ADVERTISEMENT

ಜೋಶಿ, ಜೈಸ್ವಾಲ್‌ ಕದನದ ಕಾನ್ಪುರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 19:30 IST
Last Updated 25 ಏಪ್ರಿಲ್ 2014, 19:30 IST

ಕಾನ್ಪುರ: ಕಾನ್ಪುರ  ನಗರ ಉತ್ತರ ಭಾರತದ ‘ಮ್ಯಾಂಚೆಸ್ಟರ್‌!’.ಜವಳಿ ಗಿರಣಿಗಳಿಂದಾಗಿ ಈ ಹೆಸರು ಬಂದಿದೆ. ಹೊಸ ಆರ್ಥಿಕ ನೀತಿ ಹೊಡೆತಕ್ಕೆ ಸಿಕ್ಕಿ ಬಹುತೇಕ ಮಿಲ್‌ಗಳು ಮುಚ್ಚಿವೆ. ಉದ್ಯೋಗ ಕಳೆದುಕೊಂಡಿದ್ದ ಬಹುತೇ­ಕರು ಮತ್ತೆ ಬದುಕು ಕಟ್ಟಿಕೊಂಡಿದ್ದಾರೆ. ಬಹುಶಃ ಇದೇ ಕಾರಣಕ್ಕೆ ಸೈಕಲ್‌ ರಿಕ್ಷಾ, ಆಟೊಗಳು, ಬ್ಯಾಟರಿ ಚಾಲಿತ ವಾಹನಗಳು ಅಷ್ಟೊಂದು ಸಂಖ್ಯೆಯಲ್ಲಿ ಇರಬಹುದು. ರೈಲು ನಿಲ್ದಾಣದಿಂದ ಹೊರ ಬಂದರೆ ಸಾಕು... ‘ಸಾರ್‌ ಆಟೊ, ಸಾರ್‌ ರಿಕ್ಷಾ, ಸಾರ್‌ ರೂಂ’ ಎಂದು ಗೋಗರೆಯುತ್ತಾ ಚಾಲಕರು ಹಿಂದೆ ಬೀಳುತ್ತಾರೆ. ಇದು ಎಲ್ಲ ಊರು­ಗಳಲ್ಲೂ ಕಂಡು ಬರುವ ಸಾಮಾನ್ಯ ದೃಶ್ಯ­ವಾದರೂ, ಕಾನ್ಪುರದಲ್ಲಿ ವಿಪರೀತ ಅನಿಸುತ್ತದೆ.

ತೊಗಲು, ಪ್ಲಾಸ್ಟಿಕ್‌ ಉದ್ಯಮಕ್ಕೂ ಹೆಸರಾದ ಕಾನ್ಪುರ ಅಭಿವೃದ್ಧಿಯನ್ನೇ ಕಂಡಿಲ್ಲ. ಕಾನ್ಪುರ– ಲಖನೌ ಮಧ್ಯದ ರಸ್ತೆ ಹೇಳಲಾಗದಷ್ಟು ಹದಗೆಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಮೇಲಿನ ಪ್ರಯಾ­ಣವೂ ಬೇಸರ ಹುಟ್ಟಿಸುತ್ತದೆ. ಏಳೆಂಟು ವರ್ಷದ ಹಿಂದೆ ನಿರ್ಮಿಸಲಾಗಿರುವ ರಸ್ತೆಗೆ ಇನ್ನೂ ‘ಟೋಲ್‌ ಶುಲ್ಕ’ ವಸೂಲು ಮಾಡಲಾಗುತ್ತಿದೆ. ಸಂಚಾರ ಅವ್ಯವಸ್ಥೆ ದೊಡ್ಡ ನರಕ. ಊರೊಳಗಿನ ರಸ್ತೆಗಳ ಸ್ಥಿತಿಗತಿ ಬಗ್ಗೆ ಹೇಳುವುದೇ ಬೇಕಿಲ್ಲ. ಕಾನ್ಪುರದ ಜನರಿಗೆ ರಸ್ತೆ­ಯೊಂದೇ ಅಲ್ಲ, ಕುಡಿಯುವ ನೀರು, ವಿದ್ಯುತ್‌ ಸಮಸ್ಯೆ ಕಿತ್ತು ತಿನ್ನುತ್ತಿವೆ. ಬಹುತೇಕರು ‘ಪವಿತ್ರ’ ಎಂದು ಭಾವಿಸಿ­ರುವ ‘ಗಂಗಾ ನದಿ ಮಾಲಿನ್ಯ’ವೂ  ಆತಂಕಕ್ಕೆ ಕಾರಣವಾಗಿದೆ.

