ADVERTISEMENT

ಜಗದೀಶ್‌ ಶೆಟ್ಟರ್‌ ನನ್ನ ತಾಯಿ ಬಗ್ಗೆ ಮಾತನಾಡಿದ್ದು ನೋವುಂಟು ಮಾಡಿದೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 8:55 IST
Last Updated 19 ಏಪ್ರಿಲ್ 2019, 8:55 IST
ಹುಬ್ಬಳ್ಳಿಯಲ್ಲಿ ಶುಕ್ರವಾರ  ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು   

ಹುಬ್ಬಳ್ಳಿ: ‘ಜಗದೀಶ್ ಶೆಟ್ಟರ್ ನನ್ನ ತಾಯಿ ಚನ್ನಮ್ಮ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಅವರನ್ನು ರಾಜ್ಯಸಭೆ ಸದಸ್ಯೆ ಮಾಡುವುದು ಬಾಕಿ ಇದೆ ಎಂದು ಹೇಳುವ ಮೂಲಕ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಚನ್ನಮ್ಮ ರಾಜಕೀಯ ಒತ್ತಡಗಳಿಗೆ ಸಿಲುಕದೆ ಮನೆಗೆ ಬರುವ ಬಡವರು, ಪಕ್ಷದ ಕಾರ್ಯಕರ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಶೆಟ್ಟರ್ ಅರ್ಥ ಮಾಡಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ಥಾನಕ್ಕೆ ಧಕ್ಕೆ ಬರುವಂತೆ ಭಾಷಣ ಮಾಡುತ್ತಿದ್ದಾರೆ. ಐದು ವರ್ಷಗಳಲ್ಲಿ ದೇಶಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಜಲ ನೀತಿ ಜಾರಿಗೆ ತರುವುದಾಗಿ ಬಾಗಲಕೋಟೆಯಲ್ಲಿ ನಿನ್ನೆ ಹೇಳಿದ್ದಾರೆ. ಕಳೆದ ಐದು ವರ್ಷದಲ್ಲಿ ಜಲ ನೀತಿ ಜಾರಿಗೆ ತಡೆಯಾಗಿದ್ದವರು ಯಾರು ಎಂದು ಪ್ರಶ್ನಿಸಿದರು.

ADVERTISEMENT

ರಾಜ್ಯ ಸರ್ಕಾರವನ್ನು ಅಸಮರ್ಥ ಸರ್ಕಾರ ಎಂದು ಟೀಕಿಸಿದ್ದ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ನರೇಗಾ ಯೋಜನೆ ಅಡಿ ರಾಜ್ಯದ ಕೂಲಿ, ಕಾರ್ಮಿಕರಿಗೆ 1500 ಕೋಟಿ ಬಿಡುಗಡೆ ಮಾಡದ ಮೋದಿ ಸರ್ಕಾರ ದಿವಾಳಿ ಸರ್ಕಾರ ಎಂದು ಕುಟುಕಿದರು.
ನಾನು ಉತ್ತರ ಕರ್ನಾಟಕ ವಿರೋಧಿಯಲ್ಲ, ಬಜೆಟ್ ನಲ್ಲಿ ಪ್ರತಿ ಜಿಲ್ಲೆಗೂ ನೂರಾರು ಕೋಟಿ ಅನುದಾನ ನೀಡಿದ್ದೇನೆ ಎಂದು ಲೆಕ್ಕ ನೀಡಿದರು. ಸಾಲ ಮನ್ನಾ ಸೌಲಭ್ಯವನ್ನು ಈ ಭಾಗದ ರೈತರು ಪಡೆದುಕೊಂಡಿದ್ದಾರೆ’ ಎಂದರು.

ಉತ್ತರ ಕರ್ನಾಟಕಕ್ಕೆ ನನ್ನ ಅವಧಿಯಲ್ಲಿ ಹಾಗೂ ಬಿಜೆಪಿ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

‘10 ತಿಂಗಳಿಂದ ಬಿಜೆಪಿ ಮತ್ತು ಮಾಧ್ಯಮದವರು ನನಗೆ ನೆಮ್ಮದಿಯಿಂದ ಆಡಳಿತ ನಡೆಸಲು ಬಿಟ್ಟಿಲ್ಲ’ ಎಂದು ಆರೋಪಿಸಿದರು.

ಸಮ್ಮಿಶ್ರ ಸರ್ಕಾರ ಇಂದು ಬೀಳುತ್ತದೆ. ನಾಳೆ ಬೀಳುತ್ತದೆ ಎಂದು ದಿನನಿತ್ಯ ರಾಜ್ಯ ಬಿಜೆಪಿ ಮುಖಂಡರು ಗಡುವು ನೀಡಿದರು. ಇದೀಗ ಮೋದಿ ಅವರು ಮೇ. 23ರ ಡೆಡ್ ಲೈನ್ ನೀಡಿದ್ದಾರೆ. ಈ ಬಗ್ಗೆ ಮತದಾರರೇ ಉತ್ತರ ನೀಡಲಿದ್ದಾರೆಎಂದರು.

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕೂಟವು ರಾಜ್ಯದಲ್ಲಿ 18 ರಿಂದ 21 ಸ್ಥಾನದಲ್ಲಿ ಜಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.