ADVERTISEMENT

ಅಸ್ಸಾಂ: ನಾಯಕರಿಲ್ಲದೆ ಬರಿದಾದ ಎಜಿಪಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST
ಪ್ರಫುಲ್ಲ ಕುಮಾರ್‌
ಪ್ರಫುಲ್ಲ ಕುಮಾರ್‌   

ಗುವಾಹಟಿ (ಪಿಟಿಐ): ಅಸ್ಸಾಂನ 14 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆಯುವ ನಿರೀಕ್ಷೆ­ಗಳಿದ್ದರೂ, ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ (ಎಐಯುಡಿಎಫ್‌) ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ.

ಅಲ್ಪಸಂಖ್ಯಾತರ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಎಐಯುಡಿಎಎಫ್‌ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ. ಒಂದು ಕಾಲದಲ್ಲಿ ಅಸ್ಸಾಂ ರಾಜಕೀಯಕ್ಕೆ ದಿಕ್ಸೂಚಿಯಾಗಿದ್ದ ಅಸ್ಸಾಂ ಗಣ ಪರಿಷತ್‌ (ಎಜಿಪಿ) ಈಗ ನಾಯಕರಿಲ್ಲದೆ ಬರಿದಾಗಿದೆ. ಪ್ರಮುಖ ನಾಯಕರು ಪಕ್ಷ ತೊರೆದು ಬಿಜೆಪಿಗೆ ಸೇರಿರುವುದು ಎಜಿಪಿಗೆ ಭಾರಿ ಹಿನ್ನಡೆಯಾಗಿದೆ. 2009ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಏಳು ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.  ಅದರ ಮೈತ್ರಿ ಪಕ್ಷ ‘ಬೋಡೊಲ್ಯಾಂಡ್‌ ಪೀಪಲ್ಸ್‌’ ಒಂದು ಕ್ಷೇತ್ರದಲ್ಲಿ ಗೆದ್ದಿತ್ತು.

ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎಜಿಪಿ ಮತ್ತು ಎಐಯುಡಿಎಫ್‌ ತಲಾ ಒಂದು ಸ್ಥಾನ ಗಳಿಸಿದ್ದವು. 2011ರ ವಿಧಾನಸಭಾ ಚುನಾ­ವಣೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಕಂಡ ಬಳಿಕ ಎಜಿಪಿಯ ಜನಪ್ರಿಯತೆ ಕುಸಿತದ ಹಾದಿಯಲ್ಲಿದೆ. ಎಐಯು­ಡಿಎಫ್ ಕ್ಷಿಪ್ರವಾಗಿ ಪ್ರಸಿದ್ಧಿಗೆ ಬಂದಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಎಜಿಪಿ ಪ್ರಮುಖ ಮುಖಂಡ­ರೆಲ್ಲಾ ಪಕ್ಷಾಂತರ ಮಾಡಿದ್ದಾರೆ. ಮಾಜಿ ವಿದ್ಯಾರ್ಥಿ ಮುಖಂಡ ಸರ್ವಾನಂದ ಸೊನೊವಾಲ್‌ ಎಜಿಪಿ ತೊರೆದು ಬಿಜೆಪಿ ಸೇರಿದ ಮೊದಲ ಮುಖಂಡ. ಈಗ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ­ರಾಗಿದ್ದಾರೆ. ಎಜಿಪಿಯ ಸಂಸ್ಥಾಪಕ ಸದಸ್ಯ, ಮಾಜಿ  ಮಂತ್ರಿಗಳಾದ ಚಂದ್ರ­ಮೋಹನ್‌ ಪಟೋವರಿ, ಹೀತೆನ್‌ ಗೋಸ್ವಾಮಿ ಅವರೂ ಬಿಜೆಪಿಗೆ ಸೇದ್ದಾರೆ.

ಪಕ್ಷದ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಪ್ರಫುಲ್ಲ ಕುಮಾರ್‌ ಮಹಾಂತ ಮೇಲಿನ ವಿಶ್ವಾಸ ಕಳೆದುಕೊಂಡ ಕಾರಣದಿಂದ ಬಲವಂತ­ವಾಗಿ ಪಕ್ಷ ತೊರೆಯ­ಬೇಕಾ­ಯಿತು ಎಂದು ಇಬ್ಬರೂ ಹೇಳಿ­ಕೊಂಡಿ­ದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.