ADVERTISEMENT

56,475 ಮತದಾರರ ಪ್ರತಿಜ್ಞಾವಿಧಿಗೆ ಸಹಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 6:10 IST
Last Updated 3 ಏಪ್ರಿಲ್ 2014, 6:10 IST

ಮೈಸೂರು: -ಜಿಲ್ಲಾ ಮತದಾರರ ಜಾಗೃತಿ ಹಾಗೂ ಸಹಭಾಗಿತ್ವ ಸಮಿತಿಯ ವತಿಯಿಂದ ಶಾಲಾ ಮಕ್ಕಳ ಮೂಲಕ ಪೋಷಕರಿಗೆ ‘ಮತದಾನದ ಹಕ್ಕು ಜನರಿಗೆ ಲಭಿಸಿರುವ ಅತ್ಯಂತ ಮಹತ್ವದ ಅವಕಾಶ’ ಎಂದು ಮತದಾರರ ಪ್ರತಿಜ್ಞಾ ವಿಧಿಗೆ ಪೋಷಕರಿಂದ ಸಹಿ ಮಾಡುವ ಕಾರ್ಯಕ್ರಮ ಈಚೆಗೆ ಹಮ್ಮಿಕೊಳ್ಳಲಾಗಿತ್ತು.

ಸ್ವೀಪ್ ಸಮಿತಿ ವತಿಯಿಂದ 90,000 ಮತದಾರರ ಪ್ರತಿಜ್ಞಾವಿಧಿ­ಯನ್ನು ಮಕ್ಕಳಿಗೆ ವಿತರಿಸಲಾಗಿದ್ದು, ಈವರೆಗೆ ಒಟ್ಟು 56,475 ಶಾಲಾ ಮಕ್ಕಳು ತಮ್ಮ ಪೋಷಕರಿಂದ ಮತದಾರರ ಪ್ರತಿಜ್ಞಾ ವಿಧಿಗೆ ಸಹಿ ಪಡೆದು ಹಿಂದಿರುಗಿಸಿದ್ದಾರೆ.

ಎಚ್.ಡಿ. ಕೋಟೆ- 7,000, ಹುಣಸೂರು- 3,000, ಕೆ.ಆರ್. ನಗರ- 8,500, ಮೈಸೂರು ಉತ್ತರ- 9,500, ಮೈಸೂರು ದಕ್ಷಿಣ 6,000, ಮೈಸೂರು ತಾಲ್ಲೂಕು- 8,500, ನಂಜನಗೂಡು -5,000, ಪಿರಿಯಾಪಟ್ಟಣ- 2,000 ಹಾಗೂ ತಿ. ನರಸೀಪುರ -6,975 ಮಕ್ಕಳು ಪ್ರತಿಜ್ಞಾವಿಧಿಗೆ ಪೋಷಕರಿಂದ ಸಹಿ ಪಡೆದು ಹಿಂದಿರುಗಿಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಚುನಾವಣಾ ತರಬೇತಿ ಇಂದು
ಮೈಸೂರು: ಮೈಸೂರು ಲೋಕಸಭಾ ಚುನಾವಣೆಗೆ ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿ, ನೌಕರರಿಗೆ ಏ. 3ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿನ ಮಹಾರಾಜ ಶತಮಾನೋತ್ಸವ ಭವನ, ಯುವರಾಜ ಕಾಲೇಜು ಆವರಣದಲ್ಲಿ ವಿಶೇಷ ತರಬೇತಿ ಆಯೋಜಿಸಲಾಗಿದೆ.

ತರಬೇತಿಗೆ ಮಾರ್ಚ್ 29ರಂದು ನಡೆದ ಪ್ರಥಮ ತರಬೇತಿಗೆ ಗೈರು ಹಾಜರಾದ ಅಧಿಕಾರಿ, ನೌಕರರು ಕಡ್ಡಾಯವಾಗಿ ಭಾಗವಹಿಸಬಹುದು. ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಿ. ಶಿಖಾ ಎಚ್ಚರಿಸಿದ್ದಾರೆ. ಕೆಲವು ಇಲಾಖಾ ಮುಖ್ಯಸ್ಥರು ಪತ್ರ ಬರೆದು ಮಾರ್ಚ್ 29 ಆರ್ಥಿಕ ವರ್ಷದ ಕಡೆ ದಿನ ಇರುವುದರಿಂದ ಪ್ರಥಮ ತರಬೇತಿಗೆ ಹಾಜರಾಗಲು ಕಷ್ಟವಾಗಿದ್ದು, ಪ್ರಥಮ ತರಬೇತಿಯನ್ನು ಮುಂದೂಡಬೇಕಾಗಿ ಕೋರಿದ್ದರು. ಅದರಂತೆ ಏ. 3ರಂದು ತರಬೇತಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿವರ ಸಲ್ಲಿಸದ ಅಭ್ಯರ್ಥಿಗಳಿಗೆ ನೋಟಿಸ್‌
ಮೈಸೂರು: -ಚುನಾವಣಾ ವೆಚ್ಚ ವಿವರ ಸಲ್ಲಿಸದ ಆರು ಅಭ್ಯರ್ಥಿಗಳಿಗೆ 24 ಗಂಟೆಯೊಳಗೆ ಈ ಕುರಿತು ವಿವರಣೆ ನೀಡುವಂತೆ ಬುಧವಾರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಿ. ಶಿಖಾ ಆದೇಶಿಸಿದ್ದಾರೆ.

