ADVERTISEMENT

ಒಗ್ಗಟ್ಟು ಮೂಡಿಸಲು ಹೈಕಮಾಂಡ್‌ ಕಸರತ್ತು?

ಹೊನಕೆರೆ ನಂಜುಂಡೇಗೌಡ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST
ಒಗ್ಗಟ್ಟು ಮೂಡಿಸಲು ಹೈಕಮಾಂಡ್‌ ಕಸರತ್ತು?
ಒಗ್ಗಟ್ಟು ಮೂಡಿಸಲು ಹೈಕಮಾಂಡ್‌ ಕಸರತ್ತು?   

ಬೆಂಗಳೂರು: ‘ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಸೋಲಿಸಲು ನಮ್ಮ ಪಕ್ಷದವರೇ ಸಾಕು, ಬೇರೆಯವರು ಬೇಕಿಲ್ಲ’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಈಚೆಗೆ ಹೇಳಿದ್ದರು. ಆ ಪಕ್ಷದ ಬಹುತೇಕರು ಇದೇ ಅಭಿಪ್ರಾಯ ಇಟ್ಟುಕೊಂಡಿದ್ದಾರೆ. 2013ರ ವಿಧಾನಸಭೆ ಚುನಾವಣೆಯ ಅನುಭವದಲ್ಲಿ ಹೀಗೆ ಹೇಳುತ್ತಿರಬಹುದು. ಆಗ ಬಹಳಷ್ಟು ಘಟಾನುಘಟಿಗಳು ಸೋತರು. ಒಬ್ಬರನ್ನೊಬ್ಬರು ಸೋಲಿಸಲು ಪ್ರಯತ್ನಿಸಿದ್ದರು... 

ಕಾಂಗ್ರೆಸ್‌ ಒಳಸುಳಿಗಳನ್ನು ಅರಿತವರಿಗೆ ಈ ಮಾತುಗಳು ಅಚ್ಚರಿಯಾಗಿ ಕಾಣುವುದಿಲ್ಲ. ಏಕೆಂದರೆ, ಆ ಪಕ್ಷದಲ್ಲಿ  ಗುಂಪುಗಾರಿಕೆ ಇದೆ. ಹೊರಗಡೆಗೆ ಎಲ್ಲವೂ ಸರಿ ಇರುವಂತೆ ಕಾಣುತ್ತದೆ. ಒಳಗಡೆ ಬೇರೆಯದೇ ಪರಿಸ್ಥಿತಿ ಇದೆ. ಬೇರೆ ಪಕ್ಷಗಳಲ್ಲಿ ಗುಂಪುಗಾರಿಕೆ ಇಲ್ಲ
ವೆಂದಲ್ಲ. ಬಿಜೆಪಿಯೊಳಗೂ ಬಿಕ್ಕಟ್ಟಿದೆ. ಬಹಿರಂಗವಾಗೇ ಪರಸ್ಪರ ಕೆಸರೆರೆಚಿಕೊಳ್ಳುತ್ತಾರೆ. ವರಿಷ್ಠರು ಪ್ರಬಲವಾಗಿರುವುದರಿಂದ ಯಾರೂ ಕೆಮ್ಮಲು ಅವಕಾಶವಿಲ್ಲ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಜೋರಾಗಿ ಗದರಿದರೆ ಎಲ್ಲರ ಬಾಯಿಗಳು ಬಂದ್‌ ಆಗಿಬಿಡುತ್ತವೆ. ಷಾ ಅನೇಕ ಸಲ ರಾಜ್ಯ ನಾಯಕರ ಕಿವಿ ಹಿಂಡಿದ್ದಾರೆ.