ಜಿತೇಂದ್ರ ಕಬೀರ ಆಟೊ ಚಾಲಕ. ಸುಮಾರು 21 ವರ್ಷದಿಂದ ಆಟೊ ಓಡಿಸುತ್ತಿದ್ದಾರೆ. ದಲಿತ ಸಮುದಾಯದ ಜಿತೇಂದ್ರ ಸೂಫಿ ಪಂಥವನ್ನು ಅನುಸರಿ­ಸುತ್ತಿದ್ದಾರೆ. ಇದರಿಂದಾಗಿ ತಮ್ಮ ಹೆಸರಿನ ಮುಂದೆ ‘ಕಬೀರ’ ಎಂದು ಸೇರಿಸಿ­ಕೊಂಡಿದ್ದಾರೆ. ಚುನಾವಣೆ ಕುರಿತು ಕೇಳಿದರೆ, ‘ಯಾರಿಗೂ ವೋಟು ಹಾಕ­ಬಾರದು ಎಂದುಕೊಂಡಿದ್ದೇನೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ನೋಡಿ ಈ ಊರಿನಲ್ಲಿ ಎಷ್ಟೊಂದು ಸಮಸ್ಯೆಗಳಿವೆ. ಅವನ್ನು ಪರಿಹರಿಸಲು ಯಾರಾದರೂ ಪ್ರಯತ್ನಿಸಿದ್ದಾರಾ? ಸಮಾಜವಾದಿ ಪಾರ್ಟಿ ಸರ್ಕಾರ ಅಧಿ­ಕಾರಕ್ಕೆ ಬಂದು ಎರಡು ವರ್ಷವಾಗಿದೆ. ಏನೂ ಕೆಲಸ ಮಾಡಿಲ್ಲ. ಇನ್ನು ಮಾಯಾವತಿ ದಲಿತರಿಗಾಗಿ ಏನು ಮಾಡಿ­ದ್ದಾರೆ? ಕಾಂಗ್ರೆಸ್‌ ಪಕ್ಷ ಸತತ­ ಮೂರು ಸಲ ಗೆಲ್ಲಿಸಿದ್ದೇವೆ. ಅದೂ ನಿಷ್ಕ್ರಿಯವಾಗಿದೆ. ಬಿಜೆಪಿ ಹಿಂದೂ, ಹಿಂದುತ್ವ ಎಂದು ಭಜನೆ ಮಾಡುತ್ತಿದೆ. ಈ ಸ್ಥಿತಿಯಲ್ಲಿ ಏನು ಮಾಡ­ಬೇಕೆಂದು ನೀವೇ ಹೇಳಿ?’ ಎಂದು ಕೇಳುತ್ತಾರೆ.