ಏ.1ರಂದು ಅಭ್ಯರ್ಥಿಗಳು ಚುನಾವಣಾ ವೆಚ್ಚದ ವಿವರವನ್ನು ಜಿಲ್ಲಾ ಚುನಾವಣಾಧಿಕಾರಿ ಕಚೇರಿಯ ವೆಚ್ಚ ನಿರ್ವಹಣಾ ಘಟಕಕ್ಕೆ ನೀಡಬೇಕಿತ್ತು. ಆದರೆ, ಅಭ್ಯರ್ಥಿಗಳಾದ ತಿಮ್ಮೇಗೌಡ, ಡಿ.ಎಸ್. ನಿರ್ವಹಣಪ್ಪ, ಎಸ್.ಪಿ. ಮಹದೇವಪ್ಪ, ಹುಣಸೂರು ಕೆ. ಚಂದ್ರಶೇಖರ್, ಡಿ. ಈಶ್ವರ್ ಹಾಗೂ ಎನ್. ಸಂಪತ್ತು ಅವರು ವಿವರ ಸಲ್ಲಿಸಿರುವುದಿಲ್ಲ. ಇದು ಚುನಾವಾಣಾ ನೀತಿ ಉಲ್ಲಂಘನೆಯಾಗಿರುತ್ತದೆ, 24 ಗಂಟೆಯೊಳಗಾಗಿ ವಿವರಣೆ ನೀಡುವಂತೆ ತಿಳಿಸಿದ್ದಾರೆ. ಅಭ್ಯರ್ಥಿಗಳಿಗೆ ಮಾರ್ಚ್‌ 29ರಂದು ನಡೆದ ಜಿಲ್ಲಾಧಿಕಾರಿ ಸಭೆ ಹಾಗೂ ಮಾರ್ಚ್‌ 30ರಂದು ನಡೆದ ಚುನಾವಣಾ ವೀಕ್ಷಕರ ಸಭೆಯಲ್ಲಿ ಅಭ್ಯರ್ಥಿಗಳು ಏ. 1-ರಂದು ಅಭ್ಯರ್ಥಿಗಳು -ಚುನಾವಣಾ ವೆಚ್ಚ ವಿವರ ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು. 

ಹಾಡಿಗಳಲ್ಲಿ ಮತದಾನ ಜಾಗೃತಿ
ಮೈಸೂರು: ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯು ಹುಣಸೂರಿನ ಹಾಡಿಗಳಲ್ಲಿ ಬುಧವಾರ ಜಾಗೃತಿ ಕಾರ್ಯಕ್ರಮ ಆಯೋಜಿಸಿ,  ಪ್ರಜಾಪ್ರಭುತ್ವದಲ್ಲಿ ಮತದಾನ ಪವಿತ್ರ ಹಕ್ಕು, ಸಂವಿಧಾನ ಕಲ್ಪಿಸಿರುವ ಈ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂಬುದರ ಮಹತ್ವವನ್ನು ತಿಳಿಸಲಾಯಿತು.

ಹುಣಸೂರು ತಾಲ್ಲೂಕಿನ ನಾಗಪುರ, ವೀರನಹೊಸಹಳ್ಳಿ, ವೀರನ ‘ಫಾರೆಸ್ಟ್ ಗೇಟ್’, ಧರ್ಮಪುರಿ, ತರಿಕಾಲರಂಗಸಮುದ್ರ ಹಾಡಿಗಳಿಗೆ ಸ್ವೀಪ್ ಸಮಿತಿಯು ಭೇಟಿ ನೀಡಿ ಜಾಥಾ ನಡೆಸಿ, ಪ್ರತಿಜ್ಞಾವಿಧಿಯನ್ನು ಬೋಧಿಸಿ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವಂತೆ  ತಿಳಿಸಿತು. ಹುಣಸೂರಿನ ಕಾರ್ಯನಿರ್ವಾಹಕಾಧಿಕಾರಿ ಪ್ರೇಮ್‌ಕುಮಾರ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ನವೀನ್, ಸೇರಿದಂತೆ ಲಿಂಗರಾಜಯ್ಯ, ರಾಜಶೇಖರ್ ಜವಳಗಿ ಇದ್ದರು.

