ADVERTISEMENT

ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಿದೆ ಯೂಟ್ಯೂಬ್‌ ಟ್ರೆಂಡ್‌

ಚುನಾವಣೆ, ಸ್ಥಳೀಯ ವಿದ್ಯಮಾನಗಳ ಪ್ರಸಾರಕ್ಕೆ ಜಾಲತಾಣದ ಮೊರೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 5:04 IST
Last Updated 26 ಜನವರಿ 2018, 5:04 IST
ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಿದೆ ಯೂಟ್ಯೂಬ್‌ ಟ್ರೆಂಡ್‌
ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಿದೆ ಯೂಟ್ಯೂಬ್‌ ಟ್ರೆಂಡ್‌   

ಕೊಪ್ಪಳ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಜಿಲ್ಲೆಯಲ್ಲಿ ವಿವಿಧ ಪಕ್ಷಗಳ ಪ್ರತ್ಯಕ್ಷ/ ಪರೋಕ್ಷ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳ ಮೊರೆ ಹೋಗಿದ್ದಾರೆ. ಗಂಗಾವತಿಯಲ್ಲಿ ಯೂಟ್ಯೂಬ್‌ ಚಾನೆಲ್‌ ಟ್ರೆಂಡ್‌ ಜೋರಾಗಿದೆ. ಯುವಜನರನ್ನು ಬಳಸಿಕೊಂಡು ತಮ್ಮ ಪರ ಅಥವಾ ವಿರೋಧಿಗಳ ವಿರುದ್ಧ ಹರಿಹಾಯಲು ಈ ಜಾಲ ತಾಣಗಳನ್ನು ಬಳಸಿಕೊಳ್ಳುತ್ತಿರುವ ಪ್ರವೃತ್ತಿಯೂ ಬೆಳೆಯುತ್ತಿದೆ. ಈ ಆನ್‌ಲೈನ್‌ ವಾಹಿನಿಗಳ ಕಾರ್ಯಕ್ರಮ ನಿರ್ಮಾಣವಾಗುವುದು ಗ್ರಾಮೀಣ ಪ್ರದೇಶದಲ್ಲಿ. 

ಈಗಾಗಲೇ ಗಂಗಾವತಿಯಲ್ಲಿ ಅಸ್ತಿತ್ವದಲ್ಲಿರುವ ಸ್ಥಳೀಯ ಕೇಬಲ್‌ ಚಾನೆಲ್‌ಗಳು ತಮ್ಮ ವಾರ್ತಾ ಸಂಚಿಕೆಯನ್ನು ಪ್ರತಿದಿನ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡುತ್ತಿವೆ. ಅವುಗಳಿಗೆ ಸ್ಪರ್ಧೆ ಒಡ್ಡುವಂತೆ ಕೆಲವು ಆನ್‌ಲೈನ್‌ ಚಾನೆಲ್‌ಗಳು ಹುಟ್ಟಿಕೊಂಡು ವಿಡಿಯೋ ತುಣುಕುಗಳನ್ನು ಹರಿಸುತ್ತಿವೆ. ವಿಶೇಷವೆಂದರೆ ಮುಖ್ಯವಾಹಿನಿ ಚಾನೆಲ್‌ಗಳ ಪ್ರತಿನಿಧಿಗಳು ಇವೇ ತುಣುಕುಗಳನ್ನು ಬಳಸಿ ಯಥಾವತ್ತಾಗಿ ಪ್ರಸಾರ ಮಾಡುತ್ತಿರುವುದು ಇನ್ನೊಂದು ಟ್ರೆಂಡ್‌.

ಗಂಗಾವತಿ ಸಮೀಪ ಬೂದಗುಂಪಾದಿಂದ ಜಿಬಿ ನ್ಯೂಸ್‌, ಕೊಪ್ಪಳದಲ್ಲಿ ಟಿವಿ ವಾಹಿನಿಗಳ ಯುವ ಪತ್ರಕರ್ತರು ಸೇರಿ ಮಾಡಿದ ಕನ್ನಡ ಟಿವಿ, ಸೆಕೆಂಡ್‌ ನ್ಯೂಸ್‌ ಚಾನೆಲ್‌ಗಳು ಸ್ಥಳೀಯ ವಿದ್ಯಮಾನಗಳನ್ನು ಪ್ರಸಾರ ಮಾಡುತ್ತಿವೆ.

ADVERTISEMENT

ಜನಪ್ರಿಯವಾದ ಫೇಸ್‌ಬುಕ್‌ ಲೈವ್‌

ಜಿಲ್ಲೆಯಲ್ಲಿ ಗಮನಾರ್ಹವಾದ ಘಟನೆ ಅಥವಾ ವಿಷಯ ಸಿಕ್ಕಿದಾಗ ಸಮಾನ ಮನಸ್ಕ ಟಿವಿ ಪತ್ರಕರ್ತರು ಸೇರಿಕೊಂಡು ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮ ನಡೆಸುತ್ತಿದ್ದರು. ಫೇಸ್‌ಬುಕ್‌ ಖಾತೆಯ ಮೂಲಕ ವಿಡಿಯೋ ಪುಟ ತೆರೆದು ಅಂದಿನ ವಿದ್ಯಮಾನಗಳ ಬಗ್ಗೆ ನೇರ ಪ್ರಸಾರದ ಚರ್ಚೆ, ಪರಿಣತರೊಂದಿಗೆ ಸಂವಾದ ನಡೆಸುತ್ತಿದ್ದರು. ಸುಮಾರು 6 ತಿಂಗಳ ಕಾಲ ಜನಪ್ರಿಯವಾಗಿದ್ದ ಈ ಕಾರ್ಯಕ್ರಮ ಸಾವಿರಾರು ವೀಕ್ಷಕರನ್ನು ಹೊಂದಿತ್ತು. ಈಗ ಅದೇ ಪತ್ರಕರ್ತರು ನಮ್ಮ ಬಿಡುವಿನ ವೇಳೆಯಲ್ಲಿ ಯೂಟ್ಯೂಬ್‌ ವಾಹಿನಿ ನಿರ್ಮಿಸಿದ್ದಾರೆ. ಕನ್ನಡ ಟಿವಿ, ಸೆಕೆಂಡ್‌ ನ್ಯೂಸ್‌ ಈಗ ನಿರ್ಮಾಣ ಹಂತದಲ್ಲಿವೆ. ಕೆಲವು ಮಾದರಿ ಕಾರ್ಯಕ್ರಮಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಇವು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.