‘ಜವಳಿ ಗಿರಣಿಗಳು ಬಂದ್‌ ಆಗಿವೆ. ಲಕ್ಷಾಂತರ ಜನ ಉದ್ಯೋಗ ಕಳೆದು­ಕೊಂಡು ಬೀದಿ ಪಾಲಾಗಿದ್ದಾರೆ. ಅಲ್ಪ­ಸ್ವಲ್ಪ ಹಣಕಾಸು ಇದ್ದವರೂ ಬೇರೆ ಕೆಲಸ ಮಾಡುತ್ತಿದ್ದಾರೆ. ಮಿಕ್ಕವರು ಏನು ಮಾಡಬೇಕು? ಬೇಕಾದಷ್ಟು ಫ್ಯಾಕ್ಟರಿ­ಗಳಿವೆ. ಕೆಲಸ ಸಿಗಬೇಕಲ್ಲವೇ? ನೋಡಿ ರಸ್ತೆಗಳು ಹೇಗಿವೆ? ಹೆಸರಿಗೆ ಇದೊಂದು ದೊಡ್ಡ ನಗರ. ನಿತ್ಯ ಹತ್ತಾರು ರೈಲು ಓಡಾಡುತ್ತವೆ. ಇಡೀ ನಗರಕ್ಕೆ ಇರು­ವುದು ಒಂದೇ ಒಂದು ರೈಲ್ವೆ ಮೇಲ್ಸೆತುವೆ. ನಾಲ್ಕು ಮೇಲ್ಸೆತುವೆ ನಿರ್ಮಾಣಕ್ಕೆ ಹಣ ಮಂಜೂರಾಗಿತ್ತು. ಮಿಕ್ಕ ಮೂರು ಏಕಾಗಲಿಲ್ಲ? ಒಂದು ಸಲ ರೈಲ್ವೆ ಗೇಟ್‌ ಹಾಕಿದರೆ ವಾಹನ ಸಂಚಾರ ಅಸ್ತವ್ಯಸ್ತವಾಗುತ್ತದೆ. ಅದ­ರಿಂದ ಹೊರಬರಲು ಕನಿಷ್ಠ ಅರ್ಧ ಗಂಟೆ ಹಿಡಿಯುತ್ತದೆ. ದಿನಕ್ಕೆ ಎಷ್ಟು ಸಲ ಈ ನರಕ ಅನುಭವಿಸಬೇಕು?’ ಎಂದು ಕೇಳು­ತ್ತಾರೆ. ಕಬೀರ ಅವರ ಮಾತಿನಲ್ಲಿ ಯಾವ ಉತ್ಪ್ರೇಕ್ಷೆಯೂ ಕಾಣುವುದಿಲ್ಲ.

ಪ್ಲಾಸ್ಟಿಕ್‌ ಪದಾರ್ಥಗಳ ಅಂಗಡಿ ಮಾಲೀಕ ಜುಗಲ್‌ ಕಿಶೋರ್‌ ಆರೋಡ, ಯುಪಿಎ ಸರ್ಕಾರದ ಬೆಲೆ ಏರಿಕೆ ಮತ್ತು ಭ್ರಷ್ಟಾ­ಚಾರ ಹಗರಣ ಕುರಿತು ಪ್ರಸ್ತಾಪಿ­ಸು­ತ್ತಾರೆ. ‘ನಮ್ಮ ಸಮಸ್ಯೆಗಳಿಗೆ ನರೇಂದ್ರ ಮೋದಿ ಪರಿಹಾರ. ದೇಶ ಉಳಿಯ­ಬೇಕಾದರೆ ನಮೋ ನಮೋ ಎನ್ನಲೇ­ಬೇಕು’ ಎಂದು ಮಾತು ಮುಗಿಸು­ತ್ತಾರೆ. ಅವ­ರದೇ ಅಂಗಡಿ­ಯಲ್ಲಿ ಕೆಲಸ ಮಾಡುವ ಇಂದ್ರ ಕುಮಾರ ಹಂಡ ಕಾಂಗ್ರೆಸ್‌ ಪಕ್ಷದ ಮೇಲೆ ಒಲವು ವ್ಯಕ್ತ­ಪಡಿ­ಸು­ತ್ತಾರೆ. ಅಂಗಡಿ ಮಾಲೀಕ,  ನೌಕರನ ಚಿಂತನೆಯಲ್ಲಿ ಎಷ್ಟು ಅಂತರವಿದೆ!