ಚುನಾವಣೆ: ಬಾಕಿ ಹಣದ ಅಫಿಡವಿಟ್ ಸಲ್ಲಿಕೆ
ಮೈಸೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೈಸೂರು– ಕೊಡಗು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಸರ್ಕಾರಕ್ಕೆ ಕೊಡಬೇಕಾದ ಬಾಕಿ ಹಣದ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದು, ವಿವರ ಇಂತಿದೆ.

ಅಡಗೂರು ಎಚ್. ವಿಶ್ವನಾಥ್ (ಕಾಂಗ್ರೆಸ್‌), ಚಂದ್ರಶೇಖರಯ್ಯ (ಜೆಡಿಎಸ್‌), ಪ್ರತಾಪಸಿಂಹ (ಬಿಜೆಪಿ), ಸಿ. ಮೋಹನ್‌ಕುಮಾರ್- (ಬಿಎಸ್ಪಿ), ತಿಮ್ಮೇಗೌಡ- (ಸರ್ವ ಜನತಾ ಪಾರ್ಟಿ), ಡಿ.ಎಸ್. ನಿರ್ವಾಣಪ್ಪ- (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ), ಎಂ.ವಿ.- ಪದ್ಮಮ್ಮ  (ಆಮ್ ಆದ್ಮಿ ಪಕ್ಷ), ಎಸ್.ಪಿ. ಮಹದೇವಪ್ಪ- (ಜನತಾ ದಳ– ಸಂಯುಕ್ತ), ರತಿ ಪೂವಯ್ಯ- (ಕರುನಾಡು ಪಾರ್ಟಿ), ಹುಣಸೂರು ಕೆ. ಚಂದ್ರಶೇಖರ್- (ಡೆಮಾಕ್ರೆಟಿಕ್ ಪ್ರಜಾಕ್ರಾಂತಿ ಪಾರ್ಟಿ ಸೆಕ್ಯೂಲರಿಸ್ಟ್), ಡಿ. ಈಶ್ವರ್-(ಪಕ್ಷೇತರ), ಬನ್ನೂರು ಕುಮಾರ್ (-ಪಕ್ಷೇತರ), ಎಂ.ಎಸ್.- ಪ್ರವೀಣ್ (ಪಕ್ಷೇತರ), ಭೋಜಣ್ಣ ಎನ್. ಸೋಮಯ್ಯ- (ಪಕ್ಷೇತರ) ಒಟ್ಟು ಈ 14 ಅಭ್ಯರ್ಥಿಗಳು ಸರ್ಕಾರಿ ವಸತಿ, ಜಲಮಂಡಳಿ, ವಿದ್ಯುಚ್ಛಕ್ತಿ ಮಂಡಳಿ, ಸರ್ಕಾರಿ ಸಾರಿಗೆ (ವಿಮಾನ ಮತ್ತು ಹೆಲಿಕ್ಯಾಪ್ಟರ್ ಸೇರಿದಂತೆ) ಹಾಗೂ ಸರ್ಕಾರಕ್ಕೆ ಯಾವುದೇ ಬಾಕಿ ಹಣ ಇರುವುದಿಲ್ಲ ಎಂದು ಅಫಿಡಿವಿಟ್ ಸಲ್ಲಿಸಿದ್ದಾರೆ.

ಎನ್.- ಸಂಪತ್ತು (ಪಕ್ಷೇತರ) ಇವರು ಜಲಮಂಡಳಿಗೆ ₨ 6,000, ವಿದ್ಯುಚ್ಫಕ್ತಿ ಮಂಡಳಿಗೆ ₨ 6,000, ಟೆಲಿಕಾಂ ಇಲಾಖೆಗೆ ₨ 2,500, ಆದಾಯ ತೆರಿಗೆ ₨ 5,000 ಹಾಗೂ ಆಸ್ತಿ ತೆರಿಗೆ ₨ 12,000 ಸರ್ಕಾರಕ್ಕೆ ಬಾಕಿ ಹಣವನ್ನು ನೀಡಬೇಕಿದೆ ಎಂದು ಅಫಿಡಿವಿಟ್‌ನಲ್ಲಿ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.