ಫೇಸ್‌ಬುಕ್‌ ಲೈವ್‌ನ ರೂವಾರಿ ಪತ್ರಕರ್ತರು ಹೇಳುವ ಪ್ರಕಾರ,'ನಮಗೆ ಸ್ಥಳೀಯ ಸಮಸ್ಯೆಗಳನ್ನು ರಾಜ್ಯಮಟ್ಟದ ವಾಹಿನಿಗಳಲ್ಲಿ ಚರ್ಚಿಸುವ ಅಥವಾ ಖುದ್ದಾಗಿ ಭಾಗವಹಿಸುವ ಅವಕಾಶ ಸಿಗುವುದು ಅತಿ ವಿರಳ. ಎಷ್ಟೋ ವಿಷಯಗಳನ್ನು ನಾವು ಯಥಾವತ್ತಾಗಿ ಹೇಳಲಾಗುವುದಿಲ್ಲ. ವರದಿಗಳು ಮೂಲೆಗುಂಪಾಗಿಬಿಡುವುದುಂಟು. ಹಲವು ಸತ್ಯಗಳು ಮರೆಯಲ್ಲೇ ಉಳಿದುಬಿಡುತ್ತವೆ. ಅದನ್ನು ಹೇಗಾದರೂ ಜನರಿಗೆ ತಲುಪಿಸಬೇಕು ಮತ್ತು ನಮಗೂ ಒಂದು ವೇದಿಕೆ ಬೇಕು. ಅದಕ್ಕಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದೇವೆ. ಸ್ಮಾರ್ಟ್‌ಫೋನ್‌ ಮೂಲಕವೇ ಕಾರ್ಯಕ್ರಮ ನಿರ್ಮಾಣ ಮಾಡಬಹುದು. ಇಲ್ಲಿ ಸ್ಥಳೀಯ ವಿಚಾರಗಳು ಬಹಳ ಆಳವಾಗಿ ಚರ್ಚೆಗೊಳಗಾಗುತ್ತವೆ. ಸಮಯದ ಇತಿಮಿತಿ ಇರುವುದಿಲ್ಲ. ಸಹಜವಾಗಿ ಜನರು ನಮ್ಮ ಕಾರ್ಯಕ್ರಮಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ' ಎಂದರು.

'ಮಾಧ್ಯಮಗಳಿಗಿರುವ ಕಾನೂನು ಚೌಕಟ್ಟು, ಬಳಸುವ ಭಾಷೆ, ಸಮತೋಲನ ತಪ್ಪದಂತೆ ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡುವ ಜವಾಬ್ದಾರಿ ಇಲ್ಲಿ ಹೆಚ್ಚು ಇದೆ. ಅದನ್ನು ಕಾಯ್ದುಕೊಂಡಿದ್ದೇವೆ' ಎಂದರು ಅವರು.

ಕೆಲವು ಗ್ರಾಮೀಣ ಪ್ರದೇಶದ 'ಪತ್ರಕರ್ತ'ರು ರೂಪಿಸಿರುವ ಚಾನೆಲ್‌ಗಳಲ್ಲಿ ವ್ಯಕ್ತಿಗತ ನಿಂದನೆ, ಕೀಳುಮಟ್ಟದ ಭಾಷೆ, ವಿವಾದಾತ್ಮಕ ವಿಷಯಗಳು ಪ್ರಸಾರವಾಗುತ್ತಿವೆ. ಹಲವು ಬಾರಿ ಸತ್ಯಾಸತ್ಯತೆ ಪರಿಶೀಲಿಸದೇ ದೃಶ್ಯಾವಳಿಗಳು ಪ್ರಸಾರವಾಗಿಬಿಡುತ್ತಿವೆ. ಮುಖ್ಯವಾಹಿನಿ ಮಾಧ್ಯಮದವರನ್ನೇ ಇಂಥವರು ದಾರಿತಪ್ಪಿಸುತ್ತಿರುವ ಘಟನೆಗಳೂ ನಡೆದಿವೆ. ಚುನಾವಣೆ ಸಮೀಪಿಸುತ್ತಿರುವಂತೆ ಇದ್ದಕ್ಕಿದ್ದಂತೆಯೇ ಉದ್ಭವಿಸುವ ವಾಹಿನಿಗಳಿಗೆ ಕಡಿವಾಣ ಹಾಕಬೇಕು ಎಂಬ ಕೂಗು ಆನ್‌ಲೈನ್‌ ವೀಕ್ಷಕರಿಂದ ಕೇಳಿಬಂದಿದೆ.

ಯಾರೋ ಮಾಡುವ ಕಿಡಿಗೇಡಿತನಕ್ಕೆ ಸಭ್ಯ ವಿಷಯ ಪ್ರಸಾರ ಮಾಡುವವರನ್ನೂ ಒಂದೇ ದೃಷ್ಟಿಯಲ್ಲಿ ನೋಡಬಾರದು ಎಂದು ಕನ್ನಡ ಟಿವಿಯ ಪತ್ರಕರ್ತರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.