ADVERTISEMENT

ಅಡ್ಡಿ ಪಡಿಸುವವರನ್ನು ಆಹುತಿ ಕೊಡುತ್ತೇವೆ: ಮುರುಳೀಧರರಾವ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST
ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ವೇದಿಕೆ ಸಿದ್ಧಪಡಿಸಲು ಶುಕ್ರವಾರ ನಡೆದ ಗುದ್ದಲಿ ಪೂಜೆಗೆ ಮುನ್ನ ಹೋಮ ನಡೆಸಲಾಯಿತು. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಮುರುಳೀಧರರಾವ್, ಶಾಸಕ ಮುನಿರಾಜು, ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು
ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ವೇದಿಕೆ ಸಿದ್ಧಪಡಿಸಲು ಶುಕ್ರವಾರ ನಡೆದ ಗುದ್ದಲಿ ಪೂಜೆಗೆ ಮುನ್ನ ಹೋಮ ನಡೆಸಲಾಯಿತು. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಮುರುಳೀಧರರಾವ್, ಶಾಸಕ ಮುನಿರಾಜು, ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಅಡ್ಡಿ ಮಾಡುವ ಪ್ರತಿಯೊಬ್ಬರಿಗೂ ಸ್ವಾಹಾ ಎಂದು ಹೇಳಿ ನಾವು ಆಹುತಿ ಕೊಡುತ್ತೇವೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಕೆ. ಮುರುಳೀಧರರಾವ್ ಹೇಳಿದರು.

ಫೆಬ್ರುವರಿ 4ರಂದು ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯ ಸಮಾವೇಶದ ವೇದಿಕೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಅಂಗವಾಗಿ ನಡೆಸಿದ ಗಣಹೋಮ, ವಾಸ್ತು ಹೋಮ ಹಾಗೂ ಅಷ್ಟ ದಿಕ್ಪಾಲಕ ಹೋಮಗಳ ಬಳಿಕ ಅವರು ಮಾತನಾಡಿದರು.

‘ಸಮಾರಂಭಕ್ಕೆ ಅಡ್ಡಿ ನಿವಾರಿಸಲು ಹೋಮ ನಡೆಸಲಾಯಿತೇ’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಸರ್ಪಯಜ್ಞದ ಸಂದರ್ಭದಲ್ಲಿ ಬಚಾವಾಗಲು ಮುಂದಾದ ತಕ್ಷಕ, ಇಂದ್ರನನ್ನು ಹೋಗಿ ಹಿಡಿದುಕೊಂಡಿದ್ದ. ಆಗ ತಕ್ಷಕನ ಸಹಿತ ಇಂದ್ರನನ್ನು ಯಜ್ಞಕ್ಕೆ ಆಹುತಿ ನೀಡಲು ಯಾಜ್ಞಿಕರು ಮಂತ್ರ ಪಠಣ ಮಾಡಿದ್ದರು. ಇಂದು ನಾವೂ ಅದೇ ರೀತಿ ಯಜ್ಞ ಮಾಡಿದ್ದೇವೆ’ ಎಂದು ಹೇಳಿದರು.

ADVERTISEMENT

ಅಶ್ವಮೇಧ ಯಾತ್ರೆಯಂತೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಪರಿವರ್ತನಾ ಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ. ಯಾತ್ರೆಗೆ ಸಿಕ್ಕಿದ ಜನಸ್ಪಂದನೆ ಸಿದ್ದರಾಮಯ್ಯನವರಲ್ಲಿ ನಡುಕ ಹುಟ್ಟಿಸಿದೆ. ಹೀಗಾಗಿ ಮೈಸೂರಿನ ಸಮಾವೇಶದ ವೇಳೆ ಬಂದ್‌ಗೆ ಕರೆ ನೀಡುವ ಯತ್ನ ಮಾಡಿದರು. ಸಿದ್ದರಾಮಯ್ಯನವರು ಹಾಸಿಗೆ, ದಿಂಬು ಮಡಚಿಕೊಂಡು ಹೋಗುವವರೆಗೂ ನಾವು ಬಿಡುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.