ಆದರೆ, ಕಾಂಗ್ರೆಸ್‌ ‍ಪರಿಸ್ಥಿತಿ ಹೀಗಿಲ್ಲ.  ಹೈಕಮಾಂಡ್‌ ದುರ್ಬಲವಾಗಿದೆ. ಯಾರ ಮೇಲೂ ಹಿಡಿತವಿಲ್ಲ. 2014ರ ಲೋಕಸಭೆ ಚುನಾವಣೆಯ ಬಳಿಕ ಈ ಪಕ್ಷ ಸಂಪೂರ್ಣ ನೆಲಕಚ್ಚಿದೆ. ಆನಂತರದ ವಿಧಾನಸಭೆ ಚುನಾವಣೆಗಳಲ್ಲಿ ಪಂಜಾಬ್‌ ಬಿಟ್ಟರೆ ಉಳಿದೆಡೆ ಸೋತಿದೆ. ಇತ್ತೀಚೆಗೆ ಪಕ್ಷದ ನಾಯಕತ್ವ ವಹಿಸಿಕೊಂಡಿರುವ ರಾಹುಲ್‌ ಗಾಂಧಿ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅನೇಕ ಸವಾಲುಗಳಿವೆ. ಅವುಗಳನ್ನು ಜಾಣ್ಮೆಯಿಂದ ನಿಭಾಯಿಸಬೇಕಿದೆ. ಸೋಲಿನ ಮೇಲೆ ಸೋಲುಂಡು ಹತಾಶರಾಗಿರುವ ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಬೇಕಿದೆ.

ADVERTISEMENT

ಈ ದೃಷ್ಟಿಯಿಂದ ನೋಡಿದರೆ ರಾಹುಲ್‌ಗೆ ಕರ್ನಾಟಕದ ಚುನಾವಣೆ ದೊಡ್ಡ ಅಗ್ನಿಪರೀಕ್ಷೆ. ಅಕಸ್ಮಾತ್‌ ಕರ್ನಾಟಕ ಕೈತಪ್ಪಿದರೆ ಕಾಂಗ್ರೆಸ್‌ ಚೇತರಿಸಿಕೊಳ್ಳುವುದು ಕಷ್ಟ. ದೇಶದ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ಉಳಿಯ
ಬೇಕೆಂದರೆ ಇದು ಆಗಬಾರದು.

ಕಾಂಗ್ರೆಸ್‌ಮುಕ್ತ ಭಾರತ ಮಾಡಲು ಹೊರಟಿರುವ ಬಿಜೆಪಿಗೂ ರಾಜ್ಯದ ಚುನಾವಣೆ ಅಷ್ಟೇ ಮುಖ್ಯ. ‘ಕೈ’ಯಿಂದ ರಾಜ್ಯ ಕಿತ್ತುಕೊಂಡರೆ ಅದರ ಕಥೆ ಮುಗಿಯುತ್ತದೆ ಎಂದೇ ಆ ಪಕ್ಷದ ವರಿಷ್ಠರು ಭಾವಿಸಿದ್ದಾರೆ. ಈ ಕಾರಣಕ್ಕೆ 150 ಸ್ಥಾನ ಗೆಲ್ಲುವ ಹಟಕ್ಕೆ ಬಿದ್ದಿದ್ದಾರೆ. ಆದರೆ, ಕಾಂಗ್ರೆಸ್‌ಗೆ ಇಷ್ಟೊಂದು ಸೀಟುಗಳು ಬೇಕಾಗಿಲ್ಲ. ಸರಳ ಬಹುಮತ ಸಿಕ್ಕರೆ ಸಾಕೆಂಬ ಲೆಕ್ಕಾಚಾರದಲ್ಲಿದೆ.

ಇವೆರಡೂ ರಾಷ್ಟ್ರೀಯ ಪಕ್ಷಗಳ ಹೋರಾ
ಟದ ನಡುವೆ ಜೆಡಿಎಸ್‌ ಸುಮ್ಮನೆ ಕುಳಿತಿಲ್ಲ. ತನ್ನದೇ ಹೆಜ್ಜೆ ಗುರುತು ಮೂಡಿಸಲು ಶ್ರಮಿ
ಸುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಜೆಡಿಎಸ್‌, ಉತ್ತರ ಕರ್ನಾಟಕದಲ್ಲೂ ಕುಮಾರಸ್ವಾಮಿ ಜನ‍ಪ್ರಿಯತೆಯನ್ನು ಪಣಕ್ಕಿಟ್ಟಿದೆ. ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲೂ ಬಿಡುವಿಲ್ಲದ ಪ್ರಚಾರ ಮಾಡುತ್ತಿದ್ದಾರೆ.

