ADVERTISEMENT

ಅಭಿವೃದ್ಧಿಗೆ ಮಾದರಿಯಾದ ರಾಯ್‌ಬರೇಲಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2014, 19:30 IST
Last Updated 28 ಏಪ್ರಿಲ್ 2014, 19:30 IST

ರಾಯ್‌ಬರೇಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ‘ನಂಬರ್‌ ಒನ್‌ ಲೋಕಸಭಾ ಕ್ಷೇತ್ರ’ ರಾಯ್‌ಬರೇಲಿ. 80 ಕ್ಷೇತ್ರಗಳಲ್ಲಿ ಇದು ಮೊದಲನೆಯದಾಗಿ ನಿಲ್ಲುತ್ತದೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಕುರಿತು ಮೌಲ್ಯಮಾಪನ ನಡೆದರೆ, ರಾಯ್‌ಬರೇಲಿಗೆ ಅನುಮಾನವಿಲ್ಲದೆ ಅತ್ಯಧಿಕ ಅಂಕ ಸಿಗುತ್ತದೆ. ರಾಜ್ಯದ ಪ್ರತಿ ಕ್ಷೇತ್ರದಲ್ಲೂ ಸಮಸ್ಯೆಗಳ ದೊಡ್ಡ ಪಟ್ಟಿಯೇ ಅನಾವರಣ ಆಗುತ್ತದೆ. ಈ ಮಾತು ಕಾಂಗ್ರೆಸ್‌ ಯುವರಾಜ ರಾಹುಲ್‌ ಗಾಂಧಿ ಅವರ ಅಮೇಠಿಗೂ  ಅನ್ವಯಿಸುತ್ತದೆ. ಅಮೇಠಿ, ರಾಯ್‌ಬರೇಲಿ ನೆರೆಹೊರೆ ಕ್ಷೇತ್ರಗಳು. ರಾಯ್‌ಬರೇಲಿ ಮಾತ್ರ ಇದಕ್ಕೆ ಅಪವಾದ.

ಲಖನೌದಿಂದ 80 ಕಿ.ಮೀ ದೂರವಿರುವ ರಾಯ್‌ಬರೇಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕ್ಷೇತ್ರ. ಹತ್ತು ವರ್ಷದಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.  ದಶಕದಲ್ಲಿ ಬೇಕಾದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ‘ರಾಯ್‌­ಬರೇಲಿಯಲ್ಲಿ ಏನಿಲ್ಲ?’ ಎಂದು ಹುಡುಕಲು ಹೊರಟವರಿಗೆ ನಿರಾಸೆ ಆಗುತ್ತದೆ. ಅಲ್ಲಿ ಎಲ್ಲವೂ ಇದೆ. ಇಂಡಿಯನ್‌ ಟೆಲಿಫೋನ್‌ ಇಂಡಸ್ಟ್ರಿ (ಐಟಿಐ), ರೈಲು ಬೋಗಿ ತಯಾರಿಕಾ ಘಟಕ, ಸಿಮೆಂಟ್‌ ಕಾರ್ಖಾನೆ, ರಸಗೊಬ್ಬರ ತಯಾರಿಕಾ ಘಟಕ ಹೀಗೆ ಹತ್ತಾರು ಉದ್ಯಮಗಳಿವೆ.

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌  ಫ್ಯಾಷನ್‌ ಟೆಕ್ನಾಲಜಿ (ಎನ್‌ಐಎಫ್‌ಟಿ), ರಾಜೀವ್‌ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್‌ ಪೆಟ್ರೋಲಿಯಂ ಟೆಕ್ನಾಲಜಿ (ಆರ್‌ಐಪಿಟಿ), ಇಂದಿರಾಗಾಂಧಿ ಏರ್‌ಪೋರ್ಸ್‌ ಅಕಾಡೆಮಿ (ಐಎಎ), ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್ಮಸ್ಯುಟಿಕಲ್‌ ಎಜುಕೇಷನ್‌ ಅಂಡ್‌ ರಿಸರ್ಚ್‌ (ಎನ್‌ಐಪಿಇಆರ್‌), ಪಾದರಕ್ಷೆ ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರ, ಫಿರೋಜ್‌ ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ, ಅಂಬೇಡ್ಕರ್‌ ಸರ್ಕಾರಿ ಸ್ನಾತಕೋತ್ತರ ಕಾಲೇಜ್‌, ಫಿರೋಜ್‌ಗಾಂಧಿ ಪಾಲಿಟೆಕ್ನಿಕ್‌ ಸೇರಿದಂತೆ ಬೇಕಾದಷ್ಟು ಶಿಕ್ಷಣ ಹಾಗೂ ತರಬೇತಿ ಸಂಸ್ಥೆಗಳಿವೆ.

