ADVERTISEMENT

ಒಡಕು ಮುಂದುವರಿದರೆ ಗುರಿ ಸಾಧನೆ ಕಷ್ಟ: ದೇವೇಗೌಡರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 10:52 IST
Last Updated 2 ಮೇ 2019, 10:52 IST
   

ತುಮಕೂರು: ‘ಒಡಕಿಲ್ಲದ ರೀತಿ ನಾವು ಎರಡೂ ಪಕ್ಷದವರು ಜವಾಬ್ದಾರಿಯುತವಾಗಿ ನಡೆದುಕೊಂಡರೆ ಜನರು ನಮ್ಮನ್ನು ನಂಬುತ್ತಾರೆ. ರಾಜ್ಯದ 28 ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬಹುದು. ಇಲ್ಲದೇ ಇದ್ದರೆ ಮೈತ್ರಿ ಗುರಿ ಸಾಧನೆ ಕಷ್ಟ’ ಎಂದು ಜೆಡಿಎಸ್ ವರಿಷ್ಠ ಮತ್ತು ತುಮಕೂರು ಕ್ಷೇತ್ರ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರು ಎಚ್ಚರಿಕೆ ನೀಡಿದರು.

ಲೋಕಸಭಾ ಚುನಾವಣೆ ಪ್ರಯುಕ್ತ ನಗರದ ನಗರ ಕ್ಷೇಂದ್ರ ಗ್ರಂಥಾಲಯ ಆವರಣದಲ್ಲಿ ಸಂಜೆ ನಡೆದ ಜೆಡಿಎಸ್– ಕಾಂಗ್ರೆಸ್ ಅಲ್ಪಸಂಖ್ಯಾತ ಕಾರ್ಯಕರ್ತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಮಂಡ್ಯ,ಮೈಸೂರು ಮತ್ತು ತುಮಕೂರು ಜಿಲ್ಲೆ ಸೇರಿದಂತೆ ಕೆಲ ಕಡೆ ಮೈತ್ರಿ ಪಕ್ಷಗಳ ಮುಖಂಡರ ನಡುವಿನ ಒಗ್ಗಟ್ಟಿನ ಬಿರುಕಿನ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ಮಾಜಿ ಮುಖ್ಯಮಂತ್ರಿ (ಸಿದ್ಧರಾಮಯ್ಯ ಅವರ ಹೆಸರು ಹೇಳದೇ), ಸಚಿವರು, ಶಾಸಕರು, ಮುಖಂಡರು ಒಟ್ಟಿಗೆ ಕೆಲಸ ಮಾಡಬೇಕಿದೆ. ಉಭಯ ಪಕ್ಷಗಳ ಮುಖಂಡರು ಎರಡೂ ಪಕ್ಷಗಳ ಶಕ್ತಿಯನ್ನು ಬಳಕೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

ಸಾಮಾಜಿಕ ಜಾಲ ತಾಣ, ಕೆಲ ಸುದ್ದಿವಾಹಿನಿಗಳಲ್ಲಿ ಈ ದೇಶವನ್ನು ಆಳಲು ಮೋದಿ ಮಾತ್ರ ಸಮರ್ಥರು ಎಂಬ ರೀತಿ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ ಎಂದು ಹರಿಹಾಯ್ದ ದೇವೇಗೌಡರು, ನಾವು ಒಗ್ಗಟ್ಟಾಗಿ ಶ್ರಮಿಸಿದರೆ ದೇಶದ ಚುಕ್ಕಾಣಿ ಹಿಡಿಯಲು ಸಾಧ್ಯವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಜಮೀರ್ ಅಹಮ್ಮದ್ ಖಾನ್ ಮಾತನಾಡಿ,‘ಬಿಜೆಪಿಯವರು ಢೋಂಗಿನನ್ಮಕ್ಳು. ಪತ್ನಿಯ ಮನಸ್ಸು ಅರ್ಥ ಮಾಡಿಕೊಳ್ಳದೇ ದೂರವಿದ್ದವರು ‘ಮನ್ ಕೀ ಬಾತ್’ ಹೆಸರಲ್ಲಿ ದೇಶದ ಜನರ ಮನಸ್ಸು ಅರಿಯುತ್ತೇವೆ ಎಂದು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಯಾವ ಯೋಜನೆ ಯಶಸ್ವಿಯಾಗಿಲ್ಲ. ನೀವು ಮುಸ್ಲಿಮರು ಮತ ಹಾಕದೇ ಇದ್ದರೆ ಬಿಜೆಪಿಗೇ ಲಾಭ ಆಗುತ್ತದೆ. ಅಂತಹ ತಪ್ಪು ಮಾಡಬೇಡಿ’ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಕಚೇರಿಯಲ್ಲಿ 10 ವರ್ಷ ಕಸಗೂಡಿಸಿದ ಬಳಿಕ ವಿಚಾರ ಮಾಡಿ ಮುಸ್ಲಿಮರಿಗೆ ಟಿಕೆಟ್ ಕೊಡುವುದಾಗಿ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಕೊಪ್ಪಳದಲ್ಲಿ ಈಚೆಗೆ ಹೇಳಿದ್ದಾರೆ. ಮುಸ್ಲಿಮರಿಗೆ ಅಂತಹ ದುರ್ಗತಿ ಬಂದಿಲ್ಲ. ಈಶ್ವರಪ್ಪ ಅವರಂಥವರನ್ನೇ ಕಸಗೂಡಿಸಲು ಇಟ್ಟುಕೊಳ್ಳುವಷ್ಟು ಮುಸ್ಲಿಮರಿಗೆ ಶಕ್ತಿ ಇದೆ’ ಎಂದು ವಾಗ್ದಾಳಿ ನಡೆಸಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಶಾಸಕರಾದ ಎನ್.ಎ. ಹ್ಯಾರೀಸ್ ಮಾತನಾಡಿದರು. ಸಚಿವರಾದ ಎಸ್.ಆರ್.ಶ್ರೀನಿವಾಸ್, ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಮಾಜಿ ಶಾಸಕ ರಫೀಕ್ ಅಹಮ್ಮದ್, ಷಫಿ ಅಹಮ್ಮದ್, ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಮೈತ್ರಿ ಮುಖಂಡರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.