ಕಾನ್ಪುರದಲ್ಲಿ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೇಂದ್ರ ಕಲ್ಲಿದ್ದಲು ಸಚಿವ ಶ್ರೀಜೈಪ್ರಕಾಶ್‌ ಜೈಸ್ವಾಲ್‌ ಕಾಂಗ್ರೆಸ್‌ ಅಭ್ಯರ್ಥಿ. ವಾಜ­ಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ­ದಲ್ಲಿ ಮಾನವ ಸಂಪನ್ಮೂಲ ಸಚಿವ­ರಾಗಿದ್ದ ಜೋಶಿ 2009ರ ಚುನಾವಣೆ­ಯಲ್ಲಿ ವಾರಾಣಸಿಯಿಂದ ಗೆದ್ದಿದ್ದರು.  ಗೆಲುವಿನ ಅಂತರ ಕೇವಲ 17 ಸಾವಿರ ಮತಗಳು. ಅದಕ್ಕೂ ಮೊದಲು ಅಲಹಾ­ಬಾದ್‌ ಅವರ ಕ್ಷೇತ್ರ. ಈ ಸಲ ಅವರನ್ನು ಕಾನ್ಪುರಕ್ಕೆ ಸ್ಥಳಾಂತರ ಮಾಡಲಾಗಿದೆ. ವಾರಾಣಸಿಯನ್ನು ಅವರಿಂದ ಬಲವಂತ­ವಾಗಿ ಕಿತ್ತು ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಕೊಡ­ಲಾಗಿದೆ. ಮನಸಿಲ್ಲದ ಮನಸಿನಿಂದ ಜೋಶಿ ಕಾನ್ಪುರಕ್ಕೆ ಬಂದಿದ್ದಾರೆ. ಮುರಳಿ ಮನೋಹರ ಜೋಶಿ ಹೊರಗಿನವರು ಎಂಬ ಭಾವನೆ ಕಾನ್ಪುರದ ಮತದಾರ­ರಿಗಿದೆ. ಬಿಜೆಪಿಯೊಳಗೂ ಇದು ಅಸ­ಮಾ­ಧಾ­ನಕ್ಕೆ ಕಾರಣವಾಗಿದೆ. ಕೆಲವರು ಪ್ರಚಾರದಿಂದ ದೂರ ಉಳಿದಿದ್ದಾರೆ.

‘ಈ ಚುನಾವಣೆಯಲ್ಲಿ ಬಹಳಷ್ಟು ಮುಖಂಡರು ಕ್ಷೇತ್ರಗಳನ್ನು ಬದಲಾವಣೆ ಮಾಡಿದ್ದಾರೆ. ಕ್ಷೇತ್ರ ಬದಲಾವಣೆ ಹೊಸ ಪರಿಪಾಠವಲ್ಲ, ಹಿಂದಿನಿಂದ ನಡೆದು­ಕೊಂಡು ಬಂದಿದೆ. ಈ ಅಂಶ ಜೋಶಿ ಅವರ ಗೆಲುವಿನ ಮೇಲೆ ಪರಿ­ಣಾಮ ಬೀರುವುದೇ ಇಲ್ಲ ಎಂದು ಹೇಳು­ವುದಿಲ್ಲ. ಆದರೆ, ಅದು ಮಾಡುವ ಪರಿ­ಣಾಮ ಕಡಿಮೆ. ಮೋದಿ ಹವಾದಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಗುತ್ತದೆ’ ಎಂದು ಕಳೆದ ಎರಡು ದಶಕಗಳಿಂದ ಸಂಘ– ಪರಿವಾರದ ಜತೆ ನಿಕಟ ಸಂಪರ್ಕ ಹೊಂದಿರುವ ನಿವೃತ್ತ ಸರ್ಕಾರಿ ನೌಕರ ತ್ರಿಲೋಕನಾಥ ಚೌಬೆ ಪ್ರತಿ­ಪಾದಿಸುತ್ತಾರೆ.

