ADVERTISEMENT

ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವ: ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಕಿಡಿ

ಬಿಜೆಪಿ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 14:29 IST
Last Updated 25 ಮಾರ್ಚ್ 2019, 14:29 IST
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಸೋಮವಾರ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಸೋಮವಾರ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡರು.   

ಕೋಲಾರ: ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ದೇಶದ ರಕ್ಷಣೆ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಬಿಜೆಪಿ ಬೆಂಬಲಿಸಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡಬೇಕು’ ಎಂದು ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಕೋರಿದರು.

ಇಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿ ನಂತರ ಪಕ್ಷದ ಕಾರ್ಯಕರ್ತರ ರ‍್ಯಾಲಿಯಲ್ಲಿ ಮಾತನಾಡಿ, ‘5 ವರ್ಷ ಜನಕ್ಕೆ ತೊಂದರೆಯಾಗದಂತೆ ಅಧಿಕಾರ ನಡೆಸಿದ ಮೋದಿ ದೇಶವನ್ನು ಸಂಕಷ್ಟದಿಂದ ಪಾರು ಮಾಡಲು ಅನೇಕ ಯೋಜನೆ ರೂಪಿಸಿದ್ದಾರೆ’ ಎಂದರು.

‘ಬಿಜೆಪಿ ಅಧಿಕಾರದಲ್ಲಿ ಇದ್ದಷ್ಟು ದಿನ ದೇಶದಲ್ಲಿ ಎಲ್ಲಿಯೂ ಕೋಮುಗಲಭೆ ಸಂಭವಿಸಿಲ್ಲ. ಆದರೆ, ಕಾಂಗ್ರೆಸ್‌ ಮುಖಂಡರು ಬಿಜೆಪಿಯನ್ನು ಕೋಮುವಾದಿ ಪಕ್ಷವೆಂದು ಟೀಕಿಸುತ್ತಾರೆ. ಕಾಂಗ್ರೆಸ್‌ನವರು ಈ ಆರೋಪಕ್ಕೆ ನಿದರ್ಶನ ತೋರಿಸಬೇಕು’ ಎಂದು ಸವಾಲು ಹಾಕಿದರು.

ADVERTISEMENT

‘ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸಚಿವರ ಮೇಲೂ ಅಕ್ರಮದ ಆರೋಪವಿದೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ವಿರುದ್ಧವೂ ಭೂ ಅಕ್ರಮದ ಆರೋಪವಿದೆ. ಅಕ್ರಮವೇ ಕಾಂಗ್ರೆಸಿಗರ ಸಾಧನೆ’ ಎಂದು ಕಿಡಿಕಾರಿದರು.

ಸುಳ್ಳು ಆರೋಪ

‘ಮೋದಿ ಅವರ ಸಂಪುಟ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪವಿಲ್ಲ. ಮೋದಿಯವರು ಯಾವುದೇ ತೀರ್ಮಾನ ಕೈಗೊಳ್ಳುವಾಗ ತಜ್ಞರ ಸಲಹೆ ಪಡೆದು ಯೋಜನೆ ರೂಪಿಸುತ್ತಾರೆ. ಜನಪರ ಯೋಜನೆಗಳಿಂದಲೇ ಅವರು ಮನೆ ಮಾತಾಗಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್‌ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ನಾಮಪತ್ರ ಸಲ್ಲಿಸಿದ ನಂತರ ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿರುವುದನ್ನು ನೋಡಿ ಖುಷಿಯಾಗುತ್ತಿದೆ. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಪಕ್ಷಕ್ಕೆ ಮತ ಹಾಕಬೇಕು’ ಎಂದು ಮನವಿ ಮಾಡಿದರು.

ಡೂಂಲೈಟ್‌ ವೃತ್ತದಿಂದ ಆರಂಭವಾದರ‍್ಯಾಲಿ ಕಠಾರಿಪಾಳ್ಯ, ಎಂ.ಬಿ ರಸ್ತೆ ಮಾರ್ಗವಾಗಿ ಸಾಗಿ ಮೆಕ್ಕೆ ವೃತ್ತದಲ್ಲಿ ಅಂತ್ಯಗೊಂಡಿರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ, ಮಾಜಿ ಶಾಸಕ ವೈ.ಸಂಪಂಗಿ, ನಗರ ಘಟಕದ ಅಧ್ಯಕ್ಷ ಪಿ.ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.