ತಿರುವನಂತಪುರ (ಪಿಟಿಐ): ಕೇಂದ್ರ ಸಚಿವ ಎ.ಕೆ. ಆಂಟನಿ ಅವರು ಕೇರಳದಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ವದಂತಿಗಳಿಗೆ ಕಾಂಗ್ರೆಸ್ ಭಾನುವಾರ ತೆರೆ ಎಳೆದಿದೆ.
‘ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸುವಂತೆ ಸ್ವತಃ ಆಂಟನಿ ಅವರು ನನಗೆ ತಿಳಿಸಿದ್ದಾರೆ’ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಎಂ. ಸುಧೀರನ್ ಹೇಳಿದ್ದಾರೆ.
ಕೇರಳ: ಚುನಾವಣಾ ಕಣಕ್ಕಿಳಿದ ಎಎಪಿ
ತಿರುವನಂತಪುರ (ಪಿಟಿಐ): ಆಮ್ ಆದ್ಮಿ ಪಕ್ಷವು (ಎಎಪಿ) ಕೇರಳದಲ್ಲಿ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಸಾಹಿತಿಯಿಂದ ಹಿಡಿದು ಮಾಜಿ ನಾಗರಿಕ ಸೇವೆಗಳ ಅಧಿಕಾರಿಗಳವರೆಗೆ ಜನಪ್ರಿಯ ವ್ಯಕ್ತಿಗಳನ್ನು ಕಣಕ್ಕಿಳಿಸಲಿದೆ.
ರಾಜ್ಯದ ಪ್ರಮುಖ ಪಕ್ಷಗಳು ಇನ್ನೂ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸದೇ ಇರುವಾಗ ಎಎಪಿಯು ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇತರ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನೂ ಅಂತಿಮಗೊಳಿಸಿದೆ.
ಸಾಧ್ಯವಾದಷ್ಟು ಮಟ್ಟಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಎಪಿ ಯೋಚಿಸುತ್ತಿದೆ. ಅದಕ್ಕಾಗಿ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಾರಾ ಜೋಸೆಫ್ ಅವರು ತ್ರಿಶೂರ್‌ನಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಅಜಿತ್ ರಾಯ್ ಅವರು ತಿರುವನಂತಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಕೋಡಾ ಬದಲು ಪತ್ನಿ ಗೀತಾ ಕಣಕ್ಕೆ
ಜೆಮ್‌ಶೆಡ್‌ಪುರ (ಪಿಟಿಐ): ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ, ಶಾಸಕಿ ಗೀತಾ ಕೋಡಾ ಅವರು ಸಿಂಗ್‌ಭೂಮ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ.
‘ಜೈ ಭಾರತ್ ಸಮಂತ ಪಾರ್ಟಿ’ಯಿಂದ ಈ ಕ್ಷೇತ್ರ ಪ್ರತಿನಿಧಿಸುತ್ತಿರುವ ಮಧು ಕೋಡಾ ಅವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ.
ಗೀತಾ ಅವರು ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಸುಳ್ಳು. ಅವರು ತಮ್ಮ ಪಕ್ಷದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಮಧು ಸ್ಪಷ್ಟಪಡಿಸಿದ್ದಾರೆ. ಆದರೆ ತಾವು ಸ್ಪರ್ಧೆಯಿಂದ ಹಿಂದೆ ಸರಿಯಲು ಏನು ಕಾರಣ ಎಂಬುದನ್ನು ತಿಳಿಸಲು ಅವರು ನಿರಾಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.