ಜೈಸ್ವಾಲ್‌ ಮೂರು ಸಲ ಸತತವಾಗಿ ಕಾನ್ಪುರದಿಂದ ಲೋಕಸಭೆಗೆ ಆಯ್ಕೆ­ಯಾಗಿ­ದ್ದಾರೆ. ಇದು ಅವರ ನಾಲ್ಕನೇ ಚುನಾವಣೆ. ವೈಶ್ಯ ಸಮುದಾಯಕ್ಕೆ ಸೇರಿದ ಜೈಸ್ವಾಲ್‌ ಸ್ಥಳೀಯರು. ಸುಲಭ­ವಾಗಿ ಅವರನ್ನು ಕಾಣಬಹುದು. ಜನರ ಜತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿ­ದ್ದಾರೆ. ಕೆಲವು ಪ್ರಜ್ಞಾವಂತ ಮತದಾ­ರರು ಮಾತ್ರ ಕಲ್ಲಿದ್ದಲು ಸಚಿವಾಲ­ಯ­ವನ್ನು ಜೈಸ್ವಾಲ್‌ ಸಮರ್ಥವಾಗಿ ನಿಭಾ­ಯಿ­ಸಲಿಲ್ಲ ಎಂದು ಆರೋಪಿಸುತ್ತಾರೆ.

ಸಮಾಜವಾದಿ ಪಕ್ಷ ಕೂಡ ವೈಶ್ಯ ಸಮುದಾಯದ ಸುರೇಂದ್ರ ಮೋಹನ್‌ ಅವರಿಗೆ ಟಿಕೆಟ್‌ ನೀಡಿದೆ. ಮೋಹನ್‌ ಕಾನ್ಪುರ ವರ್ತಕರ ಸಂಘದ ಹಿರಿಯ ನಾಯಕರು. ಬಿಎಸ್‌ಪಿ ಮತ್ತು ಎಎಪಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೈಸ್ವಾಲ್‌ ಮತ್ತು ಸುರೇಂದ್ರ ಮೋಹನ್‌ ಅವರು ಬಿಜೆಪಿ ಪ್ರಮುಖವಾಗಿ ಅವ­ಲಂಬಿ­ಸಿರುವ ಮೇಲ್ವರ್ಗದ ಮತಗಳಿಗೆ ಕೈ ಹಾಕಿದ್ದಾರೆ. ಮುಸ್ಲಿಂ ಮತಗಳು ಕಾಂಗ್ರೆಸ್‌, ಎಸ್‌ಪಿ, ಬಿಎಸ್‌ಪಿ ಹಾಗೂ ಎಎಪಿ ನಡುವೆ ಹಂಚಿಕೆ ಆಗಲಿದೆ. ಆದರೆ, ಜೈಸ್ವಾಲ್‌ ಯಾವ ಪ್ರಮಾಣ­ದಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಕೀಳಲಿದ್ದಾರೆ ಎನ್ನುವುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ.

ನರೇಂದ್ರ ಮೋದಿ ಬಲ ಎಷ್ಟರ ಮಟ್ಟಿಗೆ ನೆರವಿಗೆ ಬರಲಿದೆ ಎಂಬ ಪ್ರಶ್ನೆ ಮೇಲೆ ಜೋಶಿ ಗೆಲುವು ನಿಂತಿದೆ. ಕಾನ್ಪುರ­ದಲ್ಲಿ ಜಿದ್ದಾಜಿದ್ದಿ ಏನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಎಂದು ಎಲೆಕ್ಟ್ರೀಷಿಯನ್‌ ಅರುಣ್‌ ಶುಕ್ಲ, ಮೆಕಾ­ನಿಕ್‌ ಶಫಿ, ಪಪ್ಪೂ ಸಾಬ್‌ ವ್ಯಾಖ್ಯಾನಿ­ಸು­ತ್ತಾರೆ. ಈ ಕ್ಷೇತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಮಾತು ಸತ್ಯವೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.