ADVERTISEMENT

‘ಮೋದಿ ಸೋಲಿಸುವುದು ಮೊದಲ ಕೆಲಸ’: ರಾಹುಲ್‌ ಗಾಂಧಿ

ಪಿಟಿಐ
Published 1 ಏಪ್ರಿಲ್ 2019, 20:45 IST
Last Updated 1 ಏಪ್ರಿಲ್ 2019, 20:45 IST
   

ನವದೆಹಲಿ: ‘ನಮ್ಮ ಮೊತ್ತ ಮೊದಲ ಕೆಲಸ ನರೇಂದ್ರ ಮೋದಿ ಅವರನ್ನು ಸೋಲಿಸುವುದು. ಲೋಕಸಭಾ ಚುನಾವಣೆ ಬಳಿಕ ಚುನಾವಣೋತ್ತರ ಮೈತ್ರಿ ಖಂಡಿತ ಸಾಧ್ಯವಿದೆ. ಮೋದಿ ಅವರನ್ನು ಸೋಲಿಸುವುದು ದೇಶದ ಹಿತಾಸಕ್ತಿಯಿಂದ ಬಹಳ ಮುಖ್ಯವಾಗಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಜಾತ್ಯತೀತ ಪಕ್ಷಗಳ ಮೈತ್ರಿ ವಿವಿಧ ರಾಜ್ಯಗಳಲ್ಲಿ ಸಾಕಾರವಾಗಿದೆ. ದೇಶದ ಎಲ್ಲೆಡೆಯೂ ವಿರೋಧ ಪಕ್ಷಗಳ ಪ್ರಬಲ ಅಭ್ಯರ್ಥಿಗಳು ಬಿಜೆಪಿಗೆ ಕಠಿಣ ಸವಾಲು ಒಡ್ಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ರಾಹುಲ್‌ ಹೇಳಿದ್ದಾರೆ.

‘ನರೇಂದ್ರ ಮೋದಿ ಅವರನ್ನು ಸೋಲಿಸಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದು ಎಲ್ಲ ವಿರೋಧ ಪಕ್ಷಗಳ ಮೊತ್ತ ಮೊದಲ ಕೆಲಸ. ಭಾರತದ ಸಂಸ್ಥೆಗಳು ಮತ್ತು ಸಾಮಾಜಿಕ ಸಂರಚನೆಯನ್ನು ಉಳಿಸುವುದಕ್ಕಾಗಿ ಬಿಜೆಪಿಯನ್ನು ತಡೆಯಲೇಬೇಕಾಗಿದೆ. ಪ್ರಗತಿಗೆ ಹುರುಪು ತುಂಬುವುದು, ಅರ್ಥವ್ಯವಸ್ಥೆಯನ್ನು ಚುರುಕಾಗಿಸುವುದು, ಉದ್ಯೋಗ ಸೃಷ್ಟಿಸುವುದು, ಸಾಮರಸ್ಯದ ಖಾತರಿ ಕೊಡುವುದು, ಅನ್ಯಾಯ ಮತ್ತು ಅಸಮಾನತೆಯನ್ನು ಹೋಗಲಾಡಿಸುವುದಕ್ಕೂ ಬಿಜೆಪಿಯನ್ನು ಸೋಲಿಸುವುದು ಅಗತ್ಯ. ಈ ವಿಚಾರಗಳಲ್ಲಿ ನಾವೆಲ್ಲರೂ ಒಂದಾಗಿದ್ದೇವೆ’ ಎಂದು ರಾಹುಲ್‌ ವಿವರಿಸಿದ್ದಾರೆ.

ADVERTISEMENT

ಚುನಾವಣೋತ್ತರ ಮೈತ್ರಿ ಆಗಿಯೇ ಆಗುತ್ತದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ ಅವರು, ‘ಇಡೀ ದೇಶದ ಜನರು ಮೋದಿಯ ವಿರುದ್ಧ ನಿಂತಿದ್ದಾರೆ’ ಎಂದರು.

