ADVERTISEMENT

ಸಂವಿಧಾನವನ್ನು ಇಡಿಯಾಗಿ ಬದಲಾಯಿಸುವ ಮಾತನಾಡುವುದು ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 8:56 IST
Last Updated 27 ಜನವರಿ 2018, 8:56 IST
ಸಂವಿಧಾನವನ್ನು ಇಡಿಯಾಗಿ ಬದಲಾಯಿಸುವ ಮಾತನಾಡುವುದು ಸರಿಯಲ್ಲ
ಸಂವಿಧಾನವನ್ನು ಇಡಿಯಾಗಿ ಬದಲಾಯಿಸುವ ಮಾತನಾಡುವುದು ಸರಿಯಲ್ಲ   

ಕಲಬುರ್ಗಿ: ಸಂವಿಧಾನದಲ್ಲಿ ಕೆಲವು ಅಂಶಗಳನ್ನು ಚರ್ಚೆಗೆ ಒಳಪಡಿಸಿ ತಿದ್ದುಪಡಿ ಮಾಡಬಹುದೇ ಹೊರತು, ಸಂವಿಧಾನವನ್ನು ಇಡಿಯಾಗಿ ಬದಲಾಯಿಸುವ ಮಾತನಾಡುವುದು ಸರಿಯಲ್ಲ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ನೂರಕ್ಕೂ ಹೆಚ್ಚು ಬಾರಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಈ ಎಲ್ಲ ತಿದ್ದುಪಡಿಗಳ ಸಂದರ್ಭದಲ್ಲಿ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವ ಯತ್ನ ಮಾಡಿಲ್ಲ.ಈ ನಿಟ್ಟಿನಲ್ಲಿ ಸುಪ್ರಿಂಕೋರ್ಟ್ ಸಹ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕಸಭೆಯ ಮಾಜಿ ಸ್ಪೀಕರ್ ಹಾಗೂ ಮಾಜಿ ಗೃಹ ಸಚಿವ ಶಿವರಾಜ ಪಾಟೀಲ ಹೇಳಿದ್ದಾರೆ.

ಇತ್ತೀಚೆಗೆ ಕೆಲವರು ಸಂವಿಧಾನದ ಪರಿವಿಡಿಯಲ್ಲಿ (preamble) ಸೆಕ್ಯುಲರ್ ಪದ ಕೈಬಿಡುವಂತೆಯೂ ವಾದಿಸುತ್ತಿದ್ದಾರೆ. ಇದು ಅಸಾಧ್ಯದ ಮಾತು.
ಸಂವಿಧಾನದ ಆಶಯದ ರಕ್ಷಣೆ ಎಲ್ಲರ ಹೊಣೆ. ಈ ದಿಸೆಯಲ್ಲಿ ನಡೆಯುತ್ತಿರುವ ಹೋರಾಟವನ್ನು ಪ್ರಧಾನಿ ಮೋದಿ ವಿರುದ್ಧದ ಹೋರಾಟ ಎಂದು ಬಿಂಬಿಸುವುದು ಸರಿಯಲ್ಲ. ಯಾರೇ ಸಂವಿಧಾನದ ವಿರುದ್ಧ ಮಾತನಾಡಿದರೂ,ಅಂತಹ ಹೇಳಿಕೆಯ ವಿರುದ್ಧ ಪ್ರತಿಭಟಿಸುವುದು ದೇಶದ ಪ್ರತಿ ಪ್ರಜ್ಞಾವಂತನ ಕರ್ತವ್ಯ.

ತ್ರಿವಳಿ ತಲಾಖ್ ನಿಷೇಧ ಒಳ್ಳೆಯದು. ಆದರೆ ತಲಾಕ್ ನೀಡಿದ ವ್ಯಕ್ತಿಗೆ ಮೂರು ತಿಂಗಳು ಜೈಲಿಗೆ ಕಳುಹಿಸಿದರೆ ತಲಾಖ್ ಎದುರಿಸುವ ಮಹಿಳೆ ಮತ್ತು ಆಕೆಯ ಮಕ್ಕಳ ಗತಿ ಏನಾಗಬೇಕು? ಅನಗತ್ಯವಾಗಿ ಸಿವಿಲ್ ವಿಷಯವನ್ನು ಕ್ರಿಮಿನಲ್ ಪ್ರಕರಣದ ವ್ಯಾಪ್ತಿಗೆ ತರಲು ಹೊರಟಿರುವುದು ತಪ್ಪು. ಇಷ್ಟಕ್ಕೂ ಇದನ್ನು ಪರಿಶೀಲನಾ ಸಮಿತಿ ಎದುರು ಚರ್ಚೆಗೆ ಒಳಪಡಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ.
ಹೆಚ್ಚಿನ ಧರ್ಮಗಳ ಸೃಷ್ಟಿ ಅಗತ್ಯವಿಲ್ಲ ಎಂದು ಲಿಂಗಾಯತ ಧಮ೯ದ ಸ್ಥಾಪನೆ ಕುರಿತು ಒಂದೇ ಮಾತಿನಲ್ಲಿ ಪ್ರತಿಕ್ರಿಯಿಸಿದರು. ಈ ವಿಷಯದಲ್ಲಿ ನಾನು ನ್ಯಾಯಮೂರ್ತಿ ಆಗಲು ಇಚ್ಛಿಸುವುದಿಲ್ಲ ಎಂದು ಪಾಟೀಲರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.