲ್‌ ಸೋತು ಹೋಗುತ್ತಾರೆ ಎಂದು ಕುಮಾರಸ್ವಾಮಿ ಈಗಲೇ ಜನರ ಮುಂದೆ ಕಣ್ಣೀರು ಸುರಿಸುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ಕುಮಾರಸ್ವಾಮಿ ಪ್ರಯೋಗಿಸುವ ಈ ಅಸ್ತ್ರಕ್ಕೆ ಮತದಾರರು ಮರಳಾಗುವುದಿಲ್ಲ.’ ಎಂದರು.

ಪ್ರಹ್ಲಾದ ಜೋಶಿ ಮಾತನಾಡಿ ‘ಒಬಿಸಿಗೆ ಸಂವಿಧಾನದ ಮಾನ್ಯತೆ ನೀಡಲು ನಮ್ಮ ಪಕ್ಷ ಪ್ರಯತ್ನಿಸಿದಾಗ ಕಾಂಗ್ರೆಸ್‌ ಅಡ್ಡಗಾಲು ಹಾಕಿತು. ನಮ್ಮ ಸರ್ಕಾರ ಬಂದ ಮೇಲೆ ಮುದ್ರಾ ಯೋಜನೆಯಲ್ಲಿ ನೀಡಿದ ಸಾಲದಲ್ಲಿ ಶೇ 25ರಷ್ಟು ಪಾಲು ಪಡೆದಿದ್ದು ಒಬಿಸಿಯವರು. ಕಾಂಗ್ರೆಸ್‌ಗೆ ಹಿಂದುಳಿದ ವರ್ಗದವರ ಅಭಿವೃದ್ಧಿಯೇ ಬೇಕಿಲ್ಲ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ರಾಜ್ಯ ಉಪಾಧ್ಯಕ್ಷ ಮಾ. ನಾಗರಾಜ, ಮಾಜಿ ಶಾಸಕರಾದ ಅಶೋಕ ಕಾಟೆವೆ, ವೀರಭದ್ರಪ್ಪ ಹಾಲಹರವಿ, ಮುಖಂಡರಾದ ಶಿವಾನಂದ ಮುತ್ತಣ್ಣನವರ, ಡಿ.ಕೆ. ಚವ್ಹಾಣ, ಗೋಪಾಲ ಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.