ಲಖನೌದಿಂದ ರಾಯ್‌ಬರೇಲಿಗೆ ಹೊರಟರೆ ದಾರಿಯು­ದ್ದಕ್ಕೂ ಶಾಲಾ– ಕಾಲೇಜುಗಳು, ತರಬೇತಿ ಸಂಸ್ಥೆಗಳು ಕಣ್ಣಿಗೆ ಬೀಳುತ್ತವೆ. ರಸ್ತೆಗಳ ವಿಷಯದಲ್ಲೂ ಸೋನಿಯಾ ಅವರ ಕ್ಷೇತ್ರ ಉಳಿದೆಲ್ಲ ಕ್ಷೇತ್ರಗಳನ್ನು ಹಿಂದಿಕ್ಕುತ್ತದೆ. ಲಖನೌದಿಂದ ರಾಯ್‌­ಬರೇಲಿಗೆ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ­ವಾಗುತ್ತಿದೆ. ಅದಕ್ಕನುಗುಣವಾಗಿ ಅಲ್ಲಲ್ಲಿ ರೈಲ್ವೆ ಮೇಲ್ಸೇತುವೆ­ಗಳನ್ನು ಕಟ್ಟಲಾಗುತ್ತಿದೆ. ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳು ಉತ್ತಮ ಸ್ಥಿತಿಯಲ್ಲಿವೆ. ಎಲ್ಲ ಸಂಸದರು ತಮ್ಮ ತಮ್ಮ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ  ಮಾಡಬೇಕು ಎನ್ನುವುದನ್ನು ಸೋನಿಯಾರನ್ನು ನೋಡಿ ಕಲಿಯಬೇಕಿದೆ.

ಸೋನಿಯಾ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವುದ­ರಿಂದಲೇ ರಾಯ್‌ಬರೇಲಿ ಜನ ಹೃದಯದಿಂದ ಮಾತ­ನಾಡು­ತ್ತಾರೆ. ಪ್ರೀತಿ– ವಿಶ್ವಾಸ ತೋರುತ್ತಾರೆ. ಅವರದು ಬರೀ ರಾಜಕೀಯ ಸಂಬಂಧ­ವಲ್ಲ. ಅದನ್ನು ಮೀರಿದ ಭಾವನಾತ್ಮಕ ಸಂಬಂಧ. ಜಾತಿ– ಧರ್ಮದ ಚೌಕಟ್ಟು­ಗಳನ್ನು ಮೀರಿದ ಬಾಂಧವ್ಯ. ಉತ್ತರ ಪ್ರದೇಶದ ಚುನಾವಣೆ ಜಾತಿ– ಧರ್ಮದ ಆಧಾರದ ಮೇಲೆ ನಿಂತಿದೆ. ಆದರೆ, ರಾಯ್‌ಬರೇಲಿ ತದ್ವಿರುದ್ಧ ದಿಕ್ಕಿನಲ್ಲಿ ಸಾಗಿದೆ.

‘ರಾಯ್‌ಬರೇಲಿಯಲ್ಲಿ ಸೋನಿಯಾ ಗೆಲುವು ಖಚಿತ. ಅವರನ್ನು ಸೋಲಿಸುವವರು ಯಾರಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆ ಪ್ರಚಾರಕ್ಕೆ ಬರದಿದ್ದರೂ ನಡೆಯುತ್ತದೆ’ ಎಂದು  ನಿವೃತ್ತ ಶಾಲಾ ಶಿಕ್ಷಕ, ಬಚ್ಛ್ರಾಂವ್‌ ವಿಧಾನಸಭಾ ಕ್ಷೇತ್ರದ ಉಮಾಶಂಕರ್‌ ಅವಸ್ತಿ ಹೇಳಿದರು. ಅವರ ಮಗ, ಬಣ್ಣದ ಅಂಗಡಿ ಮಾಲೀಕ ಸುನಿಲ್‌ ಅವಸ್ತಿ, ‘ಮೇಡಂ ವಿಷಯದಲ್ಲಿ ಪಕ್ಷ– ಪಂಥ ಲೆಕ್ಕಕ್ಕೆ ಬರುವುದಿಲ್ಲ. ನಾವು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದೇವೆ. ಈಗ ಕಾಂಗ್ರೆಸ್‌ ಬೆಂಬಲಿಸುತ್ತೇವೆ’ ಎಂದು ದನಿಗೂಡಿಸಿದರು.

