ADVERTISEMENT

ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ: ಅಂಗವಿಕಲರ ಮನೆ ಬಾಗಿಲಿಗೆ ವಾಹನ ಸೌಲಭ್ಯ

ಮೊಬೈಲ್‌ ಆ್ಯಪ್‌ನಲ್ಲಿ ವೀಲ್‌ಚೇರ್‌ ಮುಂಗಡ ಬುಕ್ಕಿಂಗ್‌

ಆರ್.ಜಿತೇಂದ್ರ
Published 29 ಮಾರ್ಚ್ 2019, 19:45 IST
Last Updated 29 ಮಾರ್ಚ್ 2019, 19:45 IST
ಅಂಗವಿಕಲರಿಗಾಗಿ ವೀಲ್‌ಚೇರ್‌ಗಳನ್ನು ಸಿದ್ಧಗೊಳಿಸುತ್ತಿರುವುದು (ಸಂಗ್ರಹ ಚಿತ್ರ)
ಅಂಗವಿಕಲರಿಗಾಗಿ ವೀಲ್‌ಚೇರ್‌ಗಳನ್ನು ಸಿದ್ಧಗೊಳಿಸುತ್ತಿರುವುದು (ಸಂಗ್ರಹ ಚಿತ್ರ)   

ರಾಮನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಂಗವಿಕಲ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗವು ಹಲವು ಯೋಜನೆ ರೂಪಿಸಿದ್ದು, ಮನೆ ಬಾಗಿಲಿಗೆ ವಾಹನ ಸೌಲಭ್ಯವನ್ನೂ ಒದಗಿಸಲಿದೆ.

ಅಂಗವಿಕಲರೂ ಎಲ್ಲರಂತೆ ಮತಗಟ್ಟೆಗೆ ಬಂದು ಮತದಾನ ಮಾಡಬೇಕು. ಯಾರೊಬ್ಬರೂ ಮತ ಚಲಾಯಿಸುವ ಹಕ್ಕು ಕಳೆದುಕೊಳ್ಳಬಾರದು ಎಂಬುದು ಚುನಾವಣಾ ಆಯೋಗದ ಆಶಯವಾಗಿದೆ. ಸ್ವೀಪ್‌ ಸಮಿತಿಯ ಮೂಲಕ ಆಯೋಗವು ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಯೋಗವು ಎಲ್ಲೆಲ್ಲಿ ಅಂಗವಿಕಲರು ಇದ್ದಾರೆ ಎಂಬುದನ್ನು ಗುರುತಿಸಿ ಅವರಿಗೆ ಅವಶ್ಯವಾದ ಮೂಲ ಸೌಕರ್ಯಗಳನ್ನು ಒದಗಿಸಿತ್ತು. ಅದು ಈ ಚುನಾವಣೆಯಲ್ಲಿಯೂ ಮುಂದುವರಿಯಲಿದೆ.

ADVERTISEMENT

ಈಗಾಗಲೇ ವಿಧಾನಸಭಾವಾರು ಅಂಗವಿಕಲರ ಪಟ್ಟಿ ಸಿದ್ಧವಾಗಿದೆ. ಯಾವ ಮತಗಟ್ಟೆಗಳಲ್ಲಿ ಅಂಗವಿಕಲರು ಇದ್ದಾರೆ ಎಂಬುದನ್ನು ಗುರುತಿಸಲಾಗಿದೆ. ಇಂತಹ ಮತಗಟ್ಟೆಗಳಲ್ಲಿ ಅವರ ಓಡಾಟಕ್ಕೆ ಅನುಕೂಲ ಆಗುವಂತೆ ರ್‍ಯಾಂಪ್ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಜೊತೆಗೆ ವೀಲ್‌ಚೇರ್‌ನ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಯಾವುದೇ ಸರದಿ ಸಾಲಿನಲ್ಲಿ ನಿಲ್ಲದೆಯೇ ಅವರು ಮತ ಚಲಾವಣೆ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.

ವಾಹನ ಸೌಲಭ್ಯ: ಓಡಾಡುವುದು ಕಷ್ಟ ಎಂಬ ಕಾರಣಕ್ಕೆ ಅಂಗವಿಕಲ ಮತದಾರರು ಮತಗಟ್ಟೆಗಳತ್ತ ಬರಲು ಹಿಂಜರಿಯುತ್ತಾರೆ. ಅಂತಹವರಿಗೆ ಅವರು ಇರುವ ಕಡೆಯಲ್ಲಿಯೇ ವಾಹನದ ಸೌಲಭ್ಯವನ್ನೂ ಆಯೋಗವು ಕಲ್ಪಿಸಲಿದೆ. ಅವರು ಇರುವೆಡೆಯಿಂದ ಮತಗಟ್ಟೆಗೆ ಕರೆತಂದು, ಮತದಾನದ ಬಳಿಕ ವಾಪಸ್‌ ಕರೆದುಕೊಂಡು ಹೋಗುವ ವ್ಯವಸ್ಥೆಯು ಇರಲಿದೆ.