ಕಳೆದ ಚುನಾವಣೆಗಿಂತ ಈ ಚುನಾವಣೆ ಭಿನ್ನವಾಗಿರಲಿದೆ. 2013ರಲ್ಲಿ ಬಿಜೆಪಿ ಒಡೆದು ಹೋಳಾಗಿತ್ತು. ಬಿಜೆಪಿಯಿಂದ ಹೊರ ಹೋಗಿದ್ದ ಯಡಿಯೂರಪ್ಪ ತಮ್ಮದೇ ಕರ್ನಾಟಕ ಜನತಾ ಪಕ್ಷ ಕಟ್ಟಿದ್ದರು. ಬಿಜೆ‍ಪಿ ಮತಗಳು ವಿಭಜನೆ ಆಗಿದ್ದರಿಂದ ಕಾಂಗ್ರೆಸ್‌ಗೆ ಲಾಭವಾಯಿತು.  ಈಗ ಬಿಜೆಪಿ ಮತಗಳು ವಿಭಜನೆ ಆಗುವ ಸಾಧ್ಯತೆ ಕಡಿಮೆ. ಆದರೆ, ವೀರಶೈವ– ಲಿಂಗಾಯತರ ಸಂಘರ್ಷ, ಮಹದಾಯಿ ವಿಷಯದಲ್ಲಿ ಬಿಜೆಪಿ ತುಳಿದ ಹಾದಿ ಚುನಾವಣೆ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ಭವಿಷ್ಯ ಹೇಳಲು ಸಾಧ್ಯವಿಲ್ಲ. 

ಗುಜರಾತ್‌ ಚುನಾವಣೆ ಫಲಿತಾಂಶದ ಬಳಿಕ ಭಯ ಬಿದ್ದಿರುವ ಬಿಜೆಪಿ ನಾಯಕರು ಪದೇ ಪದೇ ಕರ್ನಾಟಕಕ್ಕೆ ಬಂದು ಹೋಗುತ್ತಿದ್ದಾರೆ. ಷಾ, ಜಾವಡೇಕರ್‌, ಪಿಯೂಷ್‌ ಗೋಯಲ್‌ ಹೀಗೆ ಒಬ್ಬರ ಹಿಂದೆ ಮತ್ತೊಬ್ಬರಂತೆ ದಾಂಗುಡಿ ಇಡುತ್ತಿದ್ದಾರೆ. ‘ಬಿಜೆಪಿ ಪರಿವರ್ತನಾ ಯಾತ್ರೆ’ಯ ಸಮಾರೋಪಕ್ಕೆ ಮೋದಿಯೇ ಬರುತ್ತಿದ್ದಾರೆ. ಇಷ್ಟಾದರೂ ಕರ್ನಾಟಕದಲ್ಲಿ ಬಹುಮತ ಪಡೆದು, ಅಧಿಕಾರಕ್ಕೆ ಬರುತ್ತೇವೆನ್ನುವ ಖಚಿತ ಭರವಸೆ ಯಾವ ಪಕ್ಷಕ್ಕೂ ಇದ್ದಂತಿಲ್ಲ.

ಕರ್ನಾಟಕದ ವಿಷಯದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಬಹುಬೇಗ ಎಚ್ಚೆತ್ತುಕೊಂಡಿದೆ. ನಿಷ್ಠಾವಂತರು– ವಲಸಿಗರ ನಡುವಿನ ಗುಂಪುಗಾರಿಕೆ ಶಮನಗೊಳಿಸಲು ಪ್ರಯತ್ನಿಸಿದೆ. ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾಗ ಗುಂಪುಗಾರಿಕೆ ಜೋರಾಗಿಯೇ ಇತ್ತು. ಅದನ್ನು ಸರಿಪಡಿಸುವ ಪ್ರಯತ್ನವನ್ನು ಸಿಂಗ್‌ ಮಾಡಿರಲಿಲ್ಲ. ಮೂಲ ಕಾಂಗ್ರೆಸಿಗರಿಗಿಂತ ವಲಸಿಗರಿಗೇ ಮಣೆ ಹಾಕಿದ್ದರು.