ಅಪ್ಪ, ಮಗ ಇಬ್ಬರೂ ರಾಯ್‌ಬರೇಲಿಗೆ ಸೋನಿಯಾ ಮಾಡಿರುವ ಕೆಲಸವನ್ನು ಪಟ್ಟಿ ಮಾಡು­ತ್ತಾರೆ. ‘ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಕೆಲಸ ಆರಂಭ­ವಾಗಿದೆ. ರೈಲು ಬೋಗಿಗಳ ನಿರ್ಮಾಣ ಘಟಕ ಮಂಜೂರಾಗಿದೆ. ಮಹಿಳಾ ವಿವಿ ಸ್ಥಾಪನೆಗೆ ಒಪ್ಪಿಗೆ ಕೊಡಲಾಗಿದೆ. ರಾಯ್‌­ಬರೇಲಿ– ಅಕ್ಬರಪುರ ಮಧ್ಯೆ  ರೈಲ್ವೆ ಮಾರ್ಗದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇಷ್ಟೆಲ್ಲ ಸಿಕ್ಕಿದ ಮೇಲೆ ನಮಗೆ ಮತ್ತೇನು ಬೇಕು’ ಎಂದು ಕೇಳಿದರು. ಉಮಾಶಂಕರ್‌ ಅವಸ್ತಿ ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ ನಿವೃತ್ತ ಶಿಕ್ಷಕ ರಾಂ ಸೇವಕ್‌, ‘ರಾಯ್‌ಬರೇಲಿಯಲ್ಲಿ ಮೋದಿ’ ಲೆಕ್ಕಕ್ಕಿಲ್ಲ’ ಎಂದರು.

ಸೋನಿಯಾ ಅವರಿಗೆ ರಾಯ್‌ಬರೇಲಿ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ನೇರ ಸಂಪರ್ಕ­ವಿದೆ. ಲಖನೌದಿಂದ ರಸ್ತೆ ಮೂಲಕ ಕ್ಷೇತ್ರಕ್ಕೆ ಹೋಗುವ ಸಂದರ್ಭದಲ್ಲಿ ಪಕ್ಷದ ಕಚೇರಿಗೆ ಭೇಟಿ ಕೊಡುತ್ತಾರೆಂದು ಹರ್‌ಚಂದ್‌ಪುರ ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ದಿಲೀಪ್‌ ತಿವಾರಿ ಹೆಮ್ಮೆಯಿಂದ ಹೇಳಿದರು. ಕಾಂಗ್ರೆಸ್‌ ಅಧ್ಯಕ್ಷೆ ಫೆಬ್ರುವರಿ 25ರಂದು ಹರ್‌ಚಂದಪುರ ಕಾಂಗ್ರೆಸ್‌ ಕಚೇರಿಗೆ ಬಂದು ಹೋಗಿದ್ದಾರೆ. ಸಂದರ್ಶಕರ ಪುಸ್ತಕದಲ್ಲಿ ಹಿಂದಿಯಲ್ಲಿ ಸಹಿ ಮಾಡಿದ್ದಾರೆ.

‘ರಾಯ್‌ಬರೇಲಿಯಲ್ಲಿ ಸೋನಿಯಾ ಅವರನ್ನು ಸೋಲಿ­ಸುವ ತಾಕತ್ತು ಯಾರಿಗಿದೆ? ಕ್ಷೇತ್ರದಲ್ಲಿ ಆಗಿರುವ ಪ್ರತಿ­ಯೊಂದು ಕೆಲಸವನ್ನು ಅವರೇ ಮಾಡಿದ್ದಾರೆ. ಅಖಿಲೇಶ್‌ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರ ಏನೂ ಮಾಡಿಲ್ಲ’ ಎಂದು  ರತಪುರದ ಟೈಲರ್‌ ಸುರೇಶ್‌ ಕುಮಾರ್ ಸೋನಿ ವಿವರಿಸಿದರು. ರಾಹಿ ಗ್ರಾಮದ ಮೊಹಮ್ಮದ್‌ ನಸೀಂ ಮತ್ತು ಜಾವೀದ್‌, ರಾಯ್‌ಬರೇಲಿಯಲ್ಲಿ ಸೋನಿಯಾ ಗೆಲ್ಲುವ ಬಗ್ಗೆ ಅನುಮಾನ ಬೇಡ ಎನ್ನುತ್ತಾರೆ. ‘ಎಲ್ಲರೂ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಾರೆ. ನಿಷ್ಠರ ಮತಗಳು ಮಾತ್ರ ಬಿಜೆಪಿಗೆ ಹೋಗಬಹುದು’ ಎಂಬುದು ಅವರ ವಿಶ್ಲೇಷಣೆ.