‘ದೇಶದ ಒಳಿತಿಗಾಗಿ ಬಿಜೆಪಿಯನ್ನು ಸೋಲಿಸಬೇಕು ಎಂಬ ವಿಚಾರದಲ್ಲಿ ಎಲ್ಲ ವಿರೋಧ ಪಕ್ಷಗಳಲ್ಲಿ ಒಮ್ಮತವಿದೆ. ದೇಶದ ಸಂಸ್ಥೆಗಳನ್ನು ಬಿಜೆಪಿ ನಾಶ ಮಾಡುತ್ತಿದೆ. ಅರ್ಥ ವ್ಯವಸ್ಥೆಯನ್ನು ಧ್ವಂಸ ಮಾಡಿದೆ’ ಎಂದು ಅವರು ಆಪಾದಿಸಿದರು.

ಜಾತ್ಯತೀತ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡಿದ ಅವರು ಪಶ್ಚಿಮ ಬಂಗಾಳದ ಉದಾಹರಣೆ ಕೊಟ್ಟರು. ಅಲ್ಲಿ ಜಾತ್ಯತೀತ ಪಕ್ಷವೇ ಗೆಲ್ಲಲಿದೆ ಎಂದರು.

‘ಉತ್ತರ ಪ್ರದೇಶದಲ್ಲಿ ಮೈತ್ರಿ ಇದೆ. ಕಾಂಗ್ರೆಸ್ ಪಕ್ಷವು ಅದರ ಭಾಗವಾಗಿ ಇಲ್ಲದಿದ್ದರೂ ಅಲ್ಲಿ ಮೈತ್ರಿ ಇದೆ. ಮಹಾರಾಷ್ಟ್ರದಲ್ಲಿ ಮೈತ್ರಿ ಇದೆ. ಜಾರ್ಖಂಡ್‌ನಲ್ಲಿ ಮೈತ್ರಿ ಇದೆ. ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿಯೂ ಮೈತ್ರಿ ಇದೆ. ಮೈತ್ರಿ ಎಲ್ಲಿ ಇಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮೈತ್ರಿಗೆ ಸೇರಿಸಿಕೊಳ್ಳಲು ಕೆಲವು ಪಕ್ಷಗಳಿಗೆ ಇಷ್ಟವಿರಲಿಲ್ಲ. ಅದರಿಂದ ಸಮಸ್ಯೆಯೇನೂ ಇಲ್ಲ. ಅಲ್ಲಿ ತಳಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷದ ಬೇರುಗಳನ್ನು ಗಟ್ಟಿ ಮಾಡಲಾಗುವುದು. ಚುನಾವಣಾ ಹೋರಾಟದಲ್ಲಿ ಪಕ್ಷವು ಹಿಂದೆ ಬೀಳದು ಎಂದು ಅವರು ಹೇಳಿದ್ದಾರೆ.
‘ಟಿಆರ್‌ಎಸ್‌ಗೆ ಹಾಕಿದ ಮತ ಮೋದಿಗೆ’

ಟಿಆರ್‌ಎಸ್‌ಗೆ ಮತ ಹಾಕಿದರೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಮತ ಹಾಕಿದಂತೆ ಎಂದು ರಾಹುಲ್‌ ಹೇಳಿದ್ದಾರೆ. ಟಿಆರ್‌ಎಸ್‌ ಮತ್ತು ಮೋದಿ ನಡುವೆ ಒಳ ಒಪ್ಪಂದವಾಗಿದೆ ಎಂದು ತೆಲಂಗಾಣದ ಜಹೀರಾಬಾದ್‌ನಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ರಾಹುಲ್‌ ಆರೋಪಿಸಿದ್ದಾರೆ.

‘ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ ಅವರ ರಿಮೋಟ್‌ ಕಂಟ್ರೋಲ್‌ ಮೋದಿ ಅವರ ಕೈಯಲ್ಲಿದೆ. ರಫೇಲ್‌ ಯುದ್ಧ ವಿಮಾನ ಒಪ್ಪಂದದ ವಿಚಾರದಲ್ಲಿ ರಾವ್‌ ಅವರು ಒಂದು ಹೇಳಿಕೆಯನ್ನೂ ಯಾಕೆ ಕೊಟ್ಟಿಲ್ಲ’ ಎಂದು ರಾಹುಲ್‌ ಪ್ರಶ್ನಿಸಿದ್ದಾರೆ.

ಚುನಾವಣೆಗೆ ಮೊದಲು ರಾವ್‌ ಮತ್ತು ಮೋದಿ ಪರಸ್ಪರರನ್ನು ಟೀಕಿಸುವ ನಾಟಕ ಆಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಅವರಿಬ್ಬರೂ ಒಂದೇ ಎಂದು ರಾಹುಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.