ಆ್ಯಪ್‌ ಮೂಲಕವೂ ಬುಕಿಂಗ್‌: ಚುನಾವಣಾ ಆಯೋಗವು ‘ಚುನಾವಣಾ’ ಎನ್ನುವ ಮೊಬೈಲ್‌ ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ. 33.6 ಮೆಗಾಬೈಟ್‌ ಸಾಮರ್ಥ್ಯದ ಈ ತಂತ್ರಾಂಶವು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ.

ಈ ಆ್ಯಪ್‌ ಬಳಸಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರು ತಮಗೆ ವಾಹನ ಹಾಗೂ ವೀಲ್‌ ಚೇರ್‌ ಅನ್ನು ಕಾಯ್ದರಿಸಬಹುದಾಗಿದೆ. ಬಳಕೆದಾರರು ಮೊಬೈಲ್‌ ಆ್ಯಪ್‌ ಅನ್ನು ತಮ್ಮ ಮೊಬೈಲ್‌ಗಳಲ್ಲಿ ಹಾಕಿಕೊಂಡ ನಂತರ ಅಲ್ಲಿ ವಾಹನ ಸೌಲಭ್ಯ ಹಾಗೂ ವೀಲ್‌ಚೇರ್‌ಗಾಗಿ ಪ್ರತ್ಯೇಕ ಪುಟಗಳು ತೆರೆದುಕೊಳ್ಳುತ್ತವೆ. ತಮ್ಮ ಮತದಾರರ ಗುರುತಿನ ಸಂಖ್ಯೆ ಹಾಗೂ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿದಲ್ಲಿ ಒಟಿಪಿ ಸಿಗುತ್ತದೆ. ಅದನ್ನು ಮತ್ತೆ ಆ್ಯಪ್‌ಗೆ ಸೇರಿಸಿ ಖಾತ್ರಿಪಡಿಸಬೇಕಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಾಹನ ಸೇವೆ ಕಾಯ್ದಿರಿಸಿದಂತೆ ಆಗುತ್ತದೆ.

ಹಿರಿಯ ನಾಗರಿಕರಿಗೂ ನೆರವು
ಅಂಗವಿಕಲರ ಜೊತೆಜೊತೆಗೆ ಹಿರಿಯ ನಾಗರಿಕರಿಗೂ ವೀಲ್‌ಚೇರ್‌ ಹಾಗೂ ವಾಹನ ಸೌಲಭ್ಯವು ಲಭ್ಯವಿರಲಿದೆ. ಇದಕ್ಕಾಗಿ ಬಳಕೆದಾರರು ಮುಂಚಿತವಾಗಿ ಕಾಯ್ದರಿಸಬೇಕಾಗುತ್ತದೆ. ವಾಹನಗಳ ಲಭ್ಯತೆಯನ್ನು ನೋಡಿಕೊಂಡು ತ್ವರಿತ ಸೇವೆ ಒದಗಿಸಲಾಗುವುದು. ಅಂಗವಿಕಲರು ಹಾಗೂ ಹಿರಿಯರು ಯಾವುದೇ ಹಿಂಜರಿಕೆ ಇಲ್ಲದೆ ಮುಕ್ತವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ಚುನಾವಣಾ ಆಯೋಗದ ಉದ್ದೇಶವಾಗಿದೆ ಎನ್ನುತ್ತಾರೆ ಚುನಾವಣಾ ಅಧಿಕಾರಿಗಳು.

ವಿಧಾನಸಭಾ ಕ್ಷೇತ್ರ ಅಂಗವಿಕಲ ಮತದಾರರು
ಮಾಗಡಿ 2337
ರಾಮನಗರ 2062
ಕನಕಪುರ 2321
ಚನ್ನಪಟ್ಟಣ 3310
ಕುಣಿಗಲ್ 2,293
ರಾಜರಾಜೇಶ್ವರಿ ನಗರ 172
ಬೆಂಗಳೂರು ದಕ್ಷಿಣ 221
ಆನೇಕಲ್ 393
ಒಟ್ಟು 13,109

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.