‘ಸಿಂಗ್‌, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಲಾಜಿನಲ್ಲಿದ್ದಾರೆ’ ಎಂಬ ದೂರು ಹಲವು ಸಲ ಹೈಕಮಾಂಡ್‌ಗೂ ತಲುಪಿತ್ತು. ಕಳೆದ ವರ್ಷ ಏಪ್ರಿಲ್‌ ಕೊನೆಗೆ ಎಐಸಿಸಿ ಉಸ್ತುವಾರಿಯನ್ನು ಬದಲಾಯಿಸಲಾಯಿತು. ಸಿಂಗ್‌ ಜಾಗಕ್ಕೆ ಕೇರಳದ ಕೆ.ಸಿ. ವೇಣುಗೋಪಾಲ್‌ ಅವರನ್ನು ತರಲಾಯಿತು. ಅವರ ಸಹಾಯಕ್ಕೆ ವಿಭಾಗವಾರು ಇನ್ನೂ ನಾಲ್ವರು ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಲಾಯಿತು. ಪಕ್ಷದೊಳಗೆ ಒಗ್ಗಟ್ಟು ಮೂಡಿಸಲು ವೇಣು ಗೋಪಾಲ್‌ ತಂಡ ಶ್ರಮಿಸುತ್ತಿದೆ. ಆದರೂ ಮೂಲ ಹಾಗೂ ವಲಸಿಗರ ನಡುವಿನ ತಿಕ್ಕಾಟ
ಕಡಿಮೆಯಾದಂತಿಲ್ಲ.

ರಾಹುಲ್‌ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಪರಮೇಶ್ವರ ನಡುವೆ ತೇಪೆ ಹಾಕಲು ವೇಣುಗೋಪಾಲ್‌ ಹಲವು ಸಲ ಪ್ರಯತ್ನಿಸಿದ್ದಾರೆ. ಮೇಲುನೋಟಕ್ಕೆ ಇಬ್ಬರೂ ಒಂದಾಗಿರುವಂತೆ ಕಂಡುಬಂದರೂ ಮನಸುಗಳು ಇನ್ನೂ ಹತ್ತಿರ
ವಾದಂತೆ ಕಾಣುವುದಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ನಿರೀಕ್ಷಿಸಿರುವ ಈ ನಾಯಕರು ಮುಖ್ಯಮಂತ್ರಿ ಗದ್ದುಗೆ ಮೇಲೆ ಕಣ್ಣಿಟ್ಟಿರುವುದರಿಂದ ಹೈಕಮಾಂಡ್‌ ಏಕತಾ ಮಂತ್ರ ಫಲಿಸುತ್ತಿಲ್ಲ.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಅತ್ಯಂತ ಪ್ರಬಲ ನಾಯಕರು. ಅವರಿಗೆ ಪರ್ಯಾಯವಾದ ಮತ್ತೊಬ್ಬ ನಾಯಕ ಕಾಂಗ್ರೆಸ್‌ನಲ್ಲಿಲ್ಲ ಎಂಬ ವಾಸ್ತವ ಹೈಕಮಾಂಡ್‌ಗೂ ಗೊತ್ತಿದೆ. ಅದರಿಂದಾ
ಗಿಯೇ ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗಲು ತೀರ್ಮಾನಿಸಿದೆ.

ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್‌ ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆಂದು ಪಕ್ಷ ಸ್ಪಷ್ಟಪಡಿಸಿದ್ದರೂ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುವ ಕೆಲಸ ನಿಂತಿಲ್ಲ. ಇದನ್ನು ಅರ್ಥ ಮಾಡಿಕೊಂಡಿರುವ ಕಾಂಗ್ರೆಸ್‌ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಮುಂದುವರಿಸಿದೆ. ಹೈಕಮಾಂಡ್‌ನ ಈ ಪ್ರಯತ್ನ ಕೈಗೂಡುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.