ರಾಯ್‌ಬರೇಲಿ ಬಹುತೇಕ ಗಾಂಧಿ ಕುಟುಂಬಕ್ಕೆ ನಿಷ್ಠೆ ತೋರಿದೆ. ಮೊದಲೆರಡು ಚುನಾವಣೆಯಲ್ಲಿ ಫಿರೋಜ್‌ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇಂದಿರಾಗಾಂಧಿ ಅವರಿಗೂ ಇದು ಆಶ್ರಯ ನೀಡಿತ್ತು. ತುರ್ತು ಪರಿಸ್ಥಿತಿ ಬಳಿಕ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರ ನಿಷ್ಠೆ ಬದಲಿಸಿತು. ಆಗ ಇಂದಿರಾ ಸೋತರು. ಮೂರು ವರ್ಷದ ಬಳಿಕ ಮತ್ತೆ ಆಯ್ಕೆ­ಯಾದರು. ಸೋನಿಯಾ ಗಾಂಧಿ 2004ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಿಂದ ಚುನಾಯಿತರಾದರು. ಲಾಭದಾಯಕ ಹುದ್ದೆ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಎರಡು ವರ್ಷದಲ್ಲೇ ರಾಜೀನಾಮೆ ನೀಡಿದರು. ಅನಂತರದ ಉಪ ಚುನಾವಣೆ, 2009ರ ಚುನಾವಣೆಯಲ್ಲೂ ಸೋನಿಯಾ ಆಯ್ಕೆಯಾಗಿದ್ದಾರೆ. ಇದು ಅವರಿಗೆ ನಾಲ್ಕನೇ ಚುನಾವಣೆ.

2009ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಬಿಎಸ್‌ಪಿ ಅಭ್ಯರ್ಥಿ ವಿರುದ್ಧ 3.72 ಲಕ್ಷ ಮತಗಳ ಅಂತರ­ದಿಂದ ಗೆಲುವು ಪಡೆದಿದ್ದರು. ಬಿಜೆಪಿಗೆ ಕೇವಲ 25 ಸಾವಿರ ಮತಗಳು ಬಂದವು. 2004ರ ಚುನಾವಣೆಯಲ್ಲಿ 2.5ಲಕ್ಷ ಮತ­ಗಳ ಅಂತರದಿಂದ ಆಯ್ಕೆಯಾಗಿದ್ದರು. ಆಗ ಎಸ್‌ಪಿ ಎರಡನೇ ಸ್ಥಾನದಲ್ಲಿತ್ತು. ಬಿಜೆಪಿ 4ನೇ ಸ್ಥಾನಕ್ಕೆ ಕುಸಿದಿತ್ತು. 2006ರ ಉಪ ಚುನಾವಣೆಯಲ್ಲಿ  2.56 ಲಕ್ಷ ಮತಗಳ ಅಂತರದಿಂದ ಚುನಾಯಿತರಾಗಿದ್ದರು. ಎರಡನೇ ಸ್ಥಾನದಲ್ಲಿ ಬಿಜೆಪಿ ಇತ್ತು.

ಈ ಸಲ ಸಮಾಜವಾದಿ ಪಕ್ಷ ಸೋನಿಯಾ ಅವರ ಎದುರು ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಸ್ನೇಹಪೂರ್ವಕವಾಗಿ ಅವರನ್ನು ಬೆಂಬಲಿಸುತ್ತಿದೆ. ಸುಪ್ರೀಂ ಕೋರ್ಟ್‌ ವಕೀಲ ಅಜಯ್‌ ಅಗರವಾಲ್‌ ಅವರು ಬಿಜೆಪಿ ಅಭ್ಯರ್ಥಿ. ಎಎಪಿಯ ಫಕ್ರುದ್ದೀನ್‌ ಅವರು ನಿವೃತ್ತ ನ್ಯಾಯಾಧೀಶ. ಪ್ರವೇಶ್‌ ಸಿಂಗ್‌ ಅವರಿಗೆ ಬಿಎಸ್‌ಪಿ ಟಿಕೆಟ್‌ ನೀಡಿದೆ. ಮತದಾರರು ಹೇಳುವಂತೆ ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಗೆಲ್ಲುವುದು ನೂರಕ್ಕೆ ನೂರರಷ್ಟು ಸತ್ಯ. ಆದರೆ, ಎಷ್ಟು ಅಂತರದಿಂದ ಎನ್ನುವುದಷ್ಟೇ ಕುತೂಹಲದ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.